ಬಂಟರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಕೊಂಬೆಟ್ಟು ಬಂಟರ ಭವನದಲ್ಲಿ ನವೆಂಬರ್ 22 ರಂದು ಬಂಟೆರೆ ಸೇರಿಗೆ – 2025 ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕಲ್ಪವೃಕ್ಷದ ಗಿಡಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೇರಂಭಾ ಗ್ರೂಪ್ ಆಫ್ ಕಂಪನಿ ಮುಂಬೈ ಇದರ ಸಂಸ್ಥಾಪಕ ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಪುತ್ತೂರು ಬಂಟ ಸಂಘದ ಬಗ್ಗೆ ಅಪಾರ ಗೌರವವಿದೆ. ಬಂಟರ ಸಂಘದಲ್ಲಿ ಮಾತೃ ಸಂಘಕ್ಕೆ ಉನ್ನತ ಸ್ಥಾನವಿದೆ. ಬಂಟ ಸಮಾಜದ ರಮಾನಾಥ ರೈ, ನಳಿನ್ ಕುಮಾರ್ ಕಟೀಲ್ ಅವರಂತಹ ಅನೇಕ ರಾಜಕೀಯ ದುರೀಣರು ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯ ಮಾತ್ರವಲ್ಲದೆ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅನೇಕರು ಸಾಧನೆಗೈದಿದ್ದಾರೆ. ಬಂಟರ ಸಂಘದ ಯೋಜಿತ ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಹಕಾರವನ್ನು ನೀಡುತ್ತೇನೆ. ಪ್ರಸ್ತುತ ದಿನಮಾನಗಳಲ್ಲಿ ದನಿಗಳು ಹೆಚ್ಚಾಗಿದ್ದಾರೆ. ಆದರೆ ದಾನಿಗಳು ಕಡಿಮೆಯಾಗಿರುವುದು ವಿಪರ್ಯಾಸ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ ಸಮಾಜದಲ್ಲಿ ಸಾವಿರಾರು ಸಾಧಕರಿದ್ದಾರೆ. ನಾನು ಒಂಬತ್ತು ಬಾರಿ ಶಾಸಕನಾಗಿ ಆಯ್ಕೆಯಾಗಬೇಕಾದರೆ ಬಂಟ ಸಮುದಾಯದ ಜನರೂ ಕಾರಣ. ನಗರ ಪ್ರದೇಶದಲ್ಲಿ ಐದೂವರೆ ಎಕರೆ ಸರ್ಕಾರಿ ಜಾಗ ಪಡೆಯುವುದು ಸುಲಭದ ಕೆಲಸವಲ್ಲ. ಆದರೆ ಈ ಕೆಲಸವನ್ನು ಪುತ್ತೂರಿನ ಶಾಸಕರು ಮಾಡಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ಸಾಧಕರನ್ನು ಸನ್ಮಾನಿಸಿರುವುದು ಸಂತಸದ ವಿಚಾರ ಎಂದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಂಟ ಸಮಾಜದ ಅನೇಕರು ದೊಡ್ಡ ದೊಡ್ಡ ಉದ್ಯಮಿಗಳಾಗಿದ್ದಾರೆ. ಮುಂಬೈಯಲ್ಲಿ 4 ಲಕ್ಷ ಬಂಟರಿದ್ದಾರೆ. ನಮ್ಮ ಸಮಾಜ ಬಲಿಷ್ಠವಾಗಲು ಸಂಖ್ಯೆ ಮುಖ್ಯವಾಗಿದೆ ಎಂದರು. ಬಂಟ ಸಮುದಾಯದಿಂದ ಉತ್ತಮ ಕಾರ್ಯಗಳನ್ನು ಮಾಡುವ ಯೋಜನೆಗಳನ್ನ ಹಾಕಿಕೊಳ್ಳಲಾಗಿದೆ. ತಡವಾದರೂ ದೇವರ ಆಶೀರ್ವಾದ ಹಾಗೂ ದಾನಿಗಳ ಪ್ರೋತ್ಸಾಹದಿಂದ ಗುರಿ ತಲುಪುತ್ತದೆ ಎಂದರು.
ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ತನ್ನೊಂದಿಗೆ ಇತರೆ ಸಮಾಜದವರೂ ಮುಂದೆ ಬರಬೇಕೆಂಬ ನಿಟ್ಟಿನಲ್ಲಿ ಬಂಟರ ಸಂಘ ಕಾರ್ಯನಿರ್ವಹಿಸುತ್ತಿದೆ. ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಕಾರ್ಯವಾಗಿದೆ ಎಂದರು. ಸಮಾಜಕ್ಕಾಗಿ ನಾನು ತಲೆತಗ್ಗಿಸುತ್ತೇನೆ, ಸಮಾಜದ ಯಾವುದೇ ಕಾರ್ಯಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದ ಅಜಿತ್ ಕುಮಾರ್ ರೈ, ಬಂಟ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಿದ್ದೇನೆ. ನಾನು ಪ್ರಚಾರ ಪ್ರಿಯನಲ್ಲ. ನನ್ನ ಯಾವುದೇ ಕಾರ್ಯದ ಮುಂದೆ ನನ್ನ ಹೆಸರನ್ನು ಹಾಕಿಸುವುದಿಲ್ಲ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಅಧ್ಯಕ್ಷ ಎ ಹೇಮನಾಥ ಶೆಟ್ಟಿ ಕಾವು, ಬಂಟರೆಂದರೇ ಸಾಧಕರು. ಉದ್ಯಮ, ಕ್ರೀಡೆ ಸೇರಿದಂತೆ ಅನೇಕ ಬಂಟರು ವಿವಿಧ ಕ್ಷೇತ್ರಗಳಲ್ಲಿ ಒಂದಲ್ಲಾ ಒಂದು ಸಾಧನೆಗಳನ್ನು ಮಾಡುತ್ತಿದ್ದಾರೆ. ಇಂತಹ ಸಾಧಕರನ್ನು ಸಮಾಜ ಗುರುತಿಸಬೇಕೆಂಬ ನಿಟ್ಟಿನಲ್ಲಿ ದರ್ಬೆಯಿಂದ ಮೆರವಣಿಗೆ ಮೂಲಕ ಕರೆ ತರಲಾಗಿದೆ. ಇಂತಹ ಸಾಧಕರ ಬಗ್ಗೆ ಇಡೀ ಬಂಟ ಸಮುದಾಯವು ಹೆಮ್ಮೆ ಪಡಬೇಕು ಎಂದರು. ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಎಸ್, ಉದ್ಯಮಿ ಸುಮ ಅಶೋಕ್ ರೈ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಮತ್ತು ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಉಮಾಪ್ರಸಾದ್ ರೈ









































































































