ಪುಣೆ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಇದರ ವಿಶ್ವಸ್ಥ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ವಾರ್ಷಿಕ ಮಹಾಸಭೆಯು ನವೆಂಬರ್ 22 ಶನಿವಾರದಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾದ ರಘುರಾಮ್ ರೈ, ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಕೋಶಾಧಿಕಾರಿ ಸಚ್ಚಿದಾನಂದ ಶೆಟ್ಟಿ, ಮಾಜಿ ಅಧ್ಯಕ್ಷ ಶೇಖರ್ ಟಿ ಪೂಜಾರಿ, ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಶೆಟ್ಟಿ ಮತ್ತು ಕಾರ್ಯದರ್ಶಿ ಜಗದೀಪ್ ಶೆಟ್ಟಿಯವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಘುರಾಮ್ ರೈಯವರು ಸ್ವಾಗತಿಸಿ ವಾರ್ಷಿಕ ವರದಿಯನ್ನು ಮತ್ತು ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ, ಕಲಾ ಕಾರ್ಯಕ್ರಮಗಳ ವಿವರವನ್ನು ಸಭೆಯ ಮುಂದಿಟ್ಟರು. ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಸಚ್ಚಿದಾನಂದ ಶೆಟ್ಟಿ ಮಂಡಿಸಿದರು ಮತ್ತು ಸಭೆಯ ಅನುಮೊದನೆ ಪಡೆದರು. ಸಭೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂದೆ ಬರಲಿರುವ ವಾರ್ಷಿಕ ಮಹಾಪೂಜೆಯ ಬಗ್ಗೆ ಮತ್ತು ತಯಾರಿಗಳ ಬಗ್ಗೆ ತಿರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಗೆ ನೂತನ ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಜಗದೀಪ್ ಶೆಟ್ಟಿಯವರು ಕಾರ್ಯಕಾರಿ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದರು ಹಾಗೂ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಸುಭಾಷ್ ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಕಾತ್ರಜ್ ಕ್ಷೇತ್ರದ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಪರಿವಾರ ದೇವರುಗಳ ಆಶೀರ್ವಾದದಿಂದ ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮ ಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಎಲ್ಲಾ ಸೇವಾ ಕಾರ್ಯಕ್ರಮಗಳು ಬಹಳ ಶ್ರದ್ದೆ ಭಕ್ತಿಯಿಂದ ಅಚ್ಚುಕಟ್ಟಾಗಿ ನಡೆದಿದ್ದು, ನಂತರ ನಿತ್ಯದ ಪೂಜಾ ಕಾರ್ಯಗಳು, ವಿಶೇಷವಾಗಿ ಆಚರಿಸಲ್ಪಡುವ ಸಂಕ್ರಾಂತಿ ಆಚರಣೆ, ವಿಶೇಷ ಪರ್ವ ದಿನಗಳು ಎಲ್ಲವೂ ಭಕ್ತರ ಸಹಕಾರದಿಂದ ಸುಸೂತ್ರವಾಗಿ ನಡೆಯುತ್ತಾ ಬರುತ್ತಿದೆ. ದೇವಸ್ಥಾನ ಜೀರ್ಣೋದ್ದಾರಗೊಂಡ ನಂತರ ಹಲವಾರು ಉಳಿದ ಸಣ್ಣ ಪುಟ್ಟ ಕೆಲಸ ಕಾರ್ಯಗಳು ನಡೆದಿದ್ದು ಇನ್ನು ಕೂಡಾ ಹಲವಾರು ಕೆಲಸಗಳು ಆಗಬೇಕಿದೆ. ಹೊರಾಂಗಣದ ಭಾಗದಲ್ಲಿ ಮೂಲ ಸೌಕರ್ಯಗಳ ಕೆಲವು ಕಾರ್ಯಗಳು ಇನ್ನೂ ಬಾಕಿ ಇದೆ ಹಾಗೂ ಜಾಗ ವಿಸ್ತಾರಗೊಳಿಸುವ ಯೋಚನೆ ಕೂಡಾ ನಡೆಯುತ್ತಿದ್ದು, ಇದಕ್ಕೆ ಯೋಜನೆ ರೂಪಿಸಿ ತೀರ್ಮಾನಿಸಲಾಗುವುದು. ಭಕ್ತರ ಸಹಕಾರ ಈವರೆಗೆ ನಮಗೆ ಬಹಳಷ್ಟು ಸಿಕ್ಕಿದೆ. ದೊಡ್ಡ ದಾನಿಗಳು ಅಯ್ಯಪ್ಪ ಸ್ವಾಮಿ ಸೇವೆಗೆ ತುಂಬು ಹೃದಯದ ಸಹಕಾರ ನೀಡಿದ್ದಾರೆ. ಮುಂದೆ ದೇವಸ್ಥಾನದ ಕೆಲವು ಕಾರ್ಯಗಳಿಗೆ ನಡೆಯಲಿರುವ ವಾರ್ಷಿಕ ಮಹಾಪೂಜೆ ಎಲ್ಲವೂ ಭಕ್ತರ ಸಹಕಾರದಿಂದಲೇ ಆಗಬೇಕಾದ ಕಾರಣ ಅರ್ಥಿಕ ಸಂಪತ್ತು ಬೇಕಾಗಿದೆ. ಭಕ್ತರು ಹೆಚ್ಚಿನ ರೀತಿಯಲ್ಲಿ ತನು ಮನ ಧನದ ಮೂಲಕ ಸಹಕಾರ ನೀಡುವಂತೆ ವಿನಂತಿಸಿಕೊಂಡರು. ಸಭೆಯಲ್ಲಿ ವಿಶ್ವಸ್ಥ ಸಮಿತಿ ಸದಸ್ಯರಾದ ಶೇಖರ್ ಪೂಜಾರಿ, ಜಗದೀಶ್ ಶೆಟ್ಟಿ, ಬಾಲಕೃಷ್ಣ ಗೌಡ, ಭಾಸ್ಕರ್ ಕೊಟ್ಟಾರಿ, ಭಾಸ್ಕರ್ ಶೆಟ್ಟಿ ಸಲಹೆ ಸೂಚನೆಗನ್ನು ನೀಡಿದರು. ರಘುರಾಮ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹೆಚ್ಚಿನ ಸಮಿತಿ ಸದಸ್ಯರು, ಭಕ್ತರು, ಮಾಲಾದಾರಿ ಸ್ವಾಮಿಗಳು ಉಪಸ್ಥಿತರಿದ್ದರು. ಸಭೆಯ ನಂತರ ಶನಿವಾರದ ವಿಶೇಷ ಭಜನೆ ಕಾರ್ಯಕ್ರಮ ನಡೆಯಿತು. ನಂತರ ಅಯ್ಯಪ್ಪ ಸ್ವಾಮಿಗೆ ಮಂಗಳಾರತಿ ನಡೆಯಿತು.

ವರದಿ : ಹರೀಶ್ ಮೂಡಬಿದ್ರಿ, ಪುಣೆ









































































































