
ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕೊಡಾಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಕ್ಷತ್ರ ಸಭಾಭವನವನ್ನು ಜನವರಿ 22ರಂದು ಲೋಕಾರ್ಪಣೆಗೊಳಿಸಲಾಯಿತು. ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿ ಗುತ್ತು ಅವರು ದೀಪ ಬೆಳಗಿಸುವುದರ ಮೂಲಕ ಸಭಾಭವನ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಮಾಣಿ ಮೈಸೂರು ರಸ್ತೆ ಮತ್ತು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸ್ಪಂದಿಸುವ ಮಾಣಿ ಗ್ರಾಮವು ಭವಿಷ್ಯದಲ್ಲಿ ಪ್ರಮುಖ ಕೇಂದ್ರವಾಗಲಿದೆ. ಇಂತಹ ಮಾಣಿ ಕೊಡಾಜೆ ಭಾಗದಲ್ಲಿ ನಿರ್ಮಿಸಿರುವ ನಕ್ಷತ್ರ ಸಭಾಭವನವು ಜನರಿಗೆ ಅನುಕೂಲವಾಗಲಿದೆ. ದಿಲೀಪ್ ಶೆಟ್ಟಿ ಅವರ ಉದ್ಯಮದ ಯಶಸ್ಸಿನ ಹಿಂದೆ ಅವರ ಪತ್ನಿ ಸುಲೋಚನಾ ಅವರ ಪಾತ್ರವಿದೆ ಎಂದರು. ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ಸಾಮಾನ್ಯ ಜನರು ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ನಡೆಸಲು ನಕ್ಷತ್ರ ಸಭಾಭವನ ಸೂಕ್ತವಾಗಿದೆ. ಸಭಾಭವನದ ಮಾಲೀಕ ದಿಲೀಪ್ ಶೆಟ್ಟಿ ಅವರು ಕಷ್ಟದ ಜೀವನವನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಜನಸಾಮಾನ್ಯರು ಈ ಸಭಾಭವನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಸೀಮಂತ ಶಾಸ್ತ್ರ, ಜನುಮ ದಿನ ಆಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಈ ಸಭಾಭವನದಲ್ಲಿ ಆಚರಿಸಬಹುದಾಗಿದೆ. ಈ ನಕ್ಷತ್ರ ಧ್ರುವ ನಕ್ಷತ್ರವಾಗಿ ಪ್ರಸಿದ್ದಿ ಪಡೆಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಸಮಾಜಸೇವಕ ಪ್ರವೀಣ್ ಶೆಟ್ಟಿ ಪುತ್ತೂರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಪೆರಾಜೆಯ ಗುಡ್ಡೆ ಚಾಮುಂಡಿ ದೈವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಶ್ರೀಕಾಂತ್ ಆಳ್ವ, ಕೊಡಾಜೆ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ರಫೀಕ್ ಹಾಜಿ ಸುಲ್ತಾನ್, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟು ಗುತ್ತು, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಅನ್ವರ್ ಖಾಸಿಂ, ಬಂಟ್ವಾಳ ಮುಡೂರು ಪಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಪಿಯುಶ್ ಎಲ್ ರೋಡ್ರಿಗಸ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.


ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿ ವಂದಿಸಿದರು. ಸೇವಂತಿಕ ಪ್ರಕಾಶ್ ರೈ ಪ್ರಾರ್ಥಿಸಿದರು. ತಂರ್ಜಿಗುತ್ತು ಸುಜಾತ ದಿನೇಶ್ ಶೆಟ್ಟಿ, ತಂರ್ಜಿಗುತ್ತು ಸುದೀಪ್ ಕುಮಾರ್ ಶೆಟ್ಟಿ, ತಂರ್ಜಿಗುತ್ತು ಪ್ರದೀಪ್ ಶೆಟ್ಟಿ, ಸಂಜೀವ ರೈ ಸಾಲ್ಮರ ಮುದ್ದುಡಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು. ಸಭಾಂಗಣದ ಮಾಲಕರಾದ ತಂರ್ಜಿಗುತ್ತು ದಿಲೀಪ್ ಶೆಟ್ಟಿ, ಕಾಡೂರು ಗುತ್ತು ಸುಲೋಚನಾ ಡಿ ಶೆಟ್ಟಿ, ಮಾಸ್ಟರ್ ಧಸ್ಮಿತ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸಭಾಭವನದ ಉದ್ಘಾಟನೆ ಪ್ರಯುಕ್ತ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷ’ಗಾನ’ ವೈಭವ ನಡೆಯಿತು. ಭರತರಾಜ್ ಶೆಟ್ಟಿ ಸಿದ್ದಕಟ್ಟೆ, ಶ್ರೇಯ ಆಚಾರ್ಯ ಪುತ್ತೂರು ಭಾಗವತಿಗೆ ಮಾಡಿದರು. ರೋಹಿತ್ ಉಚ್ಚಿಲ ಅವರು ಚೆಂಡೆ, ಶ್ರೀಧರ್ ವಿಟ್ಲ ಅವರು ಮದ್ದಳೆ ಹಾಗೂ ನಿಶ್ವತ್ ಜೋಗಿ ಅವರು ಚಕ್ರತಾಳ ಬಾರಿಸಿದರು.



















































































































