


ರಾಮಾಭಿವಂದ್ಯ ಯಕ್ಷ ಸೇವಾ ಬಳಗ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜಂಟಿ ಆಯೋಜನೆಯಲ್ಲಿ ಪ್ರಭು ಶ್ರೀರಾಮಚಂದ್ರ ದೇವರ ಅವತಾರದ ಆರಂಭದಿಂದ ನಿರ್ಯಾಣದವರೆಗಿನ ಸಂಪೂರ್ಣ ಶ್ರೀರಾಮ ಚರಿತ್ರೆ, ಶ್ರೀರಾಮಕಥಾ ಹೃದಯಂ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ 9ನೇ ಪ್ರಸ್ತುತಿ ವಾಲಿ ಮೋಕ್ಷ ಮತ್ತು ಸನ್ಮಾನ ಕಾರ್ಯಕ್ರಮವು ಜೂನ್ 14 ರಂದು ಅಪರಾಹ್ನ 2.15ರಿಂದ ವಿದ್ಯಾವಿಹಾರ್ ಪಶ್ಚಿಮದ ಗಾವ್ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ವೇದಮೂರ್ತಿ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿಯವರ ಸಂಪೂರ್ಣ ಸಹಕಾರದೊಂದಿಗೆ ನಡೆಯಲಿರುವ ಈ ಸಮಾರಂಭದಲ್ಲಿ ಕಳೆದ 5 ದಶಕಗಳಿಂದ ಮುಂಬಯಿ ಮಹಾನಗರದಲ್ಲಿ ಕಲಾ ಸೇವೆಗೈಯ್ಯುತ್ತಿರುವ ಆನಂದ ಶೆಟ್ಟಿ ಇನ್ನಾ ಅವರನ್ನು ಗೌರವಿಸಲಾಗುವುದು.



ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವೇದಮೂರ್ತಿ ಹರಿದಾಸ ಭಟ್ ಪೆರ್ಣಂಕಿಲ ಅವರು ವಹಿಸಲಿದ್ದು, ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿಯವರ ಗೌರವ ಉಪಸ್ಥಿತಿಯಿರಲಿದೆ. ಮುಖ್ಯ ಅತಿಥಿಗಳಾಗಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ಐಕಳ, ವೆಲ್ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ರವೀಂದ್ರನಾಥ ಭಂಡಾರಿ ಹಾಗೂ ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾ ಬಾಳಿಕೆ ಪಾಲ್ಗೊಳ್ಳಲಿದ್ದಾರೆ. ರಾಮಾಯಣ ಕಥಾಮೃತದ ವಾನರ ವೈಭವವು ಪ್ರಸಿದ್ಧ ಭಾಗವತರದ ಮಧುಕರ ಹೆಗ್ಡೆ ಮಡಾಮಕ್ಕಿ, ಜಯಲಕ್ಷ್ಮೀ ದೇವಾಡಿಗ, ಮಹೇಂದ್ರ ಶೆಟ್ಟಿ ಹಾಗೂ ಮೋಹನದಾಸ ರೈ ಇವರಿಂದ ನಡೆಯಲಿರುವುದು. ಕಲಾಭಿಮಾನಿಗಳು, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಲಾವಿದರೂ, ಕಲಾ ಸಂಘಟಕರಾದ ವಾಸು ಶೆಟ್ಟಿ ಮಾರ್ನಾಡು ಹಾಗೂ ಸುರೇಶ್ ಶೆಟ್ಟಿ ನಂದ್ರೊಳ್ಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























































































































