ಕೃಷಿ ಸಂಸ್ಕೃತಿಯ ತುಳುನಾಡಿನಲ್ಲಿ ಪಶು ಪಕ್ಷಿಗಳಿಗೆ ಆಚರಣೆ ಆರಾಧನೆಯಲ್ಲೂ ಮಹತ್ತರ ಸ್ಥಾನಮಾನ. ದೇವಸ್ಥಾನದ ಬಸವ ಎನ್ನುವ ಒಂದು ಗುರುತಿಸುವಿಕೆ ಕೂಡ ಇದೇ ರೀತಿಯದ್ದು. ಹೀಗೆ ಒಂದು ಹೋರಿ ಆಯ್ಕೆಯ ಪ್ರಕ್ರಿಯೆಗೆ ಹಲವು ಹಂತಗಳಿವೆ. ಹೋರಿಯ ಭುಜ, ಬಣ್ಣ, ನಿಲುವು, ತಳಿ ಇತ್ಯಾದಿಗಳಿಗೆ ವಿಶೇಷ ಮಹತ್ವ ಇದೆ. ಅವುಗಳನ್ನು ಸಾಕುವ ಜವಾಬ್ದಾರಿ ಕೂಡ ದೊಡ್ಡದು. ಹಿಂದೆ ಅವುಗಳನ್ನು ಸಾಕುವುದಕ್ಕಾಗಿ ಗದ್ದೆಗಳನ್ನು ನಿರ್ಧಿಷ್ಟ ಮನೆತನಕ್ಕೆ ಉಂಬಲಿಯಾಗಿ ನೀಡುತ್ತಿದ್ದರು. ಇತ್ತೀಚೆಗೆ ಆ ವಿಚಾರ ಬಹಳಷ್ಟು ಬದಲಾವಣೆಗಳನ್ನು ಕಂಡಿವೆ. ಕೇರಳ ದೇವಸ್ವಂ ಬೋರ್ಡಿನ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳಲ್ಲಿ ಬಸವನ ಆರೈಕೆ ಮಾಡುವ ವ್ಯಕ್ತಿಗೆ ಸರಕಾರ ಸಂಬಳವನ್ನು ನೀಡುತ್ತಿದೆ. ನಮ್ಮೂರಿನ ಕೆಲವು ಕಡೆ ದೈವಗಳಿಗೂ ಬಸವ ಇದೆ.
ಇತ್ತೀಚೆಗೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಪುಟ್ಟ ಕರುವೊಂದನ್ನು ಬಸವನಾಗಿ ಆಯ್ಕೆ ಮಾಡಲಾಯಿತು. ಬಹಳಷ್ಟು ಕಡೆಯಲ್ಲಿ ಹಲವು ಭಕ್ತರು ತಮ್ಮ ಕರುಗಳನ್ನು ದೇವಸ್ಥಾನಕ್ಕೆ ಒಪ್ಪಿಸಲು ಆಸಕ್ತರಾಗಿದ್ದರೂ ಕೂಡಾ ಅಂತಿಮ ಆಯ್ಕೆಯಲ್ಲಿ ಭಾಗ್ಯ ಒಲಿದದ್ದು ‘ಶಂಭು’ ಎನ್ನುವ ಕರುವಿಗೆ ( ಸಂಜೀವ ರೈ ಬಾರೆಬೆಟ್ಟು ಪುತ್ತಿಗೆ ಇವರ ಮನೆಯ ಕರು) ಕಲಶ ಸ್ನಾನ ಮಾಡಿಸಿ ಅದನ್ನು ದೇವಸ್ಥಾನದ ತಂತ್ರಿಗಳು ಬರಮಾಡಿಕೊಂಡರು.
ಕಾಟುಕುಕ್ಕೆ ಸುಬ್ರಾಯ ದೇವರ ಮಹಿಮೆಯ ಹಲವು ಕಥೆಗಳಂತೆ ಈ ಬಸವನ ಆಯ್ಕೆಯ ವಿಚಾರದಲ್ಲಿಯೂ ಒಂದು ಕಥೆ ಹಿರಿಯರು ಹೇಳುತ್ತಾರೆ. ಹಿಂದೊಮ್ಮೆ ದೇವಸ್ಥಾನಕ್ಕೆ ಬಸವನನ್ನು ತರುವುದಕ್ಕೆ ಕುಲ್ಕುಂದಕ್ಕೆ ಜಾನುವಾರು ಜಾತ್ರೆಗೆ ಹೋದರಂತೆ. ಹಿಂದಿನ ಕಾಲ, ಈಗಿನ ವಾಹನ ಸೌಕರ್ಯ ಇಲ್ಲದ ಪರಿಸ್ಥಿತಿಯಲ್ಲಿ ಪಯಣದ ಹಾದಿಯಲ್ಲಿ ಬಸವನಾಗಿ ಆಯ್ಕೆಯಾಗಬಲ್ಲ ಎಲ್ಲಾ ಯೋಗ್ಯತೆ ಇರುವ ಕರುವೊಂದನ್ನು ಒಂದು ಮನೆಯ ಹಟ್ಟಿಯಲ್ಲಿ ಕಂಡರಂತೆ. ಎಲ್ಲರಿಗೂ ಅದು ಇಷ್ಟ ಆಗಿ ಆ ಮನೆಯವರಲ್ಲಿ ಹೋಗಿ ಕೇಳಿಕೊಂಡಾಗ ಅವರು ಕೊಡಲು ಒಪ್ಪಲಿಲ್ಲವಂತೆ. ನಿರಾಶರಾದ ಹಿರಿಯರು ತಮ್ಮ ಯಾತ್ರೆ ಮುಂದುವರಿಸಿ ಸುಬ್ರಹ್ಮಣ್ಯದಲ್ಲೂ ಸೂಕ್ತ ಬಸವನನ್ನು ಖರೀದಿಸಲು ವಿಫಲರಾದರಂತೆ. ಹಿಂತಿರುಗಿ ಅವರು ಅದೇ ದಾರಿಯಲ್ಲಿ ಬರುತ್ತಿರುವಾಗ ಅದೇ ಮೊದಲು ವಿಚಾರಿಸಿದ ಕರುವಿನ ಮನೆಯವರು ಕರುವನ್ನು ಹಿಡಿದುಕೊಂಡು ಇವರ ದಾರಿ ಕಾಯುತ್ತಾ ನಿಂತಿದ್ದರಂತೆ. ಅವರಿಗೆ ಯಾವ ರೀತಿಯ ದೈವ ಪ್ರೇರಣೆ ಆಯಿತೊ ಗೊತ್ತಿಲ್ಲ! ಅಂತೂ ಆನಂತರದಲ್ಲಿ ಬಹಳ ಸಮಯ ಅದೇ ಕರು ಬಸವನಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಇತ್ತು.
ಊರ ಜಾತ್ರೆ ಬಂತೆಂದರೆ ನಮ್ಮೂರಿನ ಪುಟ್ಟ ಮಕ್ಕಳು ಓಡಿ ಬರುವುದು ಜಾತ್ರೆಯ ಸಮಯದಲ್ಲಿ ಅಂಗಣದಲ್ಲಿ ಕಟ್ಟಿರುವ ಬಸವನನ್ನು ನೋಡುವುದಕ್ಕೆ. ಅದು ಅಂಗಣದಲ್ಲಿ ರಾಜ ಗಾಂಭೀರ್ಯದಿಂದ ನಡೆದು ಹೋಗುವಾಗ ಮಕ್ಕಳ ದೊಡ್ಡ ಗುಂಪು ಅದರ ಜೊತೆಗೇ ಹೆಜ್ಜೆ ಹಾಕುವುದು ಸಾಮಾನ್ಯ ಕಾಣುವ ದೃಶ್ಯ.
ರಾಜಶ್ರೀ ಟಿ ರೈ ಪೆರ್ಲ