ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶನದ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಣೆಯ ಮಕ್ಕಳ ವೈದ್ಯ ಡಾ. ಸುಧಾಕರ್ ಶೆಟ್ಟಿ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಬಹು ನಿರೀಕ್ಷೆಯ ‘ಹೇ ಪ್ರಭು’ ಸಿನಿಮಾ ನವೆಂಬರ್ 7 ರಂದು ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಈ ಚಿತ್ರದ ಮೊದಲ ಹಾಡು ‘ಎದ್ದೇಳೋ ಈಗ’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ಸ್ಫೂರ್ತಿದಾಯಕ ಸಾಹಿತ್ಯ, ಉತ್ತಮ ಗಾಯನ ಮತ್ತು ಸಂಗೀತದೊಂದಿಗೆ ಈ ಹಾಡು ಸಂಗೀತ ಪ್ರಿಯರು ಹಾಗೂ ಚಿತ್ರಾಭಿಮಾನಿಗಳ ಹೃದಯದಲ್ಲಿ ಭಾವುಕ ಸ್ಪಂದನ ಮೂಡಿಸಿದೆ. ತೇಜಸ್ವಿ ಹರಿದಾಸ್ ಅವರ ಆತ್ಮಸ್ಪರ್ಶಿ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡು ಆಸೆ, ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.

ಚಿತ್ರ ಸಾಹಿತಿ ಅರಸು ಅಂತಾರೆ ಅವರ ಹೃದಯ ಮುಟ್ಟುವ ಸಾಹಿತ್ಯ ಮತ್ತು ಡ್ಯಾನಿ ಆಂಡರ್ಸನ್ ಅವರ ಉತ್ಸಾಹಭರಿತ ಸಂಗೀತ ಸಂಯೋಜನೆ ಜೊತೆಯಾಗಿ “ಎದ್ದೇಳೋ ಈಗ” ಕನ್ನಡ ಚಲನಚಿತ್ರ ಲೋಕದ ಅತ್ಯಂತ ಪ್ರೇರಣಾದಾಯಕ ಹಾಡುಗಳಲ್ಲಿ ಒಂದಾಗಿ ರೂಪಿಸಿದೆ. ಚಿತ್ರವನ್ನು ಡಾ. ಸುಧಾಕರ್ ಶೆಟ್ಟಿ (ಪುಣೆ) ಅವರು ಪ್ರಸ್ತುತಪಡಿಸಿದ್ದಾರೆ.





































































































