ಸಾಧಿಸಬೇಕೆಂಬ ಛಲ ಇದ್ದರೆ ಯಾವ ರೂಪದಲ್ಲಾದರೂ ತನ್ನ ಕನಸುಗಳನ್ನು ನನಸು ಗೊಳಿಸಬಹುದೆಂಬುವುದಕ್ಕೆ ಸರಿಯಾದ ನಿದರ್ಶನವೆಂದರೆ ಹಲವಾರು ಪ್ರಶಸ್ತಿಗಳ ಸರದಾರರೆನಿಸಿಕೊಂಡ ಸುರೇಶ್ ರೈ ಸೂಡಿಮುಳ್ಳು ಅವರು. 1-07-1971 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸೂಡಿಮುಳ್ಳಿನಲ್ಲಿ ನಾರಾಯಣ ರೈ ಮತ್ತು ರಾಮಕ್ಕ ದಂಪತಿಗಳ ದ್ವಿತೀಯ ಪುತ್ರನಾಗಿ ಜನಿಸಿದ ಸುರೇಶ್ ರೈ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ ಹಾಗೂ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಸವಣೂರಿನಲ್ಲಿ ಒಂಭತ್ತನೇ ತರಗತಿಯವರೆಗೆ ವ್ಯಾಸಂಗ ಮಾಡಿದರು. ಶಾಲಾ ದಿನಗಳಲ್ಲಿ ತುಳು ನಾಟಕದಲ್ಲಿ ಆಸಕ್ತಿ ವಹಿಸಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.
ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಕ್ಕೆ ಸೇರಿ ನಂತರ ಜೀಪು ಚಾಲಕನಾಗಿ ಸವಣೂರಿನಲ್ಲಿ ವೃತ್ತಿ ಜೀವನ ಆರಂಭಿಸಿ ನಂತರದ ದಿನಗಳಲ್ಲಿ ಡೊಳ್ಳು ಕುಣಿತ, ಯಕ್ಷಗಾನ ಕಲೆಯ ಕಡೆ ಗಮನ ಸೆಳೆದು ಯುವಕ ಮಂಡಲ ಸವಣೂರಿನ ಸಕ್ರಿಯ ಸದಸ್ಯನಾಗಿ ಪಾಲ್ಗೊಂಡು ಅಭ್ಯಸಿಸತೊಡಗಿದರು. ಯುವಕ ಮಂಡಲದ ಜೊತೆಯಾಗಿ ಊರು ಪರವೂರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾದವರು. 2004-2006 ರವರೆಗೆ ಸವಣೂರು ಯುವಕ ಮಂಡಲದ ಅಧ್ಯಕ್ಷನಾಗಿ ನೇಮಿಸಲ್ಪಟ್ಟು ಎಂಭತ್ತಕ್ಕೂ ಹೆಚ್ಚು ಯುವಪ್ರತಿಭೆಗಳನ್ನೊಳಗೊಂಡ ತಮ್ಮ ತಂಡವನ್ನು ಮುನ್ನಡೆಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಖ್ಯ ಕಾರಣರಾಗಿ ಕರ್ನಾಟಕ ರಾಜ್ಯ ಸರಕಾರದ ರಾಜ್ಯ ಮತ್ತು ಜಿಲ್ಲಾ ಸಾಂಘಿಕ ಪ್ರಶಸ್ತಿಯನ್ನು ಪಡೆದು ಯುವಕ ಮಂಡಲದ ಕೀರ್ತಿಯನ್ನು ಬೆಳಗುವಂತೆ ಮಾಡಿದರು. ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಸರಿಸುಮಾರು ಐನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ತಂಡದ ಮೂಲಕ ನೀಡಿ ಅತ್ಯುತ್ತಮ ಯುವ ಸಂಘಟಕ ಪ್ರಶಸ್ತಿಗೆ ಭಾಜನರಾದವರು. ಯಕ್ಷಗಾನ ಕಲೆಯನ್ನು ಅಭ್ಯಸಿಸಿ ತಮ್ಮ ಯುವಕ ಮಂಡಲದ ಮೂಲಕ ಎಂಟಕ್ಕೂ ಹೆಚ್ಚು ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದರು. ಯುವಕ ಮಂಡಲದ ಜೊತೆಯಾಗಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದು. ಅಷ್ಟೇ ಅಲ್ಲದೆ ತಮ್ಮ ಸಮಾಜ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದ ನೆಹರೂ ಯುವ ಕೇಂದ್ರ ನೀಡುವ ಜಿಲ್ಲಾ ಯುವ ಪ್ರಶಸ್ತಿ ಗೆ ಭಾಜನರಾದರು. 2005-2006 ರಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ಯುವ ಪ್ರಶಸ್ತಿ, 2019 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2007 ರಲ್ಲಿ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ, ರಾಷ್ಟ್ರೀಯ ಸನ್ಮಾನ್ ಪ್ರಶಸ್ತಿ, ಐವತ್ತಕ್ಕೂ ಹೆಚ್ಚು ಬಾರಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ರಾಜ್ಯಪಾಲರಿಂದ ಪ್ರಥಮ ಸ್ಥಾನ ಮತ್ತು ಜಿಲ್ಲಾ ಪಂಚಾಯತ್ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನ್ಮಾನವನ್ನು ಪಡೆದುಕೊಂಡಿದ್ದಾರೆ.
ದೊಡ್ಡಾಟ ಸಣ್ಣಾಟಗಳ ಕಡೆಯೂ ಅಭಿರುಚಿಯನ್ನು ಹೊಂದಿ ತಮ್ಮ ತಂಡದೊಂದಿಗೆ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ. ಹಲವು ಸಂಘ ಸಂಸ್ಥೆಗಳ ವತಿಯಿಂದ ನಡೆದ ಕಾರ್ಯಕ್ರಮಗಳಲ್ಲಿ ತಮ್ಮ ಸಾಧನೆಗೆ ಇನ್ನೂರಕ್ಕೂ ಹೆಚ್ಚು ಪುರಸ್ಕಾರಗಳನ್ನು ಪಡೆದು ಕೊಂಡಿರುತ್ತಾರೆ. ಪುತ್ತೂರಿನ ಸುದಾನ ಶಾಲೆಯಲ್ಲಿ ರಾಜ್ಯಮಟ್ಟದ ಯುವ ಜನಮೇಳ ಆಯೋಜಿಸಿ ರಾಜ್ಯದ ಮೂವತ್ತು ಜಿಲ್ಲೆಗಳಿಂದ ಸರಿಸುಮಾರು ಅರುವತ್ತು ಸಾವಿರ ಕಲಾವಿದರನ್ನು ಒಟ್ಟುಗೂಡಿಸಿ ದಾಖಲೆ ನಿರ್ಮಿಸಿದ್ದರು. ಪುತ್ತೂರು ತಾಲೂಕು ಯುವ ಜನ ಮೇಳಗಳಲ್ಲಿ ಯುವ ಪ್ರಶಸ್ತಿಗಳನ್ನು ಒಕ್ಕೂಟದ ವತಿಯಿಂದ ನೀಡಿ ಹಲವು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರು. ಸಮಾಜಸೇವೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಯುವಜನ ಮೇಳದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುತ್ತಾ ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಪ್ರಶಂಸನೀಯ.
“ನನ್ನ ಈ ಸಾಧನೆಗೆ ಮುಖ್ಯ ಕಾರಣವೆಂದರೆ ಯುವಕ ಮಂಡಲ ಸವಣೂರು. ನನ್ನ ಪ್ರತಿಭೆಯನ್ನು ಗುರುತಿಸಿ, ಬೆನ್ನುತಟ್ಟಿ ಪ್ರತಿ ಹಂತದಲ್ಲೂ ಸಹಕಾರ ನೀಡಿದ ಯುವಕ ಮಂಡಲಕ್ಕೆ ನನ್ನ ಸಾಧನೆಯ ಕೀರ್ತಿ ಸಲ್ಲುತ್ತದೆ” ಎನ್ನುವುದು ಅವರ ಮನದಾಳದ ಮಾತು.
ಸಾಂಸ್ಕೃತಿಕ ಕಲೆಗಳು ಉಳಿಯಲಿ, ಕಲೆಗಳನ್ನು ಬೆಳೆಸುವಂತಹ ಪ್ರಯತ್ನ ನಮ್ಮಿಂದಾಗಲಿ. ಕೇವಲ ವಿದ್ಯೆಯೊಂದೇ ಜೀವನದ ಅಡಿಪಾಯವಲ್ಲ. ನಿಮ್ಮ ಪ್ರತಿಭಾರಂಗಕ್ಕೆ ಸಿಗುವ ಸಣ್ಣ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡರೆ ಸಾಧನೆಯ ಹಾದಿ ತಲುಪುವುದರಲ್ಲಿ ಸಂದೇಹವೇ ಇಲ್ಲ ಎನ್ನುವುದು ಯುವಪ್ರತಿಭೆಗಳಿಗೆ ಅವರ ಕಿವಿಮಾತು.
ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ, ಸವಣೂರು ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸುರೇಶ್ ರೈ ಪ್ರಸ್ತುತ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾಗಿ, ರಾಜ್ಯ ಯುವಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ, ಸವಣೂರು ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕರಾಗಿ ಹಾಗೂ ವಿವಿಧ ಸಂಸ್ಥೆಗಳ ಗೌರವ ಸಲಹೆಗಾರರಾಗಿ, ಸದಸ್ಯರಾಗಿ, ಸೇವೆ ಸಲ್ಲಿಸಿದ್ದಾರೆ. ಸವಣೂರಿನಲ್ಲಿ ಪದ್ಮಾಂಬ ಶಾಮಿಯಾನ ಸರ್ವೀಸ್ ನ ಮಾಲಕರಾಗಿದ್ದು ಪತ್ನಿ ಸುಗಂಧಿ ಎಸ್.ರೈ, ಮಗ ಸುಜೀತ್ ರೈ ಹಾಗೂ ಮಗಳು ಸುಖೀತಾ ರೈ ಇವರೊಂದಿಗೆ ಸುಖಮಯ ಜೀವನ ಸಾಗಿಸುತ್ತಿದ್ದಾರೆ.
ಇವರ ಸಮಾಜ ಸೇವೆ, ಸಾಂಸ್ಕೃತಿಕ ಸಾಧನೆ, ಸಂಘಟನೆಗಳ ಮೂಲಕ ಯುವಪ್ರತಿಭೆಗಳಿಗೆ ಅವಕಾಶ ನೀಡುವಂತಹ ಪರಿಶ್ರಮ ಇನ್ನಷ್ಟು ಜನರಿಗೆ ಮಾದರಿಯಾಗಲಿ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ. ಈ ಸಮಾಜಕ್ಕೆ ಇವರಿಂದ ಇನ್ನೂ ಹೆಚ್ಚಿನ ಕೊಡುಗೆ ಲಭಿಸಲಿ ಎನ್ನುವುದೇ ನಮ್ಮೆಲ್ಲರ ಆಶಯ.
ಬಂಟ ಸಮಾಜದ ತೆರೆಮರೆಯ ಸಾಧಕರಲ್ಲಿ ಇವರು ಒರ್ವರು. ನಿಮಗೆ ಸಮಸ್ತ ಬಂಟ ಸಮಾಜದ ಪರವಾಗಿಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ.