ಚಾರ್ಕೋಪ್ ಕನ್ನಡ ಬಳಗದ ಮಹಿಳಾ ವಿಭಾಗದ ವತಿಯಿಂದ ಮಹಾರಾಷ್ಟ್ರದಲ್ಲಿರುವ “ಅಷ್ಟವಿನಾಯಕ” ದೇಗುಲಗಳ ಯಾತ್ರೆಯನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಶೆಟ್ಟಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಸುಮಾರು ಮೂವತ್ತಾರು ಮಂದಿ ಮಹಿಳೆಯರನ್ನು ಒಳಗೊಂಡ ಈ ಧಾರ್ಮಿಕ ಪಯಣವು ಬೆಳಗಿನ ಶುಭ ಮುಹೂರ್ತದಲ್ಲಿ ಪ್ರಾರಂಭವಾಯಿತು. ಅಷ್ಟವಿನಾಯಕ ದೇಗುಲಗಳಲ್ಲಿ ಮೊದಲನೆಯದಾದ, ಖಾಪೋಲಿಯ ಮಹಾಡ್ನಲ್ಲಿರುವ “ವರದವಿನಾಯಕ” ದೇವರ ಸನ್ನಿಧಿಯಲ್ಲಿ ತೆಂಗಿನಕಾಯಿ ಒಡೆದು, ಆರತಿ ಬೆಳಗಿಸುವ ಮೂಲಕ ಯಾತ್ರೆಗೆ ಶುಭಾರಂಭ ಮಾಡಲಾಯಿತು. ಅಲ್ಲಿಂದ, ಪಾಲಿಯಲ್ಲಿರುವ ನಂದಿ ಆಕಾರದ ಬೆಟ್ಟದ ಅಡಿಯಲ್ಲಿನ “ಬಲ್ಲಾಳೇಶ್ವರ” ದೇವಾಲಯ ಮತ್ತು ಥೇವೂರಿನ “ಚಿಂತಾಮಣಿ” ಗಣಪತಿಯ ದರ್ಶನ ಪಡೆದು, ಆ ರಾತ್ರಿ ಅಲ್ಲೇ ತಂಗಲಾಯಿತು.

ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ “ಪ್ರತಿ ಬಾಲಾಜಿ” ಎಂದೇ ಪ್ರಸಿದ್ಧವಾಗಿರುವ ಪುಣೆಯ ಸಮೀಪದ ಬಾಲಾಜಿ ಮಂದಿರದ ದರ್ಶನ ಮತ್ತು ಬೆಳಗಿನ ಆರತಿಯು ಎಲ್ಲರ ಮನಸ್ಸನ್ನು ಪ್ರಸನ್ನಗೊಳಿಸಿತು. ಬಳಿಕ, ಜೇಜೂರಿನಲ್ಲಿರುವ “ಖಂಡೋಬಾ” ದೇವಾಲಯಕ್ಕೆ ಸುಮಾರು 250ಕ್ಕೂ ಅಧಿಕ ಮೆಟ್ಟಿಲುಗಳನ್ನು ಏರಿ ಖಂಡೋಬಾ (ಮಲ್ಹಾರಿ ಮಾರ್ತಾಂಡ) ದೇವರ ದರ್ಶನ ಪಡೆಯಲಾಯಿತು. ಹಳದಿ ಹುಡಿಯಿಂದ ದೇವರಿಗೆ ಪೂಜೆ ಸಲ್ಲಿಸಿ, ಮಹಿಳೆಯರೂ ಸಹ ಅದರ ಓಕುಳಿಯಲ್ಲಿ ಮಿಂದೆದ್ದು ಬಂದದ್ದು ಇಲ್ಲಿಯ ವಿಶೇಷವಾಗಿತ್ತು. ಖಂಡೋಬಾ ದೇವರು ನಮ್ಮೂರಿನ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರನ್ನು ನೆನಪಿಸುವಂತಿತ್ತು ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.
ಅಲ್ಲಿಂದ ಮೊರ್ ಗಾವ್ನ “ಮಯೂರೇಶ್ವರ”, ಸಿದ್ಧಾಟೆಕ್ನ “ಸಿದ್ದಿವಿನಾಯಕ”, ರಂಜನ್ ಗಾವ್ನ ”ಮಹಾಗಣಪತಿಯ ದರ್ಶನ ಮಾಡಿ ಓಝರ್ ಎಂಬಲ್ಲಿ ರಾತ್ರಿ ಕಳೆಯಲಾಯಿತು. ಬೆಳಿಗ್ಗೆ ಓಝರ್ನಲ್ಲಿರುವ ”ವಿಘ್ನೇಶ್ವರ”ನ ದರ್ಶನ ಮಾಡಿ, ಆರತಿ ಬೆಳಗಿಸಿ ಲೇಣ್ಯಾದ್ರಿ ಕಡೆಗೆ ತೆರಳಲಾಯಿತು. ಲೇಣ್ಯಾದ್ರಿಯಲ್ಲಿ ಪ್ರಕೃತಿಯ ಸುಂದರ ಕಲ್ಲಿನ ಬೆಟ್ಟದಲ್ಲಿ 380ಕ್ಕೂ ಅಧಿಕ ಮೆಟ್ಟಿಲುಗಳನ್ನು ಏರಿ, ಮೇಲಿರುವ ”ಗಿರಿಜಾತ್ಮಕ”ನೆಂದೇ ಪ್ರಸಿದ್ಧವಾದ ಅಷ್ಟವಿನಾಯಕ ಯಾತ್ರೆಯ ಕೊನೆಯ ಗಣಪತಿಯ ದರ್ಶನವನ್ನು ಮಾಡಿ ಎಲ್ಲರೂ ಪುನೀತರಾದರು. ಮೆಟ್ಟಿಲುಗಳನ್ನು ಏರಲು ಮನಸ್ಸು ಹಿಂಜರಿದರೂ, ಅಷ್ಟವಿನಾಯಕ ಯಾತ್ರೆಯನ್ನು ಪೂರ್ಣಗೊಳಿಸುವ ಪಣ ತೊಟ್ಟಿದ್ದ ಮಹಿಳೆಯರು ಗಿರಿಜಾತ್ಮಕನ ಕೃಪೆಯಿಂದ ಅನಾಯಾಸವಾಗಿ ಏರಿ ಇಳಿದು ಬಂದು ಸಂತಸ ವ್ಯಕ್ತಪಡಿಸಿದರು. ಚಾರ್ಕೋಪ್ ಕನ್ನಡ ಬಳಗದ ಈ ಯಾತ್ರೆಯಲ್ಲಿ ಸಂಚಾಲಕಿ ಶಾಂತಾ ಭಟ್, ರಶ್ಮಿ ಆಚಾರ್ಯ, ಯಮುನಾ ಸಾಲ್ಯಾನ್, ವಿಜಯಲಕ್ಷ್ಮಿ ಶೆಟ್ಟಿ, ಪದ್ಮಾವತಿ ನಾಯ್ಕ್, ಸುನೀತಾ ಕಾವೂರ್ ಹಾಗೂ ಇತರ ಮಹಿಳೆಯರು ಸಹಕರಿಸಿದರು.















































































































