ಬೆರ್ಮೆರೆ ಬಳಿ ಅಥವಾ ಬೆರ್ಮತಿ ಬನ್ನಾಯ ಬಳಿಯ ಬಂಟ ಮನೆತನದ ಪ್ರಸಿದ್ಧ ಮನೆ ಯೆಣ್ಮಕಜೆ. ಕಾಸರಗೋಡಿನಲ್ಲಿ ಬೆರಳೆಣಿಕೆಯಷ್ಟು ಗುತ್ತು ಮನೆತನಗಳ ಹೆಸರುಗಳು ಇಂದು ಪಂಚಾಯತುಗಳಾಗಿ ಗುರುತಿಸಲ್ಪಟ್ಟಿವೆ. ಉದಾಹರಣೆಗೆ ಹೇಳುವುದಾದರೆ ಇಚ್ಲಂಪಾಡಿ, ಕುಂಬ್ಡಾಜೆ, ಪುತ್ತಿಗೆ, ಬಂದಡ್ಕ, ಯೆಣ್ಮಕಜೆ ಮುಂತಾದವುಗಳು. ಈ ಎಲ್ಲಾ ಮನೆತನಗಳಿಗೆ ಪುರಾತನ ಇತಿಹಾಸ ಮತ್ತು ವಿಶಿಷ್ಟವಾದ ಗುರುತಿಸುವಿಕೆ ಇತ್ತು ಎನ್ನುವುದಕ್ಕೆ ಚರಿತ್ರೆಯ ಪುಟಗಳಲ್ಲಿ ಹಲವಾರು ಪುರಾವೆಗಳು ಲಭ್ಯವಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಾಸರಗೋಡು ಲೋಕಸಭಾ ವ್ಯಾಪ್ತಿಯಲ್ಲಿ ಯೆಣ್ಮಕಜೆ ಗ್ರಾಮ ಬರುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಊರಿನ ಪಟೇಲರ ಮನೆಯೂ ಆಗಿದ್ದ ಈ ಯೆಣ್ಮಕಜೆ ಊರಿನ ನ್ಯಾಯ ತೀರ್ಮಾನದ ಚಾವಡಿಯಾಗಿತ್ತು.ಚೌಗ್ರಾಮದೊಡೆಯ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಾಲಯದ ಆಡಳಿತದಲ್ಲಿ ಸುಮಾರು 15 ವರ್ಷ ನಿರಂತರವಾಗಿ ಯೆಣ್ಮಕಜೆ ಬೀರಣ್ಣ ಬಂಟರು ಮೊಕ್ತೇಸರರಾಗಿ ನಿಭಾಯಿಸಿದ್ದ ದಾಖಲೆಗಳು ಇವೆ. ಅಲ್ಲಿಯೂ ನ್ಯಾಯ ತೀರ್ಮಾನದ ಹೊಣೆಗಾರಿಕೆ ಅವರದ್ದಾಗಿತ್ತು. ಕುಂಬಳೆ ಸೀಮೆಯ ಪಟ್ಟದ ಪಡ್ಪಿರೆ ಇಚ್ಲಂಪಾಡಿಯ ಬೀಗರ ಮನೆಯಾದ ಯೆಣ್ಮಕಜೆ ತರವಾಡು ಸೀಮೆಗಳ ಮೇರೆ ಮೀರಿ ಗುರುತಿಸಿಕೊಂಡಿದ್ದ ಪ್ರತಿಷ್ಠಿತ ಬಂಟ ಮನೆತನವಾಗಿತ್ತು. ಬಾಳೆ ಹಾಕುವ ಬಾಕಿತ್ತಿಮ್ಮಾರ್ ಗದ್ದೆಯಲ್ಲದೆ ಬಹಳಷ್ಟು ನೈಸರ್ಗಿಕ ಜಲ ಸಂಪನ್ಮೂಲ ಇದ್ದ ಫಲವತ್ತಾದ ಕೃಷಿ ಭೂಮಿ ಈ ಕುಟುಂಬದ ಒಡೆತನದಲ್ಲಿ ಇದೆ. ಇಲ್ಲಿ ಪೂರ್ವದಲ್ಲಿ ಬಳ್ಳಾಲರು ನೆಲೆಸಿದ್ದರು ಎನ್ನುವುದಕ್ಕೆ ಕುರುಹಾಗಿ ಬೀಡಿನ ಅವಶೇಷಗಳನ್ನು ಇಂದೂ ನಾವು ಕಾಣಬಹುದು. ಜುಮಾದಿ ಪಾಡ್ಪನದಲ್ಲಿ ಕೂಡಾ ಯೆಣ್ಮಕಜೆಯ ಪ್ರಸ್ತಾಪ ಬರುತ್ತದೆ. ಈ ತರವಾಡಿಗೆ ಸಂಬಂಧಿಸಿದಂತೆ ಬೆದ್ರಂಪಳ್ಳ ‘ಮಿತ್ತಬನ’ ಅಥವಾ ಉಲ್ಲಾಕುಳೆ ಮಾಡ ಬಹಳ ಹಿಂದಿನಿಂದಲೂ ಕೋಳಿ ಅಂಕಕ್ಕೆ ಪ್ರಸಿದ್ಧವಾಗಿತ್ತು. ಬೆದ್ರಲ್ಲ ಕೋರ್ದಟ್ಟ ಎನ್ನುವುದು ಹತ್ತೂರು ಸೇರುವ ಬಲು ದೊಡ್ಡ ಪರಿಷೇಯೇ ಸರಿ.
ಕೆಳಗಿನ ಬೆದ್ರಂಪಳ್ಳದಲ್ಲಿ ಇನ್ನೊಂದು ನಾಗಬನವಿದೆ. ಇದು ಸದಾ ನೀರು ಬತ್ತದ ಬನ. ಇದಲ್ಲದೇ ಯೆಣ್ಮಕಜೆ ತರವಾಡಿನ ಸುತ್ತ ನಾಗ, ರಕ್ತೇಶ್ವರಿ, ಗುಳಿಗ ಬನಗಳಲ್ಲಿ ಆರಾಧನೆ ನಡೆಯುತ್ತದೆ. ಪ್ರಧಾನ ದೈವಗಳಾದ ಪಿಲಿಚಾಮುಂಡಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳು ಆರಾಧನೆಯನ್ನು ಪಡೆಯುತ್ತಿವೆ. ತುಳುನಾಡಿನ ಪ್ರಮುಖ ಕೆಲವೇ ಕೆಲವು ಮನೆಗಳಲ್ಲಿ ನಡೆಯುವ ಮೂರಿಗಳ ಆರಾಧನೆ ಇಲ್ಲಿ ನಡೆಯುತ್ತದೆ. 9 ಮೂರಿಗಳು ಇಲ್ಲಿ ಅನಾದಿ ಕಾಲದಿಂದಲೂ ಇವೆ. ಉಳಿದಂತೆ ಬಳ್ಳಾಳುಳೆನ ಕೊರತ್ತಿ, ಕಿನ್ನಿಮಜಲ್ ಕೊರತ್ತಿ, ಚೆಲ್ಯೆತ್ತಿ, ಪೊಸಭೂತ, ಗುಳಿಗ, ಸತ್ಯದೇವತೆ ಮುಂತಾದ ದೈವಗಳ ಆರಾಧನೆಯಲ್ಲಿ ನಡೆಯುತ್ತದೆ.
ಅಲ್ಲದೇ ಈ ಮನೆತನ ವೈದ್ಯಕೀಯ, ಸಾಮಾಜಿಕ, ರಾಜಕೀಯ, ಕಾನೂನು, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ದೇಶ ವಿದೇಶಗಳಲ್ಲಿ ನೆಲೆಸಿರುವ ಹಲವಾರು ಮಹಾನ್ ವ್ಯಕ್ತಿಗಳ ತವರು ಎನ್ನುವುದು ಉಲ್ಲೇಖನೀಯ. 1994 ರಲ್ಲಿ ಅನಿರೀಕ್ಷಿತವಾಗಿ ಬೆಂಕಿ ತಗುಲಿ ತರವಾಡು ಮನೆ ಬೆಂಕಿಗೆ ಆಹುತಿಯಾಗಿತ್ತು. ಆನಂತರ 2004ರಲ್ಲಿ ಬಹಳ ಮುತುವರ್ಜಿಯಿಂದ ಪಡಿಪ್ಪಿರೆ ಮತ್ತು ನಡುಂದಲ್ ಹೊಂದಿರುವ ನಾಲ್ಕು ಸ್ತೋತ್ರದ ಮನೆಯ ಮರು ನಿರ್ಮಾಣ ನಡೆಯಿತು.
ಈಗ ಕುಟುಂಬದ ಹಿರಿಯರಾಗಿ ಶ್ರೀ ಸದಾನಂದ ಪಕ್ಕಳರು ಮುಂದೆ ನಿಂತು ಈ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಗ್ರಾಮದ ಜನರಿಗೆ ಅಭಯ ಆಶ್ರಯ ದೈವಶಕ್ತಿ ಸಾನಿಧ್ಯ ಕೇಂದ್ರವಾದ ಯೆಣ್ಮಕಜೆಯಲ್ಲಿ ಈಗ ಅಚ್ಚುಕಟ್ಟಾಗಿ, ಸಾಂಪ್ರದಾಯಿಕವಾಗಿ ‘ಷರತ್ ನಿಗಿಪ್ಪಡೆ ಪೊಸತ್ ತೋಡಡೆ ಎನ್ನುವ ತೌಳವ ಸತ್ಯೋಗಳ ಅಭಯ ನುಡಿಯನ್ನು ಅನುಸರಿಸುತ್ತಾ ಇತಿಹಾಸ ವೈಭವ ಮರುಕಳಿಸುವಂತೆ ವಾರ್ಷಿಕವಾಗಿ ನಡೆಯುವ ನೇಮೋತ್ಸವಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ರಾಜಶ್ರೀ ರೈ ಪೆರ್ಲ