ಪುತ್ತೂರು ಬಂಟರ ಸಂಘಕ್ಕೆ 5.5 ಎಕರೆ ಜಾಗ ಮಂಜೂರುಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಶೋಕ ಜನಮನ ಕಾರ್ಯಕ್ರಮದಲ್ಲಿ ಪುತ್ತೂರು ಬಂಟರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಇಷ್ಟು ವರ್ಷದಲ್ಲಿ ಬಂಟರ ಸಂಘಕ್ಕೆ ಒಂದಿಂಚು ಜಾಗವನ್ನು ಯಾರೂ ನೀಡಿರಲಿಲ್ಲ. ಶಾಸಕ ಅಶೋಕ್ ರೈ ಅವರ ಮುತುವರ್ಜಿಯಿಂದ ನಮ್ಮ ಸಂಘಕ್ಕೆ 5.5 ಎಕರೆ ಜಾಗವನ್ನು ನೀವು ಮಂಜೂರಾತಿ ನೀಡಿದ್ದೀರಿ. ಇದಕ್ಕಾಗಿ ಬಂಟರ ಸಂಘ ಎಂದೆಂದೂ ಚಿರಋಣಿಯಾಗಿರುತ್ತದೆ. ಸಂಘದ ವತಿಯಿಂದ ಮಾಡುವ ಸನ್ಮಾನವನ್ನು ಸ್ವೀಕರಿಸಬೇಕೆಂದು ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡರು. ಬಂಟರ ಸಂಘದ ವತಿಯಿಂದ ನೀಡಿದ ಸನ್ಮಾನವನ್ನು ಮುಖ್ಯಮಂತ್ರಿಗಳು ಸ್ವೀಕರಿಸಿ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಸುಮಾ ಅಶೋಕ್ ರೈ, ಗ್ಯಾರಂಟಿ ಸಮಿತಿ ಸದಸ್ಯ ಉಮಾನಾಥ ಶೆಟ್ಟಿ ಪೆರ್ನೆ ಮತ್ತಿತರು ಉಪಸ್ಥಿತರಿದ್ದರು.





































































































