ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಕಟಪಾಡಿ ಅಚ್ಚಡದ ಪೊಸೊಕ್ಕೆಲ್ ವಾಸು ವಿ. ಶೆಟ್ಟಿ (108) ಅವರು ಜ. 23ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಮೂಲತಃ ಪಡುಬಿದ್ರಿಯವರಾದ ವಾಸು ಶೆಟ್ಟಿ ತನ್ನ 9ನೇ ವಯಸ್ಸಿನಲ್ಲಿ ಮುಂಬಯಿಗೆ ತೆರಳಿದ್ದು, ಹೊಟೇಲು ವ್ಯಾಪಾರ ನಡೆಸುತ್ತಿದ್ದರು. 9 ವರ್ಷ ಟಾಟಾ ಕಂಪೆನಿಯಲ್ಲಿ ಬಳಿಕ ದಾದರ್ ಬಿಇಎಸ್ಟಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು.
ತನ್ನ 30ರ ಹರೆಯದಲ್ಲಿ ಮುಂಬಯಿಯಲ್ಲಿ ಸರ್ದಾರ್ ವಲ್ಲಭಾಭಾಯಿ ಪಟೇಲ್, ಗಾಂಧೀಜಿ, ಸುಭಾಸ್ಚಂದ್ರ ಬೋಸ್ ಸಹಿತ ಅನೇಕ ನಾಯಕರ ಮೋರ್ಚಾಗಳಲ್ಲಿ ಜನ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಉಗ್ರ ಸ್ವರೂಪದ ಹೋರಾಟ ನಡೆಸಿದ್ದರು. ಸ್ವಾತಂತ್ರ್ಯ ಒಂದೇ ಗುರಿ ಎಂಬ ಧ್ಯೇಯದಡಿ ಹೋರಾಟದಲ್ಲಿ ಪಾಲ್ಗೊಂಡಿದ್ದು, ಕೆಲವೆಡೆ ಬಾಂಬು ದಾಳಿ ನಡೆದಾಗ ಅಪಾಯದಲ್ಲಿ ಸಿಲುಕಿದವರನ್ನು ಆಸ್ಪತ್ರೆಗೆ ಸಾಗಿಸುವ, ಮರಣ ಹೊಂದಿದವರ ಮೃತದೇಹಗಳನ್ನು ಸುಡುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು.
ಶಿಸ್ತನ್ನು ಮೈಗೂಡಿಸಿಕೊಂಡಿದ್ದ ಅವರು ನಿವೃತ್ತಿಯ ಬಳಿಕ ಊರಿಗೆ ಹಿಂದಿರುಗಿದ್ದು, ಗೇಣಿಗೆ ಪಡೆದು ಕೃಷಿ ಕಾಯಕ ನಡೆಸುತ್ತಿದ್ದರು. ಸ್ಥಳೀಯವಾಗಿ ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ಸಮ್ಮಾನಿಸಿವೆ.








































































































