ಮೈಸೂರು ದಸರಾ ಪ್ರಯುಕ್ತ ನಡೆದ ರಾಜ್ಯ ಮಟ್ಟದ ದಸರಾ ಸಿಎಂ ಕಪ್ 2025 ರಲ್ಲಿ ಆಳ್ವಾಸ್ ತಂಡವು ಹಲವು ಪ್ರಶಸ್ತಿ ಮತ್ತು ಪದಕಗಳನ್ನು ಪಡೆದುಕೊಂಡಿದೆ. ತಂಡ ವಿಭಾಗದ ಕ್ರೀಡೆಗಳಾದ ಪುರುಷರ ಕಬಡ್ಡಿಯಲ್ಲಿ ಆಳ್ವಾಸ್ ತಂಡ ಬೆಂಗಳೂರು ಸಿಟಿಯ ವಿರುದ್ಧ 13 ಅಂಕಗಳ ಅಂತರದಿಂದ ಜಯಶಾಲಿಯಾದರೆ, ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ನಲ್ಲಿ ಆಳ್ವಾಸ್ ತಂಡ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ 30-08, 35-20 ನೇರ ಸೆಟ್ಗಳಿಂದ ಸೋಲಿಸಿ ಪ್ರಥಮ ಸ್ಥಾನವನ್ನು ಪಡೆಯಿತು. ಅಂತೆಯೇ ಮಹಿಳಾ ಕಬಡ್ಡಿ, ಪುರುಷರ ಖೋ-ಖೋ, ಬಾಲ್ ಬ್ಯಾಡ್ಮಿಂಟನ್ನಲ್ಲಿ ಆಳ್ವಾಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಅಥ್ಲೇಟಿಕ್ಸ್ ನಲ್ಲಿ ಆಳ್ವಾಸ್ನ ನಾಗ್ರೇಂದ್ರ ಡಿಸ್ಕಸ್ ಥ್ರೋನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದರೆ, 800 ಮೀ ಓಟದಲ್ಲಿ ಆಳ್ವಾಸ್ನ ರೇಖಾ ಬಸಪ್ಪ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ವೈಯಕ್ತಿಕ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗದ ಒಟ್ಟು ಕ್ರೀಡಾಕೂಟದಲ್ಲಿ 6 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕವನ್ನು, ವೇಯ್ಟ್ ಲಿಫ್ಟಿಂಗ್ನಲ್ಲಿ ಒಟ್ಟು 8 ಚಿನ್ನ, 4 ಬೆಳ್ಳಿ, 4 ಕಂಚಿನ ಪದಕವನ್ನು, ಕುಸ್ತಿ ಪಂದ್ಯಾಟದಲ್ಲಿ ಒಟ್ಟು 5 ಕಂಚಿನ ಪದಕ, ಯೋಗಾಸನ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕಗಳನ್ನು ಪಡೆದುಕೊಂಡಿದೆ. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.