ವಸತಿ ಹಾಗೂ ವಸತಿಯೇತರ ಉದ್ದೇಶಗಳಿಗೆ ಜಮೀನಿನ ಭೂಪರಿವರ್ತನೆಗಾಗಿ ಭೂ ಮಾಲೀಕರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ ನಂತರ, ಅದು ತಾಂತ್ರಿಕ ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಕಚೇರಿಗೆ ಕಳುಹಿಸಲಾಗುತ್ತಿತ್ತು. ಆ ಹಂತಕ್ಕೆ ಮುನ್ನ ಲೋಕೋಪಯೋಗಿ, ಕರಾವಳಿ ನಿಯಂತ್ರಣ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ನಿರಾಪೇಕ್ಷಣ ಪತ್ರಗಳನ್ನು ಪಡೆಯಬೇಕಾಗಿ ಬರುವುದು ವಿಳಂಬಕ್ಕೆ ಕಾರಣವಾಗುತ್ತಿತ್ತು. ವಿಶೇಷವಾಗಿ, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಟೌನ್ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಹಾದು ಹೋಗುವುದರಿಂದ ‘ರಸ್ತೆ ಭೂ ಗಡಿ’ ಮತ್ತು ‘ಕಟ್ಟಡ ರೇಖೆ’ಗಳ ಮಧ್ಯೆಯ ಅಂತರವನ್ನು ನಿಖರವಾಗಿ ನಿಗದಿಪಡಿಸುವಲ್ಲಿ ಗೊಂದಲಗಳು ಉಂಟಾಗುತ್ತಿದ್ದು, ಅರ್ಜಿಗಳ ಅನುಮೋದನೆ ವಿಳಂಬವಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ ಹಾಗೂ ಆನಗಳ್ಳಿ ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯ್ಕ್ ಅವರು ಮಾಜಿ ಸಂಸದ ಜೆ.ಪಿ ಹೆಗ್ಡೆಯವರ ಗಮನಕ್ಕೆ ತಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಜೆ.ಪಿ. ಹೆಗ್ಡೆಯವರು ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಅಭಿಯಂತರರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಆಯುಕ್ತರು ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಂಡರು. ಸಭೆಯ ಬಳಿಕ, ಭೂ ಪರಿವರ್ತನೆ ಉದ್ದೇಶದ ಪ್ರಸ್ತಾವನೆಗಳನ್ನು ನಗರ ಯೋಜನಾ ವಿಭಾಗದಿಂದ ನಿಗದಿತ ಅವಧಿಯಲ್ಲಿ ಪರಿಶೀಲಿಸಿ ಅನುಮೋದನೆ ಅಥವಾ ತಿರಸ್ಕಾರದ ಸಲಹೆ ಜಿಲ್ಲಾಧಿಕಾರಿಗಳಿಗೆ ಕಳುಹಿಸುವಾಗ ಲೋಕೋಪಯೋಗಿ ಇಲಾಖೆಯ ನಿರಾಪೇಕ್ಷಣ ಪತ್ರ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಯಿತು. (ಭೂಗಡಿ ಮತ್ತು ಕಟ್ಟಡ ಗಡಿಯ ಅಂತರವನ್ನು ಷರತ್ತುಗಳಲ್ಲಿ ಸ್ಪಷ್ಟವಾಗಿ ಸೇರಿಸಲಾಗುತ್ತದೆ). ಕರಾವಳಿ ಭಾಗದ ಅಭಿವೃದ್ಧಿ ತಡೆಯುತ್ತಿದ್ದ ಈ ಗೊಂದಲಗಳಿಗೆ ಪರಿಹಾರ ಒದಗಿಸಿರುವ ಜೆ.ಪಿ ಹೆಗ್ಡೆಯವರ ಮಧ್ಯಸ್ಥಿಕೆಯನ್ನು ಸ್ಥಳೀಯ ವಲಯ ಮೆಚ್ಚಿದೆ.















































































































