ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹತ್ವಕಾಂಕ್ಷಿ ಯೋಜನೆಯಾದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿಶ್ಚಿತಾರ್ಥ, ಮೆಹೆಂದಿ, ಮದುವೆ, ಔತನಕೂಟ, ಹುಟ್ಟುಹಬ್ಬ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಶ್ರೀಮತಿ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಎಂಬ ಹೆಸರಿನಲ್ಲಿ ತೆರೆದ ವೇದಿಕೆ ನಿರ್ಮಾಣವಾಗಲಿದೆ.
ಈ ಓಪನ್ ಏರ್ ಗಾರ್ಡನ್ ನ ಸಂಪೂರ್ಣ ಪ್ರಾಯೋಜಕತ್ವವನ್ನು ಒಕ್ಕೂಟದ ವಿಶೇಷ ಮಹಾ ನಿರ್ದೇಶಕರಾದ ಮುಂಬಯಿಯ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಸಿ.ಎಂ.ಡಿ ತೋನ್ಸೆ ಆನಂದ್ ಎಂ. ಶೆಟ್ಟಿಯವರು ನೋಡಿಕೊಳ್ಳಲಿದ್ದಾರೆ. ತೋನ್ಸೆ ಆನಂದ್ ಎಂ.ಶೆಟ್ಟಿಯವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ವಿಶೇಷ ಮಹಾ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿ ಹಾಗೂ ಕೋಶಾಧಿಕಾರಿಯಾದ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಜೊತೆ ಸೇರಿ ಗೌರವ ಪೂರ್ವಕವಾಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಓಪನ್ ಏರ್ ಗಾರ್ಡನ್ ಯೋಜನೆಯ ಪೂರ್ತಿ ಜವಾಬ್ದಾರಿಯನ್ನು ಮತ್ತು ಅದರ ಕೆಲಸ ಕಾರ್ಯಗಳನ್ನು ತನ್ನ ಯೋಚನೆಯ ಪ್ರಕಾರದಂತೆ ಮಾಡಿ ಈ ವರ್ಷ 2024 ಡಿಸೆಂಬರ್ ಕೊನೆಯಲ್ಲಿ ಒಕ್ಕೂಟಕ್ಕೆ ಒಪ್ಪಿಸುತ್ತೇನೆ ಎಂದು ತೋನ್ಸೆ ಆನಂದ ಶೆಟ್ಟಿಯವರು ಭರವಸೆಯ ಮಾತನ್ನು ನೀಡಿದ್ದಾರೆ.