ಮುಂಬಯಿ ಮಹಾನಗರ ಪಾಲಿಕೆಯ ರಾಜಾವಾಡಿ ಆಸ್ಪತ್ರೆಯಲ್ಲಿ ನಿಯಮಿತವಾಗಿ ‘ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ’ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪರಿಣಾಮ ಜನ್ಮ ಜಾತ ಶ್ರವಣ ದೋಷ ಇರುವ ಮಕ್ಕಳಿಗೆ ಶಾಶ್ವತವಾಗಿ ಪರಿಹಾರ ಸಿಗಲಿದೆ. ದೋಷವಿರುವ ಮಕ್ಕಳಲ್ಲಿ ಐದು ವರ್ಷಗಳವರೆಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ಮಕ್ಕಳಲ್ಲಿ ಶ್ರವಣ ದೋಷದ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ವಿಶೇಷವೇನೆಂದರೆ ಡಾ. ಅದೀಪ್ ಶೆಟ್ಟಿ ನೇತೃತ್ವದಲ್ಲಿ ಈ ಯೋಜನೆ ಕಾರ್ಯನಿರತಗೊಳ್ಳಲಿದೆ.
ಮೂಲತ: ಮಂಗಳೂರು ಸುರತ್ಕಲ್ ನ ಡಾ. ಅದೀಪ್ ಶೆಟ್ಟಿಯವರು ರಾಜಾವಾಡಿಯ ಕಿವಿ- ಮೂಗು – ಗಂಟಲು ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪಾಲಿಕೆಯ ಕೆಇಎಂ ಮತ್ತು ನಾಯರ್ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತಿತ್ತು. ದೇಶದ ಅತ್ಯಂತ ಕಿರಿಯ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಆದ ಡಾ. ಅದೀಪ್ ಶೆಟ್ಟಿ ಅವರ ಪರಿಶ್ರಮದ ಫಲವೇ ಉಪನಗರದ ರಾಜಾವಾಡಿ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆ ಆರಂಭಗೊಳ್ಳಲಿದೆ.
ಮುಂಬಯಿಯಲ್ಲಿರುವ ಅಲಿ ಯಾವರ್ ಜಂಗ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ ಡಿಸಾಬಿಲಿಟೀಸ್ (ದಿವ್ಯಾಂಗ್ ಜನ್ )ಎಡಿಐಪಿ ಯೋಜನೆಯಡಿಯಲ್ಲಿ ದೇಶದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನೋಡಲ್ ಏಜನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಮೂಲಸೌಕರ್ಯ ಮತ್ತು ಆಪರೇಟಿಂಗ್ ಇಎನ್ ಟಿ ಶಸ್ತ್ರ ಚಿಕಿತ್ಸಕರ ಸಾಮರ್ಥ್ಯದ ಆಧಾರದ ಮೇಲೆ ಇಂತಹ ಕಾಕ್ಲಿಯರ್ ಇಂಪ್ಲಾಂಟ್ ಗಳನ್ನು ಅನುಮತಿಸಲಾಗುತ್ತದೆ. ಡಾ. ಅದೀಪ್ ಶೆಟ್ಟಿ ಅವರು ಸ್ವತಂತ್ರವಾಗಿ 54 ಶಸ್ತ್ರ ಚಿಕಿತ್ಸೆಗಳನ್ನು ಮಾಡಿದಲ್ಲದೇ ಲೀಲಾವತಿ ಮತ್ತು ಹೋಲಿ ಸ್ಪಿರಿಟ್ ಆಸ್ಪತ್ರೆಯಲ್ಲಿ ಕೂಡ ಕನ್ಸಲ್ಟ್ಂಟ್ ಆಗಿ ಕೂಡ ಕೆಲಸ ನಿರ್ವಹಿಸುತ್ತಾರೆ. ಭಾರತದಲ್ಲಿ ಪ್ರತಿ ವರ್ಷ 27 ಸಾವಿರಕ್ಕೂ ಹೆಚ್ಚು ಮಕ್ಕಳು ಕಿವುಡು ಮತ್ತು ಮೂಕರಾಗಿ ಜನಿಸುತ್ತಾರೆ. ರೋಗ ಪ್ರಥಮ ಹಂತದಲ್ಲೇ ತಿಳಿಯದ ಕಾರಣ ಅವರ ಮಾತಿನ ಮೇಲೆ ಪರಿಣಾಮ ಬೀರುತ್ತದೆ. ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಯ ಮೂಲಕ ಅಳವಡಿಸಿಲಾಗುವ ಇಲೆಕ್ಟ್ರಾನಿಕ್ ಉಪಕರಣವಾಗಿದ್ದು, ಶ್ರವಣ ದೋಷವಿರುವ ಮಕ್ಕಳಿಗೆ ಕೇಳಲು ಸಹಾಯವಾಗುವಂತೆ ಮಾಡಿ ಜೀವನ ಸುಖಕರಗೊಳ್ಳುತ್ತದೆ.
ವೆಚ್ಚವನ್ನು ಸರಕಾರವೇ ಭರಿಸಲಿದೆ –
ಎಡಿಐಪಿ ಯೋಜನೆಯಡಿ, ಇಂಪ್ಲಾಂಟ್, ಶಸ್ತ್ರ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಪುನರ್ವಸನೆ ವೆಚ್ಚವನ್ನು ಭರಿಸುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ರಾಜಾವಾಡಿ ಆಸ್ಪತ್ರೆಯಲ್ಲಿಯೇ ಯೋಜನೆಯಡಿ ಮಕ್ಕಳ ತಪಾಸಣೆ ಮಾತು ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಖಾಸಗಿ ಸಂಸ್ಥೆಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳ ವೆಚ್ಚ ಎಂಟೂವರೆ ಲಕ್ಷದವರೆಗೆ ತಗಲುತ್ತದೆ. ರಾಜಾವಾಡಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಈ ಸೌಲಭ್ಯ ಸಂಪೂರ್ಣ ಉಚಿತವಾಗಿರುತ್ತದೆ.