ವಿಶ್ವ ವಿಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ಹುಟ್ಟಿದ ದಿನ ಎಪ್ರಿಲ್ 23 ನ್ನು ಅವರ ಸ್ಮರಣಾರ್ಥ ವಿಶ್ವ ಪುಸ್ತಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಕೇವಲ 52 ವರ್ಷ ಬದುಕಿದರೂ ಮಾನವ ಜನಾಂಗ ಮರೆಯದ ಉತ್ತಮ ಸಾಹಿತ್ಯ ಕೃಷಿಯಲ್ಲಿ ಪಳಗಿ ಅನೇಕ ನುಡಿ ಮತ್ತುಗಳನ್ನು ಅಜರಾಮರವಾಗಿಸಿದ ಹೆಗ್ಗಳಿಕೆ ಇವರದು. ಜ್ಞಾನದ ಕಣಜವಾಗಿರುವ ಶೇಕ್ಸ್ಪಿಯರ್ ಅವರ ಪ್ರತಿಯೊಂದು ಶಬ್ದವು ವೇದಾಂತಸಾರದ ಅನುಭವವನ್ನು ತಿಳಿಸುವಂತದ್ದು. ಜೀವನವನ್ನು ಅರ್ಥೈಸುವ ಹಾಗೂ ಅದರ ಇತಿಮಿತಿಗಳನ್ನು ಪರಾಮರ್ಶಿಸುವ ಬದುಕಿನ ವಿವಿಧ ಮಜಲುಗಳ ಅರ್ಥವನ್ನು ಸಾರುವ ಅನೇಕ ಸುನೀತಗಳು ವಿಶಿಷ್ಟವಾದ ಶಬ್ದ ಮಾಧುರ್ಯ, ಅರ್ಥ ಗಾಂಭೀರ್ಯ ಬರಹ ಶೈಲಿ ಮನಮುಟ್ಟುವಂತದ್ದು ಅಂತಹ ಮಹಾನ್ ನಾಟಕಕಾರರ ಸ್ಮರಣಾರ್ಥ ವಿಶ್ವ ಪುಸ್ತಕದಿನಾಚರಣೆ ನಡೆಯುತ್ತಿರುವುದು ಅರ್ಥ ಗರ್ಭಿತ.
ಅತ್ಯಂತ ನೆಮ್ಮದಿಯ ಕ್ಷಣಗಳನ್ನು ಓದಿನಿಂದ ಪಡೆಯಬಹುದು. ಓದುವ ಹವ್ಯಾಸ ಹೆಚ್ಚಾದಂತೆ ಪುಸ್ತಕ ಹುಡುಕಿ ಓದುವ ಚಟವೂ ಹೆಚ್ಚಾಗುತ್ತದೆ. ಪುಸ್ತಕ ಭಂಡಾರ ಜ್ಞಾನ ದೇಗುಲ, ಜ್ಞಾನ ಜೋತಿ ದೊರೆಯುವ ಸುಂದರ ಆಲಯವೇ ಗ್ರಂಥಾಲಯ. ಓದುಗರ ಅಭಿರುಚಿಗೆ ಅನುಗುಣವಾಗಿ ಬುದ್ದಿಯನ್ನು ಚುರುಕುಗೊಳಿಸಿ ಶತಮೂರ್ಖರನ್ನೂ ಕೂಡ ಶ್ರೇಷ್ಠರ ಸಾಲಿಗೆ ಸೇರಿಸುವ ಶಕ್ತಿ ಪುಸ್ತಕಗಳಿಗೆ ಇದೆ . ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದ ವಸ್ತು ಎಂದರೆ ಪುಸ್ತಕ ಎನ್ನುವ ಗಯಟೆಯವರ ಮಾತು ನಿತ್ಯ ಸತ್ಯ. ಓದಿನ ಮೂಲಕ ತಿಳುವಳಿಕೆ ಹೆಚ್ಚುತ್ತದೆ. ಸ್ವಂತ ಚಿಂತನೆ ವ್ಯಕ್ತಿತ್ವದ ಪರಿಪೂರ್ಣತೆಗೆ ಸಮಕಾಲೀನ ಹಾಗೂ ಇತಿಹಾಸದ ಬಗೆಗಿನ ಅರಿವು, ಬುದ್ದಿ ಬೆಳವಣಿಗೆಗೆ ಪುಸ್ತಕದ ನೆರವು ಬೇಕು ಜ್ಞಾನ ವೃದ್ದಿಗೆ ಸರಳ ಸಾಧನ ಪುಸ್ತಕ ಓದುವಿಕೆ. ಬೇಡದ ಪಟ್ಟಾಂಗಕ್ಕಿಂತ ಓದು ನಮಗೆ ಪೂರಕವಾಗಲಿದೆ. ಮನೋಸ್ಥೆರ್ಯ, ವಿವೇಚನೆ, ಜಾನಾರ್ಜನೆಗೆ ಓದು ಸಹಾಯಕ. ಓದಿನಿಂದ ಭಾಪಾ ಸಾಮರ್ಥ್ಯ ಬೆಳೆಸಿಕೊಳ್ಳಬಹುದು. ಪುಸ್ತಕ ಜಗತ್ತಿನೆಡೆಗೆ ತೆರೆವ ಕಿಂಡಿ ಎಂಬ ಮಾತಿದೆ. ಅದರೊಳಗೆ ನಾವೆಷ್ಟು ಇಣಿಕಿದ್ದೇವೆ ಎಂಬುದರೊಂದಿಗೆ ಸಫಲತೆಯ ಫಲಿತಾಂಶ ದೊರೆಯುತ್ತದೆ.
ಮನಸ್ಸು ಭಾರವಾದಾಗ ಪುಸ್ತಕ ಓದಿ ನೋಡಿ ಯಾವುದೇ ಮಾನಸಿಕ ತಜ್ಞರ ಸಲಹೆಗೂ ಮಿಗಿಲಾದ ನೆಮ್ಮದಿ ಮನಸ್ಸಿಗೆ ಹಿತ ಓದಿನಲ್ಲಿ ಸಿಗಲಿದೆ. ನಾನು ನರಕದಲ್ಲಿದ್ದಾಗಲೂ ಒಳ್ಳೆಯ ಪುಸ್ತಕಗಳನ್ನು ಸ್ವಗತಿಸುವೆ.ಅವು ಇದ್ದಲ್ಲಿ ಸ್ವರ್ಗ ತಾನಾಗೇ ಹುಟ್ಟುತ್ತದೆ ಎಂಬ ಬಾಲಗಂಗಾಧರ ತಿಲಕರ ಮಾತು ಪುಸ್ತಕದ ಮೌಲ್ಯ ತಿಳಿಸುತ್ತದೆ. ಜ್ಞಾನ ಸಂಪತ್ತು ನೀಡುವ ಗ್ರಂಥಾಲಯ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಒಳ್ಳೆಯ ಮಾಹಿತಿ ಹಾಗೂ ಉತ್ತಮ ಶ್ಯೆಲಿಯ ಪುಸ್ತಕ ಗಳು ಮೆದುಳಿಗೆ ಮೇವು ನೀಡುತ್ತದೆ.ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಲು ನೆರವಾಗುವ ಅನೇಕ ಹೊತ್ತಿಗೆಗಳು ಜೀವನದ ಉದ್ದಕ್ಕೂ ದೀವಟಿಗೆ ಬೆಳಕು ಹಾಯಿಸುತ್ತವೆ.
ಕವಿಗಳು, ಲೇಖಕರು, ಸಾಹಿತಿಗಳು ಪ್ರೀತಿ ಗೌರವದಿಂದ ನೀಡಿದ ಪುಸ್ತಕಗಳನ್ನು ಸಂಗ್ರಹದಲ್ಲಿರಿಸಿ ಓದಬೇಕೇ ಹೊರತು ಯಾರು ಓದುತ್ತಾರೆ, ಸಮಯವಿಲ್ಲ ಎನ್ನುವ ಧೋರಣೆ ಹಾಗೂ ಹಳೆ ಪೇಪರ್ ಗಳೊಂದಿಗೆ ಮಾರಾಟ ಮಾಡುವುದು ಸರಿ ಅಲ್ಲ. ವಿಶ್ವಾಸ, ಪ್ರೀತಿಯಿಂದ ಓದುವಿರೆಂದು ನಂಬಿಕೆಯಿಂದ ನೀಡಿದ ಪುಸ್ತಕ ಕ್ಕೆ ಗೌರವ ನೀಡಿ . ಓದಿ ಜ್ಞಾನ ಪಡೆಯಲು ಹಲವು ಮಾರ್ಗಗಳಿದ್ದರು ಎಲ್ಲಕ್ಕಿಂತ ಶ್ರೇಷ್ಠವಾದುದು ಎಂದರೆ ಪುಸ್ತಕ ಓದಿ ತಿಳಿದುಕೊಳ್ಳವುದು. ಈಗೆಲ್ಲ ತಾಂತ್ರಿಕ, ಅಂತರ್ಜಾಲಗಳ ಮೂಲಕ ಅವಶ್ಯಕ ಮಾಹಿತಿಗಳು ದೊರೆಯುತ್ತಿದ್ದರೂ ಪುಸ್ತಕದ ಘನತೆ ಕುಂದಿಲ್ಲ.
ಮಕ್ಕಳ ರಜಾ ಸಮಯದಲ್ಲಿ ಉತ್ತಮ ಪುಸ್ತಕ ಗಳನ್ನು ಓದಲು ಸಮಯ ಮೀಸಲಿಡುವುದು ಒಳ್ಳೆಯ ಹವ್ಯಾಸ. ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ಪುಸ್ತಕ ಗಳು ಚಿಣ್ಣರ ಸಂಗಾತಿಗಳಾಗಲಿ. ಮಕ್ಕಳಿಗೆ ಮನೋರಂಜನೆ ನೀಡುವ, ಪ್ರಚೋದನೆ, ಪ್ರೇರಣೆ ನೀಡುವಂತಹ ಪುಸ್ತಕಗಳನ್ನು ನೀಡಿ. ನವಪೀಳಿಗೆಯಲ್ಲಿ ಪುಸ್ತಕ ಪ್ರೇಮ ಕ್ಷೀಣಿಸುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಓದಿನ ರುಚಿ ಹತ್ತಿಸುವ, ಮಾನಸಿಕವಾಗಿ ಹುರಿದುಂಬಿಸುವ ಕಾರ್ಯದ ಅಗತ್ಯವಿದೆ.ಇಂದಿನ ಮಕ್ಕಳಲ್ಲಿ ದಿನ ನಿತ್ಯದ ಪಾಠ ಪುಸ್ತಕದ ಹೊರತಾಗಿ ಯಾವೊಂದು ಪುಸ್ತಕವನ್ನು ಓದುವ ಹುಚ್ಚಿಲ್ಲ. ಮಾಹಿತಿ ಜಾಲ ವ್ಯಾಪಕವಾಗಿದೆ. ಜಗತ್ತಿನ ಎಲ್ಲಾ ಮೂಲೆಗಳನ್ನು ಜಾಲಾಡುವ ತಾಣಗಳಿಂದ ಮಾಹಿತಿ ಸಿಗಬಹುದೆ ಹೊರತು ಮಕ್ಕಳ ಮನಸ್ಸಿನ ಸುಪ್ತ ಪ್ರಜ್ಞೆ ಜಾಗೃತ ವಾಗುವುದು ಓದಿನಿಂದ. ಓದುವಿಕೆ ಮನದಲ್ಲಿ ಆಕಾಂಕ್ಷೆ ಮೂಡಿ ಜೀವನದ ಗತಿ ವಿಧಿಗಳನ್ನು ಬದಲಾಯಿಸುತ್ತದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ