ಮುಂಬಯಿ:- ವಿಶ್ವ ವಿದ್ಯಾಲಯ, ಕನ್ನಡ ವಿಭಾಗ ಹಾಗೂ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿರುವ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು ಶುಕ್ರವಾರ ಬೆಳಿಗ್ಗೆ 11.30ರಿಂದ ಮುಂಬೈ ವಿಶ್ವವಿದ್ಯಾಲಯದ ಜೆ.ಪಿ ನಾಯಕ್ ಭವನ, ವಿದ್ಯಾನಗರಿ ಸಾಂತಾಕ್ರೂಜ್( ಪೂ) ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ.ಜಿ.ಎನ್ ಉಪಾಧ್ಯ ಅವರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಜಾನಪದ ವಿದ್ವಾಂಸರಾದ ಡಾ. ಕಾಳೇಗೌಡ ನಾಗವಾರ ಅವರು, ಅತಿಥಿಯಾಗಿ ಬಾಂಬೆ ಬಂಟ್ಸ್, ಅಸೋಸಿಯೇಷನ್ ಮುಂಬೈ ಇದರ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ. ಅಂದು ಡಾ. ವಿಶ್ವನಾಥ್ ಕಾರ್ನಾಡರ ಅಪರಾಧಿ( ಕನ್ನಡದಿಂದ ಮರಾಠಿಗೆ ಅನುವಾದಿತ ಕಥೆಗಳು) ಹಾಗೂ ಲಿಲ್ಲಿ ಬಂದು ಹೋದಳು (ಕಥಾಸಂಕಲನ) ಕೃತಿಗಳು ಬಿಡುಗಡೆಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅಂತಹ ಗಣೇಶ ಮಂಗಳಮೂರ್ತಿ (ಮೂಲ ಮರಾಠಿ ಲೇಖಕರಾದ ಮಾಧವಿ ಕುಂಠೆ, ಅನುವಾದ ಸರೋಜಿನಿ ತರೆ) ಕೃತಿಯೂ ಬಿಡುಗಡೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜಾದೂಗಾರ ಸೂರಪ್ಪ ಕುಂದರ್ ಅವರಿಂದ ಜಾದೂ ಪ್ರದರ್ಶನ ನಡೆಯಲಿದೆ. ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ.ವಿಶ್ವನಾಥ ಕಾರ್ನಾಡ್ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕಾರ್ನಾಡ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸಂಯೋಜಿಸಲಿದ್ದಾರೆ.ತಾಂತ್ರಿಕವಾಗಿ ಲೇಖಕರಾದ ವಿದ್ಯಾ ರಾಮಕೃಷ್ಣ ಅವರು ಸಹಕರಿಸಲಿದ್ದಾರೆ ಎಂದು ಕನ್ನಡ ವಿಭಾಗ ಹಾಗೂ ಕಾರ್ನಾಡ್ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಡಾ.ವಿಶ್ವನಾಥ ಕಾರ್ನಾಡ್ :-
ಮುಂಬೈ ಮಹಾನಗರದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲಿ ಡಾ. ವಿಶ್ವನಾಥ್ ಕಾರ್ನಾಡ್ ಅವರೂ ಒಬ್ಬರು. ಅವರದು ಬಹುಮುಖ ಪ್ರತಿಭೆ ಹಾಗೂ ನಾನಾ ಬಗೆಯ ವ್ಯಕ್ತಿತ್ವ. ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ಕವಿಯಾಗಿ, ಕತೆಗಾರರಾಗಿ, ಅನುವಾದಕರಾಗಿ, ಸಾಹಿತ್ಯ ಪರಿಚಾರಕರಾಗಿ ಅವರು ಹೆಸರು ಮಾಡಿದ್ದಾರೆ. ಡಾ. ಕಾರ್ನಾಡ್ ಅವರದು ಬಹುಭಾಷಿಕ ಸಂವೇದನೆ. ಕನ್ನಡ, ಹಿಂದಿ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಅವರು ಒಳ್ಳೆಯ ಪ್ರಭುತ್ವವನ್ನು ಹೊಂದಿದ್ದಾರೆ. ಕನ್ನಡದಲ್ಲಿ ಬೋಧನೆ ಹಾಗೂ ಸಂಶೋಧನೆಯನ್ನು ವೃತ್ತಿಯಾಗಿರಿಸಿಕೊಂಡು ಮುನ್ನಡೆದ ಕಾರ್ನಾಡರು ಅಲ್ಲಿಗೆ ವಿರಮಿಸದೆ ನುಡಿ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಶೋಧ ಕುತೂಹಲ, ಅನ್ವೇಷಣೆಯ ಪ್ರವೃತ್ತಿಗಳ ಜೊತೆಗೆ ಮುಂಬೈ ಮಹಾನಗರ ನೀಡಿದ ಅಪಾರ ಲೋಕಾನುಭವಗಳಿಂದ ಅವರ ಸೃಜನಶೀಲತೆಗೆ ಹೊಸ ಅರ್ಥವಂತಿಗೆ ಪ್ರಾಪ್ತವಾದದ್ದು ಗಮನೀಯ ಅಂಶ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಪರಿಣಾಮಕಾರಿ ಕತೆಗಾರರಾಗಿರುವ ಡಾ.ಕಾರ್ನಾಡ್ ಅವರು ಕಾವ್ಯ, ವಿಮರ್ಶೆ, ಸಂಶೋಧನೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಇದುವರೆಗೆ ಸುಮಾರು 30ಕ್ಕೂ ಕೃತಿಗಳನ್ನು ರಚಿಸಿದ್ದಾರೆ. ಸುವರ್ಣ ಕರ್ನಾಟಕ ಪುಸ್ತಕ ಬಹುಮಾನ, ಕರ್ನಾಟಕ ಜಾನಪದ ಸಾಹಿತ್ಯ ಪ್ರಶಸ್ತಿ , ವಚನ ಶ್ರೀ ರಾಷ್ಟ್ರೀಯ ಪುರಸ್ಕಾರ ಶ್ರೀ ನಾರಾಯಣಗುರು ಸಾಹಿತ್ಯ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅಲ್ಲದೆ ಛತ್ರಪತಿ ಶಿವಾಜಿ ಮಹಾರಾಜ್ ಪ್ರಶಸ್ತಿ, ಕುಂದಣಗಾರ ಪ್ರಶಸ್ತಿ ಮೊದಲಾದ ಪ್ರತಿಷ್ಠಿತ ಪುರಸ್ಕಾರಗಳೂ ಅವರನ್ನು ಅರಸಿ ಬಂದಿವೆ. ಕನ್ನಡ ಭಾಷೆ, ಸಾಹಿತ್ಯದ ಸೇವೆ, ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಡಾ. ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನವನ್ನು ಅವರು ಸಂಸ್ಥಾಪನೆ ಮಾಡಿದ್ದಾರೆ.