ಒಂದು ತಾಲೂಕಿನಲ್ಲಿ ಆಡಳಿತ ಅನ್ನುವುದು ಜನಸ್ನೇಹಿಯಾಗುವುದು ಹೇಗೆ..? ಆಡಳಿತ ಅನ್ನುವುದು ಭ್ರಷ್ಟಾಚಾರ ಮುಕ್ತವಾಗೋದು ಹೇಗೆ..? ಜನಸಾಮಾನ್ಯರಿಗೆ ಸರಕಾರಿ ಇಲಾಖೆಗಳಲ್ಲಿ ನ್ಯಾಯಯುತವಾಗಿ ಯಾವುದೇ ಲಂಚ ರುಷುವತ್ತುಗಳ ಹಂಗಿಲ್ಲದೆ ಸೇವೆಗಳು ದೊರಕುವುದು ಯಾವಾಗ..? ಯಾವಾಗೆಂದರೆ ಅಲ್ಲಿನ ಜನಪ್ರತಿನಿಧಿಗಳೆನ್ನಿಸಿಕೊಂಡವರು ಸ್ವಲ್ಪವಾದರೂ ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು… ಜನರ ಕೈಗೆ ಸಿಗುವಂಥಾ ರೀತಿಯಲ್ಲಿರಬೇಕು… ಅವರ ಅಹವಾಲುಗಳನ್ನು ಕೇಳುವ ಮತ್ತು ಅದಕ್ಕೆ ಸೂಕ್ತ ಪರಿಹಾರವೊದಗಿಸುವ ಮನಸ್ಸು ಜನಪ್ರತಿನಿಧಿಗಳಿಗಿರಬೇಕು…. ಆದರೆ ಪುತ್ತೂರಿನ ಪರಿಸ್ಥಿತಿ ಹೇಗಾಗಿಯೆಂದರೆ ತಲೆಗೆ ಬಡಿದ ರೋಗ ಕಾಲಿಗೂ ಹರಡಿದ ಹಾಗಾಗಿದೆ… ತಾಲೂಕೊಂದರಲ್ಲಿ ಪಂಚಾಯತ್ ನಿಂದ ಹಿಡಿದು, ಜಿಲ್ಲಾಪಂಚಾಯತ್ ವರೆಗೆ ಅನೇಕ ಮಂದಿ ಚುನಾಯಿತ ಪ್ರತಿನಿಧಿಗಳಿದ್ದರೂ .. ಆದರೆ ಇವರು ಯಾವಾಗ ಎಲ್ಲಿರುತ್ತಾರೆ…ಏನು ಮಾಡುತ್ತಾರೆ… ಯಾಕೆ ಮಾಡುತ್ತಾರೆ… ಅಥವಾ ಏನೂ ಮಾಡದೆಯೇ ಯಾಕೆ ಸುಮ್ಮನಿರುತ್ತಾರೆ… ನಿನ್ನೆ ಏನೂ ಮಾಡಿಲ್ಲ… ಇವತ್ತೂ ಕೂಡಾ ಏನೂ ಮಾಡಿಲ್ಲ.. ನಾಳೆಯಾದರೂ ಏನಾದರೂ ಮಾಡಬೇಕು ಅನ್ನೋ ಮನಸ್ಸಿದೆಯೋ ಇಲ್ಲವೋ … ಅದೂ ಗೊತ್ತಿಲ್ಲ… ! ಪುತ್ತೂರಿನಲ್ಲಿ ಬಹುಶಃ ಹೀಗೆ ಜನಪ್ರತಿನಿಧಿಗಳು ನಿಷ್ಕ್ರಿಯರಾದರೆ… ಆಗ ಆಟ ಆಡುವವರು ಭ್ರಷ್ಟಾಚಾರಿಗಳೇ..! ಹೇಳುವವರು ಕೇಳುವವರು ಯಾರೂ ಇಲ್ಲದೆ, ಲಂಗು ಲಗಾಮೇ ಇಲ್ಲದೆ ತಾವಾಡಿದ್ದೇ ಆಟ, ಮಾಡಿದ್ದೇ ರೂಲ್ಸು ಅಂತ ಆಟಾಟೋಪ ತೋರಿಸಿ ಬಡವರಿಗೆ ಕಾಟ ಕೊಡುವ ಭ್ರಷ್ಟಾಚಾರಿಗಳೇ ಪುತ್ತೂರಿನಲ್ಲಿ ತುಂಬಿ ಹೋಗಿದ್ದಾರೆ…
ಪುತ್ತೂರಿನ ಅಕ್ರಮ ಸಕ್ರಮದ ಸಂಕಟ ಸಧ್ಯಕ್ಕೆ ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ… ಸರಕಾರೀ ಜಮೀನುಗಳಲ್ಲಿ ಯಾರಾದರೂ ಸಾಗುವಳಿ ಮಾಡಿಕೊಂಡಿದ್ದರೆ, ಯಾರಾದರೂ ಮನೆ ಕಟ್ಟಿಕೊಂಡಿದ್ದರೆ ಅಂಥವರಿಗೆ ಆ ಭೂಮಿಯ ಹಕ್ಕನ್ನು ಕೊಡಿಸಲಿಕ್ಕಾಗಿಯೇ ಆಯಾ ಸರಕಾರಗಳು ಆಯಾ ಸಂದರ್ಭದಲ್ಲಿ ಅಕ್ರಮ- ಸಕ್ರಮ ದಂಥಾ ಯೋಜನೆಗಳನ್ನು ಜಾರಿಗೆ ತಂದದ್ದು… ಆದರೆ ರಾಜ್ಯದೆಲ್ಲೆಡೆ ಈ ಯೋಜನೆ ತಕ್ಕ ಮಟ್ಟಿಗೆ ಯಶಸ್ವಿಯಾಗಿಯೇ ಜಾರಿಯಾದರೂ ನಮ್ಮ ಜಿಲ್ಲೆ ಮತ್ತು ಅದರಲ್ಲೂ ನಮ್ಮ ತಾಲೂಕು ಮಾತ್ರ ದೊಡ್ಡ ಅಪವಾದ…. ಇಲ್ಲಿನ ಅಕ್ರಮ -ಸಕ್ರಮ ಯೋಜನೆಯ ಫಲಾನುಭವಿಗಳ ಕಷ್ಟಗಳ ಬಗ್ಗೆ ಪುತ್ತೂರಿನಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಕನಿಷ್ಠ ಕಣ್ಣೆತ್ತಿಯೂ ನೋಡುತ್ತಿಲ್ಲ… ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಶೇಕಡಾ ತೊಂಭತ್ತರಷ್ಟು ಅರ್ಜಿಗಳನ್ನು ಯಾವುದಾದರೂ ಕಾರಣ ನೀಡಿ ರಿಜೆಕ್ಟ್ ಮಾಡಿರುವ ಪ್ರಕರಣಗಳೇ ಹೆಚ್ಚು. ಈಗ 94 (ಸಿ) ಮತ್ತು 94 (ಸಿ ಸಿ) ಅನ್ವಯ ಮಂಜೂರಾದ ಭೂಮಿಗಳ ಹಕ್ಕುಪತ್ರ ಹೊಂದಿದವರಿಗೆ ಜೊತೆಗೆಯೇ ಭೂ ಪರಿವರ್ತನೆ ಕೂಡಾ ಆಗುವುದರಿಂದ ದೊಡ್ಡ ಸಮಸ್ಯೆ ಇಲ್ಲ… ಆದರೆ ತುಂಬಾ ಹಿಂದೆಯೇ ಅಕ್ರಮ ಸಕ್ರಮ ಯೋಜನೆಯ ಮೂಲಕ ಜಾಗ ಪಡೆದುಕೊಂಡಿದ್ದವರ ಕಷ್ಟ ಕೇಳುವವರೇ ಇಲ್ಲದಂತಾಗಿ ಹೋಗಿದೆ.
ಈ ಹಿಂದೆ ಸಣ್ಣ ಸಣ್ಣ ಸಾಗುವಳಿ ಜಮೀನುಗಳನ್ನೋ, ಅಥವಾ ಮನೆ ಕಟ್ಟಿಕೊಂಡವರ ಜಾಗಗಳನ್ನೋ ಅಕ್ರಮ ಸಕ್ರಮ ಯೋಜನೆಯಲ್ಲಿ ಮಂಜೂರು ಮಾಡಲಾಗಿತ್ತು. ಇಲ್ಲಿ ಬಡ ಜನರಿಗೆ ಉಚಿತವಾಗಿ ಸರಕಾರೀ ಭೂಮಿ ಸಿಗುತ್ತಿದೆ ಎಂಬ ಮನಃಸ್ಥಿತಿ ಯಿಂದಲೋ ಏನೋ ಆಗಿನ ಅಧಿಕಾರಿಗಳು ಕಾಟಾಚಾರಕ್ಕೊಂದು ಹಕ್ಕುಪತ್ರ ಅಂತ ಮಾಡಿಕೊಟ್ಟಿದ್ದರು. ಆದರೆ ಆಗ ಸರಿಯಾದ ರೀತಿಯಲ್ಲಿ ಸರ್ವೇ ನಡೆಸಿ ಈ ಅಕ್ರಮ ಸಕ್ರಮ ಯೋಜನೆಯಲ್ಲಿ ಪಡೆದ ಭೂಮಿಯ ಗಡಿಯನ್ನು ಸಮರ್ಪಕವಾಗಿ ಗುರುತಿಸುವ ಕೆಲಸ ಆಗಿಯೇ ಇರಲಿಲ್ಲ…! ಹಾಗಾಗಿ ಸರಿಯಾದ ಸರ್ವೇ ನಂಬರ್ ನಲ್ಲಿ ಇಂಥಾ ಜಾಗಗಳಿಗೆ ಪ್ಲಾಟಿಂಗ್ ಆಗಿರಲೇ ಇಲ್ಲ… ಆದರೆ ಈಗ ಸಮಸ್ಯೆಯೇ ಭೂತಾಕಾರವಾಗಿ ಎದ್ದು ನಿಂತಿದೆ… ! ಈಗ ತಮಗೆ ಅಕ್ರಮ ಸಕ್ರಮದ ಮೂಲಕ ಮಂಜೂರಾದ ಜಾಗದಲ್ಲಿ ಆ ಕೃಷಿಕ ಒಂದು ಸಣ್ಣ ಮನೆ ಕಟ್ಟಿಕೊಳ್ಳಬೇಕೆಂದರೆ, ಅಥವಾ ಬೇರೆ ಯಾವುದಾದರೂ ಉದ್ದೇಶಕ್ಕೆ ಒಂದು ಕಟ್ಟಡ ಕಟ್ಟಿಕೊಳ್ಳಬೇಕೆಂದರೆ ಅದು ಸಾಧ್ಯವಾಗುತ್ತಿಲ್ಲ..! ಯಾಕೆಂದರೆ ಯಾವುದೇ ಕಟ್ಟಡ ನಿರ್ಮಾಣಕ್ಕೂ ಭೂ ಪರಿವರ್ತನೆ ಆಗಲೇ ಬೇಕೆಂಬ ಕಾನೂನಿದೆಯಲ್ಲ..! ಹಾಗಾಗಿ ಸರಕಾರೀ ಭೂಮಿಯನ್ನೇ ಆ ಬಡವ ಪಡೆದಿದ್ದರೂ ಅದಕ್ಕೆ ಸೂಕ್ತ ದಾಖಲೆ ಒದಗಿಸಬೇಕು… ಈ ಸೂಕ್ತ ದಾಖಲೆ ಎಂದರೆ ಅದು ಕೇವಲ ಹಕ್ಕುಪತ್ರ ಮಾತ್ರ ಸಾಕಾಗುವುದಿಲ್ಲ… ಹಿಂದೆಲ್ಲಾ ಇದು ಸರಕಾರವೇ ನೀಡಿರುವ ಭೂಮಿಯಾದುದರಿಂದ ಭೂಪರಿವರ್ತನೆ ಆಗುತ್ತಿತ್ತು… ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ…. ಹಿಂದೆ ಮಂಜೂರಾದ ಅಕ್ರಮ ಸಕ್ರಮ ಭೂಮಿಗೆ ಭೂ ಪರಿವರ್ತನೆಯಾಗಬೇಕಿದ್ದರೆ ಪ್ಲಾಟಿಂಗ್ ಆಗಲೇ ಬೇಕು….!ಅಂದರೆ ವ್ಯವಸ್ಥಿತವಾಗಿ ಸರ್ವೇ ನಡೆದು ಸದರಿ ಭೂಮಿಯ ಗಡಿ ಗುರುತುಗಳನ್ನು ಪಕ್ಕಾ ಮಾಡಬೇಕು…. ಈಗ ಪಾಪದ ಬಡವರಿಗೆ ಕುತ್ತು ಬಂದಿರುವುದೇ ಇಲ್ಲಿ…
ಬಹಳ ಹಿಂದೆಯೇ ಅಕ್ರಮ ಸಕ್ರಮದಲ್ಲಿ ಮಂಜೂರಾಗಿರುವ ಒಂದು ಜಾಗದ ಪ್ಲಾಟಿಂಗ್ ಮಾಡಬೇಕಾದರೆ ಸುತ್ತ ಮುತ್ತಲಿನ ಅದಕ್ಕೆ ಹೊಂದಿಕೊಂಡಂತಿರುವ ಜಮೀನುಗಳ ಸರ್ವೇ ಕೂಡಾ ಆಗಬೇಕು… ಆಗ ಅರ್ಜಿ ಸಲ್ಲಿಸಿದ ವ್ಯಕ್ತಿಯ ಜಾಗದ ದಾಖಲೆಗಳ ಜೊತೆಗೆ ಆ ಜಾಗದ ಗಡಿಭಾಗದ ಎಲ್ಲಾ ಜಾಗಗಳ ದಾಖಲೆಗಳನ್ನೂ ಪರೀಕ್ಷಿಸಬೇಕಿರುವುದರಿಂದ ಎಲ್ಲವನ್ನೂ ಸಲ್ಲಿಸಲೇಬೇಕು. ಹಕ್ಕುಪತ್ರ, ಪಹಣಿ, ನಕ್ಷೆ, ಎಂ.ಆರ್., ಎಸ್.ಆರ್, ಹೀಗೆ ತುಂಬಾ ದಾಖಲೆಗಳನ್ನು ಕೇಳಿ ಅಧಿಕಾರಿಗಳು ಸತಾಯಿಸುತ್ತಾರೆ… ಕೆಲವೊಂದು ಅಧಿಕಾರಿಗಳು ಯಾವ್ಯಾವೆಲ್ಲಾ ದಾಖಲೆಗಳು ಬೇಕೆಂದು ಮೊದಲೇ ಹೇಳುವುದೂ ಇಲ್ಲ… ಕೆಲವೊಂದು ದಾಖಲೆಗಳನ್ನು ಕೊಟ್ಟ ಬಳಿಕ ಒಂದಷ್ಟು ತಿಂಗಳು ಕಡತಗಳನ್ನು ತಮ್ಮಲ್ಲೇ ಇಟ್ಟುಕೊಂಡು ಸತಾಯಿಸುವ ಅಧಿಕಾರಿಗಳು, ಬಳಿಕ ಇನ್ನಷ್ಟು ದಾಖಲೆಗಳು ಬೇಕು ಎಂಬ ಮತ್ತೊಂದು ಪಟ್ಟಿ ನೀಡುತ್ತಾರೆ… ಈ ಎಲ್ಲಾ ದಾಖಲೆಗಳನ್ನೂ ನೀಡಿದ ಬಳಿಕವೂ ಏನಾದರೊಂದು ಕುಂಟುನೆಪ ಹೇಳಿ ಪ್ಲಾಟಿಂಗ್ ಮಾಡುವುದೇ ಇಲ್ಲ..!
ಹೀಗೆ ಕೇವಲ ಒಂದು ಪ್ಲಾಟಿಂಗ್ ಮಾಡಿಸಲು ಸರಕಾರೀ ಭೂಮಿಯನ್ನು ಸಕ್ರಮವಾಗಿ ಪಡೆದ ಬಡವರನ್ನು ವರ್ಷಗಟ್ಟಲೆ ಕಚೇರಿಗಳಿಗೆ ಅಲೆದಾಡಿಸುತ್ತಾರೆ ಕೆಲವೊಂದು ಅಧಿಕಾರಿಗಳು. ಇಂಥವರಿಂದಾಗಿ ಶ್ರದ್ಧೆ ನಿಷ್ಠೆಯಿಂದ ಕೆಲಾ ಮಾಡುವವರಿಗೂ ಕೆಟ್ಟ ಹೆಸರು…! ಪ್ಲಾಟಿಂಗ್ ಆಗಿರದ ಕಾರಣ, ಅವರ ಜಾಗದ ಗಡಿಯನ್ನು ಮಾರ್ಕ್ ಮಾಡದ ಕಾರಣ ಅವರಿಗೆ ಭೂ ಪರಿವರ್ತನೆ ಆಗುವುದಿಲ್ಲ… ಭೂ ಪರಿವರ್ತನೆಯೇ ಆಗದ ಕಾರಣ ಅವರಿಗೆ ಯಾವುದೇ ಕಟ್ಟಡ ಇತ್ಯಾದಿಗಳನ್ನು ಕಟ್ಟಲು ಪರವಾನಿಗೆಯೇ ಸಿಗುವುದಿಲ್ಲ… ಅವರಿಗೆ ಪರವಾನಿಗೆಯೇ ಇರದಿದ್ದ ಮೇಲೆ ಅವರಿಗೆ ಯಾವುದೇ ಸಾಲ ಸೌಲಭ್ಯ ಸಿಗುವುದಿಲ್ಲ… ! ಇಂಥದ್ದೊಂದು ವ್ಯವಸ್ಥೆಯಿಂದಾಗಿ ಗ್ರಾಮೀಣ ಪ್ರದೇಶದ ಜನರಂತೂ ತುಂಬಾ ಕಂಗಾಲಾಗಿದ್ದಾರೆ… ತುಂಬಾ ಹಿಂದೆ ಕಟ್ಟಿಕೊಂಡಿದ್ದ ಸಣ್ಣ ಗುಡಿಸಿಲಿನಂಥಾ ಮನೆಯೀಗ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಂಥ ಬಡವರಿಗೆ ಮನೆ ಕಟ್ಟಿಕೊಳ್ಳಲೆಂದೇ ಸರಕಾರವೇ ಸಾಲ, ಸಹಾಯಧನ ಅಂತೆಲ್ಲಾ ಕೊಡುತ್ತಿದೆ… ಆದರೆ ಇಂಥಾ ಬಡವರದ್ದು ಅದೆಂಥಾ ಸಂಕಷ್ಟವೆಂದರೆ…. ಸರಕಾರವೇ ಸಕ್ರಮಗೊಳಿಸಿ ಅವರಿಗೆ ನೀಡಿದ್ದ ಜಾಗದಲ್ಲಿಯೇ ಸರಕಾರವೇ ಕೊಟ್ಟ ಸಾಲ ಸೌಲಭ್ಯ, ಸಹಾಯಧನ ಉಪಯೋಗಿಸಿ ಕುಸಿದು ಬೀಳಲು ತಯಾರಾಗಿ ಕುಳಿತಿರುವ ಮನೆಯನ್ನು ಕೆಡವಿ ಸಣ್ಣದೊಂದು ಹೊಸ ಮನೆಯನ್ನು ಕಟ್ಟಲು ಅವರಿಗೆ ಅದೇ ಸರಕಾರ, ಅದರ ಅಧಿಕಾರಿಗಳು ಮತ್ತದರ ರೂಲ್ಸ್ ಗಳೇ ಅವಕಾಶ ಮಾಡಿಕೊಡುತ್ತಿಲ್ಲ…! ಪ್ಲಾಟಿಂಗ್ ಮಾಡದೆಯೇ ಇರುವುದರಿಂದ ಕಟ್ಟಡ ನಿರ್ಮಾಣಕ್ಕೆ ಮಾತ್ರ ತೊಂದರೆಯಾಗಿರುವುದಲ್ಲ… ಒಂದು ವೇಳೆ ಸಕ್ರಮಗೊಳಿಸಿಕೊಂಡ ಜಾಗವೊಂದರ ಮಾಲಕ ಮೃತನಾದ ಎಂದಿಟ್ಟುಕೊಳ್ಳಿ. ಮನೆಯ ಯಜಮಾನ ಸತ್ತರೆ ಆಸ್ತಿಯನ್ನು ಅಂದರೆ ಮನೆ ಸಹಿತ ಆ ಜಾಗವನ್ನು ಮಕ್ಕಳ ಹೆಸರಿಗೆ ಮಾಡಬೇಕಾದರೂ ಇದೇ ಕಾನೂನು ಅಡ್ಡ ಬರುತ್ತದೆ… ಅದಕ್ಕೂ ಭೂಪರಿವರ್ತನೆ ಆಗ್ಲೇ ಬೇಕು… ಆದರೆ ಪ್ಲಾಟಿಂಗ್ ಇಲ್ಲದೇ ಭೂಪರಿವರ್ತನೆ ಅಸಾಧ್ಯ…! ಆದರೆ ಪ್ಲಾಟಿಂಗ್ ಅನ್ನುವುದೇ ಒಂದು ದೊಡ್ಡ ಸಮಸ್ಯೆ… ..
ಜನರ ಈ ಎಲ್ಲಾ ಸಂಕಷ್ಟಗಳ ಅರಿವೂ ನನಗೆ ನೇರವಾಗಿಯೇ ಗೊತ್ತಿದೆ, ಯಾಕೆಂದರೆ ನಮ್ಮ ಸಮಾಜಸೇವಾ ಸಂಸ್ಥೆ ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಗೆ ಸಹಾಯ ಯಾಚಿಸಿ ಬರುವ ಗ್ರಾಮೀಣ ಜನರ ಕಷ್ಟಗಳ ಬಗೆಗೆ ನೇರವಾಗಿ ಅವರದೇ ಬಾಯಿಯಿಂದ ಕೇಳಿ ನನಗೆ ಗೊತ್ತಿದೆ. ಮನೆ ನಿರ್ಮಾಣಕ್ಕೆ ನೆರವು ಬೇಕೆಂದು ಬರುವ ಅನೇಕ ಜನರು ಇಂಥದ್ದೊಂದು ವಿಚಿತ್ರವಾದ ಸಮಸ್ಯೆಯ ಚಕ್ರಸುಳಿಗೆ ಸಿಲುಕಿಕೊಂಡದ್ದರ ಬಗ್ಗೆ ನಾನು ಬಲ್ಲೆ. ಆಗೆಲ್ಲಾ ನನ್ನ ಮನಸ್ಸಿಗೆ ಬರುತ್ತಿದ್ದ ಒಂದೇ ಯೋಚನೆಯೆಂದರೆ…. ಈ ಅಕ್ರಮ ಸಕ್ರಮ ಯೋಜನೆ ಶುರುವಾದದ್ದೇ ಅತ್ಯಂತ ಬಡವರಿಗೆ ಅವರು ಉತ್ತು ಬಿತ್ತುವ ಸಾಗುವಳಿ ಜಮೀನು, ಮನೆ ಕಟ್ಟಿಕೊಂಡಿರುವ ಭೂಮಿ ಸ್ವಂತವಾಗಲಿ ಎಂಬ ಕಾರಣಕ್ಕಾಗಿ… ಅಕ್ರಮ ಸಕ್ರಮ ಯೋಜನೆಯಲ್ಲಿ ಬಡವರಿಗೆ ಸಿಕ್ಕಿದ ಅಷ್ಟೂ ಭೂಮಿಯೂ ಸರಕಾರೀ ಜಮೀನೇ… ಸಕ್ರಮಗೊಳ್ಳುವ ಮೊದಲು ಇದು ಸರಕಾರೀ ಜಮೀನಾಗಿತ್ತು ಎಂಬುದಕ್ಕೆ ಎಲ್ಲಾ ದಾಖಲೆಗಳೂ ಕೂಡ ಕಂದಾಯ ಇಲಾಖೆಯ ಅಧಿಕಾರಿಗಳಲ್ಲೇ ಇದೆ… ಇತ್ತೀಚೆಗಷ್ಟೇ ಈ ತುಂಡು ಭೂಮಿಗಳ ಹಕ್ಕುಸ್ವಾಮ್ಯ ಈ ಬಡವರ ಕೈಗೆ ಬಂದದ್ದು… ಆದರೆ ಈ ಭ್ರಷ್ಟ ಸರಕಾರೀ ವ್ಯವಸ್ಥೆ ಹೇಗಿದೆಯೆಂದರೆ ಒಂದೊಮ್ಮೆ ಪಕ್ಕಾ ಸರಕಾರೀ ಜಾಗವಾಗಿದ್ದ ಇಂಥಾ ತುಂಡು ತುಂಡು ಭೂಮಿಗಳಿಗೇ ಸಿಕ್ಕಾಪಟ್ಟೆ ದಾಖಲೆಗಳನ್ನು ಅಧಿಕಾರಿಗಳು ಕೇಳುತ್ತಾರೆ…. ಅವರು ಯಾಕೆ ಇಷ್ಟೆಲ್ಲಾ ದಾಖಲೆಗಳನ್ನು ಕೇಳುತ್ತಾರೆಂದರೆ ಅಂದರೆ… ಸರಕಾರದ ಕಾನೂನುಗಳೇ ಹಾಗಿವೆ..!
ಯಕಶ್ಚಿತ್ ಒಂದು ಪ್ಲಾಟಿಂಗ್ ಮಾಡಿಕೊಡಿ ಅಂತ ಅಂಗಲಾಚಿದರೂ ಈ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಅಂತಾದರೆ ನಾವು ಯಾರನ್ನು ದೂರೋಣ ಅಂತ ಸಾರ್ವಜನಿಕರು ಪ್ರಹ್ನೆ ಕೇಳುತ್ತಾರೆ. ಆದ್ರೆ ಸಮಸ್ಯೆ ಇದೆಲ್ಲದರ ಮೂಲದಲ್ಲಿಯೇ ಇದೆ. ಪ್ಲಾಟಿಂಗ್ ಮಾಡಬೇಕಾದದ್ದು ಸರ್ವೇಯರುಗಳು. ಆದರೆ ಈ ಅಕ್ರಮ ಸಕ್ರಮ ಯೋಜನೆಯಿಂದಾಗಿ ಸರ್ವೇ ಮತ್ತು ಪ್ಲಾಟಿಂಗ್ ಗಳಿಗೆ ಸಾವಿರಾರು ಅರ್ಜಿಗಳು ಬಂದಿರುವುದರಿಂದ ಇವೆಲ್ಲವನ್ನೂ ವಿಲೇವಾರಿ ಮಾಡಲು ಅಂದರೆ ಸರ್ವೇ ಮತ್ತು ಪ್ಲಾಟಿಂಗ್ ಮಾಡಲು ಬೇಕಾದಷ್ಟು ಸರ್ವೇಯರುಗಳೇ ಇಲ್ಲ… ಹೀಗಾಗಿ ಪ್ಲಾಟಿಂಗ್ ಆಗದೇ ಇರಲು ಸರ್ವೇಯರ್ ಗಳ ಕೊರತೆಯೂ ಕೂಡಾ ಒಂದು ಕಾರಣ. ಇದೆಲ್ಲಾ ಅನುಕೂಲತೆಗಳಿಂದ ತಮ್ಮ ಕ್ಷೇತ್ರದ ಬಡವರಿಗೇ ತೀರಾ ಅನ್ಯಾಯವಾಗುತ್ತಿದೆ ಅಂತಂದಾಗ ಮೊದಲಿಗೆ ಸ್ಪಂದಿಸಬೇಕಾದದ್ದು ಅಲ್ಲಿನ ಜನಪ್ರತಿನಿಧಿಗಳೇ ತಾನೇ..? ಆದರೆ ಅವರೇ ಸಂಪೂರ್ಣವಾಗಿ ನಿಷ್ಕ್ರಿಯರಾದರೆ…? ಈ ಪ್ರಶ್ನೆಗೆ ಉತ್ತರ ಅವರಿಗೆ ಓಟು ಕೊಟ್ಟು ಗೆಲ್ಲಿಸಿದ ಮತದಾರರಲ್ಲೂ ಇಲ್ಲ…. ಅವರಿಗೋಸ್ಕರ ದುಡಿದ ಪಕ್ಷದ ಕಾರ್ಯಕರ್ತರಲ್ಲೂ ಇಲ್ಲ…!
ಇದನ್ನೆಲ್ಲಾ ನೋಡುವಾಗ ಅಧಿಕಾರ ಎಂಬುದು ಅದೆಷ್ಟು ಅವಶ್ಯಕ ಅಂತ ಸ್ಪಷ್ಟವಾಗುತ್ತದೆ. ನನಗೆ ಈ ಸಮಸ್ಯೆಗಳೆಲ್ಲಾ ಅರ್ಥವಾದರೂ, ಇದಕ್ಕೆಲ್ಲಾ ಏನಾದರೂ ಮಾಡಿ ಪರಿಹಾರಗಳನ್ನೂ ಕಂಡುಕೊಳ್ಳಬಹುದೆಂಬ ಧೃಢ ವಿಶ್ವಾಸವಿದ್ದರೂ ಏನೂ ಮಾಡಲಾಗುತ್ತಿಲ್ಲ ಎಂಬ ಅಸಹಾಯಕತೆ ಇದೆ. ಯಾಕೆಂದರೆ ನಮ್ಮ ಕೈಯಲ್ಲಿ ಅಧಿಕಾರವಿಲ್ಲ… ನಾನು ಚುನಾಯಿತ ಜನಪ್ರತಿನಿಧಿಯಲ್ಲ,…ಹಾಗಾಗಿ ನನಗೆ ವೈಯುಕ್ತಿಕವಾಗಿ ಈ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗುವುದಿಲ್ಲ… ಆದರೆ ಜನರ ಆಶೀರ್ವಾದದ ಶ್ರೀರಕ್ಷೆ ಇದ್ದರೆ, ದೇವರ ಅನುಗ್ರಹವೂ ಮುಂದಿನ ದಿನಗಳಲ್ಲಿ ಜನಸೇವೆಯ ಅವಕಾಶ ದೊರೆತರೆ ಇದೂ ಕೂಡಾ ನನ್ನಿಂದ ಸಾಧ್ಯವಾಗಬಹುದೆಂಬ ಭರವಸೆ ಇದೆ.
ಅಶೋಕ್ ಕುಮಾರ್ ರೈ
ರೈ ಎಸ್ಟೇಟ್, ಕೋಡಿಂಬಾಡಿ.