ಮುಂಬಯಿ ಮಹಾನಗರದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಅಗ್ರ ಪಂಕ್ತಿಯಲ್ಲಿರುವ ಹಿರಿಯ ಸಂಸ್ಥೆ ಬಂಟರ ಸಂಘ ಮುಂಬಯಿ. ಸುಮಾರು 96 ವರ್ಷಗಳ ಹೆಜ್ಜೆಯ ಪರಾಕ್ರಮದಲ್ಲಿ ದಾಪು ಕಾಲಲ್ಲಿ ಮುನ್ನಡೆಯುತ್ತಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕ್ರತಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿರುವ ಹೆಮ್ಮೆಯ ಮುಂಬಯಿ ಬಂಟರ ಸಂಘ ಮುಂಬಯಿ ತನ್ನ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಿದೆ. ಮುಂಬಯಿ ಬಂಟರ ಸಂಘದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಅಧ್ಯಕ್ಷರಾಗಿ ಸೇವೆಗೈದ ದಿ.ಡಾ. ವೆಂಕಟ್ ರಾವ್ ಶೆಟ್ಟಿಯವರಿಂದ ಹಿಡಿದು ಪ್ರಸಕ್ತ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿಯವರವರೆಗೆ ಸುಮಾರು 30 ಅಧ್ಯಕ್ಷರುಗಳನ್ನೊಳಗೊಂಡ ಬಂಟರ ಸಂಘವು ಬಂಟ ಭಾಂದವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸೇವೆಗೈಯ್ಯುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
ಶಿಕ್ಷಣ ಕ್ಷೇತ್ರದಲ್ಲಂತೂ ಬಂಟರ ಸಂಘವು ಮಹಾನಗರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಆರಂಭದಲ್ಲಿ ಎರಡು ರಾತ್ರಿ ಶಾಲೆಗಳು ಆ ಬಳಿಕ ಪೊವಾಯಿಯಲ್ಲಿ ಎಸ್. ಎಮ್. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ , ಕುರ್ಲಾ ಪೂರ್ವದ ಬಂಟರ ಭವನದ ಸಮೀಪ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಂಟ ಭಾಂದವರಿಗಲ್ಲದೆ ಇತರ ಸಮಾಜದವರಿಗೂ ಶಿಕ್ಷಣ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ. ವೃತ್ತಿಪರ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಮಾತ್ರವಲ್ಲದೆ ಗತಸಮಯದಲ್ಲಿ ಅಂದಿನ ಅಧ್ಯಕ್ಷರಾದ ಪದ್ಮನಾಭ ಪಯ್ಯಡೆಯವರ ಸಮಯದಲ್ಲಿ ಶಂಕುಸ್ಥಾಪನೆಗೊಂಡ ಬೊರಿವಲಿ ಪಶ್ಚಿಮದ ಐಸಿ ಕೊಲೊನಿಯಲ್ಲಿ ಪ್ರಸಕ್ತ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿಯವರ ಮುತುವರ್ಜಿಯಲ್ಲಿ ರೂಪುಗೊಳ್ಳುತ್ತಿರುವ ಅತ್ಯುನ್ನತ ಮಟ್ಟದ ಶಿಕ್ಷಣ ಸಂಸ್ಥೆಯ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಇದೊಂದು ಸಂಘದ ಶಿಕ್ಷಣ ಸಮೂಹದ ಮುಕುಟಗಳಲ್ಲಿ ಒಂದಾಗಿದೆ.
ಸಂಘದ ಸಮಾಜಪರ ಚಟುವಟಿಕೆಗಳು ಇನ್ನೂ ವಿಸ್ತಾರಗೊಂಡು ಬಂಟ ಬಾಂಧವರ ಮನೆ, ಮನಗಳಿಗೆ ನೇರವಾಗಿ ತಲುಪಬೇಕೆಂಬ ದೃಷ್ಟಿಯನ್ನಿಟ್ಟುಕೊಂಡು 2008 ರಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಕನಸಿನ ಕೂಸಾಗಿ ಹುಟ್ಟಿದ ಸಂಘದ 9 ಪ್ರಾದೇಶಿಕ ಸಮಿತಿಗಳು ಇಂದು ಸಂಘದ ಮಹಾಶಕ್ತಿಯಾಗಿ ಮುಂಬಯಿ ಹಾಗೂ ಉಪನಗರಗಳಲ್ಲಿ ಪಸರಸಿ ಬಂಟ ಸಮಾಜ ಬಾಂಧವರನ್ನು ಒಗ್ಗೂಡಿಸುವ ಮಹತ್ಕಾರ್ಯದಲ್ಲಿ ತೊಡಗಿರುವ ಜೊತೆಗೆ ಪ್ರಶಂಸನೀಯವಾಗಿ ಸೇವೆ ಸಲ್ಲಿಸುತ್ತಿದೆ.
ಕೊರೊನಾ ಮಹಾಮಾರಿಯ ಸಂದರ್ಭ 2021 ರಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಚಂದ್ರಹಾಸ ಕೆ. ಶೆಟ್ಟಿಯವರ ಆಡಳಿತದ ಅವಧಿಯಲ್ಲಿ ಮೊಬೈಲ್ ಆಪ್, ವೆಬ್ ಸೈಟ್ ಅಭಿವೃದ್ದಿ , ಸದಸ್ಯತ್ವ ನವೀಕರಣ, ಈ-ಮ್ಯಾಗಸಿನ್, ಕುಟುಂಬಗಳ ದತ್ತು ಸ್ವೀಕಾರ, ಪ್ರತಿಭಾ ದತ್ತು ಸ್ವೀಕಾರ ಮುಂತಾದ ಹಲವು ಹೊಸ ಯೋಜನೆಗಳ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ.
2008 ರಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮುಂಬಯಿ ತುಳು-ಕನ್ನಡಿಗರ ಸಾಂಸ್ಕೃತಿಕ ನಗರ, ಹಾಗೂ ಮುಂಬಯಿಯ ಮಿನಿ ಮಂಗಳೂರು ಎಂದೇ ಖ್ಯಾತಿಯನ್ನು ಪಡೆದ ಮೀರಾರೋಡ್ ನಲ್ಲಿ 2010 ರಲ್ಲಿ ಪ್ರಾದೇಶಿಕ ಸಮಿತಿಯನ್ನು ಸ್ಥಾಪಿಸುವ ಸಂದರ್ಭದಲ್ಲಿ ಹರೀಶ್ ಕುಮಾರ್ ಯಮ್. ಶೆಟ್ಟಿಯವರು ಪ್ರಥಮ ಕಾರ್ಯಾಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು. ತದನಂತರ ಕಾರ್ಯಾಧ್ಯಕ್ಷರಾದ ಉದ್ಯಮಿ ಶಿವರಾಮ್ ಯಸ್. ಶೆಟ್ಟಿಯವರ ಅಧಿಕಾರದವದಿಯಲ್ಲಿ ಪ್ರಾದೇಶಿಕ ಸಮಿತಿಯು ಭದ್ರ ಬುನಾದಿಯನ್ನು ಕಂಡುಕೊಂಡಿತು. ಶಿಕ್ಷಣೋದ್ಯಮಿ ಡಾ. ಅರುಣೋದಯ ಎಸ್. ರೈ. ಬಿಳಿಯೂರು ಗುತ್ತು ಇವರ ಕಾಲಾವಧಿಯಲ್ಲಿ ಪ್ರಾದೇಶಿಕ ಸಮಿತಿಯು ಕ್ರಮಬದ್ದ ಹೆಜ್ಜೆಗಳನ್ನಿರಿಸಿ ಸಮಾಜ ಬಾಂಧವರ ಆಶೋತ್ತರಗಳಿಗೆ ಸ್ಪಂದಿಸಿತು. ಮಾತ್ರವಲ್ಲದೆ ಆಟೋಟ ಚಟುವಟಿಕೆಗೆ ಮಹತ್ವ ನೀಡಿ ಮುಂಬಯಿ ಬಂಟರ ಸಂಘ ವರ್ಷಂಪ್ರತಿ ಆಯೋಜಿಸುತ್ತಿರುವ ಕ್ರೀಡೋತ್ಸವದಲ್ಲಿ ಪ್ರಾದೇಶಿಕ ಸಮಿತಿಯಿಂದ ಸಮರ್ಥ ಕ್ರೀಡಾಳುಗಳು ಭಾಗವಹಿಸುವಂತೆ ಪ್ರೇರಣೆ ನೀಡಿದರು. ಇವರ ಕಾರ್ಯಾಧ್ಯಕ್ಷತೆಯ ಸಮಯದಲ್ಲಿ ಪ್ರಾದೇಶಿಕ ಸಮಿತಿಯು ಪ್ರಪ್ರಥಮವಾಗಿ ಅತ್ಯುತ್ತಮ ಪ್ರಾದೇಶಿಕ ಸಮಿತಿಯೆಂದು ಮನ್ನಣೆಯನ್ನು ಪಡೆಯಿತು.
ಯುವ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್ ರವರು ಪ್ರಾದೇಶಿಕ ಸಮಿತಿಯ ಮಾಜಿ ಯುವ ಕಾರ್ಯಾಧ್ಯಕ್ಷತೆಯ ದಕ್ಷತೆಯೊಂದಿಗೆ ಕಾರ್ಯಭಾರವನ್ನು ತನ್ನ ಹೆಗಲ ಮೇಲಿರಿಸಿ ಪ್ರಾದೇಶಿಕ ಸಮಿತಿಯು ವಿವಿಧ ಸ್ತರಗಳಲ್ಲಿ ಜನ ಮನ್ನಣೆಯ ಕಾರ್ಯ ನಿರ್ವಹಿಸುತ್ತಾ, ಕೆಲಸ ಕಾರ್ಯಗಳ ಬಗ್ಗೆ ಸಮಾಜ ಬಾಂಧವರ ಮನೆ- ಮನ ಮುಟ್ಟುವಂತೆ ಕಾರ್ಯ ನಿರತವಾಗಿತ್ತು. ಇವರ ಅಧಿಕಾರದವಧಿಯಲ್ಲೂ ಪ್ರಾದೇಶಿಕ ಸಮಿತಿಯು ಬಂಟರ ಸಂಘದಿಂದ ಪ್ರಧಾನಿಸಲ್ಪಡುವ ಅತ್ಯುತ್ತಮ ಪ್ರಾದೇಶಿಕ ಸಮಿತಿ ಎಂದು ಎರಡನೇ ಬಾರಿಗೆ ಮನ್ನಣೆ ಪಡೆಯಿತು. ತನ್ನ ಕಾರ್ಯಾವದಿಯಲ್ಲಿ ಪ್ರಾದೇಶಿಕ ಸಮಿತಿಯ 10 ನೇ ವಾರ್ಷಿಕೋತ್ಸವದಲ್ಲಿ ಸುಮಾರು 6000 ದಷ್ಟು ಸಮಾಜ ಬಾಂಧವರು ನೆರೆದಿದ್ದು ಇತಿಹಾಸದ ಪುಟದಲ್ಲಿ ಸೇರಿಕೊಂಡಿದೆ. ಕ್ರೀಡೆಯ ಬಗ್ಗೆ ಅಪಾರ ಆಸಕ್ತಿಯುಳ್ಳ ಇವರು ಪ್ರಸಕ್ತ ಬಂಟರ ಸಂಘದ ಕ್ರೀಡಾ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ.
ಪ್ರಸಕ್ತ ಸಾಲಿನ ಕಾರ್ಯಾಧ್ಯಕ್ಷರಾದ ಶಿವ್ ಪ್ರಸಾದ್ ಶೆಟ್ಟಿ ಮಾಣಿ ಗುತ್ತುರವರು ಬಂಟ ಸಮಾಜ ಬಾಂಧವರನ್ನು ಇನ್ನೂ ಹೆಚ್ಚು ಒಗ್ಗೂಡಿಸುವ ಮಹತ್ಕಾರ್ಯವನ್ನು ಸಾಧಿಸಿದರು. ಈ ಹಿಂದೆ ಇವರು ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಪ್ರಪ್ರಥಮ ಕಾರ್ಯಾಧ್ಯಕ್ಷರಾಗಿ, ಬಂಟರ ಸಂಘ ಮುಂಬಯಿಯ ಯುವ ವಿಭಾಗ, ಐಟಿ ವಿಭಾಗ, ಮತ್ತು ಸಂಘದ ಆಸ್ತಿ ಅಭಿವೃದ್ದಿ ಹಾಗೂ ನಿರ್ವಹಣೆ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುದೀರ್ಘ ಅನುಭವದ ಸಮಾಜಪರ ಹಿತಚಿಂತಕರು.
ಕೊರೋನ ಸಮಯದಲ್ಲಿ ಮಹಾದಾನಿಗಳ ಸಹಕಾರದೊಂದಿಗೆ ಸಮಾಜ ಬಾಂಧವರಿಗೆ ಆಹಾರದಾನ್ಯ, ಆರೋಗ್ಯ ತಪಾಸಣೆಗೆ ವೈಧ್ಯಕೀಯ ನೆರವು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಕ್ರೀಡಾ ಪಟುಗಳಿಗೆ ವಿಶೇಷ ಪುರಸ್ಕಾರ, ಸಂಕಷ್ಟದಲಿರುವ ಕುಟುಂಬಗಳ ದತ್ತು ಸ್ವೀಕಾರ, ವಿಶ್ವಯೋಗ ದಿನಾಚರಣೆ, ಹಳದಿ ಕುಂಕುಮ, ಮಹಿಳಾ ಪ್ರತಿಭಾ ಪುರಸ್ಕಾರ, ಸದಸ್ಯ ನೊಂದಾವಣೆ, ವಿವಾಹ ನೊಂದಾವಣಿ, ಶೈಕ್ಷಣಿಕ ನೆರವು ಮುಂತಾದ ಹತ್ತಾರು ಉಪಯೋಗಯುಕ್ತವಾದ ಸೇವೆಗಳನ್ನು ಸಮಿತಿಯ ಸದಸ್ಯ ಬಾಂಧವರ ಸಹಕಾರದೊಂದಿಗೆ ಸಮಾಜ ಪರ ಚಟುವಟಿಕೆಗಳಿಗೆ ನೀಡಿದ್ದಾರೆ. ಇವರು ಬಂಟರ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿದ್ದ ಸಮಯದಲ್ಲಿ
ಸ್ಥಳೀಯ ಸಾಯಿ ಪ್ಯಾಲೇಸ್ ಹೊಟೇಲಿನ ತೆರೆದ ಸಭಾಂಗಣದಲ್ಲಿ ಜಾಗತಿಕ ಮಟ್ಟದ ಅಕಾಂಕ್ಷ ಸ್ಪರ್ಧೆಯು ಜನಮನದ ಪ್ರಶಂಸೆಗೆ ಪಾತ್ರವಾಗಿತ್ತು.
ಹೀಗೆ ಕಳೆದ 13 ವರ್ಷಗಳಿಂದ ಬಂಟರ ಸಂಘವು ನಮೂದಿಸಿದ ಚೌಕಟ್ಟಿನಡಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದ ಮೀರಾಭಯಂದರ್ ಪ್ರಾದೇಶಿಕ ಸಮಿತಿಯು ಕಾರ್ಯಾಧ್ಯಕ್ಷರಾದ ಶಿವ್ ಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ, ಸಂಚಾಲಕರಾದ ಗಿರೀಶ್ ಶೆಟ್ಟಿ ತೆಳ್ಳಾರ್ ರವರ ಮಾರ್ಗದರ್ಶನದಲ್ಲಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಇದೇ ಬರುವ ಜೂನ್ 10 ರ ಶನಿವಾರದಂದು ತನ್ನ 13ನೇ ವರುಷದ ವಾರ್ಷಿಕೋತ್ಸವನ್ನು ಮತ್ತು ಶೈಕ್ಷಣಿಕ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಆರ್ಥಿಕ ಸಹಾಯ ಧನ ವಿತರಣೆಯ ಕಾರ್ಯಕ್ರಮವು ಭಾರತ ರತ್ನ ಗಾನ ಸಂಭ್ರಾಗ್ಗಿ ದಿ. ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹ, 588- ಮಹಾಜನ್ ವಾಡಿ, ಪ್ರಸಾದ್ ಇಂಟರ್ ನ್ಯಾಶನಲ್ ಹೊಟೇಲ್ ಸಮೀಪ, ಠಾಕೂರು ಮಾಲ್ ಬಳಿ, ಮೀರಾರೋಡ್ ಇಲ್ಲಿ ಅದ್ದೂರಿಯಿಂದ ಮಧ್ಯಾಹ್ನ 2 ಗಂಟೆಯಿಂದ ಬಿಳಿಯೂರು ಗುತ್ತು ಸುಮತಿ ಎಸ್. ರೈ ಸ್ಮಾರಕ ವೇದಿಕೆಯಡಿಯಲ್ಲಿ ನಡೆಯಲಿದೆ.
ಈ ಸಭಾಕಾರ್ಯಕ್ರಮಕ್ಕೆ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿ, ಸಭಾ ಕಣ್ಮಣಿಯಾಗಿ ರಾಜಕೀಯ ನೇತಾರ ಉದಯ ಶೆಟ್ಟಿ ಮುನಿಯಾಲ್, ವಿಶೇಷ ಆಮಂತ್ರಿತರಾಗಿ ರಾಕ್ಷೀ ಬಿಲ್ಡರ್ಸ್ ನ ಆಡಳಿತ ನಿಧೇಶಕರಾದ ರಾಜೇಶ್ ಯನ್. ಶೆಟ್ಟಿ, ಗೌ. ಅತಿಥಿಗಳಾಗಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಮಾತೃ ಭೂಮಿ ಕೊ. ಆಪ. ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಮಾತೃ ಭೂಮಿ ಕೊ. ಆಪ. ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ವಿಭಾಗದ ಕಾರ್ಯಾಧ್ಯಕ್ಷ ಶಾಂತರಾಮ ಶೆಟ್ಟಿ, ಅಂಕಲೇಶ್ವರದ ಮಾತಾಶ್ರೀ ಹಾಸ್ಪಿಟಲಿಟಿ ಸರ್ವಿಸಸ್ ನ ಸಿ. ಮ್. ಡಿ. ಅಜಿತ್ ಶೆಟ್ಟಿ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜಕ್ಕೆ ಗಣನೀಯ ಸೇವೆಗೈಯ್ಯುತ್ತಿರುವ ಉದ್ಯಮಿ ಹೈಟೆಕ್ ಇಂಜಿನಿಯರ್ಸ್ ಪೈ. ಲಿ. ನ ಸಿ. ಎಮ್. ಡಿ. ರವಿನಾಥ್ ವಿ. ಶೆಟ್ಟಿ, ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆಗೈಯ್ಯುತ್ತಿರುವ ಮೀರಾರೋಡ್ ದೀಪಕ್ ಹಾಸ್ಪಿಟಲ್ ನ ಸಿ. ಎಮ್.ಡಿ. ಡಾ. ಭಾಸ್ಕರ್ ಶೆಟ್ಟಿ, ಯುವ ಐಕಾನ್ ವೃತ್ತಿಪರ ಕ್ಷೇತ್ರದ ಮಲ್ಲಿಕಾ ಹೆಲ್ತ್ ಕ್ಲಿನಿಕ್ ನ ಡಾ. ಪ್ರಥಶ್ವಿನಿ ಜಿ. ಶೆಟ್ಟಿ ಮತ್ತು ಡಾ. ಗೌರೀಶ್ ಎಮ್. ಶೆಟ್ಟಿ ದಂಪತಿ, ಶುಭ್ ಆರಂಭ್ ಬಿಲ್ಡರ್ಸ್ – ಡೆವೆಲಪ್ಪರ್ಸ್ ನ ಸಿ. ಎಮ್ . ಡಿ. ಹಾಗೂ ರಾಜಕೀಯ ನೇತಾರ ಅರವಿಂದ ಎ. ಶೆಟ್ಟಿ, ಸಾಮಾಜಿಕ ಮುಂದಾಳು ಕಿಶೋರ್ ಕುಮಾರ್ ಕುತ್ಯಾರು ವಿಶೇಷ ಸಾಧನೆಗೈದ ಮೊದಲಾದ ಸಾಧಕರನ್ನು ಸನ್ಮಾನಿಸಲಾಗುವುದು. ಮಾತ್ರವಲ್ಲದೆ ಪ್ರಾದೇಶಿಕ ಸಮಿತಿಯ ಯುವ ಪ್ರತಿಭಾವಂತರಾದ ಸಾಕ್ಷಾತ್ ಬಿ. ಶೆಟ್ಟಿ (Rank Holder Medical PG NEET Exam) ಮತ್ತು ಸಿಎ ಪ್ರಖ್ಯಾತ್ ಕೆ. ಶೆಟ್ಟಿ (kaun banega crorepati Winner) ಇವರುಗಳನ್ನು ಸತ್ಕರಿಸಲಾಗುವುದು.
ಪ್ರಾದೇಶಿಕ ಸಮಿತಿಯ ಸದಸ್ಯರಿಂದ ವಿವಿಧ ನೃತ್ಯ ಪ್ರದರ್ಶನ ತದನಂತರ ಹಾಸ್ಯ ಪ್ರಜ್ಞನೆಯ ರುವಾರಿ ಕೆ. ವಿಠಲ್ ನಾಯ್ಕ್ ಕಲ್ಲಡ್ಕ ತಂಡದವರಿಂದ ಮನೋರಂಜನೆ, ಸಭಾ ಕಾರ್ಯಕ್ರಮ ಹಾಗೂ ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಸಮಾಜ ಬಾಂಧವರಿಗೆ ಆರ್ಥಿಕ ಧನ ಸಹಾಯ ವಿತರಣೆ ನಡೆಯಲಿದೆ. ಕಾರ್ಯಕ್ರಮದ ನಡುವೆ ಲಘು ಉಪಹಾರ ಕೊನೆಗೆ ಪ್ರೀತಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮ ನಿರೂಪಣೆಯನ್ನು ರಂಗ ನಟ ಬಾಬಾ ಪ್ರಸಾದ್ ಅರಸ ಕುತ್ಯಾರ್ ನಿರೂಪಿಸಲಿದ್ದಾರೆ.
ಬಂಟರ ಸಂಘದ ಮೀರಾಭಯಂದರ್ ಪ್ರಾದೇಶಿಕ ಸಮಿತಿಯ ಈ ಕಾರ್ಯಕ್ರಮವು ಅದ್ದೂರಿಯಿಂದ ನಡೆಯುವಲ್ಲಿ ಸಮಾಜ ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸುವಲ್ಲಿ ಸಹಕರಿಸಬೇಕೆಂದು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಉಪಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ. ಹರೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಪಶ್ಚಿಮ ವಲಯದ ಸಮನ್ವಯಕರಾದ ಕೆ. ಶಶಿಧರ್ ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಉಪ ಕಾರ್ಯಾಧ್ಯಕ್ಷ ಪೆಲತ್ತೂರು ಉದಯ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಕೋಶಾಧಿಕಾರಿ ದಾಮೋದರ್ ಯನ್. ಶೆಟ್ಟಿ, ಜೊತೆ ಕಾರ್ಯದರ್ಶಿ ಶಂಕರ್ ಕೆ. ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶ್ರುತಿ ಡಿ. ಶೆಟ್ಟಿ, ಸಮಿತಿಯ ಸಲಹೆಗಾರರು, ಉಪಸಮಿತಿಯ ಕಾರ್ಯಾಧ್ಯಕ್ಷರುಗಳು ಹಾಗೂ ಸಮಿತಿಯ ಸದಸ್ಯರುಗಳು ವಿನಂತಿಸಿಕೊಂಡಿದ್ದಾರೆ.