ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುರತ್ಕಲ್ ಬಂಟರ ಸಂಘದ ಸದಸ್ಯರಿಂದ ನಡೆದ ಬಂಟ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ, ಸುಧಾಕರ ಪೂಂಜ ಹೊಸಬೆಟ್ಟು, ಗಿರೀಶ್ ಎಂ ಶೆಟ್ಟಿ ಕಟೀಲು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಸಂಯೋಜನೆಯಲ್ಲಿ ಹಾಗೂ ರಾಜೇಶ್ವರಿ ಡಿ.ಶೆಟ್ಟಿಯವರ ಸಮರ್ಥ ನಿರ್ದೇಶನದಲ್ಲಿ ಪ್ರಸ್ತುತಪಡಿಸಲ್ಪಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿತ್ತು.
ತುಳುನಾಡಿನ ಗುತ್ತಿನ ಮನೆ, ಆಚಾರ ವಿಚಾರ, ನಂಬಿಕೆ ನಡವಳಿಕೆಗಳನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮವನ್ನು ವೇದಿಕೆಯಲ್ಲಿ ಒಟ್ಟು 2 ಗಂಟೆಗಳ ಕಾಲ ಸುರತ್ಕಲ್ ಬಂಟರ ಸಂಘದ 130 ಮಂದಿ ಕಲಾವಿದರ ತಂಡ ಸಾದರ ಪಡಿಸುವ ಮೂಲಕ ಪುಣೆ ಬಂಟರ ಸಂಘದಲ್ಲಿ ಹೊಸ ಮುನ್ನುಡಿಯನ್ನು ಬರೆಯಿತು.
ಭೂತಾಳ ಪಾಂಡ್ಯ, ಕೊಜಂಬು ಕ್ರಮ, ಕರಪತ್ತಾವುನು, ತುಳುನಾಡಿನ ಬಂಟ ಸಮುದಾಯದ ಜೀವನಾಡಿಯಾದ ಕೃಷಿ ಚಟುವಟಿಕೆ, ತುಡರ್ ಪೂಜೆ- ಗೋ ಪೂಜೆ, ಜಾನಪದ ನೃತ್ಯ, ಉತ್ತರಕ್ರಿಯೆ ಸಂಪ್ರದಾಯ, ಯಕ್ಷಗಾನ, ವೀರಪುರುಷರ ಪರಿಚಯದ ಜೊತೆಗೆ ಸಾಧಕರ ಕುರಿತು ಯುವಜನತೆಗೆ ಪರಿಚಯ ಮಾಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ಅದರಲ್ಲೂ ತುಳುನಾಡಿನ ದೇವರ ಜಾತ್ರೆ, ದೇವರ ಬಲಿ ಉತ್ಸವವಂತೂ ನೆರೆದವರನ್ನು ರೋಮಾಂಚನಕಾರಿಗೊಳಿಸಿತ್ತು. ಜಾತ್ರೆ ಸಂದರ್ಭದಲ್ಲಿ ಕಂಡುಬರುವ ಗೊಂಬೆಗಳು, ಬೇತಾಳ, ತಿಂಡಿ, ಐಸ್ ಕ್ರೀಮ್, ಪುಗ್ಗೆ ಮಾರಾಟ ಮಾಡುವವರು, ಗರ್ನಾಲ್ ಸಿಡಿಸುವವರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಯಕ್ಷಗಾನದಲ್ಲಿ ಮಹಿಷಾಸುರ ಪಾತ್ರಕ್ಕೆ ಜೀವ ತುಂಬಿದ ಮಹಿಳಾ ಪಾತ್ರಧಾರಿ ಪೂರ್ಣಿಮಾ ಯತೀಶ್ ರೈ ಎಲ್ಲರ ಗಮನವನ್ನು ಸೆಳೆದರು. ತುಳುನಾಡಿನ ಕಲೆ, ಸಂಪ್ರದಾಯವನ್ನು ಬಂಟರು ಯಾವ ರೀತಿ ಅನಾದಿ ಕಾಲದಿಂದ ಪೊರೆದು ಪೋಷಿಸಿಕೊಂಡು ಬಂದರೆನ್ನುವುದನ್ನು ತಿಳಿಯಲು ಸುರತ್ಕಲ್ ಬಂಟರ ಸಂಘದ ಈ ಕಾರ್ಯಕ್ರಮ ಪೂರಕವಾಯಿತು.
ಪುಣೆಯಲ್ಲಿ ಜರುಗಿದ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ವೇದಿಕೆಯಿಂದ ಹಿಡಿದು ಪ್ರೇಕ್ಷಕರ ಗ್ಯಾಲರಿ ತನಕ ತುಂಬಿ ತುಳುಕಿದ್ದು ಒಂದು ದಾಖಲೆಯಾದರೆ ಸುರತ್ಕಲ್ ನಿಂದ ದೂರದ ಪುಣೆಗೆ 130ಕ್ಕೂ ಹೆಚ್ಚು ಮಂದಿ ಸದಸ್ಯರು, ಕಾರ್ಯಕ್ರಮಕ್ಕೆ ಬೇಕಾಗುವ ಪರಿಕರಗಳೊಂದಿಗೆ ಹೋಗಿ ಕಾರ್ಯಕ್ರಮ ನೀಡಿದ್ದು ಇನ್ನೊಂದು ದಾಖಲೆ. ಇಂತಹ ಕಾರ್ಯಕ್ರಮದ ಕುರಿತು ಅತಿಥಿಗಳು ಮೆಚ್ಚುಗೆಯ ಮಾತನ್ನಾಡಿದರೆ ಕಲಾವಿದರು ಹರ್ಷ ವ್ಯಕ್ತಪಡಿಸಿದರು. ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಬಾಳಿಕೆ ಕುರ್ಕಿಲ್ ಬೆಟ್ಟು ಸಾಂಸ್ಕೃತಿಕ ತಂಡಕ್ಕೆ ಒಳ್ಳೆಯ ಆತಿಥ್ಯ ನೀಡಿದ್ದರು. ಕರ್ನೂರ್ ಮೋಹನ್ ರೈ, ಅಶೋಕ್ ಪಕ್ಕಳ ಮೊದಲಾದವರ ಸಹಕಾರವೂ ಇತ್ತು.
ಚಿತ್ರಗಳು: ರಾಜೇಶ್ ಶೆಟ್ಟಿ ಬಲ್ಲಾಲ್ ಭಾಗ್