ಉತ್ತಮ ವ್ಯಕ್ತಿತ್ವ ಉತ್ತಮ ಸಮಾಜದ ನಿರ್ಮಾಣದಲ್ಲಿ ಕುಟುಂಬದಲ್ಲಿ ಸಿಗುವ ಸಂಸ್ಕಾರ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಪಕ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು. ಕರಾವಳಿ ಲೇಖಕಿಯರ ವಾಚಕಿಯರ (ಕ. ಲೇ. ವಾ.) ಸಂಘದ ವತಿಯಿಂದ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ಜರಗಿದ ಸಮಾರಂಭದಲ್ಲಿ ಕುಲಕಸುಬು ಕಮ್ಮಾರಿಕೆಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಲೀಲಾವತಿ ಆಚಾರ್ಯ ಪೈಕ ಗುತ್ತಿಗಾರು ಅವರಿಗೆ ಸಂಜೀವಿನಿ ನಾರಾಯಣ ಅಡ್ಯಂತಾಯರ ಸ್ಮರಣಾರ್ಥ ‘ಸಂಜೀವಿನಿ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ‘ಕುಟುಂಬ ಸಹವಾಸ ಮತ್ತು ಸಂಬಂಧ ‘ ವಿಷಯದ ಕುರಿತು ಮಾತನಾಡಿದರು. ಇಂದು ಸಂವೇದನೆಯನ್ನು ಕಳೆದುಕೊಂಡು ಯಾಂತ್ರಿಕತೆಯ ಬದುಕಿನತ್ತ ಸಾಗುತ್ತಿರುವ ಸಮಾಜದಲ್ಲಿ ಕುಟುಂಬ ಪ್ರೀತಿಯ ಅಗತ್ಯವಿದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಲೇಖಕಿ ಬಿ. ಎಂ. ರೋಹಿಣಿ ಅವರು, ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳಲ್ಲಿ ಅವುಗಳದ್ದೇ ಆದ ಒಳ್ಳೆಯ ಮತ್ತು ಕೆಟ್ಟ ಅಂಶಗಳು ಇವೆ. ಆದಾಗ್ಯೂ ಅವಿಭಕ್ತ ಕುಟುಂಬದಲ್ಲಿ ಕುಟುಂಬ ಪ್ರೀತಿ ಹೆಚ್ಚಿತ್ತು. ತನ್ನ ಕುಟುಂಬ ಸಂಕಷ್ಟದಲ್ಲಿದ್ದಾಗ ಕುಲಕಸುಬು ಕಮ್ಮಾರಿಕೆಯನ್ನು ಆರಂಭಿಸಿ ಕುಟುಂಬಕ್ಕೆ ಆಧಾರವಾಗಿ ಇಂದು ಇಡೀ ಸಮಾಜಕ್ಕೆ ಸ್ಫೂರ್ತಿ, ಮಾದರಿಯಾಗಿರುವ ಲೀಲಾವತಿ ಆಚಾರ್ಯ ಅವರನ್ನು ಪುರಸ್ಕರಿಸುತ್ತಿರುವುದು ಸ್ತುತ್ಯರ್ಹ ಕಾರ್ಯಕ್ರಮ ಎಂದರು.
ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಸಾಮಾಜಿಕ, ಧಾರ್ಮಿಕ ಮುಖಂಡ ಜಯರಾಮ ಸಾಂತ, ರಾಧಾಕೃಷ್ಣ ಅಡ್ಯಂತಾಯ ಮುಂಬಯಿ ಉಪಸ್ಥಿತರಿದ್ದರು. ಕ. ಲೇ. ವಾ. ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು. ಡಾ. ಸುಧಾರಾಣಿ ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ರೂಪಕಲಾ ಆಳ್ವ ಪ್ರಶಸ್ತಿ ಪತ್ರ ವಾಚಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.