ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಹಂತಹಂತವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನಾಂಗದ ಪ್ರತಿಯೊಬ್ಬರು ಕೂಡಾ ಸಂಘದ ಜತೆಗೆ ಕೈಜೋಡಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ಜಗದೀಶ್ ರೈ ಮನವಿ ಮಾಡಿದರು. ಮಡಿಕೇರಿಯ ಗಾಂಧಿ ಮೈದಾನ ಬಳಿಯಿರುವ ಖಾಸಗಿ ಕಟ್ಟಡದಲ್ಲಿ ನಡೆದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮುದಾಯ ಬಾಂಧವರಿಗಾಗಿ ಸಂಘದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ತುಳು ಭಾಷಿಕರ ಹೊಸ ವರ್ಷವಾದ ಬಿಸು ಹಬ್ಬವನ್ನು ಮುಂದಿನ ವರ್ಷದಿಂದ ಸಂಘದ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸುವ ಉದ್ದೇಶವಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಆಚರಣೆಯಾಗಿ ಎಲ್ಲರೂ ಸಂಭ್ರಮಿಸುವ ರೀತಿಯ ಕಾರ್ಯಕ್ರಮ ಮಾಡಲಾಗುವುದೆಂದರು. ಜಿಲ್ಲಾ ಬಂಟರ ಸಂಘದ ಜತೆಗೆ ತಾಲೂಕು ಘಟಕ, ನಗರ ಮಹಿಳಾ ಘಟಕ, ಯುವ ಬಂಟ್ಸ್ ಅಸೋಸಿಯೇಷನ್ ಕಾರ್ಯಚಟುವಟಿಕೆಗಳಿಗೆ ಈ ಕಚೇರಿಯನ್ನು ಬಳಸಿಕೊಳ್ಳಬಹುದು. ಸಂಘದ ಕಾರ್ಯಚಟುವಟಿಕೆಗಳು ಜಿಲ್ಲಾ ಬಂಟರ ಭವನದಲ್ಲಿ ಆಗಬೇಕೆಂಬ ಕನಸು ಜನಾಂಗ ಬಾಂಧವರಲ್ಲಿದೆ. ಅದು ಈಡೇರಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯದರ್ಶಿ ರವೀಂದ್ರ ವಿ. ರೈ ಮಾತನಾಡಿ ನೂತನ ಕಚೇರಿ ಕಾರ್ಯಾರಂಭದೊಂದಿಗೆ ಬಂಟರ ಸಂಘದಲ್ಲಿ ಸುವರ್ಣ ಯುಗ ಶುರುವಾಗಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ಅಡಿಪಾಯವನ್ನು ನಾವು ಹಾಕಿಕೊಡಬೇಕು. ಹಳೆಯ ವಿಚಾರಗಳನ್ನೇ ಕೆದಕುತ್ತಾ ಹೋಗುವ ಬದಲು ಭವಿಷ್ಯದ ಬಗ್ಗೆ ಉತ್ತಮ ಯೋಜನೆಗಳನ್ನು ಹಾಕಿಕೊಂಡು ಸಂಘ ಮುನ್ನಡೆಯಬೇಕೆಂದರು. ಸಂಘವನ್ನು ಒಡೆಯುವ ಉದ್ದೇಶದಿಂದ ಬೆರಳೆಣಿಕೆಯ ಮಂದಿ ಸೇರಿಕೊಂಡು ಪರ್ಯಾಯ ಸಂಘ ಮಾಡಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಸಮುದಾಯ ಬಾಂಧವರು ಇದಕ್ಕೆ ಮನ್ನಣೆ ನೀಡಬಾರದು. ಮೂಲ ಸಂಘದ ಜತೆಗೆ ಎಲ್ಲರೂ ಕೈಜೋಡಿಸಿಕೊಂಡು ಸಮುದಾಯದ ಏಳಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ ನೂತನ ಕಚೇರಿ ಉದ್ಘಾಟನೆ ಮಾಡಿ ಶುಭಕೋರಿದರು. ಕಚೇರಿ ಉದ್ಘಾಟನೆ ಅಂಗವಾಗಿ ಗಣಪತಿ ಹೋಮ, ಹಬ್ಬದ ಪ್ರಯುಕ್ತ ಬಿಸು ಕಣಿ ಪೂಜೆ ನೆರವೇರಿತು.
ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ರೈ, ವಿರಾಜಪೇಟೆ ತಾಲೂಕು ಅಧ್ಯಕ್ಷ ಲೀಲಾಧರ ರೈ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜನಾರ್ದನ ಶೆಟ್ಟಿ, ನಗರ ಮಹಿಳಾ ಘಟಕ ಅಧ್ಯಕ್ಷೆ ಸೌಮ್ಯ ಶೆಟ್ಟಿ, ಹಿರಿಯರಾದ ಕೊರಗಪ್ಪ ರೈ, ಸಂಘದ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭ ಇದ್ದರು.
ಮಾಸಿಕ ಸಭೆ :
ಕಚೇರಿ ಉದ್ಘಾಟನೆ ಬಳಿಕ ಸಂಘದ ಮಾಸಿಕ ಸಭೆ ಅಧ್ಯಕ್ಷ ಜಗದೀಶ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ನಾಲ್ಕೈದು ಮಂದಿ ಸಂಘ ವಿರೋಧಿ ಚಟುವಟಿಕೆ ನಡೆಸುತ್ತಿದ್ದು ಅಂಥವರನ್ನು ತಕ್ಷಣವೇ ಸಂಘದಿಂದ ಉಚ್ಚಾಟನೆ ಮಾಡಬೇಕೆಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು. ವಿರಾಜಪೇಟೆ ತಾಲೂಕು ಅಧ್ಯಕ್ಷ ಲೀಲಾಧರ ರೈ ಮಾತನಾಡಿ, ವಿರಾಜಪೇಟೆಯಲ್ಲಿ ಹೊಸದಾಗಿ ಆರಂಭವಾಗಿರುವ ತಾಲೂಕು ಘಟಕಕ್ಕೆ ಪರ್ಯಾಯವಾಗಿ ಕೆಲವರು ಸೇರಿಕೊಂಡು ಮತ್ತೊಂದು ಸಂಘಟನೆ ಮಾಡಿ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ಖಂಡನೀಯ. ಸಂಘಟನೆಯನ್ನು ಒಡೆಯುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಇಂಥವರ ಬಗ್ಗೆ ಜನಾಂಗ ಬಾಂಧವರು ಎಚ್ಚರಿಕೆಯಿಂದ ಇರಬೇಕೆಂದರು.