ಕಲಾ ಸಂಘವನ್ನು ಹುಟ್ಟು ಹಾಕುವುದರ ಮುಖೇನ ಸಾಂಸ್ಕೃತಿಕ, ಕ್ರೀಡೆ, ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದ ಧ್ಯೇಯೋದ್ದೇಶ ಶ್ಲಾಘನೀಯವಾದದ್ದು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಕಟ್ಟಿನಮಕ್ಕಿ ಶ್ರೀ ಮಹಾಲಿಂಗೇಶ್ವರ ಕಲಾ ಸಂಘದ ಏಳನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಲೂರು ಪಂಚಾಯಿತಿ ಅಧ್ಯಕ್ಷ ರಾಜೇಶ್ ಎನ್. ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೋಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ, ಆಲೂರು ಪಂಚಾಯಿತಿ ಸದಸ್ಯರಾದ ಪ್ರಮೋದ ಕುಶಲ ಶೆಟ್ಟಿ, ರಾಜೇಂದ್ರ ದೇವಾಡಿಗ ಉಪಸ್ಥಿತರಿದ್ದರು.
ಕಲಾ ಸಂಘದ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ದೇವಾಡಿಗ ಸ್ವಾಗತಿಸಿದರು. ವಿಜೇಂದ್ರ ಆಚಾರ್ಯ ನಿರೂಪಿಸಿದರು. ಸವಿತಾ ವಂದಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗಿಚ್ಚಿಗಿಲಿ ಖ್ಯಾತಿಯ ಪ್ರಸಾದ್ ಜೋಗಿ ಅವರನ್ನು ಸನ್ಮಾನಿಸಲಾಯಿತು. ಕಲಾ ಸಂಘದ ಸದಸ್ಯರಿಂದ ಯಕ್ಷಗಾನ ಜರುಗಿತು.