ಮಂಗಳೂರು: ಮ್ಯಾಕ್ಸ್ ಕ್ರಿಯೇಷನ್ ಲಾಂಛನದಲ್ಲಿ “ಪ್ರೊಡಕ್ಷನ್ ನಂಬರ್ 1” ಚಿತ್ರಕ್ಕೆ ಮುಹೂರ್ತ ಸಮಾರಂಭವು ಹರೇಕಳ ಸಂಪಿಗೆದಡಿ ಅರ್ಧನಾರೀಶ್ವರ ದೇವಸ್ಥಾನದಲ್ಲಿ ನೆರವೇರಿತು.
ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಚಿತ್ರಕ್ಕೆ ಕ್ಲಾಫ್ ಮಾಡಿದರು. ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಕೆಮರಾ ಚಾಲನೆ ಮಾಡಿದರು.
ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಸ್ವರಾಜ್ ಶೆಟ್ಟಿ ಉತ್ತಮ ಕಲಾವಿದ. ಮೊದಲ ಬಾರಿ ಕಥೆ ಚಿತ್ರಕತೆ ನಿರ್ದೇಶನದ ಜವಾಬ್ದಾರಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ನಮ್ಮ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ” ಎಂದರು.
ಬಳಿಕ ಮಾತಾಡಿದ ಪ್ರಕಾಶ್ ಪಾಂಡೇಶ್ವರ್ ಅವರು, “ಸ್ವರಾಜ್ ಅನ್ನುವ ಪ್ರತಿಭೆ ಪೂರ್ಣ ಪ್ರಮಾಣದಲ್ಲಿ ಈ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ್ದಾರೆ. ಅವರಿಗೆ ಶುಭ ಹಾರೈಕೆಗಳು” ಎಂದರು.
ಚಿತ್ರದ ನಿರ್ಮಾಪಕ ಭಾಗ್ಯರಾಜ್ ಶೆಟ್ಟಿ ಮಾತನಾಡಿ, “ಕನ್ನಡಿಗರು ಸಹಕಾರ ನೀಡಬೇಕು. ಚಿತ್ರದ ಕಥೆ ಸೊಗಸಾಗಿದ್ದು ತುಳುನಾಡಿನ ಹಲವಾರು ಕಲಾವಿದರು ಬಣ್ಣ ಹಚ್ಚಲಿದ್ದಾರೆ” ಎಂದರು.
ಚಿತ್ರ ನಿರ್ದೇಶಕ ಕಂ ನಾಯಕ ನಟ ಸ್ವರಾಜ್ ಶೆಟ್ಟಿ ಅವರು, “ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಕಾಂತಾರ ಚಿತ್ರದ ಗುರುವ ಪಾತ್ರದ ಮೂಲಕ ಕನ್ನಡಿಗರು ನನ್ನನ್ನು ಗುರುತಿಸಿದ್ದಾರೆ. ಚಿತ್ರ ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ನವಿರಾದ ಪ್ರೇಮಕಥೆಯನ್ನು ಒಳಗೊಂಡಿದೆ. ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯೂ ನನ್ನ ಮೇಲಿದ್ದು ಕನ್ನಡ ಚಿತ್ರಪ್ರೇಮಿಗಳು ಪ್ರೀತಿಯಿಂದ ನಮ್ಮನ್ನು ಬೆಳೆಸಿ” ಎಂದರು.
ನಟಿ ಶಿವಾನಿ ರೈ ಮಾತಾಡುತ್ತಾ, “ಇದು ನನ್ನ ಎರಡನೇ ಸಿನಿಮಾ ಆಗಿದ್ದು ನಾನು ತುಂಬಾ ಇಷ್ಟಪಟ್ಟು ಚಿತ್ರತಂಡ ಸೇರಿದ್ದೇನೆ. ಚಿತ್ರದ ಕಥೆ ತುಂಬಾ ಚೆನ್ನಾಗಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ನಾಯಕ ನಟ ಸ್ವರಾಜ್ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್,ನಾಯಕಿ ನಟಿ ಶಿವಾನಿ ರೈ, ನಿರ್ಮಾಪಕ ಭಾಗ್ಯರಾಜ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಸಂಕಲನಕಾರ ಗಣೇಶ್ ನೀರ್ಚಾಲ್, ಕೆಮರಾ ಮ್ಯಾನ್ ರೂಪೇಶ್ ಷಾಜಿ, ಸಂಗೀತ ನಿರ್ದೇಶಕ ವಿನೋದ್ ರಾಜ್ ಕೋಕಿಲ, ಕಲಾ ನಿರ್ದೇಶಕ ರಾಜೇಶ್, ಸಹನಿರ್ದೇಶಕ ಮಹಾನ್ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ, ರಕ್ಷಾ ರಾಜ್ ಶೆಟ್ಟಿ, ರಾಧಾಕೃಷ್ಣ, ಪ್ರತಿಮಾ ರೈ ಉಪಸ್ಥಿತರಿದ್ದರು.ಚಿತ್ರದಲ್ಲಿ “ಕಾಂತಾರ” ಚಿತ್ರದ ಬಹುತೇಕ ಕಲಾವಿದರು ಬಣ್ಣ ಹಚ್ಚಲಿದ್ದು, 20-25 ದಿನಗಳ ಕಾಲ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಾಯಕಿ ಶಿವಾನಿ ರೈ ಮೊದಲ ಕನ್ನಡ ಚಿತ್ರ “ಅಭಿರಾಮ ಚಂದ್ರ” ಇನ್ನಷ್ಟೇ ಬಿಡುಗಡೆಯಾಗಲಿದೆ.