ಅನಾದಿಕಾಲದಿಂದಲೂ ಅತಿಥಿ ಸತ್ಕಾರಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದೇವೆ. ‘ಅತಿಥಿ ದೇವೋ ಭವ’ ಎನ್ನುವಂತೆ ಅತಿಥಿಗಳನ್ನು ದೇವರಂತೆ ಕಾಣುತ್ತೇವೆ. ಹಿಂದೆಲ್ಲಾ ಈಗಿನಂತೆ ತಿಜೋರಿ, ಕಪಾಟುಗಳಿರಲಿಲ್ಲ. ಆಗೇನಿದ್ದರೂ ಕಿರಾಣಿ ಡಬ್ಬಗಳಲ್ಲಿ ನಗ, ನಾಣ್ಯಗಳನ್ನು ಬಚ್ಚಿಡುತ್ತಿದ್ದರು. ಬಾಲ ಗಂಗಾಧರನಾಥ ತಿಲಕರ ಮನೆಯೂ ಅದಕ್ಕೆ ಹೊರತಲ್ಲ.

ಒಮ್ಮೆ ಬೆಳ್ಳಂಬೆಳಿಗ್ಗೆಯೇ ಭಿಕ್ಷುಕನೊಬ್ಬ ತಿಲಕರ ಮನೆಗೆ ಬಂದ. ಮನೆ ಮುಂದೆ ನಿಂತು ಭವತೀ ಭಿಕ್ಷಾಂ ದೇಹಿ ಎಂದು ಕೂಗಿದ. ತಿಲಕರ ಮನೆಯ ಸೊಸೆ ಹೊರಗೆ ಬಂದಳು. ಅಕ್ಕಿಯ ಡಬ್ಬ ಆಕೆಯ ಕೈಯಲ್ಲಿತ್ತು. ಬಂದವಳೇ ಹಿಂದೆ ಮುಂದೆ ನೋಡದೆ ಡಬ್ಬವನ್ನೇ ಆ ಭಿಕ್ಷುಕನ ಚೀಲಕ್ಕೆ ಸುರಿದಳು. ಅಚಾನಕ್ ಎನ್ನುವಂತೆ ಆ ಡಬ್ಬದಲ್ಲಿ ಹುದುಗಿಸಿಟ್ಟಿದ್ದ ಮುತ್ತಿನ ಮೂಗುತಿಯೂ ಸಹ ಭಿಕ್ಷುಕನ ಚೀಲದೊಳಗೆ ಬಿತ್ತು. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡುತ್ತಾ ನಿಂತುಕೊಂಡರು. ಯಾರೊಬ್ಬರಿಗೂ ಏನು ಮಾಡಬೇಕೆಂದು ತಿಳಿಯಲಿಲ್ಲ. ಇತ್ತ ಭಿಕ್ಷುಕನಿಗೋ ಸಂಕೋಚ ಜಾರಿಬಿದ್ದ ಮೂಗುತಿಯನ್ನು ಹೇಗೆ ಹಿಂದಿರುಗಿಸುವುದು? ಹಿಂದಿರುಗಿಸಿದರೆ ಅವರು ಏನಂದುಕೊಳ್ಳುತ್ತಾರೋ ಎನ್ನುವ ಜಿಜ್ಞಾಸೆ. ಇತ್ತ ಸೊಸೆಗೂ ಅದೇ ಆತಂಕ. ತಾನಾಗಿ ದಾನ ಕೊಟ್ಟ ವಸ್ತು ಅದಲ್ಲ. ಆದರೆ ಮರಳಿ ಕೊಡು ಎಂದು ಕೇಳುವ ಬಗೆ ಹೇಗೆ ಎಂದು ಅವಾಕ್ಕಾದಳು.ಅಷ್ಟು ಹೊತ್ತಿಗೆ ಬಾಲ ಗಂಗಾಧರನಾಥ ತಿಲಕರು ಅಲ್ಲಿಗೆ ಬಂದರು. ಅವರಿಗೆ ಇವರೀರ್ವರ ಸಮಸ್ಯೆ ಸುಲಭವಾಗಿ ಅರ್ಥವಾಯಿತು. ಸೊಸೆಯ ಬಳಿ ಹೋದರು. ‘ಅಮ್ಮಾ… ಗೊತ್ತೋ ಗೊತ್ತಿಲ್ಲದೆಯೇ ಮೂಗುತಿಯನ್ನು ನೀನೀಗ ದಾನ ಮಾಡಿದ್ದೀಯ. ನೋಡಮ್ಮ ನೀನು ಮೂಗುತಿಯನ್ನು ದಾನ ಮಾಡಿ ಆಯಿತು. ಒಮ್ಮೆ ದಾನ ಮಾಡಿದ ಮೇಲೆ ಆ ವಸ್ತು ನಮ್ಮದಲ್ಲ. ಅದೀಗ ಯಾರಿಗೆ ಸೇರಬೇಕೋ ಅವರ ಬಳಿ ಸುರಕ್ಷಿತವಾಗಿ ಸೇರಿದೆ. ಎನ್ನುತ್ತಾರೆ. ಇವರೀರ್ವರ ಮಾತು ಕೇಳುತ್ತಿದ್ದ ಆ ಭಿಕ್ಷುಕ ತಿಲಕರ ದೊಡ್ಡತನಕ್ಕೆ ತಲೆದೂಗುತ್ತಾ ತನ್ನೊಂದಿಗೆ ಮೂಗುತಿಯನ್ನು ತೆಗೆದುಕೊಂಡು ಹೋಗುತ್ತಾನೆ.
ನೀತಿ : ಒಳ್ಳೆಯವರ ಸಹವಾಸದಿಂದ ಸಮಸ್ಯೆಗಳು ತಾನಾಗೇ ಬಗೆಹರಿಯುತ್ತವೆ.