ಕುಂಬಳೆ ಸಮೀಪದ ಪುತ್ತಿಗೆಯ ಪಂಜಳ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ರಂಗಕರ್ಮಿ ಬಾಯಾರುಗುತ್ತು ಮಂಜುನಾಥ ಭಂಡಾರಿ (83) ಅವರು ಜ. 26ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬಿಪಿಎಂ ಭಂಡಾರಿ ಎಂದೇ ಖ್ಯಾತರಾಗಿದ್ದ ಇವರು 26 ವರ್ಷಗಳ ಕಾಲ ಕಳತ್ತೂರಿನ ಎಎಸ್ಬಿಎಸ್ ಇಚ್ಲಂಪಾಡಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, 1995ರಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಕರ್ನಾಟಕ ನಾಟಕ ಅಕಾಡೆಮಿ ನೇತೃತ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದಿದ್ದ ಅದ್ದೂರಿ ಕಾರ್ಯಕ್ರಮವೊಂದರಲ್ಲಿ ಇವರನ್ನು ರಂಗಸೇವೆಗಾಗಿ ಸಮ್ಮಾನಿಸಲಾಗಿತ್ತು. ಪ್ರಸ್ತುತ ಸುವರ್ಣ ಸಂಭ್ರಮದಲ್ಲಿರುವ ಪುತ್ತಿಗೆಯ ಎಸ್ಕೆಎಸ್ ಆರ್ಟ್ಸ್ ಆ್ಯಂಡ್ ನ್ಪೋರ್ಟ್ಸ್ ಕ್ಲಬ್ನ ಸ್ಥಾಪಕ ಸದಸ್ಯರಾಗಿದ್ದರು. ಬಂಟರ ಸಂಘದ ಪುತ್ತಿಗೆ ಪಂಚಾಯತ್ ಘಟಕದ ಅಧ್ಯಕ್ಷರಾಗಿ, ಕಾಸರಗೋಡು ಜಿಲ್ಲಾ ಬ್ಯಾಂಕಿನ ನಿರ್ದೇಶಕರಾಗಿ, ಅಂಗಡಿಮೊಗರು ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಇವರು ತಾಳಿಪ್ಪಾಡಿ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರದ ನೇತೃತ್ವ ವಹಿಸಿದ್ದರು.
ಮುಂಬಯಿಯ ನೆರೂಳ್ನ ಸಂಫಟನೆಯೊಂದರಿಂದ ರಂಗಚಕ್ರವರ್ತಿ ಬಿರುದಿಗೆ ಭಾಜನರಾಗಿದ್ದ ಇವರು ಅತ್ಯುತ್ತಮ ನಟ ಹಾಗೂ ನಾಟಕ ನಿರ್ದೇಶಕರಾಗಿದ್ದರು. ಹರಿಕಥೆ, ಭಜನೆಯಲ್ಲೂ ಸೈ ಎನಿಸಿಕೊಂಡಿದ್ದರು. ಹಲವಾರು ನಾಟಕಗಳನ್ನು ರಚಿಸಿದ್ದ ಇವರು ಎಂಎನ್ ಬಳಗ ಮತ್ತು ಮಯೂರ ಎಂಬೆರಡು ನಾಟಕ ಸಂಘಗಳ ರೂವಾರಿಯಾಗಿದ್ದರು.