ಮುಂಬಯಿ (ಜಪಾನ್ ನರಿಟಾ), ಆರ್ಬಿಐ, ಎ.10: ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸಮುದಾಯವು ಉತ್ತಮ ಸಂಸ್ಕೃತಿಯನ್ನು ರೂಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ಸಾಂಸ್ಕೃತಿಕವಾಗಿ ತೊಡಿಸಿಕೊಳ್ಳುವುದು ಸಮಾಜಕ್ಕೆ ನೀಡುವ ಸೃಜನಶೀಲ ಕೊಡುಗೆ ಆಗಿರುತ್ತದೆ ಎಂದು ವಿಜಾಪುರದ ಡಾ| ನಾಗೂರ್ ಎಜುಕೇಶನ್ ಟ್ರಸ್ಟ್ ನ
ಮ್ಯಾನೇಂಗ್ ಟ್ರಸ್ಟೀ ಹಾಗೂ ಇಂಢಿಯಾ ಮಾಸ್ಟರ್ ಅಥ್ಲೆಟಿಕ್ಸ್ ಫೆಡೆರೇಷನ್ ಅಧ್ಯಕ್ಷ ಡಾ| ಕೆ.ಬಿ ನಾಗೂರ್ ಅಭಿಪ್ರಾಯಪಟ್ಟರು.
ಕಳೆದ ಶುಕ್ರವಾರ (ಎ.7) ಜಪಾನಿನ ಟೋಕಿಯೋ ಸಮೀಪದ ನರಿಟಾ ನಗರದ ಕ್ರೇನ್ ಬಾಂಕ್ವೆಟ್ ಸಭಾಂಗಣದಲ್ಲಿ ನಡೆಸಲ್ಪಟ್ಟ 37ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಡಾ| ಕೆ.ಬಿ ನಾಗೂರ್ ಮಾತನಾಡಿದರು. ಶಿವಗಂಗಾ ಕ್ಷೇತ್ರ ಮೇಲಣ ಗವಿಮಠದ ಡಾ| ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾಚನ ನೀಡಿ ನಮ್ಮ ಕಲೆ ಮತ್ತು ಸಂಸ್ಕೃತಿಗಳು ಸಮಾಜಕ್ಕೆ ಬೆಳಕು ಚೆಲ್ಲುವ ದೀವಿಗೆಗಳಿದ್ದಂತೆ ಅವುಗಳನ್ನು ಸಾಗರದ ಆಚೆಯೂ ಪಸರಿಸುವುದು ಸಾಹಸದ ಕೆಲಸ. ಅಂತಹ ಕೆಲಸ ಮಾಡುವವರಿಗೆ ದೇವರು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದರು.
ಐಸಿಎಫ್ಸಿ (ಇಂಡಿಯಾ) ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಮಾತನಾಡಿ ಭಾರತೀಯ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್, ಹೃದವಾಹಿನಿ-ಕರ್ನಾಟಕ ಮತ್ತು ಮಂಜುನಾಥ್ ಎಜುಕೇಶನ್ ಟ್ರಸ್ಟ್ ಸುಮಾರು 20 ವರ್ಷಗಳಿಂದ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿವೆ. ನಾವು ವಿಶ್ವ ಸೌಹಾರ್ದ ಪ್ರಿಯರು ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ. ವಿದೇಶಗಳಲ್ಲಿ ಅಲ್ಲಿಯ ಕನ್ನಡಿಗರು ಮತ್ತು ಕನ್ನಡಿಗರ ಸಂಸ್ಥೆಗಳ ಮೂಲಕ ವಿಶ್ವ ಕನ್ನಡ ಸಮ್ಮೇಳನ ಮತ್ತು ಅಂತರಾಷ್ಟ್ರೀಯ ಸಾಂಸ್ಕೃತ
ಸೌರಭ ಸಮಾರಂಭಗಳನ್ನು ನಿರಂತರವಾಗಿ ಆಯೋಜಿಸುತ್ತಿವೆ. 2004 ರಿಂದ ಈಚೆಗೆ 40 ದೇಶಗಳಲ್ಲಿ 53ಕ್ಕೂ ಹೆಚ್ಚು ಸೌರಭ ಮತ್ತು ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಹೆಗ್ಗಳಿಕೆ ನಮ್ಮ ಸಂಸ್ಥೆಗಳದ್ದಾಗಿದೆ ಎಂದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ| ಸತೀಶ್ ಕುಮಾರ್ ಹೊಸಮನಿ ಮಾತನಾಡಿ ಕರ್ನಾಟಕವು ಡಿಜಿಟಲ್ ಗ್ರಂಥಾಲಯದಲ್ಲಿ ವಿಶ್ವ ಮಟ್ಟ ಅತೀ ಹೆಚ್ಚು ಸದಸ್ಯರನ್ನು ಹೊಂದಿ ದಾಖಲೆ ಮಾಡಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದೆ. ಜಪಾನಿನ ಕನ್ನಡಿಗರು ಸಹ ತಮ್ಮ ಹೆಸರು ನೋಂದಾಯಿಸಿ ಕೊಂಡು ಉಚಿತವಾಗಿ ಸೇವೆಯನ್ನು
ಪಡೆದುಕೊಳ್ಳುವಂತೆ ಕೋರಿದರು.
ಟೋಕಿಯೋ ಅನಿವಾಸಿ ಉದ್ಯಮಿ ರವಿ ರಾಮಕೃಷ್ಣ ಮಾತನಾಡಿ, ಜಪಾನಿಯರು ಶಿಸ್ತು ಮತ್ತು ಶ್ರಮ ಜೀವಿಗಳು ಹಾಗಾಗಿ ಈ ದೇಶ ವಿಶ್ವಮಟ್ಟದಲ್ಲಿ ಶ್ರೇಷ್ಠ ಸ್ಥಾನಮಾನ ಹೊಂದಿದೆ. ಇಲ್ಲಿಯ ಜೀವನ ಕಷ್ಟ, ಆದರೆ
ಶ್ರಮ ಪಡುವವರಿಗೆ ಯಶಸ್ಸು ನಿಶ್ಚಿತ ಎಂದರು. ಜಪಾನ್ ನ್ಯಾಶನಲ್ ಇನ್ಸಿಟ್ಯೂಟಿನ ಸಂಶೋಧನಾ ವಿಜ್ಞಾನಿ ಮನು ಮಳ್ಳಹಳ್ಳಿ, ಮೈಸೂರುನ ನಿವೃತ್ತ ಪ್ರೊ | ಆರ್.ಎನ್ ಜಗದೀಶ್, ಸ್ವಾಮಿ ಎಂಟರ್ಪ್ರೈಸಸ್ನ ಆಡಳಿತ ನಿರ್ದೇಶಕ ಗೋ.ನಾ ಸ್ವಾಮಿ, ಬೆಂಗಳೂರುನ ಮೈಕ್ರಾನ್ ಎಲೆಕ್ಟ್ರೀಕಲ್ಸ್ ಡೈರೆಕ್ಟರ್(ಪ್ರಾಜೆಕ್ಟ್) ಡಾ| ವಿ. ನಾಗರಾಜು ಅತಿಥಿ ಅಭ್ಯಾಗತರುಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿವಿಧ ಕ್ಷೇತ್ರದ ಸಾಧಕರಾದ ಶಂಕ್ರೆ ಗೌಡ ಮೈಸೂರು, ಡಾ| ವಿ. ನಾಗರಾಜು ಬೆಂಗಳೂರು, ಡಾ| ಸತೀಶ್ ಕುಮಾರ್ ಹೊಸಮನಿ, ಪ್ರಭಾ ಸುವರ್ಣ ಮುಂಬಯಿ ಮತ್ತು ಕೃಷ್ಣ ಬಿ.ಶೆಟ್ಟಿ ಮುಂಬಯಿ ಇವರಿಗೆ ಚೇರಿ ಬ್ಲೋಸಮ್ ಅವಾರ್ಡ್ 2023 ಪ್ರದಾನಿಸಿ ಗೌರವಿಸಲಾಯಿತು. ಡಾ| ಆಶೋಕ್ ನರೋಡೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಕವಿಗಳಾದ ಎಂ.ಪಿ ವರ್ಷ ಮೈಸೂರು, ಗೋವಿಂದ ರಾವ್ ಮೂರ್ತಿ ಮತ್ತು ಪ್ರಭಾ ಸುವರ್ಣ ಸ್ವರಚಿತ ಕವನಗಳನ್ನು ವಾಚಿಸಿದ್ದು ಹುಬ್ಬಳ್ಳಿಯ ನೃತ್ಯಾಂಜಲಿ ನೃತ್ಯ ಕಲಾ ಕೇಂದ್ರದ ಕಲಾವಿದರಾದ ವಿದುಷಿ ಸಿರಿ ಕಿಣಿ, ವಿದುಷಿ ಡಾ| ಮೇಘನಾ ಮತ್ತು ದಿಶಾ ನಾಯಕ್ ನೃತ್ಯ ಪ್ರದರ್ಶನ ನೀಡಿದರು. ಗೋ.ನಾ ಸ್ವಾಮಿ, ಶಿವು ಪಾಂಡೇಶ್ವರ ಮತ್ತು ಮನು ಮಂಗಳೂರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.