ಬ್ಯಾಂಕ್ ಉದ್ಯೋಗಿಯೊಬ್ಬರು ಹೋಟೆಲ್ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸನ್ನು ಕಂಡಿರುವುದು ಸಾಮಾನ್ಯ ಮಾತಲ್ಲ. ಮುಲುಂಡ್ ಪಶ್ಚಿಮದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿರುವ ಹೋಟೆಲ್ ಸೌಂದರ್ಯದ ಮಾಲಕರಾದ ಹರ್ಷವರ್ಧನ್ ಶೆಟ್ಟಿಯವರು ಬ್ಯಾಂಕ್ ಉದ್ಯೋಗದೊಂದಿಗೆ ಹೋಟೆಲ್ ಉದ್ಯಮವನ್ನು ಆರಂಭಿಸಿರುವ ಸಾಹಸಗಾಥೆ ಮಾದರಿಯಾಗಿದೆ. ಸರಳ ವ್ಯಕ್ತಿತ್ವದ, ಸದಾ ಹಸನ್ಮುಖಿ, ಎಲ್ಲರನ್ನು ಆತ್ಮೀಯರಂತೆ ಕಾಣುವ ಗುಣವನ್ನು ಹೊಂದಿರುವ ಇವರು ನಡೆದು ಬಂದ ಬಗೆ ಆಶ್ಚರ್ಯ ಪಡುವಂತದ್ದು. 17 ವರ್ಷಗಳ ಕಾಲ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಹೋಟೆಲ್ ಮಾಲೀಕರಾಗಿ ಅನೇಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೋಟೆಲ್ ಉದ್ಯಮದ ಮೂಲಕ ನೂರಾರು ಮಂದಿಗೆ ನೌಕರಿಯನ್ನು ನೀಡಿ ಅನೇಕ ಕುಟುಂಬಗಳಿಗೆ ಬೆಳಕಾಗಿದ್ದಾರೆ. ಎಳವೆಯಿಂದಲೇ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಶಿಸ್ತುಬದ್ಧ ಬದುಕು ಅವರದ್ದಾಗಿದೆ.ಉಡುಪಿ ಜಿಲ್ಲೆಯ ಮುದ್ರಾಡಿ ಕೃಷ್ಣಯ್ಯ ಶೆಟ್ಟಿ ಹಾಗೂ ಆತ್ರಾಡಿಯ ರುದ್ರು ಹೆಗ್ಡೆ ದಂಪತಿಯ 7 ಮಕ್ಕಳಲ್ಲಿ ಕೊನೆಯ ಪುತ್ರರಾಗಿ 1955ರ ಮಾರ್ಚ್ 16ರಂದು ಜನಿಸಿದ ಹರ್ಷವರ್ಧನ್ ಅವರು, 1976ರಲ್ಲಿ ಎಂಜಿಎಂ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದರು. ತಂದೆ ಶಿಕ್ಷಕರಾಗಿದ್ದುದರಿಂದ ಮನೆಯ ಶಿಸ್ತು ಪಾಲನೆಯು ಹರ್ಷವರ್ಧನ್ ಅವರ ಆದರ್ಶ, ಸುಸಂಸ್ಕೃತ ಜೀವನಕ್ಕೆ ಬದ್ರ ಬುನಾದಿಯನ್ನು ಹಾಕಿ ಕೊಟ್ಟಿತ್ತು. ಇದರಿಂದಾಗಿ ಬ್ಯಾಂಕ್ ನೌಕರಿಯಲ್ಲಾಗಲಿ ಅಥವಾ ಹೋಟೆಲ್ ಉದ್ಯಮದ ವ್ಯವಹಾರದಲ್ಲಿ ಲೆಕ್ಕಚಾರವು ಸ್ವಚ್ಛತೆಯನ್ನು ಹೊಂದಿತ್ತು. ತನ್ನ 22ನೇ ವಯಸ್ಸಿನಲ್ಲಿ ವಿಜಯ್ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರಿದ ಇವರು ಪ್ರಾರಂಭದಲ್ಲಿ ಮಹಾರಾಷ್ಟ್ರದ ಸತಾರಾದ ಕರಾಡ್ ನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು. ಬಳಿಕ ಮುಂಬೈ ಕೊಲಬಾ ಶಾಖೆಗೆ ವರ್ಗಾವಣೆ ಪಡೆದರು. ಮಾಯಾ ನಗರಿ ಮುಂಬೈಯಲ್ಲಿ ಅನೇಕ ರೀತಿಯ ಅವಕಾಶಗಳಿರುವುದು ಅವರ ದೂರದೃಷ್ಟಿಗೆ ಗೋಚರಿಸಿತು. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಇದುವೇ ಸರಿಯಾದ ಸಮಯವೆಂಬಂತೆ ತಾನು ಬಾಲ್ಯದಲ್ಲಿ ಕಂಡುಕೊಂಡಿದ್ದ ದೊಡ್ಡ ವ್ಯಕ್ತಿಯಾಗಬೇಕೆಂಬ ಕನಸನ್ನು ನನಸಾಗಿಸುವತ್ತ ಹೆಚ್ಚಿನ ಗಮನ ಹರಿಸಿದರು. ಇದಕ್ಕೆ ಅನೇಕ ಗಣ್ಯರ ಸಹಕಾರವು ದೊರೆಯಿತು.
ಥಾಣೆ ಶಾಖೆಗೆ ವರ್ಗಾವಣೆಯಾದಾಗ ಸಮಯ ಸಿಕ್ಕಾಗಲೆಲ್ಲ ಅಕ್ಕನ ಪತಿಯ ಹೋಟೆಲ್ ಗೆ ಹೋಗಲಾರಂಭಿಸಿದರು. ಇದರಿಂದ ಹೋಟೆಲ್ ಉದ್ಯಮಿಯಾಗುವ ಕನಸಿಗೆ ಮತ್ತಷ್ಟು ಪುಷ್ಟಿ ದೊರತಂತಾಯಿತು. ಪರಿಸರದಲ್ಲಿ ಅನೇಕ ಗಣ್ಯರ ಪರಿಚಯವಾಗುತ್ತಿದ್ದಂತೆ ಮುಲುಂಡ್ ಪರಿಸರದಲ್ಲಿ ಜಾಗ ಖರೀದಿಸಿ 1993ರಲ್ಲಿ ಹೋಟೆಲ್ ಸೌಂದರ್ಯವನ್ನು ನಿರ್ಮಿಸಿದರು. ಹೋಟೆಲ್ ಗ್ರಾಹಕರ ಮನೆ ಮನೆ ಮಾತಾಯಿತು. ಇದರೊಂದಿಗೆ ಉದ್ಯಮದ ವ್ಯಾಪ್ತಿಯು ಬೆಳೆಯಲಾರಂಭಿಸಿತು. ಪ್ರಸ್ತುತ ಹೋಟೆಲ್ ನೂರಕ್ಕೂ ಹೆಚ್ಚು ಆಸನ ವ್ಯವಸ್ಥೆ ಹೊಂದಿದ್ದು, ಎರಡು ಮಹಡಿಯವರೆಗೆ ವಿಸ್ತಾರಗೊಂಡಿದೆ. ಇದರಲ್ಲಿ ಒಂದು ಭಾಗವನ್ನು ಆಧುನಿಕತೆಗೆ ತಕ್ಕಂತೆ ಹವಾನಿಯಂತ್ರಿತ ವ್ಯವಸ್ಥೆಯಿಂದ ಮಾರ್ಪಾಡುಗೊಳಿಸಲಾಗಿದೆ.ಹರ್ಷವರ್ಧನ್ ಶೆಟ್ಟಿಯವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡರೆ ಅವರ ಪತ್ನಿ ಪ್ರೇಮಲತಾ ಶೆಟ್ಟಿಯವರು ಸಂಸಾರದ ಹೊರೆ ಹೊತ್ತು ಗಂಡನ ಕಷ್ಟ ಸುಖ ಎರಡರಲ್ಲೂ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರು. ಪ್ರಸ್ತುತ ಪುತ್ರಿ ಆಷಿತಾ ಎಸ್. ಶೆಟ್ಟಿಯವರು ತಂದೆಯ ವ್ಯವಹಾರದಲ್ಲಿ ಸಹಕರಿಸುತ್ತಿದ್ದಾರೆ. ಪ್ರತಿಷ್ಠಿತ ಬ್ಯಾಂಕ್ ವೊಂದರಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದ ಆಷಿತಾ ಅವರ ಪತಿ ಸಮಿತ್ ಎ. ಶೆಟ್ಟಿಯವರು ಕೂಡ ಮಾವನೊಂದಿಗೆ ಹೋಟೆಲ್ ವ್ಯವಹಾರದಲ್ಲಿ ಸಹಕರಿಸುತ್ತಿದ್ದಾರೆ.