ಸಾಮಾಜಿಕ ನ್ಯಾಯ ಎಂದು ಹೇಳುತ್ತಾ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ (Kundapura Assembly Constituency) ಐದು ಬಾರಿ ಗೆದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivas Shetty) ಕರಾವಳಿಯ ರಾಜಕೀಯದಲ್ಲೇ ಒಬ್ಬ ವಿಭಿನ್ನ ಜನಪ್ರತಿನಿಧಿ. ಜನ ಪ್ರೀತಿಯಿಂದ ಇವರಿಗೆ ʼಕರಾವಳಿಯ ವಾಜಪೇಯಿʼ ಎಂದು ಹೆಸರನ್ನಿಟ್ಟಿದ್ದಾರೆ. ಕ್ಷೇತ್ರದಲ್ಲಿ ಆಗುವ ಯಾವುದೇ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಗುದ್ದಲಿ ಪೂಜೆ ಮಾಡುವುದಿಲ್ಲ. ಉದ್ಘಾಟನೆ ನಡೆಸುವುದಿಲ್ಲ. 25 ವರ್ಷಗಳಿಂದ ಎಲ್ಲವೂ ಸರ್ಕಾರಿ ಅಧಿಕಾರಿಗಳ ಕೈಯಲ್ಲೇ ಮಾಡಿಸುತ್ತಿದ್ದಾರೆ.
1999 ರಿಂದ ಆರಂಭಗೊಂಡು ಇಲ್ಲಿಯವರೆಗೆ ಸೋಲಿಲ್ಲದ ಸರದಾರ ಎಂದೇ ಎನಿಸಿಕೊಂಡಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಜಾತಿಯನ್ನು ಮೀರಿ ಹಾಲಾಡಿ ನಿರಂತರವಾಗಿ ಗೆದ್ದುಕೊಂಡು ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಹಾಲಾಡಿಯವರ ಗೆಲುವಿನ ಅಂತರ ದೊಡ್ಡದಾಗುತ್ತಾ ಹೋಗುತ್ತಿರುವುದು ವಿಶೇಷ. ಹಿಂದೆ 2,500 ಮತಗಳ ಅಂತರ ಈಗ 50 ಸಾವಿರಕ್ಕೆ ಏರಿಕೆಯಾಗಿದೆ. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂದು ಜನ ನಂಬಿದ್ದಾರೆ. ಕಷ್ಟ ಅಂತ ಮನೆಗೆ ಬಂದ ಜನರನ್ನು ಹಾಲಾಡಿ ಬರಿಗೈಯಲ್ಲಿ ವಾಪಸ್ ಕಳಿಸುವುದಿಲ್ಲ. ಶಾಸಕರ ಮನೆಗೆ ಬಂದವರಿಗೆ ದಿನಾ ಚಹಾ, ಆಪಲ್, ಬಾಳೆಹಣ್ಣು, ಆಮ್ಲೆಟ್ ಫಿಕ್ಸ್. ನಾಲ್ಕು ಬಾರಿ ಬಿಜೆಪಿಯಿಂದ 2013ರಲ್ಲಿ ಬಿಜೆಪಿಯ ಜೊತೆ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರು. 2018ರಲ್ಲಿ ಹಾಲಾಡಿಗೆ 1,03,434 ಮತ ಬಿದ್ದರೆ ಕಾಂಗ್ರೆಸ್ನ ರಾಕೇಶ್ ಮಲ್ಲಿಗೆ 40,029 ಮತಗಳು ಬಿದ್ದಿದ್ದವು. 2013 ಪಕ್ಷೇತರವಾಗಿ ಸ್ಪರ್ಧಿಸಿದ್ದಾಗ ಶ್ರೀನಿವಾಸ ಶೆಟ್ಟಿ ಅವರಿಗೆ 80,563 ಕಾಂಗ್ರೆಸ್ಸಿನ ಮಲ್ಯಾಡಿ ಶಿವರಾಮ ಶೆಟ್ಟಿಗೆ 39,952 ಮತಗಳು ಸಿಕ್ಕಿತ್ತು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಾಡಿಗೆ 71,695 ಮತಗಳು ಬಿದ್ದರೆ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆಯವರಿಗೆ 46,612 ಮತಗಳು ಬಿದ್ದಿದ್ದವು.