ಕಾರ್ಕಳ ಈಗ ಜನರ ಗಮನ ಸೆಳೆಯುತ್ತಿದೆ. ಜೊತೆಗೆ ತುಳುನಾಡಿಗರ ಆಕ್ರೊಶಕ್ಕೂ ಕಾರಣವಾಗಿದೆ. ಕಾರ್ಕಳದಲ್ಲೊಂದು ಪರಶುರಾಮ ಥೀಮ್ ಪಾರ್ಕ್ ರಚನೆ ಮಾಡಿದೆ ಘನ ಸರಕಾರ.
ಇಂಡಾಲಜಿ ವಿದ್ಯಾರ್ಥಿಗಳಾಗಿ ಇಂದಿರ ಗಾಂಧಿ ನ್ಯಾಶನಲ್ ಮ್ಯೂಸಿಯಂಗೆ ನಾವು ಭೇಟಿ ನೀಡಿದ್ದಾಗ ತುಳುನಾಡಿನ ಉಯ್ಯಾಲೆಯಲ್ಲಿ ಇರುವಂತ ಸಣ್ಣ ಸಣ್ಣ ಹಿತ್ತಾಳೆಯ ಪ್ರತಿಮೆಗಳನ್ನು ನಾನು ಅಲ್ಲಿ ಗಮನಿಸಿದೆ. ಈ ಬಗ್ಗೆ ನಮ್ಮ ಇಂಡಾಲಜಿ ಗುರುಗಳಾದ ಎಸ್ ನಾಗರಾಜು ಅವರಲ್ಲಿ ಚರ್ಚೆ ನಡೆಯಿತು. “ನಿಮ್ಮ ಕಡೆ ಅಧ್ಯಯನ ನಡೆಯಲು ಬಹಳಷ್ಟು ಇದೆ. ಪರಂಪರೆಯನ್ನು ಉಳಿಸಿಕೊಳ್ಳುವುದರಲ್ಲಿ ನಿಮ್ಮನ್ನು ಮೆಚ್ಚಬೇಕು. ನೀವು ರಾಕೆಟ್ ಯುಗಕ್ಕೆ ಹೋದರೂ ಲೋಹಯುಗದ ಪಳೆಯುಳಿಕೆಗಳನ್ನು ಬಿಟ್ಟಿಲ್ಲ ಎಂದರು. ಅದು ನಿಜವೇ. ಜಗದಗಲ ತಮ್ಮ ಛಾಪನ್ನು ಛಾಪಿಸಿದ ತುಳುವರು ಆದಿ ಕಾಲದ ಭೂತಾರಾಧನೆಯನ್ನು ಅಭಿಮಾನದಿಂದ ಸಮರ್ಪಣಾ ಭಕ್ತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. “
ತುಳುವ ನಂಬಿಕೆಯ ಪ್ರಕಾರ ‘ನಾರಾಯಣ (ಸೂರ್ಯ) ಚಂದ್ರರ ಉದಯದೊಂದಿಗೆ ನೀರು ತುಂಬಿಕೊಂದ್ದ ಭೂಮಿಯಲ್ಲಿ ಜೀವಿಗಳೂ ಹುಟ್ಟಿದುವು. ಆದ್ದರಿಂದಲೇ ಏನೋ ತುಳುನಾಡಿನ ದೇವಾಲಯಗಳ ಬಾಗಿಲಲ್ಲಿ ಸೂರ್ಯ ಚಂದ್ರರ ಚಿಹ್ನೆಗಳನ್ನು ಕೆತ್ತಿ ಇಣುಕಿ ಕಿಂಡಿಯಾಗಿಸಲಾಗಿದೆ. ಭೂತ ನರ್ತನಕಾರರ ಬಣ್ಣಗಾರಿಕೆಯಲ್ಲಿ ಮತ್ತು ಅವರ ಕೆಂಪುಡುಗೆಯಲ್ಲಿ ಸೂರ್ಯ ಚಂದ್ರರ ಚಹ್ನೆಯನ್ನು ಬಿಡಿಸುತ್ತಾರೆ. ಸಿರಿ ಸೂಕೆ (ದರ್ಶ) ಬರುವಾಗ ಪಾತ್ರಿಗಳು ‘ನಾರಯಣ, ನಾರಯಣ’ ಎಂದು ಸೊಲ್ಲು ಬಿಡುತ್ತವೆ. ಪಾಡ್ದನಗಳಲ್ಲೂ ಸೂರ್ಯ ಚಂದ್ರರೇ ಹೊಳೆಯುತ್ತಿದ್ದಾರೆ. ಆದರೆ ಇದುವರೆಗಿನ ಯಾವ ಪಾಡ್ದನಗಳಲ್ಲೂ ಪರಶುರಾಮನ ಪ್ರಸ್ತಾಪ ಇಲ್ಲ. ಬೇಸಾಯಗಾರ ಶಿವನಿದ್ದಾನೆ ಅಲ್ಲಿ. ಪಾರ್ವತಿ ಇದ್ದಾಳೆ ಅಲ್ಲಿ ಬ್ರಾಹ್ಮಣ ತಂತ್ರ ಮಂತ್ರವಾದಿಗಳೂ ಇದ್ದಾರೆ. ಆದರೆ ಪರಶುರಾಮನ ಸುಳಿವಿಲ್ಲ. ಕೃತ ತ್ರೇತಾಯುಗದ ಸಂಧಿಕಾಲದಲ್ಲಿ ಜನಿಸಿದ ಪುರಾಣ ಚಿತ್ರಿಸಿರುವ ಪರಶುರಾಮ ತುಳುನಾಡಿಗೆ ಬಂದುದು ತೀರಾ ತಡವಾಗಿ ವೈಷ್ಣವ ಬ್ರಾಹ್ಮಣರ ಮೂಲಕ ಇರಬಹುದು.
ಪರಶುರಾಮನ ಕಥೆ ಪುರಾಣ ಕಥೆ. ಇತಿಹಾಸ ಅಲ್ಲ. ಸನಾತನ ಧರ್ಮವನ್ನು ಅಬ್ರಾಹ್ಮಣ ವರ್ಗದವರಿಗೂ ತಲುಪಿಸಲು ಹೆಣೆದ ಇತರ ಪುರಾಣಗಳಂತೆ ಇದೂ ಪುರಾಣ ಕಥೆ. ತುಳುನಾಡಿನ ಯಕ್ಷಗಾನಗಳಲ್ಲಿ, ಸಮಾರಂಭದ ವೇದಿಕೆಗಳಲ್ಲಿ ಡಕ್ಕೆ ಬಲಿ, ನಾಗಾರಾಧನೆಗಳಲ್ಲಿ –ಹೀಗೆ ಈ ತುಳುನಾಡು ಪರಶುರಾಮ ಕಡಲಿಗೆ ಕೊಡಲಿ ಎಸೆದು ಕಡಲಿನಿಂದ ಬಿಡಿಸಿಕೊಂಡ- ಸ್ಥಳ ಆತನ ಸೃಷ್ಟಿ ಎಂದು. ಮತ್ತೆ ಮತ್ತೆ ಕೇಳಿಸಿಕೊಂಡಿದ್ದೇವೆ.
ಪರಶುರಾಮನ ಪುರಾಣದ ಪ್ರಕಾರ ಕನ್ಯಾಕುಮಾರಿಯಿಂದ ಗುಜರಾತಿನ ವರೆಗೆ ಆತ ಕಡಲಿನಿಂದ ಭೂಮಿಯನ್ನು ಬಿಡಿಸಿಕೊಂಡಿದ್ದಾನೆ. ಆದರೆ ಕನ್ಯಾಕುಮಾರಿಯಿಂದ ಗುಜರಾತಿನವರೆಗೆ ಇರುವ ಪರಶುರಾಮನ ಸೃಷ್ಟಿಯಲ್ಲಿ ಪರಶುರಾಮನ ಬಗ್ಗೆ ಕೇಳಿ ಬರುವುದು ಕಡಿಮೆ. ಆದರೆ ತುಳುನಾಡಿನಲ್ಲಿ ಪರಶುರಾಮನನ್ನು ಕಟ್ಟಿಹಾಕುವ ಪ್ರಯತ್ನ ಯಾಕೋ ಅಭಾಸವಾಗಿ ಕಾಣುತ್ತಿದೆ.
ಆದರೂ ಪರಶುರಾಮ ಇದುವರೆಗೆ ತುಳುನಾಡಿನ ಭೂತಗಳ ತಂಟೆಗೆ ಬರಲಿಲ್ಲ. ಈ ಬಾರಿ ಈ ಥೀಮ್ ಪಾರ್ಕ್ ನಲ್ಲಿ ಆತ ಭೂತಗಳನ್ನು ಬೆದರಿಸಿ ತುಳಿದು ನಿಂತಿದ್ದಾನೆ. ಈ ರೀತಿಯ ಉಬ್ಬು ಶಿಲ್ಪಗಳನ್ನು ಕೆತ್ತಿಸಿರುವ ಹಿನ್ನೆಲೆ, ಉದ್ದೇಶವೇನೋ?
ಈ ಬೆಟ್ಟದ ಬಗ್ಗೆ ಸ್ಥಳೀಯರು ನೀಡುವ ವಿವರಣೆ ಕುತೂಹಲಕಾರಿಯಾಗಿದೆ. ಈ ಮಾಹಿತಿಯಿಂದ ಇದು ಸೂಕ್ಷ್ಮ ಶಿಲಾಯುಗದ ನೆಲೆ ಆಗಿತ್ತು ಎನ್ನುವುದು ವಿದಿತವಾಗುತ್ತದೆ. ಪುರಾತತ್ವ ನೆಲೆಗಳಲ್ಲಿ ಕಲ್ಲುಗೋರಿಯಂತಹ ಸಮಾಧಿಗಳು, ಇರುತ್ತವೆ. ಇಲ್ಲೂ ಅಂತಹುದೇ ಇತ್ತು, ಮಾತ್ರವಲ್ಲ ಇಲ್ಲಿ ಜೋಡಿ ಶಿಲಾ ಪಾದಗಳು- ಇದ್ದುವು, ಅವು ಕೋಟಿ ಚೆನ್ನಯರ ಪಾದ ಎಂದೂ ಹೇಳುತ್ತಾರೆ ಎಂಬ ಮಾಹಿತಿಯೂ ದೊರಕಿದೆ. ಇಲ್ಲಿ ಉಮಿಕಲ್ಲ್ ಎನ್ನುವ ಕ್ಷೇತ್ರವೂ ಇತ್ತು ಎನ್ನುತ್ತಾರೆ. . ಪುತ್ತಿಗೆ ಚೌಟರ ಉಮೆಗುಂಡಿ ಬನ, , ಕಾಸರಗೋಡಿನ ಕುಂಬ್ಡಾಜೆಯ ಉರ್ಮಿತ್ತಾಯ ಬನ-(ಕುಂಬ್ಡಾಜೆ ಬೀಡಿನ ಯಜಮಾನಿಯನ್ನು ‘ಉರ್ಮಿತ್ತಾಯಿ’ ಎಂದು ಭೂತ ಪಾತ್ರಿ ಗೌರವಿಸುತ್ತದೆ. ) ಇರುವಂತೆ ಈ ಬೆಟ್ಟದ ಮೇಲೂ ಉರ್ಮಿಕಲ್ಲೋ ಉರ್ಮಿಕಲವೋ ಇತ್ತು ಎಂದೂ ಕೇಳಿ ಬರುತ್ತಿದೆ. ಹಾಗಿದ್ದಿದ್ದರೆ ಆದೂ ನಾಗನಿಗೆ ಸಂಬಂಧಿಸಿರಬೇಕು.
ತುಳುವರ ಮೂಲತಾನಗಳು ಸತ್ತವರ ಸಮಾಧಿಗಳು ಇರುವ ಕ್ಷೇತ್ರ ಎನ್ನುತ್ತಾರೆ ವಿದ್ವಾಂಸರು. ಇಂತಹ ಅನೇಕ ಕ್ಷೇತ್ರಗಳಲ್ಲಿ ಪುರಾತತ್ವ ನೆಲೆಗಳಲ್ಲಿ ದೊರಕುವು ನಿಲವುಗಲ್ಲುಗಳು ಇವೆ. ಗೋರಿಗಳೂ ಇವೆ. ಉದ್ಯಾವರ ನಾಗ ಬನದಲ್ಲಿ, ಕುಂಬ್ಡಾಜೆಯಲ್ಲಿ, ಕೆಲಿಂಜೆ ಉಲ್ಲಾಲ್ತಿಯ ಮೂಲ ಕ್ಷೇತ್ರದಲ್ಲಿ ನಾನು ಇಂತಹ ನಿಲುಗಲ್ಲುಗಳನ್ನು ಕಂಡಿರುವೆ.
ಪುರಾತತ್ವಕಾರರಿಂದ ಶೋಧ ಮಾಡಿಸಬೇಕಾದ ಸೂಕ್ಷ್ಮ ಶಿಲಾಯುಗದ ನೆಲೆ ಇದು. ಈ ನೆಲೆಯನ್ನು ಈಗ ಬುಲ್ಡೋಜರ್ ನಿಂದ ನೆಲಸಮ ಮಾಡಿಸಿದೆ ನಮ್ಮ ಸರಕಾರ. ಪರಶುರಾಮನಿಗಾಗಿ ಸೂಕ್ಷ್ಮ ಶಿಲಾಯುಗದ ಕುರುಹುಗಳನ್ನು ಮಾತ್ರವಲ್ಲ ಸ್ಥಳೀಯರ ಆರಾಧನಾ ಪರಂಪರೆಯ ಮೇಲೆಯೇ ಬುಲ್ಡೋಜರ್ ಓಡಿಸಿದೆ.
ಪರಶುರಾಮ ಸೃಷ್ಟಿ ಈ ತುಳುನಾಡು ಎಂದು ಮತ್ತೆ ಮತ್ತೆ ಪಠಿಸಿದರೂ ಪರಶುರಾಮ ಸ್ಥಳೀಯರಿಗೆ ದೇವರಾಗಲಿಲ್ಲ ತುಳುನಾಡು ಮಾತೃಶಕ್ತಿಗಳ ನಾಡು. ಹೀಗಾಗಿ ಮಾತೃ ಹಂತಕನನ್ನು ತುಳುವರು ದೇವರೆಂದು ಆರಾದಿಸಲಿಲ್ಲ ಎಂದರೂ ತಪ್ಪಾಗಲಾರದು.
ಈ ನೆಲದಲ್ಲಿ ಬೌದ್ಧ ಪರಂಪರೆಗೆ ಸೇರಿದ ಕದ್ರಿಯಲ್ಲಿ ಬುದ್ಧನಿದ್ದಾನೆ. ಅಲ್ಲಿ ಬುದ್ಧಶಿಲ್ಪವನ್ನು ವಿಷ್ಣು ಮಾಡಲಾಗಿದೆ, ವ್ಯಾಸ ಮಾಡಲಾಗಿದೆ. ಉಡುಪಿ ತಾಲೂಕಿನ ಮೂಳೂರಿನಲ್ಲಿ ಬುದ್ದ ಶಿಲ್ಪ ಇರುವ ದೇವಸ್ಥಾನ ಇದೆ. ಆದರೆ ಪರಶುರಾಮನಿಗೆ ರಚನೆಗೊಂಡ ಪುರಾತನ ದೇವಾಲಯ ಒಂದೂ ನನ್ನ ಗಮನಕ್ಕೆ ಬಂದಿಲ್ಲ. ಪರಶುರಾಮ ತಪಸ್ಸಿಗೆ ಕುಳಿತ ಜಾಗ ಎಂದು ಹೇಳುವ ಕದ್ರಿ ಗುಡ್ಡದ ಸ್ಥಳವೂ ನಾಥ ಪಂಥದವರ ವಿಭೂತಿ-ಭಸ್ಕು ಉತ್ತತ್ತಿಯ ಸ್ಥಳ ಎಂದು ಅನೇಕರು ನಂಬುತ್ತಾರೆ. ಪರಶುರಾಮ ತ್ರಿಶೂಲ ಹಿಡಿದವನಲ್ಲ. ಅಲ್ಲಿಯ ವಿಭೂತಿ ಹೊಂಡದ ನಡುವೆ ತ್ರಿಶೂಲ ನಿಲ್ಲಿಸಲಾಗಿದೆ. ಇಷ್ಟಾದರೂ ಭೂತಾರಾಧನೆಯ ತುಳು ಸಂಸ್ಕೃತಿಯು ಹಿಂದೂ ಧರ್ಮವು ಸನಾತನ ಧರ್ಮದ ದೇವರುಗಳನ್ನು ನಿರಾಕರಿಸಿಲ್ಲ. ಜನಪದ ಮತ್ತು ವೈದಿಕದ ಆಚರಣೆಗಳು ಮುಖಾಮುಖಿಯಾಗಿಯೂ ಹೊಂದಿಕೊಂಡು ನಡೆದಿವೆ. ಎಷ್ಟೋ ಭೂತಾರಾಧನೆಯ ಕ್ಷೇತ್ರಗಳು ಜನಾರ್ಧನ ದೇವಾಲಯಗಳಾಗಿವೆ, ಶಿವ ದೇವಾಲಯಗಳಾಗಿವೆ. ಹೀಗಿದ್ದೂ ಅಲ್ಲಿ ಈಗಲೂ ನಡೆಯುತ್ತಿರುವ ಭೂತಾರಾದನೆ ಮತ್ತು ವೈದಿಕ ಆರಾಧನೆಯ ಕೆಲವೊಂದು ಆಚರಣೆಗಳು ನಡೆಯುತ್ತವೆ. ಇವು ಆರ್ಯ ಅನಾರ್ಯ ಸಂಘರ್ಷ ವನ್ನು ನೆನಪಿಸುತ್ತದೆ. ( ಉದಾ : ಜಳಕದ ಬಳಿ ಆದ ಮೇಲೆ ಮರಳಿ ಬರುವ ದೇವರ ಪಾತ್ರಿಯನ್ನು ಭೂತದ ಪಾತರಿ ತಡೆಯುವ ದೃಶ್ಯ) ಆದರೂ ತಾಳ ಮದ್ದಳೆ ಮತ್ತು ಯಕ್ಷಗಾನದಲ್ಲಿ ರಾವಣ ರಾಮನಿಗ ಸೋಲಲೇ ಬೇಕೆಂಬ ನಿಯಮದಂತೆ ಹಾಗೂ ಸೋಲುವಂತೆ ಸ್ಥಳೀಯ ಭೂತಗಳು ವೈದಿಕ ದೇವರನ್ನು ಹೊತ್ತ ತಂತ್ರಿಗಳಿಗೆ ದಾರಿ ಬಿಟ್ಟುಕೊಟ್ಟು ತೆಪ್ಪಗಾಗುತ್ತವೆ.
ವೈದಿಕ ದೇವರುಗಳಿಗೆ ರಾಜಾತಿಥ್ಯ ಕೊಟ್ಟ ಈ ನೆಲದಲ್ಲಿ ನಾಗ-ಸುಬ್ರಹ್ಮಣ್ಯ ಮತ್ತು ಭೂತಗಳ ಉಬ್ಬು ಶಿಲ್ಪಗಳನ್ನು ಮಾಡಿ ಅವನ್ನು ಉಗ್ರರೂಪಿ ಪರಶುರಾಮ ತುಳಿಯುವ ದೃಶ್ಯಮಾತ್ರವಲ್ಲ ಅವನಿಗೆ ಬೆದರಿ ಮಕ್ಕಳಂತೆ ಯಾಚಿಸುವ ಭೂತಗಳ ಉಬ್ಬುಶಿಲ್ಪಗಳನ್ನು ನೋಡುವಾಗ ಬೂತಾರಾಧನೆಯನ್ನು ತುಳಿಯಲೆಂದು ಪರಶುರಾಮನನ್ನು ಇಲ್ಲಿ ನಿಲ್ಲಿಸಲಾಯಿತು ಎಂದು ಜನ ಭಾವಿಸುವಂತಾಗಿದೆ.
ತುಳುನಾಡಿನ ಭೂತಾರಾಧನೆ ಇತ್ತೀಚಿನ ದಶಕಗಳಲಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಹೊರ ರಾಜ್ಯ, ಹೊರ ದೇಶಗಳಿಗೆ ಹೋಗಿ ಸಂಪಾದಿಸಿದ ಹಣದಿಂದ ಭೂತಾರಾಧನೆಯನ್ನು ಶ್ರೀಮಂತಗೊಳಿಸಿದ್ದಾರೆ. ಪಂಬದ ಪರವ ಮುಂತಾದ ನರ್ತನಕಾರರಿಗೆ ಮಾತ್ರವಲ್ಲ ವೈದಿಕ ಪುರೋಹಿತರಿಗೂ ಭೂತಾರಾಧನೆಯಿಂದ ಶ್ರೀಮಂತ ಜೀವನ ಪಡೆಯಲು ಸಾಧ್ಯವಾಗಿದೆ.
ಅಂತಹ ಶಕ್ತಿವಂತ ಭೂತಗಳನ್ನು ಪರಶುರಾಮನ ಕಾಲಡಿಯಲ್ಲಿ ಹಾಕಿ ಅವು ಭೀತಿಗೊಂಡಂತೆ ಚಿತ್ರಿಸಿದ್ದು ಕೆತ್ತಿಸಿದ್ದು ಭೂತಾರಾಧನೆಗೆ ಮಾಡಿದ ಅವಮಾನ ಮಾತ್ರವಲ್ಲ ಹಿಂದೂ ಧರ್ಮಕ್ಕೆ ಮಾಡಿದ ಅವಮಾನ! ಹಿಂದೂ ದೇವ ದೇವತೆಗಳಿಗೆ ಅವಮಾನ ಆದರೆ ಸಿಡಿದೇಳುವ ಹಿಂದೂಗಳು ಭೂತಾರಾಧನೆಗೆ ಆದ ಅವಮಾನವನ್ನೂ ತಾಳಲಾರರು.
ಆ ಉಬ್ಬು ಶಿಲ್ಪಗಳನ್ನು ಕಿತ್ತು ಹಾಕಬೇಕು ಎಂದು ನಾನು ಆಗ್ರಹಿಸುತ್ತೇನೆ.
ಭೂತಾರಾಧಕರೂ ಹಿಂದುಗಳು! ಅವರ ಭೂತಗಳನ್ನು ತುಳಿಯುವ ಪ್ರಯತ್ನ ಬಹಳ ಅಪಾಯಕಾರಿ!
ಭೂತಾರಾಧನೆಗೆ ಅವಮಾನ ಆದರೆ ಹಿಂದೂ ಧರ್ಮಕ್ಕೆ ಮಾಡುವ ಅವಮಾನ ಅಲ್ಲವೆ?
ಡಾ. ಇಂದಿರಾ ಹೆಗ್ಗಡೆ
ಲೇಖಕರು ಖ್ಯಾತ ತುಳು ಸಂಸ್ಕೃತಿ ವಿದ್ವಾಂಸರು.