ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ 2025 -28 ರ ಸಾಲಿನ ದ.ಕ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ದ.ಕ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಉಪ ನಿರ್ದೇಶಕರು ಹಾಗೂ ಚುನಾವಣಾಧಿಕಾರಿ ಖಾದರ್ ಶಾ ಶುಭ ಹಾರೈಸಿ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಕ್ರೀಯ ಚಟುವಟಿಕೆಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಪತ್ರಕರ್ತರು ಜಿಲ್ಲಾ ಸಂಘದ ಪದಾಧಿಕಾರಿಗಳಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದಸ್ಯರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಉತ್ತಮ ಕೆಲಸಗಳಾಗಲಿ ಎಂದು ಶುಭ ಹಾರೈಸಿದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಪೂರ್ವಾಧ್ಯಕ್ಷ ಆನಂದ ಶೆಟ್ಟಿಯವರು ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ ಪೂಜಾರಿ, ಉಪಾಧ್ಯಕ್ಷರಾದ ಮಹಮ್ಮದ್ ಆರಿಫ್ ಪಡುಬಿದ್ರೆ, ವಿಲ್ಫ್ರೆಡ್ ಡಿ ಸೋಜ, ರಾಜೇಶ್ ಶೆಟ್ಟಿ, ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು, ಕಾರ್ಯದರ್ಶಿಗಳಾದ ಸುರೇಶ್ ಡಿ ಪಳ್ಳಿ, ಸಿದ್ಧಿಕ್ ನೀರಾಜೆ, ಸತೀಶ್ ಇರಾರವರಿಗೆ ಪ್ರತಿಜ್ಞಾ ವಿಧಿ ಬೋಧನೆ ನೆರವೇರಿಸಿ ಮಾತನಾಡುತ್ತಾ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿ, ಸಂಘದ ಸದಸ್ಯರು ಸಂಘಟಿತರಾಗಿ ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಇನ್ನಷ್ಟು ಸಾಧಿಸುವಂತಾಗಲಿ ಎಂದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆಯವರಿಗೆ ನಿಕಟಪೂರ್ವ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಸಮಿತಿಯ ಪೂರ್ವಾಧ್ಯಕ್ಷ ಹರ್ಷ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ನಿಕಟ ಪೂರ್ವ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಸ್ವಾಗತಿಸಿ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯದ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ. ಈ ಸಾಧನೆಗೆ ಸಹಕಾರ ನೀಡಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್ ನಿಕಟಪೂರ್ವ ಅಧ್ಯಕ್ಷರಿಂದ ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ಸಂಘಟನೆ, ಅಪಘಾತ ವಿಮೆ, ಆರೋಗ್ಯ ವಿಮೆಯ ಜೊತೆ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸಂಘದ ಸದಸ್ಯರ ರಚನಾತ್ಮಕ ಚಟುವಟಿಕೆಗಳಿಗೆ ಸಂಘಟಿತವಾಗಿ ಶ್ರಮಿಸಲಿದೆ ಎಂದರು. ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ಅನ್ನು ಮಂಗಳೂರು ಶುಭ ಹಾರೈಸಿದರು. ಅಶೋಕ್ ಶೆಟ್ಟಿ ಬಿ.ಎನ್, ಸಂದೇಶ್ ಜಾರ, ಸಂದೀಪ್ ಕುಮಾರ್ ಎಂ, ಲಕ್ಷ್ಮೀ ನಾರಾಯಣ ರಾವ್, ಹರೀಶ್ ಮೋಟುಕಾನ, ದಿವಾಕರ ಪದ್ಮುಂಜ, ಕಿರಣ್ ಯು ಸಿರ್ಸಿಕರ್, ಅಭಿಷೇಕ್ ಎಚ್ ಎಸ್, ಜಯಶ್ರೀ, ಭುವನೇಶ್ವರ ಜಿ, ಸಂದೀಪ್ ವಾಗ್ಲೆ, ಹರೀಶ್ ಕೆ ಆದೂರ್, ಗಿರೀಶ್ ಅಡ್ಪಂಗಾಯ, ಸಂದೀಪ್ ಸಾಲ್ಯಾನ್, ಆರಿಫ್ ಕಲ್ಕಟ್ಟ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಜಯ ಕೋಟ್ಯಾನ್ ಪಡು ವಂದಿಸಿದರು.









































































































