


ಹೆತ್ತವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಸೇವಾ ದುರೀಣ ಆನಂದ ಎಂ ಶೆಟ್ಟಿ ಅವರು ಇಂದು ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ. ದಿವಂಗತ ಮೋನಪ್ಪ ಶೆಟ್ಟಿ ಹಾಗೂ ದಿವಂಗತ ಲಕ್ಷ್ಮಿ ಶೆಟ್ಟಿ ದಂಪತಿಗಳ ಸುಪುತ್ರರಾಗಿ ತೋನ್ಸೆಯ ಪ್ರತಿಷ್ಠಿತ ಬಂಟ ಕುಟುಂಬದಲ್ಲಿ ಜನಿಸಿದ ಆನಂದ ಶೆಟ್ಟಿಯವರು ಯಶಸ್ವೀ ಉದ್ಯಮಿಯಾಗಿ ವ್ಯವಹಾರದಲ್ಲಿ ಬಂದ ಲಾಭದಲ್ಲಿ ಸಮಾಜಕ್ಕೆ ಏನಾದರೂ ಮರಳಿ ನೀಡಬೇಕು ಎಂಬ ಉದ್ದೇಶದೊಂದಿಗೆ ಮುನ್ನಡೆಯುತ್ತಿರುವ ಅವರ ಚಿಂತನೆ ಅನೇಕರಿಗೆ ಮಾದರಿಯಾಗಿದೆ. ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ, ಸಾವಿರಾರು ಕುಟುಂಬಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿರುವ ಆನಂದ ಎಂ ಶೆಟ್ಟಿ ಅವರು ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡ ಕುಟುಂಬಗಳ ಸಂಕಷ್ಟಗಳಿಗೆ ಸ್ಪಂದನೆ, ಸಾಮಾಜಿಕ ಸಂಘಟನೆಗಳಿಗೆ ಪ್ರೋತ್ಸಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.





ಅವರ ಸರಳ ವ್ಯಕ್ತಿತ್ವ, ವಿನಯಶೀಲತೆ, ಸಹೃದಯತೆ ಮತ್ತು ಸೇವಾ ಮನೋಭಾವವು ಅವರನ್ನು ಜನಸ್ನೇಹಿ ಉದ್ಯಮಿಯನ್ನಾಗಿ ರೂಪಿಸಿದೆ. ಸಮಾಜದ ನೋವು ನಲಿವುಗಳಿಗೆ ಸದಾ ಸ್ಪಂದಿಸುವ ಅವರು, ಅಗತ್ಯವಿರುವವರಿಗೆ ನೆರವಾಗುವ ಮೂಲಕ ಮಾನವೀಯ ಮೌಲ್ಯಗಳ ಜೀವಂತ ಪ್ರತೀಕವಾಗಿದ್ದಾರೆ. ವ್ಯವಹಾರದಲ್ಲಿ ಯಶಸ್ಸು ಮತ್ತು ಸಮಾಜ ಸೇವೆಯಲ್ಲಿ ಸಾರ್ಥಕತೆ ಎರಡನ್ನೂ ಸಮತೋಲನದಿಂದ ಸಾಧಿಸಿರುವ ಆನಂದ ಎಂ ಶೆಟ್ಟಿ ಅವರು ಯುವ ಉದ್ಯಮಿಗಳಿಗೆ ಪ್ರೇರಣೆಯ ಶಕ್ತಿಯಾಗಿದ್ದಾರೆ. ಆನಂದ ಶೆಟ್ಟಿ ಅವರ ವ್ಯಕ್ತಿತ್ವದ ವಿಶೇಷತೆ ಎಂದರೆ, ಅವರು ಸೇವೆಯನ್ನು ಕೀರ್ತಿ ಅಥವಾ ಪ್ರಚಾರಕ್ಕಾಗಿ ಮಾಡುವುದಿಲ್ಲ. ನೆರವಿಗಾಗಿ ಬರುವ ಪ್ರತಿಯೊಬ್ಬರ ನೋವಿನ ಹಿಂದೆ ಇರುವ ಮಾನವೀಯತೆಯನ್ನು ಅರಿತು ಸ್ಪಂದಿಸುವ ಗುಣ ಅವರದ್ದು. ಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸಿ, ಅವರ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಸಾಧನೆ ಎಂಬ ನಂಬಿಕೆಯಿಂದ ಅವರು ಸೇವೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಧರ್ಮಪತ್ನಿ ಶಶಿರೇಖಾ ಶೆಟ್ಟಿ, ಸುಪುತ್ರರಾದ ಪ್ರವೀರ್ ಶೆಟ್ಟಿ ಹಾಗೂ ಅದೀಶ್ ಶೆಟ್ಟಿಯವರೊಂದಿಗೆ ಸುಖಿ ಜೀವನವನ್ನು ನಡೆಸುತ್ತಿರುವ ಆನಂದ ಶೆಟ್ಟಿಯವರಿಗೆ ಆಯುಷ್ಯ, ಆರೋಗ್ಯ, ಸುಖ ಸಂಪತ್ತನ್ನು ಭಗವಂತ ಕರುಣಿಸಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.





























































































































