ರಾಜ್ಯದಲ್ಲಿ ಒಟ್ಟು 25 ಕಂಬಳ ನಡೆಯಲಿದ್ದು, ಶಿವಮೊಗ್ಗದಲ್ಲಿ ಕೊನೆಯ ಕಂಬಳವನ್ನು ಏಪ್ರಿಲ್ 19 ಮತ್ತು 20 ರಂದು ಆಯೋಜಿಸಲಾಗುತ್ತಿದೆ. ಕಂಬಳದ ಟ್ರ್ಯಾಕ್ಗೆ ಫೆಬ್ರವರಿ 10ರಂದು ಮಧ್ಯಾಹ್ನ 3 ಗಂಟೆಗೆ ಭೂಮಿ ಪೂಜೆ ನಡೆಸಲಾಗುತ್ತದೆ ಎಂದು ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಬಳ ಸಮಿತಿ ಪ್ರಮುಖರು, ಶಿವಮೊಗ್ಗ ಭದ್ರಾವತಿ ರಸ್ತೆಯ ಮಾಚೇನಹಳ್ಳಿಯ ಜಯಲಕ್ಷ್ಮಿ ಪೆಟ್ರೋಲ್ ಬಂಕ್ ಹಿಂಭಾಗ 16 ಎಕರೆ ಜಾಗದಲ್ಲಿ ಕಂಬಳ ನಡೆಸಲಾಗುತ್ತಿದೆ ಎಂದರು.
ಮಲೆನಾಡ ಕಂಬಳ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಮಾತನಾಡಿ, ಇದು ಕೇವಲ ಕೋಣ ಓಡಿಸುವ ಸ್ಪರ್ಧೆಯಲ್ಲ. ಇದರಲ್ಲಿ ತುಳುನಾಡಿನ ಇತಿಹಾಸ ಮತ್ತು ಸಂಪ್ರದಾಯ ಇದೆ. ಕೃಷಿ ಚಟುವಟಿಕೆ ಮುಗಿದ ನಂತರ ಈ ಸ್ಪರ್ಧೆಗಳು ನಡೆಯುತ್ತವೆ. ಪ್ರತಿ ಬಾರಿ 25 ಕಂಬಳ ನಡೆಯುತ್ತವೆ. ಈ ಬಾರಿಯ ಕೊನೆಯ ಕಂಬಳ ಶಿವಮೊಗ್ಗದಲ್ಲಿ ನಡೆಯಲಿದೆ. ಕಂಬಳ ನಡೆಸಲು ಹಲವು ನಿಯಮಗಳಿವೆ. ಆ ನಿಯಮದಂತೆಯೇ ಸ್ಪರ್ಧೆ ಆಯೋಜಿಸಲಾಗುತ್ತದೆ ಎಂದರು.ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಇದೇ ಮೊದಲು ಕಂಬಳ ನಡೆಯುತ್ತಿದೆ. ಈಗಾಗಲೆ ಸಂಸದ ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಏ.19 ಮತ್ತು 20 ರಂದು ಸ್ಪರ್ಧೆಗಳು ನಡೆಯಲಿದೆ. ಟ್ರ್ಯಾಕ್ ಸಿದ್ಧತೆಗೆ ಒಂದು ತಿಂಗಳು ಹಿಡಿಯಲಿದೆ. ತುಳುನಾಡು, ಮಲೆನಾಡು ಒಂದಾಗಿ ಉತ್ಸವ ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇ.ವಿಶ್ವಾಸ್, ಸಂದೀಪ್ ಶೆಟ್ಟಿ ಪೊಡುಂಬ, ಕಿರಣ್ ಕುಮಾರ್ ಮಂಜಿಲಾ, ಶಶಿಧರ್ ಶೆಟ್ಟಿ, ಜಾಧವ್, ಚಿದಾನಂದ್, ಶಿವಾಜಿ, ಕುಬೇರಪ್ಪ, ಹರಿಪ್ರಸಾದ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.