
ಇಡೀ ಜಗತ್ತೇ ದಾವಂತದಲ್ಲಿ ಮುಂದೆ ಹೋಗುತ್ತಾ ಇದೆ. ಅಗತ್ಯತೆಯನ್ನು ಪೂರೈಸಲು ಅನಿವಾರ್ಯವಾಗಿ ಎಲ್ಲರೂ ದುಡ್ಡಿನ ಹಿಂದೆ ಓಡುವವರೆ!! ಅದರ ಜೊತೆ ದೈವ ದೇವರು ಎಂಬ ಭಯ ಭಕ್ತಿ ಈಗೀಗ ಸ್ವಲ್ಪ ಹೆಚ್ಚೇ ಆಗಿದೆ. ಇದು ಕಾಂತರ ಚಿತ್ರದ ಎಫೆಕ್ಟ್ ಅಂದರೆ ಹೆಚ್ಚಾಗದು. ಪ್ರಸ್ತುತ ಸಂಬಂಧದೊಳಗೂ ಮನುಷ್ಯ ಮನುಷ್ಯರ ನಡುವಿನ ಆಪ್ತತೆಗಿಂತ ದೈವದೇವರಲ್ಲಿ ಮಾತಾಡುವುದು ಹೆಚ್ಚಾಗಿದೆ. ಅವ್ಯಕ್ತ ಶಕ್ತಿಯಲ್ಲಿ ವಿಶ್ವಾಸ ಗಾಢವಾಗುತ್ತಿದೆ. ಒಂದು ಕಾಲದಲ್ಲಿ ವಿದ್ಯಾಭ್ಯಾಸವಿರದ ಹಳ್ಳಿಯ ಮಂದಿ ಮಾತ್ರ ನಂಬುತ್ತಿದ್ದ ಕೆಲವರು ಬರೀ ಮೂಢನಂಬಿಕೆ ಎಂದು ಮೂಗು ಮುರಿದಿದ್ದ ಸತ್ಯ ಈಗ ವಿದ್ಯಾವಂತರ ಮೂಲ ನಂಬಿಕೆಯಾಗಿ ಬೆಳೆದಿದೆ. ಇದು ನಿಜಕ್ಕೂ ಸಂತೋಷದಾಯಕ ಬೆಳವಣಿಗೆ. ನಾನು ಮಂಗಳೂರಿಗೆ ಬಂದವ ಒಂದು ತಿಂಗಳು ಇದ್ದು ಮತ್ತೆ ವಾಪಾಸ್ ನೈಜೀರಿಯಾಕ್ಕೆ ಬಂದೆ. ಒಂದು ತಿಂಗಳಲ್ಲಿ ಶರವು ಶ್ರೀ ಮಹಾಗಣಪತಿ, ಕದ್ರಿ ಶ್ರೀ ಮಂಜುನಾಥ, ಶ್ರೀ ಮಂಗಳಾದೇವಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಕಟೀಲು ಶ್ರೀ ಉಳ್ಳಾಲ್ತಿ, ಕುಡುಪು ಶ್ರೀ ಅನಂತ ಪದ್ಮನಾಭ, ವಾಮಂಜೂರು ಶ್ರೀ ಅಮೃತೇಶ್ವರ, ತಿರುವೈಲು ಶ್ರೀ ವಿಷ್ಣುಮೂರ್ತಿ, ಕಲ್ಲುಡೇಲು ಶ್ರೀ ಸದಾಶಿವ, ಪೆರ್ಮಯಿ ಶ್ರೀ ಸದಾಶಿವ, ಉರ್ವಾ ಸ್ಟೋರ್ ಶ್ರೀ ಮಹಾಗಣಪತಿ, ಆನೆಗುಡ್ಡೆ ಶ್ರೀ ವಿನಾಯಕ, ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಾನ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ, ಉಡುಪಿ ಶ್ರೀಕೃಷ್ಣ, ಕಾಪು ಮಾರಿಯಮ್ಮ, ಬಪ್ಪನಾಡಿನ ಶ್ರೀ ದುರ್ಗೆ, ಅಡ್ಯಾರು ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಪಕ್ಷಿ ಕೃಷ್ಣನ ಸನ್ನಿಧಾನ, ಮಾಣುರು ಸುಬ್ರಾಯ, ಗುರುಪುರ ವೆಂಕಟರಮಣ, ಮಹಾಮಾಯಿ ಇಷ್ಟೆಲ್ಲಾ ದೇವಸ್ಥಾನಗಳ ದೇವರ ಸಂದರ್ಶನ ಮಾಡಿದೆ. ಜೊತೆಗೆ ನನ್ನ ಪ್ರೀತಿಯ ಹವ್ಯಾಸಗಳಾದ ಭಜನೆ ಹಾಡಿದೆ, ಯಕ್ಷಗಾನ ಬಯಲಾಟ ನೋಡಿದೆ, ಕದ್ರಿ ರಥೋತ್ಸವದಲ್ಲಿ ಭಾಗವಹಿಸಿದೆ, ಕೋಲಕ್ಕೆ ಹೋದದ್ದು, ವಾರದ ತಾಳಮದ್ದಳೆ ಕೂಟದಲ್ಲಿ ಭಾಗವತಿಕೆ ಮಾಡಿದ್ದೂ ಆಯಿತು. ಮತ್ತೆ ನಾನು ಹಲವು ವರ್ಷಗಳಿಂದ ಬರೆಯುತ್ತಿದ್ದ ಕೆಲವಷ್ಟು ತುಳು ಲೇಖನಗಳನ್ನು ಒಂದು ಪುಸ್ತಕದ ರೂಪದಲ್ಲಿ ತಯಾರು ಮಾಡಿ “ಕಡ್ಲೆ ಬಜಿಲ್” ಎಂಬ ಶೀರ್ಷಿಕೆ ಕೊಟ್ಟು ಕದ್ರಿ ಶ್ರೀ ಮಂಜುನಾಥನ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಯೂ ಮಾಡಿ ಆಯಿತು. ಇಷ್ಟೇ ಅಲ್ಲದೆ ನನ್ನ ಅಭಿಮಾನಿಗಳ ಆಶಯದ ಮೇರೆಗೆ ಒಂದು ಹರಿಕಥೆಯನ್ನು ಹರಿಕೃಪೆಯಿಂದ ಯಶಸ್ವಿಯಾಗಿ ನಡೆಸಿಕೊಟ್ಟೆ. ಇದೆಲ್ಲವನ್ನೂ ಗಮನಿಸಿದಾಗ ಎಲ್ಲಾ ಕ್ಷೇತ್ರಗಳಲ್ಲೂ ಜನ ಸಂದೋಹವಿದೆ ಮತ್ತು ಜನರೂ ಸೇರುತ್ತಿದ್ದಾರೆ. ಹಾಗೆಯೇ ಕೋಲ ನೇಮಗಳಲ್ಲಿ ಯುವಜನಗಳ ಸಾಗರವೇ ಸೇರುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆಯೇ.

ಆದರೆ ಅದರ ಜೊತೆ ಹೆಚ್ಚಿನ ಜನರು ದೇವಸ್ಥಾನಗಳಲ್ಲಿ ಭಕ್ತಿಯ ಪ್ರಾರ್ಥನೆಗಳಿಗಿಂತ ಮೊಬೈಲ್ ಗಳಲ್ಲಿ ದೇವರ ಬಲಿಯ ಚಿತ್ರೀಕರಣ ಮಾಡುತ್ತಿದ್ದುದು ಒಂದೆಡೆಯಾದರೆ, ಕೆಲವೆಡೆ ತಮ್ಮ ಒಡವೆ ವಸ್ತ್ರಗಳ ಪ್ರದರ್ಶನ ಮಾಡುವ ಕೆಲವಷ್ಟು ಮಂದಿಯನ್ನು ಕಂಡೆ. ಅದೇ ರೀತಿ ದೈವ ದೇವರ ಮೇಲೆ ಸ್ಪರ್ಧೆಗೆ ಬಿದ್ದ ಹಾಗೆ ಒಪ್ಪಿಸಿದ ಬಗೆ ಬಗೆಯ ಬಂಗಾರ, ಹವಳ, ಪಚ್ಛೆ, ಮುತ್ತು ರತ್ನಗಳ ಹಾರ ಆಭರಣಗಳಿಂದಾಗಿ ಕೆಲ ವರ್ಷಗಳ ಹಿಂದಿನ ಆ ದೇವರ ಬಿಂಬರೂಪವೇ ಮರೆಯಾಗಿ ಕೇವಲ ಬಂಗಾರ ಬೆಳ್ಳಿ ಮಾತ್ರ ಕಾಣುತ್ತಿರುವುದನ್ನು ಕಂಡೆ. ಇದು ನಮ್ಮ ಶ್ರೀಮಂತಿಕೆಯ ಪ್ರದರ್ಶನವೋ ಅಥವಾ ನಮ್ಮ ಎದುರು ದೇವರು ಬರೀ ಶಿಲೆಯಾಕೆ ಎಂಬ ಭಾವದಿಂದಲೋ ಅಥವಾ ನಿಜ ಭಕ್ತಿಯ ಪರಾಕಾಷ್ಠೆಯೋ ಎಂಬ ಗೊಂದಲವಾದದ್ದು ಮಾತ್ರ ನಿಜ. ಕಾರಣ ದೇವರನ್ನು ಪೂರ್ತಿ ಬಂಗಾರದಿಂದ ಮುಚ್ಚಿಯೇ ಬಿಟ್ಟಿದ್ದಾರೆ. ಇನ್ನು ದೇವಸ್ಥಾನದ ಹೊರಗಡೆಯೂ ಸಂಕೋಲೆಯಂತಹ ಬಂಗಾರದ ಚೈನು, ದಪ್ಪ ದಪ್ಪದ ಬ್ರಾಸ್ ಲೆಟ್, ಕಡ, ಬೆರಳು ತುಂಬಾ ಉಂಗುರ ಇಟ್ಟವರಿಗೆ ದೇವರ ದಲ್ಲಾಳಿಗಳೆಂದು (ಅವರು ಭಾವಿಸಿದ) ಕೆಲವು ದೇವಳದ ಪೂಜಾರಿಗಳು ಬಾಕಿಯವರನ್ನು ಹಿಂದೆ ತಳ್ಳಿ ಅವರಿಗಾಗಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸುವುದನ್ನೂ ಕಂಡೆ!. ಇನ್ನು ಕೆಲವೆಡೆ ದೇವರ ಅಲಂಕಾರದ ನೆವನ ಹೇಳಿ ಸರಿಯಾಗಿ ಮಧ್ಯಾಹ್ನದ ಹೊತ್ತಿಗೆ ಗರ್ಭಗುಡಿಯ ಮುಂದಿನ ಪರದೆ ಎಳೆದು ಸುಮಾರು ಅರ್ಧ ಮುಕ್ಕಾಲು ಗಂಟೆಗೂ ಹೆಚ್ಚು ಹೊತ್ತು ದೇವರ ದರ್ಶನವೇ ಇಲ್ಲ!. ಈ ಕಾರಣದಿಂದ ದೇವಸ್ಥಾನದ ಒಳಗೆ ಭಕ್ತರು ಹೆಚ್ಚಾಗಿ ಅನಾವಶ್ಯಕ ನೂಕು ನುಗ್ಗುಲು ಕೂಗಾಟ ಕಿರುಚಾಟ!.
ಶಾಂತಿಗಾಗಿ ದೇವರ ಬಳಿ ಹೋದರೆ ಬ್ರಾಂತಿ ಹಿಡಿಸುವ ಈ ಮಂದಿಯನ್ನೂ ಕಂಡೆ. ಇದನ್ನು ಕಂಡು ನನಗನಿಸಿದ್ದು ಇಷ್ಟೇ!. ನಮ್ಮ ಹಿರಿಯರು ಸರ್ವಾಂತರಯಾಮಿಯಾದ ಭಗವಂತನನ್ನು ಪ್ರಕೃತಿಯ ಅಮೂಲ್ಯ ವಸ್ತುವಾದ ಶಿಲೆಯಲ್ಲಿ ಕೆತ್ತಿ ಮೂರ್ತಿಯಾಗಿಸಿ ಪೂಜಿಸಿದರು. ಅವರ ಉದ್ದೇಶ ಇಷ್ಟೇ. ಭಗವಂತ ಯಾವತ್ತೂ ಬಡವನಾಗಿರಲು ಅಸಾಧ್ಯ. ಅದೇ ರೀತಿ ಭಗವಂತನಿಗೆ ಬಡವ ಬಲ್ಲಿದ ಎಂಬ ಭೇದವೂ ಇಲ್ಲ. ಹಾಗಾಗಿ ಎಲ್ಲರೂ ಶಿಲೆಯೊಳಗಿನ ಭಗವಂತನನ್ನು ಕಂಡು ತಮ್ಮ ಮನದೊಳಗೆ ಅಂತರ್ಯಾಮಿಯಾದ ಭಗವಂತನಿಗೆ ಶರಣಾಗಲಿ ಎಂಬುದು. ಆತನು ಯಾವುದೇ ಬಂಗಾರ ವಜ್ರ ವೈಡೂರ್ಯಗಳಿಗಿಂತಲೂ ಮಿಗಿಲಾದ ಸೌoದರ್ಯ ಹೊಂದಿದ ಲೋಕ ಮೋಹಕ. ಆದರೆ ಮೂರ್ಖರಾದ ನಾವು ಈಗ ನಮ್ಮ ಪ್ರತಿಷ್ಠೆಗಾಗಿ ಅಂತಸ್ತಿಗಾಗಿ ಆತನನ್ನೂ ನಾವು ಶ್ರೀಮಂತವಾಗಿಸಿದೆವು ಎಂಬ ಭ್ರಮೆಯಲ್ಲಿದ್ದೇವೆ. ಇದು ವಿಪರ್ಯಾಸವಾದರೂ ತಿಳಿಯಬೇಕಾದ ಸತ್ಯ. ಆದರೆ ಈ ಬೆಳವಣಿಗೆ ನಿಜವಾದ ಭಕ್ತಿಯಿಂದ ಬರುವ ಬಡವನಿಗೆ ದೇವರನ್ನು ಕಾಣಲು ಬಹಳ ಕಷ್ಟ ಮತ್ತು ಮುಜುಗರ ಆಗುವ ರೀತಿ ಆಗಿ ಬಿಟ್ಟಿದೆ. ಕಾರಣ ಬಡವ ಕಲ್ಲಲ್ಲಿರುವ ಪರಮಾತ್ಮನನ್ನು ತನ್ನ ಪರಮಾಪ್ತ ಎಂದು ತಿಳಿದು ಆತನನ್ನು ಕಲ್ಲಿನಲ್ಲಿ ಕಂಡು ಶರಣು ಹೋಗಿದ್ದ. ಆದರೆ ಈಗಂತೂ ಶ್ರೀಮಂತ ಭಕ್ತರು ದೇವರನ್ನು ಬಂಗಾರದಿಂದಲೂ ದೈವಗಳನ್ನು ಬೆಳ್ಳಿಯಿಂದಲೂ ಮುಚ್ಚಿ ಬಿಟ್ಟಿದ್ದಾರೆ. ಒಟ್ಟಾಗಿ ಶ್ರೀಮಂತ ಭಕ್ತರ ಭಕ್ತಿಯ ಶ್ರೀಮಂತಿಕೆಯಿಂದ ಭಗವಂತನ ಖರೀದಿ ನಡೆದಿದೆಯೋ ಎಂದು ಭಾಸವಾದದ್ದು ಮಾತ್ರ ನಿಜ.
ಇದರ ಜೊತೆ ಇನ್ನೊಂದು ವಿಚಾರ : ನಮ್ಮ ಊರು ಎಲ್ಲದರಲ್ಲೂ ಅಚ್ಚುಕಟ್ಟು. ನಮ್ಮ ಆರಾಧನೆಯ ಶಿಸ್ತು ವೈಭವ ಬೇರೆಲ್ಲೂ ಕಾಣಲು ಅಸಾಧ್ಯ. ನಾವು ಒಂದು ಕಾರ್ಯಕ್ರಮವನ್ನು ಯಶಸ್ವೀಗೊಳಿಸಲು ಏನು ಬೇಕಾದರೂ ಮಾಡಲೂ ಸಿದ್ಧ. ಆದರೆ ಮುಖ್ಯವಾಗಿ ನಮ್ಮ ಮಂಗಳೂರಿನ ರಸ್ತೆಗಳನ್ನು ಗಮನಿಸಿದಾಗ ಅಗೆಯದೆ ಉಳಿದ ರಸ್ತೆಗಳೇ ಇಲ್ಲ. ಎಷ್ಟೆಷ್ಟೋ ಕೋಟಿ ನಮ್ಮ ತೆರಿಗೆಯ ಹಣ ಸುರಿದು ಕಾಂಕ್ರೀಟು, ಟಾರು ಬಳಸಿ ಮಾಡಿದ ಈ ರಸ್ತೆಗಳನ್ನು ಒಂದೊಂದು ಬಾರಿ ಅಲ್ಲ ವರ್ಷಕ್ಕೆ ಎರಡು ಮೂರು ಬಾರಿ ಅಗೆಯುವುದು ಮುಚ್ಚುವುದು ನಡೆದೇ ಇದೆ!. ಇದು ಇಡೀ ಮಂಗಳೂರಿಗರಿಗೆ ನಾಚಿಕೆ ಹೇಸಿಗೆ ಹುಟ್ಟಿಸುವಂತಿದೆ. ನಗರದ ಮುಖ್ಯ ರಸ್ತೆಗಳು ಮುಖ್ಯವಾಗಿ ಜನರಿಗೆ ತುರ್ತಾಗಿ ಅಗತ್ಯವಾದ ಕದ್ರಿಯ ಸಿಟಿ, ತೇಜಸ್ವಿನಿ ಆಸ್ಪತ್ರೆಗಳ ಮುಂಭಾಗ ಇನ್ನೂ ಅನೇಕ ಕಡೆ (ನಾನು ಗಮನಿಸಿದ್ದು) ಕಳೆದ ಒಂದು ತಿಂಗಳಿಂದ ಅಗೆದೇ ಇದೆ. ಆ ಗುಂಡಿಗಳು ಬಾಯಿ ತೆರೆದು ಏನನ್ನೋ ನಿರೀಕ್ಷಿಸುತ್ತಿದೆ!. ನಮ್ಮ ಆರಾಧನೆಯಲ್ಲಿನ ಶಿಸ್ತು ಅಚ್ಚುಕಟ್ಟುತನ ವರ್ಷವಿಡೀ ಈ ಮಹಾನಗರಪಾಲಿಕೆಯ ಬೇಜವಾಬ್ದಾರಿಯ ಕಾರ್ಯ ಮಾಡುವವರ ಮೇಲೆ ಯಾಕೆ ಇಲ್ಲ?!. ಈ ವಿಷಯದಲ್ಲಿ ನಮ್ಮ ತಾಳ್ಮೆ ಹೆಚ್ಚಾಯ್ತು. ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ.
ಬರಹ : ಶರತ್ ಶೆಟ್ಟಿ ಪಡುಪಳ್ಳಿ





















































































































