ಕುಟುಂಬದ ತರವಾಡು ಎಂದರೆ ನಮ್ಮ ಶರೀರದಲ್ಲಿರುವ ಹೃದಯವಿದ್ದಂತೆ.ಹೃದಯ ಆರೋಗ್ಯವಾಗಿದ್ದರೆ ಮಾತ್ರ ಶರೀರ ಸ್ವಸ್ಥ ವಾಗಿರುತ್ತದೆ. ಆದುದರಿಂದ ತರವಾಡು ಮನೆಯನ್ನು ನಿರ್ಮಿಸಿ ದೈವಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬರಬೇಕು . ಕುಟುಂಬದ ತಾಯಿಬೇರೆಂದರೆ ಅದು ತರವಾಡು.ಬೇರಿಗೆ ನೀರೆರೆದು ಪೋಷಿಸಿದರೆ ಮಾತ್ರ ಕುಟುಂಬವೆಂಬ ವಟವೃಕ್ಷ ಸಮೃದ್ಧಿಯಿಂದಿರಲು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಪೂಜ್ಯರಾದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಕಳಿಯೂರು ದೇವಸ್ಯಗುತ್ತು ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡುತ್ತಾ ನಮ್ಮಲ್ಲಿ ಆತ್ಮಜ್ಞಾನದ ಹಸಿವನ್ನು ನೀಗಿಸುವ ಕಾರ್ಯ ಆಗಬೇಕಾಗಿದೆ. ನಮ್ಮ ವರ್ತಮಾನ ಸುಸ್ಥಿತಿಯಲ್ಲಿದ್ದರೆ ಭವಿಷ್ಯ ಸುಂದರವಾಗುತ್ತದೆ. ವಿಶ್ವದಲ್ಲಿ ಧರ್ಮ ಚಾವಡಿಯಿದ್ದರೆ ಅದು ಭಾರತ. ಭಾರತದೊಳಗೊಂದು ಧರ್ಮ ಚಾವಡಿಯಿದ್ದರೆ ಅದು ನಮ್ಮ ತುಳುನಾಡು. ಇಲ್ಲಿರುವಷ್ಟು ದೈವಗಳ ಆರಾಧನೆ ಬೇರೆಲ್ಲೂ ನಡೆಯುವುದಿಲ್ಲ. ತುಳುವ ಸಂಸ್ಕೃತಿ ನಮ್ಮ ಮಾತೃ ಸಂಸ್ಕೃತಿಯಾಗಿದೆ. ಸಂಸ್ಕೃತಿಯ ಉಳಿವು ಇಂತಹ ಧರ್ಮಾಚರಣೆಗಳಿಂದ ಮಾತ್ರ ಸಾಧ್ಯ. ದೈವಿಕವಾದ ಕಲೆ – ಕಾರಣಿಕದ ತಾಣವೇ “ದೇವಸ್ಯ”. ಇಲ್ಲಿ ಒಂದು ಆದರ್ಶಯುತ ಧರ್ಮ ಚಾವಡಿ ಸುಂದರವಾಗಿ ನಿರ್ಮಾಣಗೊಂಡು ಊರಿನ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಮನುಷ್ಯ ಬಲ ಹಾಗೂ ದೈವಬಲ ಕೂಡಿದರೆ ಮಾತ್ರ ಇಂತಹ ಕಾರ್ಯ ಮಾಡಲು ಸಾಧ್ಯ ವಾಗುತ್ತದೆ. ನಮ್ಮ ಮೌಲಿಕವಾದ ತುಳುಭಾಷೆ, ಸಂಸ್ಕೃತಿಯನ್ನು ಮರೆಯದೆ ಉಳಿಸುವ ಕಾರ್ಯ ಆಗುತ್ತಿರಲಿ ಎಂದರು.
ವೇದಿಕೆಯಲ್ಲಿ ದೇವಸ್ಯ ಗುತ್ತು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸುಬ್ಬಣ್ಣ ಶೆಟ್ಟಿ ಹಾಗೂ ಪತ್ರಕರ್ತ ಕಿರಣ್ ರೈ ಕರ್ನೂರು ಉಪಸ್ಥಿತರಿದ್ದರು. ಪೂಜ್ಯ ಶ್ರೀಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕಿಶೋರ್ ರೈ ಕಲ್ಲಡ್ಕ ದೇಲಂಪಾಡಿ ಒಡಿಯೂರು ಶ್ರೀಗಳನ್ನು ಫಲಪುಷ್ಪಾದಿಗಳನ್ನಿತ್ತು ಸತ್ಕರಿಸಿದರು. ಸುಮಿತ ಚೌಟ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.