ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಶೇ. 60ರಷ್ಟು ಪೂರ್ಣಗೊಂಡಿದೆ. ಮಸ್ಕತ್ನಲ್ಲಿ ಅನಿವಾಸಿ ಭಾರತೀಯರ (ಎನ್ಆರ್ಐ) ಸಮಿತಿಯನ್ನು ರಚಿಸಲಾಗಿದ್ದು ವಿವಿಧ ರಾಷ್ಟ್ರಗಳಲ್ಲಿ 12 ಘಟಕಗಳನ್ನು ರಚಿಸಿ ಅಮ್ಮನ ದೇಗುಲ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಮಿತಿಯ ಅಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮತ್ತು ಕಾರ್ಯಾಧ್ಯಕ್ಷರಾಗಿ ಮಸ್ಕತ್ನ ಶಶಿಧರ ಶೆಟ್ಟಿ ಮಲ್ಲಾರು ಆಯ್ಕೆಯಾಗಿದ್ದಾರೆ ಎಂದರು.
ವಿವಿಧ ರಾಷ್ಟ್ರಗಳಲ್ಲಿ 12 ಘಟಕ ರಚನೆ
ಅನಿವಾಸಿ ಭಾರತೀಯ ಉದ್ಯಮಿಗಳಾದ ದಿವಾಕರ ಶೆಟ್ಟಿ ಮಲ್ಲಾರು (ಒಮಾನ್), ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ (ಯುಎಇ) ರವಿ ಶೆಟ್ಟಿ (ಕತಾರ್), ಸನತ್ ಶೆಟ್ಟಿ (ಕುವೈಟ್), ರಾಜೇಶ್ ಶೆಟ್ಟಿ (ಬಹ್ರೈನ್), ಶಿವರಾಮ ಶೆಟ್ಟಿ (ಆಸ್ಟ್ರೇಲಿಯಾ ಸಿಡ್ನಿ), ನಿಶಿಕಾಂತ್ ಸೆಮಿತಾ (ಆಸ್ಟ್ರೇಲಿಯಾ ಮೆಲ್ಬರ್ನ್), ಭಾಸ್ಕರ್ ಸೇರಿಗಾರ್ (ಯುಎಸ್ಎ ಬೋಸ್ಟನ್), ವಿಜಯ ಶೆಟ್ಟಿ (ಕೆನಡಾ ನಾರ್ತ್ ಅಮೆರಿಕ), ಪೃಥ್ವಿ ಶೆಟ್ಟಿ (ಯುಕೆ), ಸಂತೋಷ್ ಕುಮಾರ್ ಶೆಟ್ಟಿ (ಸೌದಿ ಅರೇಬಿಯಾ), ಮಹೇಶ್ ಕುಮಾರ್ (ಈಸ್ಟ್ ಆಫ್ರಿಕಾ) ಅವರು ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ ಎಂದು ವಿವರಿಸಿದರು.
ಎಪ್ರಿಲ್ನಲ್ಲಿ ಗರ್ಭಗೃಹ ಚಲನೆ
ದೇಶ ವಿದೇಶಗಳಲ್ಲಿರುವ ಸಾವಿರಾರು ಭಕ್ತರು ಶಿಲಾಪುಷ್ಪ ಸಮರ್ಪಣೆ ಮೂಲಕ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಪ್ರಿಲ್ ಮೊದಲ ವಾರದಲ್ಲಿ ಮಾರಿಯಮ್ಮ ದೇವಿ ಗರ್ಭಗುಡಿ ಚಲನೆ ನಡೆಯಲಿದೆ. ನವರಾತ್ರಿ ಸಂದರ್ಭ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.
ಒಮಾನ್ ಘಟಕ ಅಧ್ಯಕ್ಷ ದಿವಾಕರ ಶೆಟ್ಟಿ ಮಲ್ಲಾರು, ಸುಧೀರಾ ಡಿ. ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ ಪತ್ರಿಕಾಗೋಷ್ಠಿಯಲ್ಲಿದ್ದರು.