ಅದೊಂದು ಹಳೆಕಾಲದ ನಾಗ ಬನ. ಬನದ ಸುತ್ತಮುತ್ತ ಹಸಿರಿನ ಛತ್ರವನ್ನೇ ಬಿಡಿಸಿಟ್ಟ ಹಾಗೆ ಹಬ್ಬಿರುವ ಮರಗಿಡಗಳು. ಸೂರ್ಯನ ಕಿರಣವನ್ನು ಬನದೊಳಗೆ ಇಣುಕಲು ಬಿಡಲಾರೆವು ಎನ್ನುವಂತೆ ದಟ್ಟೈಸಿರುವ ಬ್ರಹ್ಮ ಗಾತ್ರದ ಮರಗಳು.ಆ ಬೃಹತ್ ವೃಕ್ಷಗಳು ಮಾನವ ತೋಳು ಬೆಸೆದಂತೆ ಪ್ರಾಕೃತಿವಾಗಿ ಬೆಸೆದಿಟ್ಟ ಬೇರು ಬಿಳಲುಗಳ ನಡುವೆ ಒಂದಷ್ಟು ಜಾಗದಲ್ಲಿ ನಿಲ್ಲಿಸಿರುವ ನಾಗನ ಬಿಂಬವಿರುವ ಕಲ್ಲುಗಳು. ಹಚ್ಚ ಹಸುರಿನ ಪ್ರಕೃತಿಯ ನಡುವೆ ಮೇಳೈಸಿರುವ ನಾನಾ ಹಕ್ಕಿಗಳ ಇಂಚರ, ಬನದೊಳಗೆ ಮನಸ್ಸಿಗೆ ಆಹ್ಲಾದತೆ ನೀಡುವ ಬಗೆ ಬಗೆಯ ಹೂಗಳ ಗಂಧ, ದೂರದಲ್ಲಿ ನೀಲಿ ನೀಲಿಯಾಗಿ ಗೋಚರಿಸುವ ಪಶ್ಚಿಮ ಘಟ್ಟಗಳು. ಒಟ್ಟಿನಲ್ಲಿ ಹೃನ್ಮನ ಮುದಗೊಳಿಸುವ ಪ್ರಕೃತಿಯ ಸುಂದರ ವರ್ಣ ಚಿತ್ತಾರದ ನಡುವೆ ನಿಗೂಢವಾಗಿ ಕಾಣುವ ಆ ನಾಗ ಬನದಲ್ಲಿ, ಅದೆಷ್ಟು ತಲೆಮಾರುಗಳು ಹಾಲೆರೆದು ನಾಗನನ್ನು ಪೂಜಿಸಿ ಪಾವನರಾಗಿ ಹೋಗಿದ್ದರೋ ಯಾರಿಗೂ ಗೊತ್ತಿಲ್ಲ. ದೊಡ್ಡ ಕೂಡುಕಟ್ಟಿನ ಕುಟುಂಬದವರ ನಾಗ ಬನವಾದುದರಿಂದ ವರ್ಷಾಂಪ್ರತಿ ಪೂಜೆ ಸಲ್ಲಿಸಲು ಸೇರುವ ಕುಟುಂಬಿಕರ ಸಂಖ್ಯೆ ಅಪಾರ.
ಪೂಜೆ ಮಾಡಲು ಬಂದವರ ಕಾಲಿಗೆ ಮೆತ್ತಿಕೊಳ್ಳುವ ಬನದ ಸುತ್ತ ಮುತ್ತಲ ಮಣ್ಣು, ಸಣ್ಣ ಮಳೆಗೂ ಭೂಮಿ ಒದ್ದೆಯಾಗಿ ಬಟ್ಟೆಗೆ ತಗಲುವ ಕೆಸರು,ದುತ್ತೆಂದು ಬಂದು ಕಾರಿನಲ್ಲಿ ಭರ್ರನೆ ಹೊರಟು ಹೋಗಲು ಒಳ್ಳೆಯ ರಸ್ತೆಯಿಲ್ಲದೆ ಆಗುತ್ತಿರುವ ತೊಂದರೆಗಳು. ಎಲ್ಲವೂ ಆಧುನಿಕ ಯುಗದ ನಾಗ ಭಕ್ತರಿಗೆ ಕಿರಿ ಕಿರಿ ಮಾಡುತ್ತಿದ್ದವು. ಆಸುಪಾಸಿನ ನಾಗ ಬನಗಳು ಜೀರ್ಣೋದ್ಧಾರಗೊಂಡು ಲಕ ಲಕ ಕಂಗೊಳಿಸುತ್ತಿವೆ. ಅಲ್ಲೆಲ್ಲಾ ನಾಗನಿಗೆ ಎತ್ತರದ ಕಾಂಕ್ರಿಟ್ ಕಟ್ಟೆ ಕಟ್ಟಿ ನೆಲಕ್ಕೆಲ್ಲ ಇಂಟೆರ್ ಲೊಕ್ಸ್ ಹಾಕಿದ್ದಾರೆ. ಯಾರೂ ಒಳಗೆ ಹೋಗದಂತೆ ನಾಗನ ಬನದ ಸುತ್ತ ಕಾಂಪೌಂಡ್ ಎಬ್ಬಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ನಾಗನ ಬನದ ತನಕ ಕಾಂಕ್ರಿಟ್ ರಸ್ತೆಯಾಗಿದೆ. ಯಾವ ಮಳೆ ಬಿಸಿಲು ಚಳಿ ಗಾಳಿಗೂ ಹೆದರದೆ ಉಟ್ಟ ಬಟ್ಟೆಯ ಇಸ್ತ್ರಿ ಹಾಳಾಗದಂತೆ ಪೂಜೆ ಸಲ್ಲಿಸಿ ಹೋಗಬಹುದಾದಷ್ಟು ಅನುಕೂಲತೆಗಳು ಊರಿನ ಹೆಚ್ಚಿನ ನಾಗಬನಗಳಿಗಿದೆ. ಹೆಚ್ಚೇಕೆ ? ಕೆಲವು ಕಡೆ ಬನದ ಹತ್ತಿರದ ನೀರಿನ ಕೆರೆಗೂ ಮಣ್ಣು ತುಂಬಿಸಿ ಪಕ್ಕದಲ್ಲೇ ಒಂದು ಐದಡಿ ವ್ಯಾಸದ ಬಾವಿ ಕೊರೆದು ಅರ್ಚಕ ವರ್ಗದವರಿಗೆ ಕುಡಿದ ನೀರು ಹೊಟ್ಟೆಯಲ್ಲಿ ಅಲ್ಲಾಡದಂತೆ ಪೂಜೆ ಸಲ್ಲಿಸಿ ಹೋಗಲು ಅನುಕೂಲ ಮಾಡಿಟ್ಟಿದ್ದಾರೆ. ಊರಿನಲ್ಲಿ ಇಷ್ಟೆಲ್ಲಾ ಸಾಂಸ್ಕೃತಿಕ ಮತ್ತು ಧಾರ್ಮಿಕ ಬದಲಾವಣೆ ಆಗುತ್ತಿರುವಾಗ ನಾವಿನ್ನೂ ಆ ಓಬಿರಾಯನ ಕಾಲದ ಬನದಲ್ಲೇ ನಾಗನನ್ನು ಪೂಜಿಸಿಕೊಂಡು ಬಂದರೆ ನಾಗ ದೇವರು ಮುನಿಯಲಾರನೇ?
ಈಗ ಕುಟುಂಬದ ಹೆಚ್ಚಿನ ಕವರುಗಳಲ್ಲಿ ಬೇಕಾದಷ್ಟು ಆರ್ಥಿಕ ಸಂಪನ್ಮೂಲಗಳಿವೆ. ಉಳ್ಳವರು ಸ್ವಲ್ಪ ಹೆಚ್ಚು ,ಇಲ್ಲದವರು ತಮ್ಮ ಕೈಲಾಗುವಷ್ಟು ಕೊಟ್ಟು ನಮ್ಮ ನಾಗನ ಬನವನ್ನೂ ಜೀರ್ಣೋದ್ಧಾರ ಮಾಡಬಾರದೇಕೆ? ಎನ್ನುವ ಅಭಿಪ್ರಾಯ ಕುಟುಂಭಿಕರಲ್ಲಿ ಹುಟ್ಟಿಕೊಂಡಿತು. ಅಭಿಪ್ರಾಯ ಮೂರ್ತ ರೂಪಕ್ಕೆ ಇಳಿದು ಅದಕ್ಕೊಂದು ಕಮೀಟಿ ತಯಾರಾಯಿತು. ಕುಟುಂಭದ ಹಳೆಯ ತಲೆಗಳ ಅಭಿಪ್ರಾಯ ಕೇಳುವುದು ನಿಷ್ಪ್ರಯೋಜಕ. ಈಗ ಏನಿದ್ದರೂ ನವಧಾರ್ಮಿಕ ಕ್ರಾಂತಿಯ ಕಾಲಘಟ್ಟ. ಹೈಟೆಕ್ ಯುಗದ ಸಾಕ್ಷರರೆಲ್ಲ ಒಟ್ಟಾಗಿ ಬನದ ನವೀಕರಣ ಮತ್ತು ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ ನಡೆಸುವುದೆಂದು ತೀರ್ಮಾನಿಸಿದರು.
ಕುಟುಂಬಿಕರೆಲ್ಲ ಒಟ್ಟಾದರು. ಒಳ್ಳೆಯ ಮುಹೂರ್ತದ ದಿನದಂದು ಪ್ರಶ್ನಾ ಚಿಂತನೆ ನಡೆಸಲು ತಂತ್ರಿಗಳನ್ನು ಕರೆಸಲಾಯಿತು. ತಂತ್ರಿಗಳು ಕುಟುಂಬಿಕರ ಪರವಾಗಿ ನಾಗನ ಬಳಿ ಕುಟುಂಬಿಕರಿಗೆ ಅರ್ಥವಾಗದ ಭಾಷೆಯಲ್ಲಿ ಪ್ರಾರ್ಥಿಸಿ ಕೊನೆಗೆ ಅದನ್ನು ಕನ್ನಡದಲ್ಲಿ ಪ್ರಾರ್ಥನೆಯ ರೂಪದಲ್ಲಿ ಅನುವಾದಿಸಿ ಪ್ರಶ್ನೆಗೆ ಕುಳಿತುಕೊಂಡರು. ಆರೂಢ ರಾಶಿಯಲ್ಲಿ ನಾಗದೇವರ ಸಾನ್ನಿಧ್ಯವನ್ನು ಭಿನ್ನವಿಸಿಕೊಂಡು ಕವಡೆಯ ರಾಶಿಗೆ ಕೈಯಿಕ್ಕಿದರು. ಕೈಯಿಂದ ಬಾಚಿ ಒಂದಿಷ್ಟು ಕವಡೆಗಳನ್ನು ಒಂದು ಕಡೆ ಹಾಕಿದವರು, ಕವಡೆಗಳನ್ನು ನಾಲ್ಕು ನಾಲ್ಕರ ಗುಂಪಾಗಿ ವಿಭಾಗಿಸಿ ಇಟ್ಟರು. ಏನೇನೊ ಗುಣಿಸಿ, ಎಣಿಸಿ, ಕಳೆದು ಪುನಃ ಕೂಡಿಸಿದರು. ಹಿಂದೆ ಮುಂದೆ ದೇಹ ತೂಗಾಡಿಸಿ ಗಂಭೀರ ಮುಖ ಭಾವ ಪ್ರದರ್ಶಿಸಿ ಹತ್ತಿರದಲ್ಲಿ ಕುಳಿತಿದ್ದ ಪುರೋಹಿತ ಗಣವನ್ನು ನೋಡಿದರು. ಸೇರಿದ್ದ ಕುಟುಂಬಿಕರನ್ನು ಉದ್ದೇಶಿಸಿ “ನಿಮ್ಮ ನಾಗ ಚರವಾಗಿದ್ದಾನೆ. ಸಂಸಾರದ ಮೇಲೆ ಬೇಸರದಲ್ಲಿದ್ದಾನೆ. ಬನದ ಜೀರ್ಣೋದ್ಧಾರ ಆಗಬೇಕು” ಎಂದರು. ಜೊತೆಗಿದ್ದ ಸ್ಥಳೀಯ ಅರ್ಚಕರು ಮೊದಲೇ ತಯಾರಾಗಿಟ್ಟುಕೊಂಡ ಪ್ರಶ್ನೆಯನ್ನು ಕುಟುಂಭಿಕರ ಪರವಾಗಿ ಕೇಳಿದರು. “ನೀವು ಹೇಳುವುದು ಸರಿ. ಆದರೆ ಈ ಸ್ಥಿತಿಯಲ್ಲಿರುವ ಬನದ ಜೀರ್ಣೋದ್ಧಾರ ಅಂದರೆ ಕುಶಾಲೆ? ಆದರೂ ನಾಗ ದೇವರು ಎಲ್ಲರಿಗೂ ಸದ್ಬುದ್ದಿಯ ಅನುಗ್ರಹ ಕೊಟ್ಟು ಉದ್ಧಾರ ಮಾಡುವುದಾದರೆ ಸಂಸಾರ ಇಲ್ಲವೆನ್ನುವುದಿಲ್ಲ. ಆ ಬಗ್ಗೆ ಕೆಲಸ ಕಾರ್ಯಗಳು ಹೇಗೆ ನಡೆಯಬೇಕು ಎನ್ನುವ ಪ್ರಶ್ನೆಯನ್ನು ಸ್ಥಳಾಧೀನ ಚಿತ್ತಗಳು ಉತ್ತರಿಸಬೇಕು” ಎಂದರು.
ದೈವಜ್ಞರು ಪುನಃ ಇನ್ನೊಂದಿಷ್ಟು ಕವಡೆಗಳನ್ನು ಮುಷ್ಟಿಯಲ್ಲಿ ಎತ್ತಿಕೊಂಡು ಮಣೆಯ ಮೇಲೆ ಬಿಡಿಸಿದರು. ಪುನಃ ಅದೇ ಗಂಭೀರ ಮುಖ ಭಾವ. ಏನೋ ಗಹನವಾದ ವಿಚಾರಕ್ಕೆ ಉತ್ತರ ಸಿಕ್ಕಿದಂತಾ ಪ್ರಸನ್ನತೆ ತಂತ್ರಿಗಳ ಮುಖದಲ್ಲಿ. “ಇಲ್ಲಿ ಜೀರ್ಣಾವಸ್ಥೆಯಲ್ಲಿರುವ ಚಿತ್ರಕೂಟ ತೆಗೆದು ಹೊಸ ಚಿತ್ರಕೂಟ ರಚನೆಯಾಗಬೇಕು. ನಾಗನ ಕಲ್ಲುಗಳು ಭಿನ್ನವಾಗಿವೆ, ಅದನ್ನು ಬದಲಾಯಿಸಿ ಎತ್ತರದ ಕಟ್ಟೆಯಲ್ಲಿ ಪ್ರತಿಷ್ಠಾಪಿಸಬೇಕು. ನಾಗನಿಗೆ ಮೈಲಿಗೆ ಆಗದಂತೆ ಸುತ್ತ ಆವರಣ ಗೋಡೆ ನಿರ್ಮಾಣ ಆಗಬೇಕು. ಮರಗಳನ್ನು ಕಡಿದು ಒಳ್ಳೆ ಬೆಳಕು ಆಡುವಂತ ಪರಿಸರ ನಿರ್ಮಾಣ ಮಾಡಬೇಕು. ತತ್ಸಂಭಂದ ಬ್ರಹ್ಮಕಲಶ, ಆಶ್ಲೇಷ ಬಲಿ ಸೇವೆ ನಡೆಸಬೇಕು. ಕುಲೀನ ಮನೆತನದ ನಾಗಕ್ಷೇತ್ರವಾದ ಕಾರಣ ಅಷ್ಟಪವಿತಃ ನಾಗಮಂಡಲ ಸೇವೆ ನಡೆಯಬೇಕು.”ಸೇರಿದ ಕುಟುಂಬಿಕರಲ್ಲಿ ಕೃತಾರ್ಥ ಭಾವ. ಎಲ್ಲರ ಮುಖದಲ್ಲೂ ಮಂದಹಾಸ ಮೇಳೈಸುತ್ತಿದೆ. ನಮಗೆ ಬೇಕಾದದ್ದೂ ಅದೇ. ದೈವಜ್ಞರು ಹೇಳಿದ್ದೂ ಅದನ್ನೇ ತಾನೇ.!
ತಂತ್ರಿಗಳು ಮತ್ತು ಕುಟುಂಬಸ್ಥರು ಇಷ್ಟೆಲ್ಲಾ ದೇವತಾ ಕಾರ್ಯಕ್ರಮಗಳಿಗೆ ಪೀಠಿಕೆ ಹಾಕುತ್ತಿರಬೇಕಾದರೆ, ದೂರದಲ್ಲಿ ಕುಳಿತಿದ್ದ ಕುಟುಂಭದ ಹಿರಿಯ ವ್ಯಕ್ತಿಯೊಬ್ಬರು ದೈವಜ್ಞರ ಬಳಿಗೆ ಬಂದು ಅನತಿ ದೂರದಲ್ಲಿ ನಿಂತರು. ನೆರೆತು ಬೆಳ್ಳಗಾಗಿದ್ದ ತಲೆಗೂದಲಿನ ಮೇಲೊಂದು ರುಮಾಲನ್ನು ಹೊದ್ದುಕೊಂಡು ತಂತ್ರಿಗಳ ಬಳಿ ಕೇಳಿದರು. “ಏನಂದಿರಿ ಸ್ವಾಮೀ.? ನಮ್ಮ ನಾಗ ಚರವಾಗಿದ್ದಾನೆಯೇ? ಅವ ಬೇಸರದಲ್ಲಿ ಇದ್ದಾನೆಂದು ಯಾರು ನಿಮಗೆ ಹೇಳಿದವರು? ನಿಮ್ಮ ಯಾವ ಪ್ರಶ್ನಾ ಚಿಂತನೆಯ ಕ್ರಮದಲ್ಲಿ ಅದು ನಿಮಗೆ ಗೋಚರಿಸಿದ್ದು?” ಒಮ್ಮೆಲೇ ತಬ್ಬಿಬ್ಬಾಗುವ ಸರದಿ ದೈವಜ್ಞರದ್ದು. ಹಿರಿಯ ಜೀವದ ಕೋಪ ಕಣ್ಣಿನಲ್ಲಿ ಕಾರುವಂತೆ ಕಾಣಿಸುತಿತ್ತು. “ನನ್ನ ಕುಟುಂಬದಲ್ಲಿ ಸಣ್ಣ ಸಣ್ಣ ಮಕ್ಕಳು ಕನ್ನಡಕ ಇಡುವಂತ ದೃಷ್ಟಿ ದೋಷಗಳಿಲ್ಲ, ಮದುವೆಯಾಗಿ ಹೋದ ಹೆಣ್ಮಕ್ಕಳು ಹಡೆಯದೇ ಯಾರೂ ಬಾಕಿಯಾಗಿಲ್ಲ. ನನ್ನ ಸಂಸಾರದಲ್ಲಿ ಯಾರಿಗೂ ಚರ್ಮ ವ್ಯಾಧಿ ಭಾದಿಸಿಲ್ಲ. ನನ್ನ ಸಂಸಾರದಲ್ಲಿ ಯಾರಿಗೂ ಸಂತೋಷದಿಂದ ಮೂರು ಹೊತ್ತು ಉಂಡು ಓಡಾಡಲಾಗದಷ್ಟು ಬಡತನವೂ ಇಲ್ಲ. ಇಷ್ಟೆಲ್ಲಾ ಇರುವಾಗ ನನ್ನ ನಾಗ ಬೇಸರದಲ್ಲಿ ಇದ್ದಾನೆಂದು ನೀವು ಹೇಳಿದರೆ ನಾನು ನಂಬಲಿಕ್ಕೇ ತಯಾರಿಲ್ಲ. ಆದರೆ ಬೇರೆಲ್ಲಾ ಹೆಚ್ಚಿನ ಕಡೆ ಎಲ್ಲೆಲ್ಲಿ ನೀವು ಪ್ರಶ್ನೆ ಇಟ್ಟು, ಇದ್ದ ನಾಗ ಬನದ ಮರಗಳನ್ನು ನವೀಕರಣದ ಹೆಸರಿನಲ್ಲಿ ಕಡಿಸಿ ನಾಗಮಂಡಲ ಮಾಡಿಸಿದಿರೋ ಅಲ್ಲೆಲ್ಲ ಇಂದಿಗೂ ನಾನು ಮೇಲೆ ಹೇಳಿದ ಸಮಸ್ಯೆಗಳು ಉಂಟು..” ಪ್ರಶ್ನೆ ಇಟ್ಟವರಿಗೆ ಆ ತಣ್ಣನೆಯ ಬನದಲ್ಲೂ ಬೆವರಿದ ಅನುಭವ.
“ನಾಗ ಎಂದರೆ ಪರಿಸರ, ಪೃಕೃತಿ, ನೀರು ನೆರಳು. ನನ್ನ ಈ ಪ್ರಾಕೃತಿಕ ಬನದಲ್ಲಿ ನಾಗನಿಗೆ ಸಂತೃಪ್ತಿ ಇದೆ. ಆದುದರಿಂದ ಆತ ನಮ್ಮ ಕುಟುಂಬದ ತಲೆ ಕಾಯುತಿದ್ದಾನೆ. ಇಲ್ಲಿ ನಿಮ್ಮ ಆರೂಢ ಪ್ರಶ್ನೆಯೋ ತಾಂಬೂಲ ಪ್ರಶ್ನೆಯೋ ಅಗತ್ಯವಿಲ್ಲ. ನಿಮ್ಮ ಪ್ರಶ್ನಾ ಚಿಂತನೆಗಳನ್ನು ನಂಬಿ ಪರಿಸರ ನಾಶ ಮಾಡಿದ ಫಲಗಳನ್ನು ಇಂದು ಬಹುತೇಕ ಕುಟುಂಬಗಳು ಉಣ್ಣುತ್ತಿವೆ. ಅದು ನನ್ನ ಕುಟುಂಬದ ಬನದಲ್ಲಿ ಆಗಲು ನಾನು ಬಿಡಲಾರೆ. ಅಲ್ಲದೆ ನಾನು ಹೇಳಿದ ಮೇಲಿನ ಎಲ್ಲಾ ಸಮಸ್ಯೆಗಳನ್ನು ಆಮದು ಮಾಡಿಕೊಳ್ಳಲು ನನ್ನ ಸಂಸಾರದಲ್ಲಿ ಯಾರಾದರೂ ಬಯಸುವುದಾದರೆ, ಮರಗಳನ್ನು ಕಡಿಸಿ ಜೀರ್ಣೋದ್ಧಾರ ಮಾಡಲು ನನ್ನ ಅಭ್ಯಂತರವಿಲ್ಲ.” ಎಂದರು. ಬನದೊಳಗೆ ಒಮ್ಮೆಲೇ ಎಲ್ಲವೂ ನಿಶಬ್ದವಾಗಿ ಪರಿಸರದ ನಾದ ಗೇಯತೆಯಷ್ಟೇ ಕೇಳುತಿತ್ತು. ಬ್ರಹ್ಮಕಲಶ, ನಾಗಮಂಡಲ, ಧಾರ್ಮಿಕ ಸಭೆ, ಪ್ರತಿಷ್ಠಿತ ವ್ಯಕ್ತಿಗಳ ಜೊತೆ ಸ್ವಾಮಿಗಳ ದರ್ಬಾರು, ಬ್ಯಾನರು ಬಂಟಿಂಗ್ಸ್, ಸಾಂಸ್ಕೃತಿಕ ಕಾರ್ಯಕ್ರಮ, ಸಾವಿರಾರು ಜನರಿಗೆ ಅನ್ನಸಂತರ್ಪಣೆ, ಚಪ್ಪರ, ವೇದಿಕೆ, ಸೌಂಡ್ ಸಿಸ್ಟಮ್ ಎಂದೆಲ್ಲಾ ಬರೆದು ತಯಾರಿಸಿದ್ದ ಬಜೆಟ್ ಕಾಗದಗಳನ್ನು ಅಲ್ಲೇ ಹರಿದು ಹಾಕಿ ಬಂದವರೆಲ್ಲ ಚದುರಿ ಹೋದರು.
ಇದು ನೈಜ್ಯ ವಿಚಾರವನ್ನು ಆಧರಿಸಿ ಬರೆದ ಕತೆ. ಆ ಬನ ಇಂದಿಗೂ ಪ್ರಾಕೃತಿಕ ಸ್ವರೂಪದಲ್ಲಿ ಹಳೆಯ ಪಾಯದಲ್ಲೇ ನಿಂತಿದೆ. ಅಲ್ಲಿನ ನಾಗ ಸರ್ವಾಭೀಷ್ಟಪ್ರದಾಯನಾಗಿ ತನ್ನ ಕುಟುಂಬವನ್ನು ಕಾಪಾಡಿಕೊಂಡು ಬರುತ್ತಿದ್ದಾನೆ.
✍🏼 ಹರೀಶ್ಚಂದ್ರ ಶೆಟ್ಟಿ, ಕೌಡೂರು