ಪುರಾಣದ ಕಥೆಯೊಂದು ಉಲ್ಲೇಖಿಸಲ್ಪಡುವಂತೆ ತ್ರಿಪುರಾಸುರನ ಬಾಧೆ ಹೆಚ್ಚಿದಾಗ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ಸುರರ ಮೊರೆ ಆಲಿಸಿದ ಪರಮೇಶ್ವರ ದೈತ್ಯನೊಡನೆ ಸಮರ ಸಾರುತ್ತಾನೆ. ಪರಿಣಾಮ ಪ್ರತಿದಿನವೂ ಸಮರದಲ್ಲಿ ಶಿವ ಸೋಲುತ್ತಾನೆ. ಒಂದು ದಿನ ಶಿವ ಯುದ್ಧಕ್ಕೆ ಹೊರಟು ನಿಂತಾಗ ಗಣಪತಿ ಎದುರಾಗುತ್ತಾನೆ. ಮೊದಲೇ ಕೋಪಿಷ್ಠನಾದ ಶಿವ ಗಣಪತಿಯನ್ನು ಪಕ್ಕಕ್ಕೆ ತಳ್ಳುತ್ತಾನೆ. ಆಗ ಗಣಪತಿಯು ಜೇನು ತುಪ್ಪದ ಕೊಪ್ಪರಿಗೆಯಲ್ಲಿ ಬೀಳುತ್ತಾನೆ. ಮಧುಪಾನದಿಂದ ಸಂತೃಪ್ತನಾದ ಗಣಪತಿ ‘ಸರ್ವತ್ರ ವಿಜಯವಾಗಲಿ’ ಎಂದು ಹೇಳುತ್ತಾನೆ. ಪರಿಣಾಮವಾಗಿ ಆ ದಿನದ ಯುದ್ಧದಲ್ಲಿ ಶಿವನಿಗೆ ವಿಜಯವಾಗುತ್ತದೆ. ಸಂತೋಷಗೊಂಡ ಶಿವ ಗಣಪತಿಗೆ ಆದಿ ಪೂಜ್ಯನಾಗು, ಮಧುಪಾನದ ಉಷ್ಣತೆಯ ನಿವಾರಣೆಗಾಗಿ ಜಲಾಧಿವಾಸನಾಗು. ನಿನ್ನ ರಕ್ಷಣೆಗೆ ಪ್ರಮಥ ಗಣ ಸಹಿತನಾಗಿ ನಾನು ಬರುವೆ ಎಂದು ಅನುಗ್ರಹಿಸುತ್ತಾನೆ. ಶಿವಾನುಗ್ರಹವನ್ನು ಪಡೆದ ಗಣಪತಿ ಭೂಲೋಕದ ಈ ಕ್ಷೇತ್ರಕ್ಕೆ ಸಮೀಪವಿರುವ ಗುಡ್ಡಟ್ಟುವಿನಲ್ಲಿ ಆಯಿರ ಕೊಡ (ಸಹಸ್ರ ಕುಂಭಾಬೀಷೇಕ) ಎಂಬ ಸೇವೆಯೊಂದಿಗೆ ಜಲಾಧಿವಾಸನಾಗುತ್ತಾನೆ. ಹೀಗೆಯೇ ಅವಿಭಾವಗೊಂಡ ವಿನಾಯಕನ ರಕ್ಷಣೆಗೆ ಬಂದ ಪ್ರಮಥ ಗಣ ಸಹಿತನಾದ ಶಿವನ ಸಾನಿಧ್ಯವೇ ಸಪರಿವಾರ ಹಳ್ಳಾಡಿ- ಹೆಗ್ಗೆಕೆರೆ ಶ್ರೀ ನಂದಿಕೇಶ್ವರ ದೇವಸ್ಥಾನ. ಸುಮಾರು ಸಾವಿರದ ಇನ್ನೂರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರಕ್ಕೆ ಒಳಪಟ್ಟ ಮತ್ತೊಂದು ಪ್ರಧಾನ ದೇವತೆ ಶ್ರೀ ಅರ್ಭಕ ಧಾರಕೇಶ್ವರಿ, ವೀರಭದ್ರ ದೇವರು. ಈ ಕ್ಷೇತ್ರ ಕೂಡಾ ಹಿರಿಯಡ್ಕ ನಂದಳಿಕೆಯಂತೆ ಆಲಡೆ ಸಿರಿ ಸೇವೆ ನಡೆಯುವ ಕ್ಷೇತ್ರವಾಗಿದೆ. ಇಲ್ಲಿನ ಪ್ರಧಾನ ದೇವರಾದ ಶ್ರೀ ನಂದಿಕೇಶ್ವರ, ಪರಿವಾರ ಧೂಮಾವತಿ ಮೊದಲಾದ ದೈವಗಳೊಂದಿಗೆ ಶ್ರೀ ಅರ್ಭಕ ಧಾರಕೇಶ್ವರಿ ಸಹಿತ ವೀರಭದ್ರ ದೇವರು ಹಾಗೂ ನಾಗ ದೇವರುಗಳ ಸಹಿತ ಪರಿವಾರ ದೇವತೆಗಳ ಸನ್ನಿದಿಯಿದೆ. ಭಕ್ತಾಭಿಷ್ಷದಾಯಕ ಕ್ಷೇತ್ರವಾಗಿ ದಿನದಿಂದ ದಿನಕ್ಕೆ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದೆ. ಕ್ಷೇತ್ರದ ಮಹಿಮೆಗೆ ಭಕ್ತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ವಾರ್ಷಿಕ ಜಾತ್ರೆ, ಸಂಕ್ರಮಣ ಮಹೋತ್ಸವ ಇತರ ವಿಶೇಷ ದಿನಗಳಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಕುಂದಾಪುರದಿಂದ 20 ಕಿ.ಮೀ ದೂರದಲ್ಲಿರುವ ಶ್ರೀ ಕ್ಷೇತ್ರ ಬ್ರಹ್ಮಾವರದಿಂದ 14 ಕಿ.ಮೀ ದೂರದಲ್ಲಿದೆ. ಇದೇ ಬರುವ ಜನವರಿ 19 ರ ಭಾನುವಾರ ಮೊದಲ್ಗೊಂಡು ಜನವರಿ 21 ರ ಮಂಗಳವಾರದವರಗೆ “ಶ್ರೀ ನಂದಿಕೇಶ್ವರ ದೇವರ ಜೀರ್ಣೋದ್ದಾರ ಪೂರ್ವಕ ಪುನಃ ಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನೆರವೇರಲಿರುವುದು. ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಭಗವದ್ಬಕ್ತರಾದ ತಾವೆಲ್ಲರೂ ಆಗಮಿಸಿ, ತನು ಮನ ಧನಗಳಿಂದ ಸಹಕರಿಸಿ. ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.