ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಶಿಕ್ಷಣದ ಮಹತ್ವ ಚೆನ್ನಾಗಿ ತಿಳಿದಿತ್ತು. ಅವರು ಬಹಳ ಕಷ್ಟಪಟ್ಟು ಓದಿ ಮುಂದೆ ಬಂದಿದ್ದವರು. ಹಾಗಾಗಿ ಅವರು ಓದುವ ಮಕ್ಕಳಿಗೆ ಬಹಳವಾಗಿ ಪ್ರೋತ್ಸಾಹ ನೀಡುತ್ತಿದ್ದರು. ತಮ್ಮ ಹತ್ತಿರದ ಬಂಧು- ಬಳಗದವರಲ್ಲಿ, ಸ್ನೇಹಿತರಲ್ಲಿ ಯಾರಿಗಾದರೂ ಓದಿಗೆ ತೊಂದರೆಯಾಗಿದ್ದರೆ, ಅದನ್ನು ತಕ್ಷಣವೇ ಪರಿಹರಿಸುತಿದ್ದರು. ಚೆನ್ನಾಗಿ ಓದುವ ಹುಡುಗರಿಗೆ, ಓದಿನ ಬಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಿಸಲು ಬಹುಮಾನಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಯಾರಾದರೂ ಆಗಿನ ಕಾಲದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ತಾವು ನೂರು ರೂಪಾಯಿಗಳ ಬಹುಮಾನ ಕೊಡುವುದಾಗಿ ಪ್ರಕಟಪಡಿಸಿದ್ದರು. ಆಗಿನ ಕಾಲದಲ್ಲಿ ನೂರು ರೂಪಾಯಿಗಳು ಬಹಳ ದೊಡ್ಡ ಮೊತ್ತವೇ ಆಗಿತ್ತು. ಪ್ರತಿ ವರ್ಷ ಕೊಟ್ಟ ಮಾತಿನಂತೆ ಈ ಬಹುಮಾನವನ್ನು ನೀಡುತ್ತಾ ಬಂದಿದ್ದರು.

ಒಂದು ವರ್ಷ ಅವರ ಸಂಬಂಧಿಗಳ ಮಗನೊಬ್ಬ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದ. ಹೀಗಾಗಿ ಆತ ಬಹುಮಾನಕ್ಕೆ ಅರ್ಹನಾಗಿದ್ದ. ಬಹುಮಾನ ಪಡೆಯುವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ, ವಿಶ್ವೇಶ್ವರಯ್ಯನವರ ಮನೆಗೆ ರಾತ್ರಿ ಏಳು ಮುಕ್ಕಾಲಿನ ಸಮಯಕ್ಕೆ ಹೋಗಬೇಕಾಗಿತ್ತು. ಸರಿಯಾಗಿ ವಿಶ್ವೇಶ್ವರಯ್ಯನವರೊಂದಿಗೆ ಎಂಟು ಗಂಟೆಯ ಸಮಯಕ್ಕೆ ಊಟಕ್ಕೆ ಕುಳಿತುಕೊಳ್ಳಬೇಕು. ಊಟವಾದ ಮೇಲೆ ವಿಶ್ವೇಶ್ವರಯ್ಯನವರು ವಿದ್ಯಾರ್ಥಿಗೆ ಆಶೀರ್ವದಿಸಿ, ಬಹುಮಾನ ನೀಡುತ್ತಿದ್ದರು. ಇದು ಅವರ ಪದ್ಧತಿಯಾಗಿತ್ತು. ಅದರಂತೆ ಆ ವರ್ಷ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗೆ, ಇವರ ಮನೆಗೆ ಬರುವ ಸಂದೇಶ ಕಳಿಸಿದ್ದರು.
ಈ ಹುಡುಗನಿಗೆ ತಾನು ಪ್ರಥಮ ಸ್ಥಾನ ಪಡೆದದ್ದರಿಂದ ಬಹಳ ಸಂತೋಷವಾಗಿತ್ತು. ಅದರ ಖುಷಿಯಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಬೆಂಗಳೂರಿನ ಪೇಟೆಗಳಲ್ಲಿ ಸುತ್ತುತ್ತಾ ಮೋಜಿನಲ್ಲಿ ಕಾಲ ಕಳೆಯುವಾಗ ಸಮಯ ಮೀರಿದ್ದರ ಅರಿವಾಗಲಿಲ್ಲ . ಹಾಗಾಗಿ ಆತ ವಿಶ್ವೇಶ್ವರಯ್ಯನವರ ಮನೆಗೆ ಏಳು ಮುಕ್ಕಾಲಿನ ಸಮಯಕ್ಕೆ ಬದಲಾಗಿ ಎಂಟೂ ಮುಕ್ಕಾಲರ ಸಮಯಕ್ಕೆ ಬಂದ. ವಿಶ್ವೇಶ್ವರಯ್ಯನವರು ಎಂದೂ ಕೂಡ ತಮ್ಮ ಸಮಯವನ್ನು ಮೀರುವವರಲ್ಲಾ. ಅವರು ಸರಿಯಾಗಿ ಎಂಟು ಗಂಟೆಗೆ ತಮ್ಮ ಊಟ ಮುಗಿಸಿ ತಮ್ಮ ಕೊಠಡಿಗೆ ತೆರಳಿದರು. ಊಟ ಬಡಿಸುವವರಿಗೆ, ಪ್ರಥಮ ಸ್ಥಾನ ಪಡೆದ ಹುಡುಗ ಬಂದಾಗ, ಅವನ ಊಟವಾದ ನಂತರ, ಅವನು ಬಂದು ತಮ್ಮನ್ನು ಕಾಣಲಿ ಎಂಬ ಸಂದೇಶವನ್ನು ನೀಡಿದ್ದರು.ನಾನು ಬಂದಿದ್ದು ತಡವಾಗಿದೆ ಎಂದು ಅರಿತ ಹುಡುಗ, ಬೇಗ ಬೇಗನೆ ತನ್ನ ಊಟ ಮುಗಿಸಿದ. ನಂತರ ಸಂಕೋಚದಿಂದಲೇ ವಿಶ್ವೇಶ್ವರಯ್ಯನವರ ಕೊಠಡಿಯತ್ತ ತೆರಳಿದ. ಅವರು ಅವನನ್ನು ಹತ್ತಿರ ಕರೆದು, ಹರಸಿ, ಒಂದು ಲಕೋಟೆಯನ್ನು ಕೊಟ್ಟರು. ಆತ ಅದನ್ನು ಬಿಚ್ಚಿ ನೋಡದೆ ತನ್ನ ಜೇಬಿನಲ್ಲಿ ಮಡಿಸಿ ಇಟ್ಟುಕೊಂಡು, ಅವರಿಗೆ ನಮಸ್ಕರಿಸಿದ. ಆಗ ವಿಶ್ವೇಶ್ವರಯ್ಯನವರು, ಮಗೂ, ಎಂದಿಗೂ ಹಣವನ್ನು ಎಣಿಸದೇ ಹಾಗೆಯೇ ಇಟ್ಟುಕೊಳ್ಳಬಾರದು. ಅದನ್ನು ಸರಿಯಾಗಿ ಎಣಿಸಿ ನೋಡಿಕೋ ಎಂದರು. ಹುಡುಗ ಲಕೋಟೆಯನ್ನು ತೆಗೆದು ಹಣವನ್ನು ಎಣಿಸಿದಾಗ ಅದರೊಳಗೆ ಬರೀ ಇಪ್ಪತ್ತೈದು ರೂಪಾಯಿಗಳು ಮಾತ್ರ ಇದ್ದವು. ಆತ ನೂರು ರೂಪಾಯಿ ಇರುತ್ತದೆ ಎಂಬ ಆಸೆಯಿಂದ ಇದ್ದ. ಆತ ವಿಶ್ವೇಶ್ವರಯ್ಯನವರ ಮುಖವನ್ನು ನೋಡಿದಾಗ ಅವನ ಮುಖದಲ್ಲಿ ನಿರಾಶೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವನ ಮುದುಡಿದ ಮುಖವನ್ನು ನೋಡಿದ ವಿಶ್ವೇಶ್ವರಯ್ಯನವರು, ನೀನು ಎಂಟು ಗಂಟೆಗೆ ಸರಿಯಾಗಿ ಬರಬೇಕಿತ್ತು, ಆದರೆ ಮುಕ್ಕಾಲು ಗಂಟೆ ತಡವಾಗಿ ಬಂದೆ, ಆದ್ದರಿಂದ ಮುಕ್ಕಾಲು ಭಾಗ ಹಣ ಕಡಿಮೆಯಾಯಿತು. ಅದಕ್ಕೇ ನಿನಗೆ ನೂರು ರೂಪಾಯಿಯ ಬದಲು ಕೇವಲ ಇಪ್ಪತ್ತೈದು ರೂಪಾಯಿಗಳು ದೊರಕಿದವು. ಈ ಪಾಠವನ್ನು ನೀನು ಎಂದಿಗೂ ಮರೆಯಬೇಡ. ಸಮಯವೆಂದರೆ ಹಣಕ್ಕೂ ಮಿಗಿಲಾದದ್ದು. ಸಮಯದ ಪ್ರತಿಯೊಂದು ನಿಮಿಷಕ್ಕೂ ಅದರದ್ದೇ ಆದ ಬೆಲೆ ಇರುತ್ತದೆ, ಎಂದರು.
ನೀತಿ : ಈ ಪಾಠವನ್ನು ಮುಂದೆ, ಈ ಹುಡುಗ ತನ್ನ ಜೀವನದಲ್ಲಿ ಎಂದೂ ಮರೆಯಲಿಲ್ಲ. ಅವನ ಮನದಲ್ಲಿ ಅದು ಅವಿಭಾಜ್ಯ ಅಂಗವಾಗಿ ಬಿಟ್ಟಿತ್ತು. ನಾವೆಲ್ಲರೂ ಕಾಲದ ಬೆಲೆಯನ್ನರಿತು ಬಾಳಬೇಕು. ಕಳೆದು ಹೋದ ಸಮಯ ಮತ್ತೆಂದೂ ಹಿಂದಕ್ಕೆ ಬರುವುದಿಲ್ಲ.