ಸಮಸ್ತ ಭಕ್ತರನ್ನ ಸಲಹುವ ಶಕ್ತಿ ದೇವತೆ, ಜಗನ್ಮಾತೆ ಸಿರಸಿ ಮಾರಿಕಾಂಬ ದೇವಿ….!” ಹಸಿರು ಹೊತ್ತ ಮಲೆನಾಡಿನ ಮಧ್ಯೆ ನೆಲೆ ನಿಂತ ಜಗನ್ಮಾತೆ ಸಿರಸಿ -“ಮಾರಿಕಾಂಬ ದೇವಿಯ ದೇಗುಲ….!
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ.(ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) santhoshmolahalli@gmail.com
ಭಾರತ ದೇಶ ಸಾಂಸ್ಕೃತಿಕ ಕಲೆ ಆಚಾರ ವಿಚಾರಗಳ ಪರಂಪರೆಯ ದೇಶ ಇಲ್ಲಿ ಎಲ್ಲ ರಾಜ್ಯಗಳು ತಮ್ಮದೆ ಆದ ಸಂಸ್ಕೃತಿ ಹೊಂದಿವೆ ಅದರಲ್ಲೂ ಕರ್ನಾಟಕ ಸಾಂಸ್ಕೃತಿಕ ರಾಯಬಾರಿ ಎಂದರೆ ತಪ್ಪಾಗಲಾರದು ಕರ್ನಾಟಕವನ್ನು ಒಂದು ರಾಜ್ಯ ಹಲವು ಜಗತ್ತು ಅಂತ ಹೇಳುತ್ತಾರೆ ಕಾರಣ ಈ ನಾಡಿನ ಪ್ರತಿಯೊಂದು ಜಿಲ್ಲೆಯು ತನ್ನದೆ ಆದ ಪರಂಪರೆಯ ಸಂಸ್ಕೃತಿ ಹೊಂದಿದೆ ವಿಶಾಲ ಕರ್ನಾಟಕದಲ್ಲಿ ಸಿರ್ಸಿ ಕೂಡಾ ಒಂದು ಶ್ರೀಮಂತ ಸಂಸ್ಕೃತಿಯ ಊರು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಘಟ್ಟದ ಮೆಲಿನ ಒಂದು ಸುಂದರ ನಗರ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುವುದರಿಂದ ಇದು ತನ್ನ ಸುತ್ತಲೂ ಅದೆಷ್ಟೋ ಜಲಪಾತಗಳಿಂದ ಸುತ್ತಲ್ಪಟ್ಟಿದೆ. ನಗರದ ಮದ್ಯದಲ್ಲಿ ಅಘನಾಶಿನಿ ನದಿ ಉಗಮ ವಾಗಿದ್ದರೆ ಕೆಲವೆ ಮೈಲುಗಳಷ್ಟು ದೂರದಲ್ಲಿ ಶಾಲ್ಮಲೆ ವರದೆಯರು ಸುತ್ತು ವರೆದಿದ್ದಾರೆ . ದಟ್ಟ ಅರಣ್ಯ ಅಡಿಕೆ ತೋಟ ಹಚ್ಚ ಹಸುರಿನ ಪ್ರಕೃತಿಯ ಮದ್ಯ ಇರುವ ಸಿರ್ಸಿ ಎಂದ ತಕ್ಷಣ ಎಲ್ಲರಿಗು ನೆನಪಾಗೊದು ಜಗನ್ಮಾತೆ ಶ್ರೀ ಮಾರಿಕಾಂಬೆ.
ಈ ಭರತ ಖಂಡದ ೫೧ ಶಕ್ತಿ ಪೀಠಗಳಲ್ಲಿ ಒಂದಾದ ಸಿರ್ಸಿ ಮಾರಿಕಾಂಬೆ ಕರ್ನಾಟಕದ ಜಾಗೃತ ಶಕ್ತಿ ಪೀಠ.ಸಿರ್ಸಿಯ ಜನರಿಗೆ ಜಗನ್ಮಾತೆ ಮಾರಿಕಾಂಬೆ ಪ್ರೀತಿಯ ಅಮ್ಮ ಆಗಿದ್ದಾಳೆ. ಈ ತಾಯಿಯ ಆಲಯಕ್ಕೆ ಇಲ್ಲಿನ ಜನ ಪ್ರೀತಿ ಮತ್ತು ಭಕ್ತಿಯಿಂದ ಮಾರಿಗುಡಿ ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿ ದಿನವು ಮೂರು ಹೊತ್ತು ಪುಜೆ ಇಡೀ ದಿನವು ಮಂಗಳಾರತಿ , ಮಹಾ ಮಂಗಳಾರತಿ, ಅರ್ಚನೆ, ಭಕ್ತರಿಂದ ಉಡಿ ತುಂಬವ ಸೇವೆ ನಡೆದರೆ ಉಳಿದಂತೆ ವರ್ಷದ ಉತ್ಸವ ಎಂದರೆ ದಸರ, ಯುಗಾದಿ, ಕಾರ್ತಿಕ, ಅಮ್ಮನವರ ಜಯಂತಿ ಉತ್ಸವಗಳು ಅದ್ದೂರಿಯಾಗಿ ನೆರೆವೇರುತ್ತವೆ. ಇಲ್ಲಿ ಎರಡು ವರ್ಷಗಳಿಗೊಮ್ಮೆ ಜರುಗುವ ಮಾರಿಕಾಂಬಾ ಜಾತ್ರೆ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ದಿ ಹೊಂದಿದೆ ಕರ್ನಾಟಕದ ಮೂಲೆಮೂಲೆಗಳಿಂದ ಅಷ್ಟೇ ಅಲ್ಲದೆ ಕೇರಳ, ಆಂದ್ರ, ತೆಲಂಗಾಣ, ಗೋವೆ ಮಹಾರಾಷ್ಟ್ರದಿಂದ ಸರಿಸುಮಾರು ೧೫ ರಿಂದ ೨೦ ಲಕ್ಷ ಜನ ಜಾತ್ರೆಯಲ್ಲಿ ಸೇರಿರುತ್ತಾರೆ.
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸರ್ವಾಲಂಕೃತ ಭೂಷಿತಳಾದ ಶ್ರೀ ಮಾರಿಕಾಂಬಾ ದೇವಿಯ ವಿಗ್ರಹ, ದೇವಾಲಯದ ಸೌಂದರ್ಯ, ಘಂಟೆಗಳ ಸದ್ದಿಗೆ ಪ್ರತಿಯೊಬ್ಬ ಭಕ್ತನ ಮನಸ್ಸು ಭಕ್ತಿಯಿಂದ ಮೈಪುಳಕಗೊಳ್ಳುತ್ತದೆ. ೧೬೮೮ರಲ್ಲಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವನ್ನು ನಿರ್ಮಿಸಲಾಯಿತು. ಈ ದೇವಾಲಯದ ಅರ್ಚಕರು ವಿಶ್ವಕರ್ಮ ಜಾತಿಗೆ ಸೇರಿದವರಾಗಿದ್ದಾರೆ. ಈ ಮಾರಿಕಾಂಬಾ ದೇವಿಯು ದುರ್ಗಾದೇವಿಯ ಇನ್ನೊಂದು ಅವತಾರ. ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯ ಸಹೋದರಿಯಾದ ಈ ದೇವಿಯ ದೇವಾಲಯವನ್ನು ‘ದೊಡ್ಡಮ್ಮನ ದೇವಸ್ಥಾನ’ ಎಂದು ಕೂಡಾ ಕರೆಯುತ್ತಾರೆ.ಅಂದಿನ ವಿರಾಟ ನಗರವಾಗಿದ್ದ ಈಗಿನ ಹಾನಗಲ್ಲಿನಲ್ಲಿ ಧರ್ಮರಾಯನು ದೇವಿಯನ್ನು ಆರಧಿಸುತ್ತಿದ್ದನ್ನು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ,ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದ್ದರು. ಅದನ್ನು ಕೆಲವು ಕಳ್ಳರು ಅಪಹರಿಸಿ ಸಿರ್ಸಿಗೆ ತಂದರು. ಆಭರಣಗಳನ್ನು ಹಂಚಿಕೊಂಡ ನಂತರ ಆ ವಿಗ್ರಹವನ್ನು ಪೆಟ್ಟಿಗೆಯಲ್ಲಿಟ್ಟು ಕೆರೆಗೆ ಎಸೆದರು. ಆ ಕೆರೆಯು ಸಿರ್ಸಿಯ ದೇವಿಕೆರೆ ಎಂದು ಹೆಸರಾಗಿದೆ.
ಭಕ್ತನೊಬ್ಬ ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ. ಆದರೆ ಒಂದು ಬಾರಿ ಅವನನ್ನು ಜನರು ತಡೆದು ಪೀಡಿಸಿದರು. ಅದರಿಂದ ಬೇಸರಗೊಂಡು ಅವನು ಮುಂದಿನ ವರ್ಷ ಜಾತ್ರೆಗೆ ಹೋಗದೆ ಸಿರ್ಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು. ಒಂದು ರಾತ್ರಿ ದೇವಿ ಅವನಿಗೆ ನಾನು ದ್ಯಾಮವ್ವ. ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು ಎಂದು ಹೇಳಿದಂತೆ ಕನಸು ಬಿತ್ತು. ಅವನು ಅದನ್ನು ಆ ಊರಿನ ಪ್ರಮುಖರಿಗೆ ತಿಳಿಸಿದನು. ಅದರಂತೆ ಊರವರು ಕೆರೆಯ ಸುತ್ತ ಸೇರಲಾಗಿ ಭಕ್ತನು ಮೂರು ಸುತ್ತು ಕೆರೆಯನ್ನು ಸುತ್ತಿ ದೇವಿಯನ್ನು ಪ್ರಾರ್ಥಿಸಿದನು. ಕೆರೆಯ ಮೇಲೆ ತೇಲುತ್ತಿರುವ ಪೆಟ್ಟಿಗೆಯು ಕಂಡುಬಂದಿತು. ಅದರಲ್ಲಿನ ವಿಗ್ರಹದ ಭಾಗಗಳನ್ನು ಒಟ್ಟು ಸೇರಿಸಲಾಗಿ ದೇವಿಯ ವಿಗ್ರಹವು ಮೂಡಿಬಂದಿತು.
ಗ್ರಾಮಸ್ಥರು ದೇವಿಯ ವಿಗ್ರಹವನ್ನು ಸಿರ್ಸಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ ಸೋಂದಾ ಸಂಸ್ಥಾನದ ಮಹಾರಾಜರನ್ನು ಕೇಳಿದರು. ಅದರಂತೆ ಕ್ರಿ.ಶ. ೧೬೮೯ರಲ್ಲಿ, ಅಂದರೆ ಶಾಲಿವಾಹನ ಶಕೆ ೧೬೧೧ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯಂದು, ಮಂಗಳವಾರ ದೇವಿಯನ್ನು ಈಗಿನ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.ಪ್ರತಿ ಎರಡು ವರ್ಷಗಳಿಗೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ-ಉತ್ಸವಗಳಿಂದೊಡಗೂಡಿದ ಶ್ರೀ ಮಾರಿಕಾಂಬಾ ಜಾತ್ರೆಯನ್ನು ಅತೀ ವಿಜ್ರಂಭಣೆಯಿಂದ ನಡೆಸಲಾಗುತ್ತದೆ. ಇದು ಭಾರತದಲ್ಲಿಯೇ ಅತೀದೊಡ್ಡ ಜಾತ್ರೆ, ಈ ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಅನೇಕಾನೇಕ ಮನರಂಜನಾ ಕಾರ್ಯಕ್ರಮಗಳು ಜಾನಪದ ಕಲೆಗಳ ಪ್ರದರ್ಶನಗಳು, ರಸ್ತೆಯ ಬದಿಗಳಲ್ಲಿ ಬಗೆ ಬಗೆಯ ಅಂಗಡಿ ಮುಗ್ಗಟ್ಟುಗಳು, ಝಗ ಝಗಿಸುವ ದೀಪದ ಅಲಂಕಾರಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ.
ವಿಧಿ ವಿಧಾನಗಳು:-
ಸಿರ್ಸಿಯ ಜಾತ್ರೆ ೯ ದಿನಗಳ ಕಾಲ ಜರುಗುವ ಅದ್ದೂರಿ ಜಾತ್ರೆ ಇಲ್ಲಿ ಜಾತ್ರೆ ಪ್ರಾರಂಭ ಆಗುವ ಎರಡು ತಿಂಗಳು ಮೊದಲಿನಿಂದಲೆ ಜಾತ್ರೆಯ ವಿಧಿ ವಿಧಾನಗಳು ಪ್ರಾರಂಭವಾಗುತ್ತವೆ. ಜಾತ್ರೆಯ ಮುಹೂರ್ತ ನಿಶ್ಚಯಿಸಲು ಪುಷ್ಯ ಮಾಸದ ಒಂದು ದಿನ ವಿಶೇಷ ಸಭೆ ಕರೆಯಲಾಗುತ್ತದೆ. ಈ ಸಭೆಯಲ್ಲಿ ಊರಿನ ಗಣ್ಯರು, ಸಾರ್ವಜನಿಕರು,ಬಾಬುದಾರರು, ಧರ್ಮದತ್ತಿ ಗಳು ಭಾಗವಹಿಸಿರುತ್ತಾರೆ. ಜಾತ್ರೆಯ ದಿನ ನಿಗದಿಯಾದ ನಂತರ ಸಂಪ್ರದಾಯದಂತೆ ಜಾತ್ರೆಯ ಪೂರ್ವದ ಮೂರು ಮಂಗಳವಾರ ಎರಡು ಶುಕ್ರವಾರದ ದಿನಗಳಂದು ಐದು ಹೊರಬೀಡುಗಳು ಆಗುತ್ತವೆ.
ಹತ್ತೂರಿನ ಅಧಿದೇವತೆಯ ಸಿರ್ಸಿ ಮಾರಿಕಾಂಬ:-
ಕರ್ನಾಟಕದಲ್ಲಿ ಮಾರಮ್ಮ ದೇವಿಯರಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಶಿರಸಿಯ ಈ ಮಾರಿಕಾಂಬಾ ದೇವಿಯನ್ನು ಕರ್ನಾಟಕದ ಎಲ್ಲಾ ಮಾರಿಯಮ್ಮ ದೇವಿಯರಿಗೆ ದೊಡ್ಡಕ್ಕ ಎಂದು ಕರೆಯಲಾಗುತ್ತದೆ. ಅಂದರೆ ಕೊಲ್ಲೂರಿನ ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿಗೂ ಈಕೆಯೇ ಅಕ್ಕ. ಶಿರಸಿಯ ಮಾರಿಕಾಂಬಾ ದೇವಾಲಯವನ್ನು ಶ್ರೀ ಮಾರಿಕಾಂಬಾ ದೇವಾಲಯ, ಅಮ್ನೋರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈಕೆಯನ್ನು ಭೇಟಿಯಾಗಿ ನಮ್ಮೆಲ್ಲಾ ಕಷ್ಟಗಳನ್ನು ಹೇಳಿಕೊಂಡು ಭಕ್ತಿಯಿಂದ ಆರಾಧಿಸಿದರೆ ಖಂಡಿತವಾಗಿ ಎಲ್ಲಾ ಕಷ್ಟಗಳನ್ನು ದೂರಾಗಿಸಿ, ಮನಸ್ಸಿಗೆ ಅದೇನೋ ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.
ಗೋಕರ್ಣದಿಂದ ಪೂರ್ವಕ್ಕೆ 83 ಕಿಮೀ (51 ಮೈಲುಗಳು) ದೂರದಲ್ಲಿರುವ ಶ್ರೀ ಮಾರಿಕಾಂಬಾ ದೇವಾಲಯವನ್ನು ದೊಡ್ಡಮ್ಮ ದೇವಸ್ಥಾನ ಎಂದೂ ಕರೆಯಲಾಗುತ್ತದೆ, ಅಂದರೆ ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯ ಸಹೋದರಿ. ಶ್ರೀ ಮಾರಿಕಾಂಬಾ ದೇವಾಲಯವನ್ನು 1688 ರಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಒಮ್ಮೆ ಶಿರಸಿ ಮಾರಿಕಾಂಬ ದೇಗುಲಕ್ಕೆ ಆಗಮಿಸಿ ಶ್ರೀ ದೇವಿಯ ಆಶೀರ್ವಾದವನ್ನು ಪಡೆದು ಜೀವನ ಪುನೀತರಾಗುವಂತೆ ನೋಡಿಕೊಳ್ಳುತ್ತಾಳೆ ತಾಯಿ ಮಾರಿಕಾಂಬ…, ಉತ್ತರ ಕರ್ನಾಟಕ ಹಾಗೂ ಭಾರತದ ಇತಿಹಾಸದಲ್ಲೇ ದೊಡ್ಡ ಪ್ರಮಾಣದಲ್ಲಿ ನಡೆಯುವಂತ ಜಾತ್ರಾ ಮಹೋತ್ಸವ ಇಡೀ ಜಗತ್ತಿಗೆ ಪ್ರಸೀದಿಯಾಗುವುದರೊಂದಿಗೆ ತಾಯಿ ಮಾರಿಕಾಂಬವು ಜಗತ್ಪ್ರಸಿದ್ಧಿಯಾಗಿ ಸಿರ್ಸಿಯಲ್ಲಿ ಐಕ್ಯಳಾಗಿದ್ದಾಳೆ ಅನ್ನೋದು ಭಕ್ತಾದಿಗಳ ಅಪಾರ ನಂಬಿಕೆ …,ಒಮ್ಮೆ ಬಂದು ಕ್ಷೇತ್ರಕ್ಕೆ ಭೇಟಿ ನೀಡಿ ಇಷ್ಟಾರ್ಥಗಳನ್ನ ಈಡೇರಿಸಿಕೊಳ್ಳಿ… ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ ತಾಯಿ ಜಗದಾಂಬೆ….!