ಬಹುನಿರೀಕ್ಷಿತ “ಕಾಂತಾರ ಚಾಪ್ಟರ್ -1” ಪ್ರೀಮಿಯರ್ ಶೋ ದುಬೈನಲ್ಲಿ ಹೌಸ್ ಫುಲ್ ಪ್ರದರ್ಶನಗೊಂಡು ಒಳ್ಳೆಯ ಪ್ರತಿಕ್ರಿಯೆಗೆ ಪಾತ್ರವಾಗಿದೆ. ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರ ನೇತೃತ್ವದಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನದಲ್ಲಿ ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಿನಿಮಾವನ್ನು ನೋಡಿ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸರಳ ರೀತಿಯಲ್ಲಿ ನಡೆದ ಪ್ರೀಮಿಯರ್ ಶೋ ನ ಬಿಡುಗಡೆಯ ಸಭಾ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಯುಎಇಯಲ್ಲಿ ಚಿತ್ರ ಬಿಡುಗಡೆಗೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಯುಎಇ ಎಮಿರೇಟ್ಸ್ ನ ಉದ್ಯಮಿ ಡಾ. ಬು. ಅಬ್ಧುಲ್ಲಾ, ಅಬ್ದುಲ್ಲಾ ಅಲ್ ಝಫಾಲೀ, ಅಮಲ್ ಅಬ್ದುಲ್ಲಾ,ಜ್ಯೊಲ್ಲೆ ಜಬ್ಬಾರ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಹರೀಶ್ ಬಂಗೇರ, ದೀಪಕ್ ಸೋಮಶೇಖರ್ ಉಪಸ್ಥಿತರಿದ್ದರು. ಎಲ್ಲಾ ಅತಿಥಿಗಳನ್ನು ಪ್ರವೀಣ್ ಕುಮಾರ್ ಶೆಟ್ಟಿಯವರು ಶಾಲು ಹೊದಿಸಿ ಗೌರವಿಸಿದರು.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಥೆ ಏನು?
ಬಾಂಗ್ರಾ ರಾಜ ಮನೆತನ ಮತ್ತು ಈಶ್ವರ ಹೂದೋಟದ ಜನರ ನಡುವಿನ ಯುದ್ಧವನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಕಥೆ ‘ಕಾಂತಾರ: ಚಾಪ್ಟರ್ 1’ ಚಿತ್ರದ್ದು. ಈಶ್ವರ ಹೂದೋಟದ ಮುಂಚೂಣಿಯ ಯುವ ನಾಯಕ ಬೇರ್ಮೆ ಆಗಿ ನಟ ರಿಷಬ್ ಕಾಣಿಸಿಕೊಂಡರೆ, ಬಾಂಗ್ರಾ ರಾಜ ಮನೆತನದ ಅರಸರಾಗಿ ಮಲಯಾಳಂ ಚಿತ್ರರಂಗದ ಜಯರಾಮ್ (ರಾಜಶೇಖರ) ಮತ್ತು ಗುಲ್ಶನ್ ದೇವಯ್ಯ (ಕುಲಶೇಖರ) ಅವರು ಕಾಣಿಸಿಕೊಂಡಿದ್ದಾರೆ. ಇವರ ನಡುವಿನ ಸಮರದಲ್ಲಿ ದೈವದ ಪಾತ್ರವೇನು? ದೈವಕ್ಕೂ ಹೂದೋಟಕ್ಕೂ ಯಾವ ನಂಟು ಎಂಬುದನ್ನು ತೆರೆಮೇಲೆ ಅತ್ಯದ್ಭುತ ಮೇಕಿಂಗ್ನೊಂದಿಗೆ ಹೇಳಿದ್ದಾರೆ ನಿರ್ದೇಶಕ ರಿಷಬ್ ಚಿತ್ರದ ಮೂಲಕ ತಿಳಿಸಿದ್ದಾರೆ. ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ರವರ ಪಾತ್ರ ನೆನಪಿನಲ್ಲಿ ಉಳಿಯುವಂತದ್ದು. ರಂಗಭೂಮಿ ನಟರಾದ ನವೀನ್ ಡಿ ಪಡೀಲ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಇತ್ತಿಚೆಗೆ ಇಹಲೋಕ ತ್ಯಜಿಸಿದ ರಾಕೇಶ್ ಪೂಜಾರಿಯವರ ಪಾತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ತುಳು ನಾಡಿನ ಜಾನಪದ ಆಚರಣೆ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಮತ್ತೋಮ್ಮೆ ತೋರಿಸುವ ಮೂಲಕ ಕಾಂತಾರ ಚಾಪ್ಟರ್ 1 ಹೊರಡಿದೆ ಹೇಳಲು ತಪ್ಪಾಗಲಾರದು.
ಲೇಖನ : ವಿಜಯಕುಮಾರ್ ಶೆಟ್ಟಿ, ಗಾಣದಮೂಲೆ (ದುಬೈ)