ಐತಿಹಾಸಿಕ ಹಿನ್ನೆಲೆಯುಳ್ಳ ಹಾಗೂ ತುಳುನಾಡಿನ ಅಧಿದೇವತೆ ಎಂದೇ ಪ್ರಸಿದ್ಧವಾಗಿರುವ ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸಹಸ್ರ ಸಹಸ್ರ ದೀಪಗಳ ದೀಪೋತ್ಸವದ ವೈಭವ ಕಣ್ಮನ ಸೆಳೆಯಿತು. ದೇಗುಲದ ಪರಿಸರವು ಜಗಮಗಿಸುವ ದೀಪಗಳ ಅಲಂಕಾರದಿಂದ ಕಂಗೊಳಿಸಿತು. ವಿನಾಶದ ಅಂಚಿನಲ್ಲಿದ್ದರೂ, ಪ್ರಕೃತಿಯ ಆಲಯದಲ್ಲಿ ನೆಲೆಸಿರುವ ತುಳುವೇಶ್ವರನಿಗೆ ಸಮರ್ಪಿತವಾದ ಈ ದೀಪೋತ್ಸವವು ಭಕ್ತ ಸಮೂಹಕ್ಕೆ ಒಂದು ವಿಶಿಷ್ಟ ಆಧ್ಯಾತ್ಮಿಕ ಅನುಭವ ನೀಡಿತು. ಆಲದ ಮರದ ಬುಡದಲ್ಲಿರುವ ಶಿವಲಿಂಗದ ಸುತ್ತಲೂ ಹಾಗೂ ದೇವಸ್ಥಾನದ ಪ್ರಾಂಗಣದಲ್ಲಿ ಸಾವಿರಾರು ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು. ಆ ದೀಪಗಳ ಪ್ರಕಾಶದಲ್ಲಿ ದೇವಾಲಯದ ಶಿಥಿಲಗೊಂಡ ಗೋಡೆಗಳು ಮತ್ತು ಪ್ರಾಚೀನ ಶಿಲಾಕುರುಹುಗಳು ಮತ್ತಷ್ಟು ಪುರಾತನ ವೈಭವವನ್ನು ನೆನಪಿಸಿದವು. ದೀಪಾರಾಧನೆಯ ಸಂದರ್ಭದಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ, ಭಕ್ತಿಪರವಶರಾಗಿ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರವನ್ನು ಜಪಿಸಿದರು. ಭಕ್ತರ ಘೋಷಣೆ, ಮಂಗಳವಾದ್ಯಗಳ ನಿನಾದ ಮತ್ತು ದೀಪಗಳ ಪ್ರಕಾಶದಿಂದ ದೇವಳದ ವಾತಾವರಣ ಸಂಪೂರ್ಣವಾಗಿ ದೈವಿಕ ಶಕ್ತಿಯಿಂದ ತುಂಬಿಹೋಗಿತ್ತು. ಈ ಸಂದರ್ಭದಲ್ಲಿ ಶಿವನನ್ನು ಸ್ತುತಿಸುವ ವಿಶೇಷ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು.


ತುಳುವೇಶ್ವರ ದೇವಾಲಯದ ಇತ್ತೀಚಿನ ಅಷ್ಟಮಂಗಲ ಪ್ರಶ್ನೆಯ ಚಿಂತನೆಯ ನಂತರ, ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡುವ ಸಂಕಲ್ಪದಲ್ಲಿ ಈ ವಿಶೇಷ ದೀಪೋತ್ಸವವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ತುಳುವೇಶ್ವರನ ಮೇಲಿನ ಭಕ್ತಿಯನ್ನು ಮತ್ತಷ್ಟು ಹೆಚ್ಚಿಸಿ, ಜೀರ್ಣೋದ್ಧಾರಕ್ಕೆ ಭಕ್ತರ ಸಹಕಾರವನ್ನು ಪ್ರೇರೇಪಿಸುವ ಮುಖ್ಯ ಉದ್ದೇಶವನ್ನು ಹೊಂದಿತ್ತು. ಈ ದೀಪೋತ್ಸವದಲ್ಲಿ ತುಳುವರ್ಲ್ಡ್ ಫೌಂಡೇಶನ್ನ ಅಧ್ಯಕ್ಷರು, ಪದಾಧಿಕಾರಿಗಳು, ತುಳುವ ಮಹಾಸಭೆ ತಾಲೂಕು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಪಂಚಾಯತ್, ಸ್ಥಳೀಯ ಸಂಘ ಸಂಸ್ಥೆಗಳು ಸೇರಿದಂತೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ತುಳುವೇಶ್ವರನ ದರ್ಶನ ಮತ್ತು ದೀಪೋತ್ಸವದ ಭಾಗ್ಯ ಪಡೆದು ಭಕ್ತ ಸಮೂಹವು ಧನ್ಯತಾಭಾವ ಮೆರೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದ ಭಾರತಭೂಷಣ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು, ಸನಾತನ ಧರ್ಮದ ನಂಬಿಕೆ ಆಧಾರದಲ್ಲಿ ಬದುಕುವ ಎಲ್ಲಾ ಭಗವದ್ ಭಕ್ತರು ಶಿವ ದೇವಾಲಯ ನಿರ್ಮಾಣದಲ್ಲಿ ಕೈಜೋಡಿಸಬೇಕು, ಜೊತೆಗೆ ದೇವಸ್ಥಾನಗಳ ಊರು ಬಸ್ರೂರಿನ ಆಸುಪಾಸಿನಲ್ಲಿರುವ ತುಳುವೇಶ್ವರಿ ದೇವಸ್ಥಾನ ಸಹಿತ ಎಲ್ಲಾ ದೇವಸ್ಥಾನಗಳು ವೈಭವದಿಂದ ಪೂಜೆ ಪುನಸ್ಕಾರ ಜಾತ್ರೆ ನಡೆಸುವಂತಹಾಗಿ ಸಂಸ್ಕಾರ ಮತ್ತು ಭಕ್ತಿಯ ಕೇಂದ್ರವಾಗಲಿ ಎಂದು ಹರಸಿದರು, ಜೊತೆಗೆ ತನ್ನ ಸಹಕಾರವಿದ್ದು ಜೈನ ಮಠದಿಂದ ಎಲ್ಲ ಸಹಕಾರ ನೀಡುವ ಭರವಸೆಯನ್ನು ನೀಡಿದರು
ಒಡಿಯೂರು ಗುರುದೇವದತ್ತ ಸಂಸ್ಥಾನಮ್, ಶ್ರೀ ದತ್ತಾಂಜನೇಯ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಪ್ರಾಕೃತಿಕವಾಗಿ ನೈಸರ್ಗಿಕ ಸಂಪತ್ಭರಿತವಾದ ತುಳುವೇಶ್ವರ ನೈಸರ್ಗಿಕ ಭಕ್ತಿ ಪ್ರಧಾನ ಕ್ಷೇತ್ರವಾಗಿದ್ದು, ನಿರ್ಮಾಣದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕೂಡ ಆಗಬೇಕಿದ್ದು ಅದರ ಬಗ್ಗೆಯೂ ಕಾಳಜಿ ವಹಿಸುವಂತೆ ಸೂಚಿಸುವ ಜೊತೆಗೆ ಪ್ರತಿ ಮನೆ ಮನಗಳಲ್ಲಿ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ ಪಠಣ ಮಾಡಿದಾಗ ಸಕಲ ಇಷ್ಟಾರ್ಥ ಸಿದ್ಧಿಯಾಗಿ ನೆಮ್ಮದಿ ಮತ್ತು ಅಭಿವೃದ್ಧಿ ಎರಡು ಸಾಧ್ಯ, ಅಂದು ತುಳುನಾಡಿನ ರಥ ಯಾತ್ರೆ ಬಸ್ರೂರಿನಿಂದಲೇ ಆರಂಭಗೊಂಡಿದ್ದು ಇಂದು ಎಲ್ಲರ ಸಹಕಾರದೊಂದಿಗೆ ವೈಭವದ ತುಳುವೇಶ್ವರ ದೇವಸ್ಥಾನ ನಿರ್ಮಾಣವಾಗಲಿ ಗುರುದೇವದತ್ತ ಸಂಸ್ಥಾನದಿಂದ ಸಂಪೂರ್ಣ ಸಹಕಾರ ನೀಡುವ ಮಾತುಗಳನ್ನಾಡಿದರು.
ತುಳುವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ಡಾ| ರಾಜೇಶ ಆಳ್ವ ಹಾಗೂ ತುಳುವೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವಾನಂದ ಶೆಟ್ಟಿ ಬಸ್ರೂರು ಇವರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿಮಾನದ ಅಭಿನಂದನೆ ಹಾಗೂ ಧನ್ಯವಾದಗಳನ್ನು ನೀಡುವುದರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಂಸ್ಕೃತಿಕ, ಧಾರ್ಮಿಕ, ಜನಪದ, ಕಳರಿ, ಭಜನೆ ಸೇರಿದಂತೆ ಸಹಕರಿಸಿದ ಎಲ್ಲಾ ತಂಡಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಅರ್ಚಕ ವೃಂದ, ಪತ್ರಕರ್ತ ಬಳಗ, ದೀಪಾಲಂಕಾರ, ಊರಿನಲ್ಲಿರುವ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿ ಮತ್ತು ಅರ್ಚಕ ವೃಂದ, ಊರ ಹೊರ ಊರಿನಿಂದ ಆಗಮಿಸಿದ ಸಕಲ ಭಕ್ತವರ್ಗಕ್ಕೆ ಧನ್ಯವಾದಗಳನ್ನು ಸಮರ್ಪಿಸುತ್ತಾ, ಮುಂದಿನ ಹಂತದಲ್ಲಿ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.





































































































