ಶಕ್ತಿನಗರ ಕಾನಡ್ಕದ ಪದವು ಫ್ರೆಂಡ್ಸ್ ಕ್ಲಬ್ ನ 49ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ನಾಲ್ಯಪದವು ಶಾಲಾ ರಂಗಮಂದಿರದಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಸಂಸ್ಥೆ 50ನೇ ವರ್ಷಕ್ಕೆ ಕಾಲಿಟ್ಟ ಸಲುವಾಗಿ ಸುವರ್ಣ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು. ಯಕ್ಷಿಣಿಗಾರ ರಾಜೇಶ್ ಮಳಿ ಹಾಗೂ ಅವರ ಪುತ್ರಿಯರಾದ ಅಂಜನಾ ಮತ್ತು ಅಪೂರ್ವ ಮಳಿ ವಿಶಿಷ್ಟ ರೀತಿಯಲ್ಲಿ ಜಾದೂ ದಂಡ ಪ್ರಯೋಗಿಸಿ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ಕವಿ, ಜಾನಪದ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ‘ಬಂಗಾರ್ ಪರ್ಬಯೇ..’ ತುಳು ಶೀರ್ಷಿಕೆ ಗೀತೆಯನ್ನು ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ ಗುಂಡಿ ಅದುಮಿ ಬಿಡುಗಡೆಗೊಳಿಸಿದರು. ಬಳಿಕ ಧ್ವನಿವರ್ಧಕದಲ್ಲಿ ಅದನ್ನು ಸಾರ್ವಜನಿಕವಾಗಿ ಕೇಳಿಸಲಾಯಿತು.ಹಿರಿಯ ರಂಗಕರ್ಮಿ ಜಿ.ಎಸ್ ಆಚಾರ್ ಅವರಿಗೆ ಕ್ಲಬ್ಬಿನ ಹಿರಿಯ ಸದಸ್ಯ, ಹಾಸ್ಯ ಚಕ್ರವರ್ತಿ ದಿ| ಮಾಧವ ಕೆ. ಶಕ್ತಿನಗರ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶಾಲಾ ನಾಯಕತ್ವ ಸಮಾವೇಶಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಪ್ರಾಥಮಿಕ ಶಾಲೆ ಶಕ್ತಿನಗರದ ನಾಲ್ಯಪದವು ಸರಕಾರಿ ಶಾಲಾ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ವೀರೇಶ್, ಪದವಿಪೂರ್ವ ಕಾಲೇಜಿಗೆ ಹೊಸ ಕಟ್ಟಡ ದೊರಕಲು ಸಹಕರಿಸಿದ ಪ್ರಾಂಶುಪಾಲ ಜಯಾನಂದ.ಎಲ್ ಸುವರ್ಣ ಹಾಗೂ ಪ್ರೌಢಶಾಲೆಯ ನೂತನ ಮುಖ್ಯ ಶಿಕ್ಷಕ ಪ್ರಶಾಂತ್ ಕುಮಾರ್ ಕೆ.ಎಸ್. ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ದಕ್ಷಿಣದ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಋತ್ವಿಕ್ ಕದ್ರಿ, ಮನಪಾ ಸದಸ್ಯೆ ವನಿತಾ ಪ್ರಸಾದ್, ಗೀತೆ ರಚನೆಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಗಣ್ಯರು ಉಪಸ್ಥಿತರಿದ್ದರು. ಆಂತರಿಕ ಲೆಕ್ಕಪರಿಶೋಧಕ ರವೀಂದ್ರ ರೈ ಸ್ವಾಗತಿಸಿದರು. ರಕ್ಷಕ್ ಪೂಜಾರಿ ವಂದಿಸಿದರು. ಹರೀಶ್ ಕುಮಾರ್ ಜೋಗಿ ಕಾರ್ಯಕ್ರಮ ನಿರೂಪಿಸಿದರು.