ಪುಣೆಯ ಮಕ್ಕಳ ತಜ್ಞ ಬೇಬಿ ಫ್ರೆಂಡ್ ಪೀಡಿಯಾಟ್ರಿಕ್ನ ಮೂಲಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಪುಣೆಯ ತುಳು-ಕನ್ನಡಿಗ, ಮೂಲತಃ ಮೂಡಬಿದ್ರೆಯ ಡಾ| ಸುಧಾಕರ ಶೆಟ್ಟಿ ಅವರು 2022 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಸುಮಾರು 34 ವರ್ಷಗಳ ದೀರ್ಘಕಾಲದಿಂದ ಪುಣೆಯಲ್ಲಿ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಮಕ್ಕಳ ಡಾಕ್ಟರ್ ಎಂದೇ ಪ್ರಸಿದ್ದರು.
ನ. 1 ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕೊರೊನಾ ಸಂದರ್ಭ ಡಾ| ಸುಧಾಕರ ಶೆಟ್ಟಿ ಮತ್ತು ಅವರ ವೈದ್ಯಕೀಯ ತಂಡ ಪುಣೆ ಕಂಟೋನ್ಮೆಂಟ್ ಪರಿಸರದಲ್ಲಿ ಪಿಸಿಆರ್ ಪರೀಕ್ಷೆ, ಕೋವಿಡ್ ಐಸೋಲೇಶನ್ ವಾರ್ಡ್, ಕೋವಿಡ್ ಐಸಿಯು ಸಹಿತ ಸಾವಿರಾರು ಮಂದಿ ಕೊರೊನಾ ಪೀಡಿತರಿಗೆ ಬೆಡ್ ವ್ಯವಸ್ಥೆ, ಆಕ್ಸಿಜನ್, ತುರ್ತು ಚಿಕಿತ್ಸೆ, ಪ್ಲಾಸ್ಮಾ ವ್ಯವಸ್ಥೆ ಮಾಡುವಲ್ಲಿ ರಾತ್ರಿ – ಹಗಲೆನ್ನದೆ ರೋಗಿಗಳ ಸೇವೆಗೈದು ಕೊರೊನಾ ವಾರಿಯರ್ಸ್ ಆಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ತುಳು – ಕನ್ನಡಿಗರು ಸಹಿತ ಸುಮಾರು 10,000 ಕ್ಕಿಂತಲೂ ಹೆಚ್ಚಿನ ಕೊರೊನಾ ಪೀಡಿತರಿಗೆ ಧೈರ್ಯ ತುಂಬಿ ಹೋಂ ಕ್ವಾರಂಟೈನ್ ಮಾಡಿಸಿ ಗುಣಮುಖರಾಗುವಂತೆ ಮಾಡಿದ್ದರು.
ಪ್ರಸ್ತುತ ಸುಧಾಕರ್ ಶೆಟ್ಟಿಯವರ ನೇತೃತ್ವದಲ್ಲಿ ಕಟೀಲ್ ಮೊಬೈಲ್ ಪಿಡಿಯಾಟ್ರಿಕ್ ಕ್ಲಿನಿಕ್ ಎಂಬ ಉಚಿತ ಸುಸಜ್ಜಿತ ಮಕ್ಕಳ ಸಂಚಾರಿ ಕ್ಲಿನಿಕ್ವೊಂದು ದಕ್ಷಿಣ ಕನ್ನಡದ ಮೂಡಬಿದ್ರೆಯಲ್ಲಿ ಕೇಂದ್ರ ಸ್ಥಾನವನ್ನು ಹೊಂದಿ ಶುಭಾರಂಭಗೊಳ್ಳಲಿದೆ. ಪುಣೆ ಕಂಟೋನ್ಮೆಂಟ್ ಪರಿಸರದಲ್ಲಿ ಸುಮಾರು ಆರು ಹಾಸ್ಪಿಟಲ್ಗಳಲ್ಲಿ ಕೊರೊನಾ ವಾರಿಯರ್ಸ್ ಆಗಿ ದುಡಿದ ಇವರ ಸೇವೆಯನ್ನು ಪರಿಗಣಿಸಿ ಕೇಂದ್ರ ರಕ್ಷಣಾ ಸಚಿವಾಲಯವು ಇವರಿಗೆ ರಕ್ಷಾ ಮಂತ್ರಿ ಅವಾರ್ಡ್ ನೀಡಿ ಗೌರವಿಸಿದೆ. ಡಾ| ಸುಧಾಕರ್ ಶೆಟ್ಟಿ ಅವರು ಬೆಂಗಳೂರಿನ ಪ್ರತಿಷ್ಠಿತ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ನಲ್ಲಿ ಎಂ.ಬಿ.ಬಿ.ಎಸ್. ಉತ್ತೀರ್ಣರಾಗಿ, ದಾವಣಗೆರೆಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಿಂದ ಎಂ.ಡಿ ಪೀಡಿಯಾಟ್ರಿಕ್ ಮತ್ತು ಡಿಸಿಎಚ್ ಜೆಜೆಎಂಸಿಯನ್ನು ಪಡೆದಿದ್ದಾರೆ. (Institute of management hospital management diploma(DHA)) ಕೊಯಂಬತ್ತೂರಿನ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಆಸ್ಪತ್ರೆ ನಿರ್ವಹಣೆಯ ಡಿಪ್ಲೊಮಾ ಪೂರ್ತಿಗೊಳಿಸಿದ್ದಾರೆ. ಪುಣೆಯ ಕ್ಯಾಂಪ್ ಎಂಜಿ ರೋಡ್ನಲ್ಲಿ ಸ್ವಂತ ಖಾಸಗಿ ಬೇಬಿ ಫ್ರೆಂಡ್ ಪೀಡಿಯಾಟ್ರಿಕ್ ಕ್ಲಿನಿಕ್ ನ್ನು ಹೊಂದಿರುವ ಅವರು 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪುಣೆಯ ಕೆಇಎಂ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕೂಡಾ ಸೇವೆ ಸಲ್ಲಿಸಿದ್ದರು. ಕಳೆದ 34 ವರ್ಷಗಳಿಂದ ಪುಣೆ ಕಂಟೋನ್ಮೆಂಟ್ ಆಸ್ಪತ್ರೆ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆಯಲ್ಲಿ ಕೂಡಾ ಸೇವೆ ಸಲ್ಲಿಸುತ್ತಿದ್ದಾರೆ.