ಐತಿಹಾಸಿಕ, ಜಗತ್ಪ್ರಸಿದ್ದಿ ಶ್ರವಣಬೆಳಗೊಳದ ವಿಂಧ್ಯಗಿರಿ ತಾಣ ಅಪಾಯದ ಅಂಚಿನ ಮರೀಚಿಕೆ….! ಕಣ್ಣಿದ್ದು ಕುರುಡಾದ ಪುರಾತತ್ವ ಇಲಾಖೆ…! ಸಹಸ್ರಾರು ವರ್ಷಗಳ ಹಿಂದಿನ ದಂತಕಥೆ ನೆಲಸಮದ ಭೀತಿಯಲ್ಲಿ…..!
ಬಾಹುಬಲಿ ನೆಲೆಸಿರುವ ಬೆಟ್ಟದಿಂದ ಜಾರಿದೆ ಬೃಹದಾಕಾರದ ಕಲ್ಲುಗಳು, ಪುರಾತತ್ವ ಇಲಾಖೆ, ಅಧಿಕಾರಿಗಳು ಮೌನ….!?
– ಕೆ. ಸಂತೋಷ ಶೆಟ್ಟಿ, ಮೊಳಹಳ್ಳಿ ಕುಂದಾಪುರ, ಉಡುಪಿ ಜಿಲ್ಲೆ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು)
ಐತಿಹಾಸಿಕ ಪುರಾಣ ಪ್ರಸಿದ್ಧ ವಿಂಧ್ಯಗಿರಿ ಬೆಟ್ಟ ಕುಸಿಯುವ ಭೀತಿಯಲ್ಲಿದೆ. ಸಾವಿರ ಸಾವಿರ ಭಕ್ತರು ದಿನನಿತ್ಯ ವಿಂಧ್ಯಗಿರಿ ಬೆಟ್ಟಕ್ಕೆ ಭೇಟಿ ನೀಡಿ ಪ್ರವಾಸ ತಾಣದ ಅನುಭವ ಪಡೆದುಕೊಳ್ಳುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಜೀವಕ್ಕೆ ಕುತ್ತು ತರುವ ಭೀತಿ ಎದುರಾಗುತ್ತಿದೆ.ಅದು ವಿಶ್ವ ವಿಖ್ಯಾತ ತಾಣ.. ರಾಷ್ಟ್ರೀಯ ಸ್ಮಾರಕ ಎಂದು ಕೇಂದ್ರ ಸರ್ಕಾರದಿಂದ ಗುರ್ತಿಸಿಕೊಂಡಿರುವ, ಅಹಿಂಸಾ ಮೂರ್ತಿ ಬಾಹುಬಲಿ ಸ್ವಾಮಿ ನೆಲೆಸಿರೋ ಪುಣ್ಯ ಕ್ಷೇತ್ರ (shravanabelagola). ನಿತ್ಯ ಸಹಸ್ರಾರು ಭಕ್ತರು ಬಂದು ಇಲ್ಲಿನ ಬಾಹುಬಲಿ ಏಕ ಶಿಲಾ ವಿಗ್ರಹ ನೋಡಿ ಪುಳಕಿತರಾಗುತ್ತಾರೆ. ಇಂತಹ ಪುಣ್ಯ ಕ್ಷೇತ್ರವನ್ನ ಕೇಂದ್ರ ಪುರಾತತ್ವ ಇಲಾಖೆ (Archaeological Survey of India-ASI) ಸಂಪೂರ್ಣ ಕಡೆಗಣಿಸಿದೆಯಾ ಎನ್ನೋ ಅನುಮಾನ ಇದೀಗ ಮೂಡಿದೆ. ಬರೋಬ್ಬರಿ ನಾಲ್ಕು ತಿಂಗಳ ಹಿಂದೆ ಮಳೆಗಾಲದಲ್ಲಿ ಭಾರೀ ಮಳೆಯಿಂದ ಕುಸಿದು ಬಿದ್ದಿದ್ದ ಬಾಹುಬಲಿ ನೆಲೆಸಿರೋ ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ (Vindhyagiri Hill) ಕೋಟೆ ಗೋಡೆ ಕುಸಿದು ತೀವ್ರ ಆತಂಕ ಎದುರಾಗಿತ್ತು. ಇದಾಗಿ ನಾಲ್ಕು ತಿಂಗಳ ಕಳೆದ ಮೇಲೂ ಇದನ್ನ ರಿಪೇರಿ ಮಾಡೋದಿರಲಿ ಕನಿಷ್ಟ ಬಂದು ದುರಸ್ಥಿ ಬಗ್ಗೆ ಕೆಲಸವನ್ನೂ ಆರಂಭಿಸದಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡ ಮಳೆಯಾದರೆ ದೊಡ್ಡ ದುರಂತ ನಡೆಯೋ ಮೊದಲೇ ಆಗಿರೋ ಹಾನಿ ಸರಿಪಡಿಸಲಿ ಎಂದು ಜನರು ಒತ್ತಾಯಿಸಿದ್ದಾರೆ. ನಾಲ್ಕು ತಿಂಗಳಾದ್ರು ಕುಸಿದ ಕೋಟೆ ದುರಸ್ಥಿ ಮಾಡದ ಕೇಂದ್ರ ಪುರಾತತ್ವ ಇಲಾಖೆ. ಭಾರೀ ಮಳೆಗೆ ಕುಸಿದು ಬಿದ್ದು ಭೀತಿ ಸೃಷ್ಟಿಯಾಗಿರುವ ವಿಂಧ್ಯಗಿರಿ ಬಾಹುಬಲಿ ಸ್ವಾಮಿ ನೆಲೆಸಿರೋ ಪುಣ್ಯ ತಾಣ. ಆದರೆ ಇಲ್ಲಿ ನಿರ್ಲಕ್ಷ್ಯತೆಯ ಪರಮಾವಧಿ ಮನೆ ಮಾಡಿದೆ. ನಿತ್ಯ ಸಾವಿರಾರು ಜನರು ಬಂದು ಹೋಗೋ ಬೆಟ್ಟದಲ್ಲಿ ಬಲಿಗಾಗಿ ಕಾದಿವೆ ಬೃಹದಾಕಾರದ ಕಲ್ಲುಗಳು… ಹೌದು ಅಂದು ಅಗಸ್ಟ್ 3 ಹಾಸನ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿತ್ತು. ಅದರಲ್ಲೂ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಭಾಗದಲ್ಲಿ ಸುರಿದ ಅಪಾರ ಪ್ರಮಾಣದ ಮಳೆಯಿಂದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರೋ ವಿಶ್ವವಿಖ್ಯಾತ ಬಾಹುಬಲಿ ಸ್ವಾಮಿ ನೆಲೆಸಿರೋ ವಿಂಧ್ಯಗಿರಿಯ ಮೇಲಿರೋ ಕೋಟೆಯ ಬೃಹತ್ ಕೋಟೆ ಕುಸಿದು ದೊಡ್ಡ ದೊಡ್ಡ ಕಲ್ಲುಗಳು ಮುಗಿಲೆತ್ತರದ ಬೆಟ್ಟದ ಮೇಲಿಂದ ಉರುಳಿಬಂದಿದ್ದವು. ಮತ್ತಷ್ಟು ಮಳೆಯಾಗಿದ್ರೆ ದೊಡ್ಡ ಅನಾಹುತವೇ ನಡೆದು ಹೋಗುತ್ತೇನೋ ಎನ್ನೋ ಆತಂಕ ಸೃಷ್ಟಿಯಾಗಿತ್ತಾದ್ರು ಅಂತಹದ್ದೇನೂ ಆಗಲಿಲ್ಲ ಅನ್ನೋದೆ ಸಮಾಧಾನ. ಘಟನೆ ನಡೆದ ಮರುದಿನವೇ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಕಂದಾಯ ಸಚಿವ ಆರ್. ಅಶೋಕ್, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡಿ ಶೀಘ್ರವಾಗಿ ರಿಪೇರಿ ಮಾಡಿ ಎಂದು ನಿರ್ದೇಶನ ಕೊಟ್ಟಿದ್ದರು. ಸ್ಥಳೀಯ ಶಾಸಕ ಸಿಎನ್ ಬಾಲಕೃಷ್ಣ ಕೂಡ ದೊಡ್ದ ಅನಾಹುತ ನಡೆಯೋ ಮೊದಲೇ ರಾಷ್ಟ್ರೀಯ ಸ್ಮಾರಕವಾಗಿರೋ ವಿಂಧ್ಯಗಿರಿಯಲ್ಲಿ ಕುಸಿದಿರೋ ಕೋಟೆ ರಿಪೇರಿಯಾಗಲಿ ಎಂದು ಒತ್ತಾಯ ಮಾಡಿದ್ದರು. ಆದ್ರೆ ಇದನ್ನ ನಿರ್ಲಕ್ಷ್ಯ ಅನ್ನಬೇಕೋ, ಇಲ್ಲಾ ರಾಷ್ಟ್ರೀಯ ಸ್ಮಾರಕದ ಬಗ್ಗೆ ಅಧಿಕಾರಿಗಳಿಗೆ ಇರೋ ಅಸಡ್ಡೆ ಅನ್ನಬೇಕೋ ಗೊತ್ತಿಲ್ಲ, ಕೋಟೆ ಕುಸಿದು ನಾಲ್ಕು ತಿಂಗಳು ಕಳೆದರೂ ರಿಪೇರಿ ಇರಲಿ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಇತ್ತ ಸುಳಿದು ಕೂಡ ನೋಡಿಲ್ಲ. ವಾರದ ಹಿಂದೆ ಬೆಟ್ಟ ಏರಿದ್ದ ಬಾಲಕಿಯೊಬ್ಬಳು ಇಳಿಯುವಾಗ ಬೆಟ್ಟದ ಮೇಲಿಂದ ಕುಸಿದು ಬಿದ್ದು ಮೃತಪಟ್ಟಿದ್ದಾಳೆ, ಶತಮಾನಗಳ ಹಿಂದೆ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿಯ ಏಕ ಶಿಲಾ ವಿಗ್ರಹವನ್ನು ನಿರ್ಮಾಣ ಮಾಡಲಾಗಿದೆ. ನಿತ್ಯವೂ ಕೇವಲ ಕರ್ನಾಟಕ ಅಷ್ಟೇ ಅಲ್ಲಾ ಹೊರ ರಾಜ್ಯ ಹೊರದೇಶಗಳಿಂದಲೂ ಕೂಡ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಇಲ್ಲಿಗೆ ಬರ್ತಾರೆ. ಈಗಂತೂ ಹೇಳಿ ಕೇಳಿ ಪ್ರವಾಸದ ಸಮಯವಾದ್ದರಿಂದ ಅಪಾರ ಸಂಖ್ಯೆಯಲ್ಲಿ ಜನರು ವಿಂಧ್ಯಗಿರಿ ಮೇಲೆ ಏರುತ್ತಿದ್ದಾರೆ. ಆಕಾಶ ಭೂಮಿ ಒಂದು ಮಾಡಿ ನಿಂತ ಶಾಂತಮೂರ್ತಿಯನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ. ಆದ್ರೆ ಕೇವಲ ಮಳೆ ಗಾಳಿ ಅಷ್ಟೇ ಅಲ್ಲಾ ಸ್ವಲ್ಪ ಎಡವಟ್ಟಾಗಿ ಕಲ್ಲು ಜಾರಿದರೂ ದೊಡ್ಡದೊಡ್ಡ ಕಲ್ಲುಗಳು ಶರವೇಗದಲ್ಲಿ ಮುಗಿಲೆತ್ತರದ ಬೆಟ್ಟದ ಮೇಲಿಂದ ಕೆಳಗೆ ಉರುಳಿ ಬರಲಿವೆ. ಹಾಗೇನಾದರೂ ಆದ್ರೆ ದೊಡ್ಡ ಅನಾಹುತವೇ ನಡೆದು ಹೋಗಲಿದೆ. ಇದಿಷ್ಟೇ ಅಲ್ಲ, ಕೋಟೆ ದುರಸ್ಥಿ ಮಾಡದಿರೋದು ಒಂದೆಡೆಯಾದ್ರೆ, ಬಾಹುಬಲಿ ಸ್ವಾಮಿ ಮೂರ್ತಿ ಇರೋ ಪ್ರದೇಶದಲ್ಲಿನ ಮಿಂಚು ನಿರೋಧಕ ಕೂಡ ಹಾಳಾಗಿದ್ದು ಅದರ ರಿಪೇರಿಯಾಗಿಲ್ಲ. ಬೆಟ್ಟದ ಮೇಲಿನ ಕೋಟೆ ಸಂಪೂರ್ಣ ಹಾನಿಯಾಗಿದ್ದು ಯಾವಾಗ ಬೇಕಿದ್ರು ಕುಸಿಯೋ ಭೀತಿ ಇದೆ. ಆದ್ರೆ ಇಷ್ಟೆಲ್ಲಾ ಸಮಸ್ಯೆ ಇದ್ದಾಗಲೂ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಅಂತರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಹೊಂದಿರೋ ರಾಷ್ಟ್ರೀಯ ಸ್ಮಾರಕವನ್ನ ಸಂಪೂರ್ಣ ಕಡೆಗಣಿಸಲಾಗಿದೆ. ಅಧಿಕಾರಿಗಳು ಮೈಮರೆತಿರೋದು ನಿಜಕ್ಕೂ ದುರಂತ ಇನ್ನಾದರೂ ಪೌರತ್ವ ಇಲಾಖೆ ಇದರ ಬಗ್ಗೆ ಗಮನ ಹರಿಸಿ ನೂತನವಾಗಿ ನಿರ್ಮಿಸುವಂತಹ ಕಟ್ಟಡದ ಕಾಮಗಾರಿ ನಡೆಯಬೇಕಿದೆ. ಇನ್ನು ನಿರ್ಲಕ್ಷವಾದರೆ ಪ್ರವಾಸಿಗರ ಜೀವಕ್ಕೆ ಕುತ್ತು ತರಬಹುದು, ಜೋಪಾನ….!?