ಎಲ್ಲವನ್ನೂ ವಿವರಿಸಲಾಗದಷ್ಟು ನಿಗೂಢ ರಹಸ್ಯದ ಭಿನ್ನ ವೈವಿಧ್ಯತೆಗಳನ್ನು ಹೊಂದಿರುವ ಕಾರಣೀಕ ಧಾರ್ಮಿಕ ಕ್ಷೇತ್ರ ಶ್ರೀ ಮುದುಸ್ವಾಮಿ ದೇವಸ್ಥಾನ. ನ್ಯೆಸರ್ಗಿಕವಾದ ಸಹಜ ಹುತ್ತಕ್ಕೆ ಪೂಜಾವಿಧಿಗಳನ್ನು ನಡೆಸುವವರು ಬಂಟ ಅರ್ಚಕರು ಎನ್ನುವುದು ವಿಶೇಷ. ಎರಡು ವರ್ಷಗಳಿಗೊಮ್ಮೆ ಜನವರಿ 2 ರಿಂದ ಮಕರ ಸಂಕ್ರಾಂತಿಯ ತನಕ ಹನ್ನೆರಡು ರಾತ್ರಿ ನಡೆಯುವ ಕೋಲವನ್ನು ಪಾಣರಾಟ ಎಂದು ಕರೆಯುವುದು ಇಲ್ಲಿನ ರೂಢಿ. ಸಂಪ್ರದಾಯಬದ್ಧ ಶಿಷ್ಟಾಚಾರದೊಂದಿಗೆ ಹಿರಿಯರಿಂದ ನಡೆದು ಬಂದ ಕಟ್ಟು ಪಾಡಿನಂತೆ ಪಾಣಾರು, ಅರ್ಚಕರು, ಗ್ರಾಮಸ್ಥರು ಹಾಗೂ ದೇವಳದ ಸ್ಥಳ ಮನೆಯವರು ಭಕ್ತಿ ಭರಿತ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ.ಪಾಡ್ದನ : ಪಾಣರಾಟ ಪ್ರಾರಂಭಕ್ಕೆ ಮೊದಲು ಪಾಣಾರು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಮುದ್ದುಸ್ವಾಮಿ ದೇವಳದ ಎದುರು ಸಾಲಾಗಿ ನಿಂತು ಹಿರಿಯರಿಂದ ಕಲಿತ ಪಾಡ್ದನದ ಕಥಾ ಹಂದರವನ್ನು ಸನ್ನಿವೇಶದ ವರ್ಣನೆಯೊಂದಿಗೆ ನಿಯತವಾದ ಲಯ, ವಿಶಿಷ್ಟವಾದ ದಾಟಿಯಲ್ಲಿ, ಭಕ್ತಿಪೂರ್ವಕವಾಗಿ ಅರ್ಥಗರ್ಭಿತವಾಗಿ ಆಯಾ ದಿನ ಸೇವೆ ನಡೆಯುವ ದೇವರನ್ನು ಹಾಡಿ ಹೊಗಳುವ ಕ್ಷೇತ್ರ ಪರಿಚಯ ಪಾಡ್ದನದಲ್ಲಿ ಹಾಡುತ್ತಾರೆ.
ಅಣಿ ಸೇವೆ : ಅಪರೂಪದಲ್ಲಿ ಅಪರೂಪ ಎಂಬಂತೆ ಒಂದೇ ಊರಿನಲ್ಲಿ ಮೂರು ಗರಡಿಗಳಿರುವ ದೈವೀ ಶಕ್ತಿಯ ಊರು ಇದು. ಪಾಣರಾಟದ ಕೊನೆಯ ಮೂರು ದಿನಗಳಲ್ಲಿ ಊರಿನ ಗರಡಿಯ ನಂಬಿಕೆಯ ಪ್ರತೀಕವಾಗಿ ಸಾಕಷ್ಟು ಕೌತುಕಕಾರಿ ಭೂತರಾಯನ ಅಣಿಕೋಲ ನೋಡಲು ದೂರ ದೂರದಿಂದ ಜನ ಬರುತ್ತಾರೆ. ಎತ್ತರದ ಅಣಿಯನ್ನು ತಯಾರಿಸಿ ಅದನ್ನು ಹೊತ್ತು ಕುಣಿಯುವ ಪಾಣರು ಕೋಲ ಕಟ್ಟುವವರ ಸಾಹಸ ನಿಜವಾಗಿಯೂ ಮೈನವಿರೇಳಿಸುತ್ತದೆ. ಅಣಿ ಸೇವೆಯಲ್ಲಿ ವಿಶೇಷ ಆಕರ್ಷಣೆಯಿದ್ದು ಆವೇಶ ಭರಿತ ಅಣಿ ಹೋತ್ತವರು ಮುದ್ದುಸ್ವಾಮಿ ದೇವಸ್ಥಾನದಿಂದ ಹೊರಟು ಸೀತಾನದಿ ತೀರದ ನಿರ್ದಿಷ್ಟ ಸ್ಥಳದಲ್ಲಿ ಅಣಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ಅಣಿ ಮೆರವಣಿಗೆ ಹೋಗುವಾಗ ಈ ಊರಿನಲ್ಲಿ ಯಾರು ಕೂಡಾ ಮಲಗಿ ನಿದ್ದೆ ಮಾಡುತ್ತಿರಬಾರದು ಎನ್ನುವ ಪ್ರತೀತಿ ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಉತ್ತರೋತ್ತರ ಶ್ರೇಯಸ್ಸು, ಉದ್ಯೋಗ, ಕಾರ್ಯಸಾಧನೆ, ವ್ಯವಹಾರ ವೃದ್ಧಿಗಾಗಿ ಬದುಕೆಂಬ ಬಂಡಿ ಸಾಗುತ್ತಿರುವಾಗ ಸಂಭವಿಸುವ ಕೆಲ ಘಟನೆ, ನೋವು ವೇದನೆಗಳ ಉಪಶಮನಕ್ಕಾಗಿ ಮುದ್ದುಸ್ವಾಮಿಯ ಮೊರೆ ಹೋಗಿ ಹರಕೆ ರೂಪದಲ್ಲಿ ಪಾಣರಾಟ ದೇವರಿಗೆ ಸಲ್ಲಿಸುತ್ತಾರೆ.ಮದುವೆ ಕೋಲ : ಅಪರೂಪದ ಧಾರ್ಮಿಕ ಶ್ರದ್ದಾ ಕೇಂದ್ರ ಹಾಗೂ ಆರಾಧನಾ ಕ್ಷೇತ್ರವಾಗಿರುವ ಮುದ್ದುಸ್ವಾಮಿ ದೇವಸ್ಥಾನ ಪುರಾತನ ಶಕ್ತಿ ಹಾಗೂ ಮನೋಕಾರ್ಯವನ್ನು ಸಫಲಗೊಳಿಸುವ ದೇವರು ಎಂಬ ನಂಬಿಕೆಯಿಂದ ಇಷ್ಟಾರ್ಥ ಸಿದ್ದಿ ಕೋಲ, ಮದುವೆಗೆ ತೊಂದರೆ, ತೊಡಕಾದವರು ಹರಕೆ ಹೊತ್ತು ಮದುವೆ ಕೋಲ ನೀಡುತ್ತಾರೆ. ಈ ಸೇವೆಯಲ್ಲಿ ಮದುಮಗ, ಮದುಮಗಳು, ಎರಡು ಕಡೆಯ ದಿಬ್ಬಣ, ಪುರೋಹಿತರು, ಕನ್ಯಾದಾನ, ಶೋಭಾನ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಪಾಣರು ಮದುವೆಯಂತೆ ನಡೆಸುತ್ತಾರೆ.
ಬಸುರಿ ಕೋಲ : ಮಕ್ಕಳಾಗದವರು ಬಸುರಿ ಕೋಲದ ಹರಕೆ ಹೊತ್ತು, ಮಕ್ಕಳಾದಾಗ ಹರಕೆ ರೂಪದಲ್ಲಿ ಸಲ್ಲಿಸುವ ಬಸುರಿ ಕೋಲದಲ್ಲಿ ಪಾಣರು ಸೀಮಂತ ಶಾಸ್ತ್ರವನ್ನು ಚಾಚು ತಪ್ಪದೆ ನಡೆಸುತ್ತಾರೆ. ಪಾಣರು ಪುರುಷರೊಬ್ಬರನ್ನು ಬಸುರಿಯಂತೆ ಸೀರೆ ಉಡಿಸಿ, ಹೂ ಮುಡಿಸಿ, ಶೃಂಗರಿಸಿ ಕುಳ್ಳಿರಿಸಿ ಬಗೆ ಬಗೆಯ ಹಿಟ್ಟು ಬಡಿಸಿ ಭಕ್ತಾದಿಗಳ ಹರಕೆ ಪೂರ್ತಿಗೊಳಿಸುತ್ತಾರೆ. ಹರಕೆ ಹೊತ್ತ ಭಕ್ತರು ವೀಳ್ಯದೆಲೆ, ಅಡಿಕೆ, ಶೃಂಗಾರ ಹೂ, ತೆಂಗಿನ ಎಣ್ಣೆ ಮತ್ತು ಬಸುರಿಗೆ ಬಡಿಸಲು ಒಂಬತ್ತು ಬಗೆಯ ಹಿಟ್ಟುಗಳನ್ನು ಪಾಣರಿಗೆ ನೀಡಬೇಕು. ಪಾಣಾರು ಸ್ತ್ರಿಯರು ಬಸುರಿಗೆ ಆರತಿ ಬೆಳಗಿ ಶೋಭಾನಿ ಹಾಡುವರು.
ಕಟ್ಟುಕಟ್ಟಳೆ ಕೋಲ : ಶ್ರೀ ಮುದ್ದುಸ್ವಾಮಿ ದೇವಸ್ಥಾನದಲ್ಲಿ 12 ರಾತ್ರಿ ನಡೆಯುವ ಪಾಣರಾಟದಲ್ಲಿ ಮುಖ್ಯವಾಗಿ ಸ್ವಾಮಿಕೋಲ, ಜಟ್ಟಿಗನ ಕೋಲ, ಧಕ್ಕೆಕೋಲ, ಒಂಟಿ ಬೊಬ್ಬರ್ಯ ಹಾಗೂ ಜೋಡಿ ಬೊಬ್ಬರ್ಯ, ಹುಲಿಚೌಂಡಿ, ಪುಟ್ಟನಕೋಲ, ಕಂಬಳದ ಕೋಲ, ದಾಸರಕೋಲ, ಹುಲಿ ಹಂದಿಕೋಲ, ಪಂಜುರ್ಲಿ ಕೋಲ, ಕ್ಷೇತ್ರಪಾಲನ ಕೋಲ, ಬೆಮ್ಮಣ್ಣನ ಕೋಲ, ಯಕ್ಕಸ್ತ್ರಿ ಕೋಲ, ಧಕ್ಕೆಕೋಲ, ಕಂಬಳಕ್ಕೆ ಹೋರಿ ಹೋಗುವುದು, ಭೂತರಾಯನ ಅಣಿ ಮತ್ತು ರಾಹುತನ ಕೋಲ, ಕಾಡ್ತಿಯಮ್ಮನ ಕೋಲಗಳು ಮುಖ್ಯವಾದವು. ಸ್ವಾಮಿ ಕೋಲ ಹಾಗೂ ಬೊಬ್ಬರ್ಯ ಕೋಲ ಹನ್ನೆರಡು ದಿನವೂ ಭಕ್ತಿ ಹುಟ್ಟಿಸುವ ವಾತಾವರಣದಲ್ಲಿ ಬೇರೆ ಬೇರೆ ಮನೆಯವರ ಹರಕೆ ಸೇವೆ ಸಲ್ಲುತ್ತದೆ.
ಕಂಬಳದ ಕೋಲ : ಮುದ್ದುಸ್ವಾಮಿ ದೇವಳದ ಸ್ಥಳ ಮನೆಯವರು ಅನುವಂಶೀಯ ಆಡಳಿತ ಮೊಕ್ತೇಸರರಾದ ಬೈಲುಮನೆಯವರ ಕಂಬಳಗದ್ದೆಯಲ್ಲಿ ಪ್ರತೀ ವರ್ಷ ಮುದ್ದುಸ್ವಾಮಿ ಕಂಬಳ ನಡೆಯುವುದು. ಮುದ್ದುಸ್ವಾಮಿಗೆ ಸಲ್ಲುವ ಸೇವೆಗಳಲ್ಲಿ ಕಂಬಳಸೇವೆಯು ಒಂದು. ಕಂಬಳದ ಕೋಲ ಮನರಂಜಿಸುವ ಅಪರೂಪದ ಪಾಣರಾಟ ಸೇವೆ. ಈ ಸೇವೆಯಲ್ಲಿ ಕೋಣಗಳನ್ನು ಓಡಿಸುವುದು. ಪಟೇಲರು ಕಂಬಳಕ್ಕೆ ಕೋಣಗಳೊಂದಿಗೆ ಬರುವುದು. ಕಂಬಳದ ಮನೆಯವರು ಎದುರು ಗಾಣಿಸುವುದು, ಕಂಬಳದ ಮನೆ ಯಜಮಾನರು, ಮೂಹೂರ್ತದ ಕೋಣಗಳು, ಮನೆ ಕೋಣಗಳು ಹೀಗೆ ಕಂಬಳದ ಎಲ್ಲಾ ಕಾರ್ಯ ವೈಖರಿಯನ್ನು ಪಾಣಾರು ಪ್ರಾತ್ಯಕ್ಷತೆಯೊಂದಿಗೆ ಆಡಿ ತೋರಿಸುವರು.
ಹನ್ನೆರಡು ದಿನದ ಪಾಣರಾಟ ಸೇವೆಯಲ್ಲಿ ಪಾಣರು ದೈವ ದೇವರುಗಳ ವೇಷ ಧರಿಸಿ, ದೇವರ ಪರಿಚಯ, ಸ್ಥಳ ಮಹಾತ್ಮೆ ದೈವ ದೇವರುಗಳು ಭಕ್ತರನ್ನು ಕಾಪಾಡುವ ಪರಿಯ ವಿವರಣೆ ಆಡಿ ತೋರಿಸುತ್ತಾರೆ. ದನ, ಕರುವಿನ ಪಾಣರಾಟವಿದ್ದು ತಿಗಣೆ ಕೋಲ, ಜ್ವರ, ಹೊಟ್ಟೆ ನೋವಿನ ಕೋಲ ಹೀಗೆ ಅನೇಕ ಹರಕೆ ಕೋಲಗಳು ಇಲ್ಲಿ ಪಾಣರಾಟದ ರೂಪದಲ್ಲಿ ಸಲ್ಲುತ್ತದೆ.
ಸೇವಾ ನಿರತ ಮನೆಗಳು : ಜಂಬೆಟ್ಟು ಮೇಲುಮನೆ, ಹೊಳೆ ಬಾಗಿಲು ಮತ್ತು ಅಂತರ್ಸರ ಮನೆ, ಕಲ್ಲುಬೆಟ್ಟು, ಮೆಕ್ಕೆ ಮನೆ, ಹೆಗ್ಗೆರಿ, ತೋಟದ ಮನೆ, ಆರ್ಡಿಯರ ಮನೆ ಕೊಂಚಬೆಟ್ಟು, ಪಡುಬೆಟ್ಟು, ಮಳಮನೆ, ಜಂಬೆಟ್ಟು ಕೆಳಮನೆ, ಪಾಣಾರು, ಬೈಲುಮನೆ, ಚ್ವಾಂಡಾಲ್, ತೆಂಕುಬೆಟ್ಟು, ಕಲ್ಲುಮನೆ, ಗರಡಿಮನೆ, ಬಾಳೆಹಿತ್ಲು ಮನೆ ಈ ಎಲ್ಲಾ ಮನೆತನದಿಂದ ಕಟ್ಟು ಕಟ್ಟಲೆ ಪಾಣರಾಟ ಸೇವೆ ಸಲ್ಲುತ್ತದೆ. ನ್ಯೆಸರ್ಗಿಕ ಸಹಜ ಹುತ್ತವಾಗಿರುವ ಮುದ್ದುಸ್ವಾಮಿ ದೇವಳದ ಪೂಜಾ ವಿಧಿಗಳನ್ನು ನಡೆಸುವ ಅರ್ಚಕರು ಬಾಳೆಹಿತ್ಲು ಮನೆಯವರು. ದೇವಾಲಯದ ಸುತ್ತಲಿನ ಸ್ವಪರಿವಾರ ಮತ್ತು ನಾಗದೇವರಿಗೆ ಬ್ರಾಹ್ಮಣರಿಂದ ಪೂಜೆ ಸಲ್ಲುತ್ತದೆ.
ದೇವರು ತೀರ್ಥಸ್ನಾನಕ್ಕೆ ಹೋಗುವುದು : ಪಾಣರಾಟ ಮುಗಿದ ನಂತರ ಕೊನೆಯ ರಾತ್ರಿ ದೇವರು ಸೀತಾನದಿಗೆ ತೀರ್ಥಸ್ನಾನಕ್ಕೆ ಹೋಗಿಬರುವ ಕ್ರಮ ಇದ್ದು ಪರಂಪರಾಗತ ಚಂಡೆವಾದನ, ಕೊಂಬು ಕಹಳೆ ವಾದ್ಯಗಳ ನಿನಾದ, ಕಲಶ ಹಿಡಿದ ಹೆಣ್ಣು ಮಕ್ಕಳು, ಆರತಿ ಹಿಡಿಯುವ ಸುಮಂಗಲೆಯರ ಶೋಭಾನೆ, ವಿವಿಧ ವೇಷಗಳ ಅಪೂರ್ವ ಸಂಗಮದೊಂದಿಗೆ ದೇವರಿಗೆ ಅಂದರೆ ದೇವರ ಕಳಶ ಹೊತ್ತವರಿಗೆ ಕೊಡೆ ಹಿಡಿದು ಕ್ಷೌರಿಕರು, ಮಡಿ ಹಾಕುತ್ತಾ ಮಡಿವಾಳರು, ವಾದ್ಯ ಊದುವ ದೇವಾಡಿಗರು, ದೀವಟಿಕೆ ಹಿಡಿಯುವ ಮೊಗವೀರರು, ಕುಂಬಾರರಿಗೆ ಹಿಲಾಲು, ಆಚಾರಿಯವರ ಸುಡುಮದ್ದುಗಳ ಪ್ರದರ್ಶನ, ಪೂಜಾರಿಯವರ ಸೂಡಿಯೊಂದಿಗೆ ವೈವಿಧ್ಯಮಯ ಬ್ಯಾಂಡ್ ವಾದ್ಯ, ಕೊಂಬು ಕಹಳೆ, ಸಾಂಸ್ಕೃತಿಕ ವೇಷ ಭೂಷಣ ಸಂಭ್ರಮದೊಂದಿಗೆ ಪುಷ್ಪಾಲಂಕೃತಗೊಂಡ ಮುದ್ದುಸ್ವಾಮಿಯ ಭವ್ಯ ವೆರವಣಿಗೆಯೊಂದಿಗೆ ಸೀತಾ ನದಿಗೆ ಹೋಗಿ ಸ್ನಾನ ಮಾಡಿ ಬರುವಾಗ ಮಕರ ಸಂಕ್ರಮಣದ ಸೂರ್ಯೋದಯವಾಗಿರುತ್ತದೆ. ಅದೇ ದಿನ ದೇವಸ್ಥಾನದ ವಠಾರದಲ್ಲಿ ಪಾಣರು ಕಳ್ಳು ಹೊತ್ತು ಹಾಡುವ ಸನ್ನಿವೇಶ ಹಿಂದಿನಿಂದ ನಡೆದು ಬಂದಿದ್ದು ಈಗಲೂ ವಾಡಿಕೆಯಲ್ಲಿದೆ. ಪರಂಪರೆ ಆಚರಣೆ, ನಂಬಿಕೆ ನಡಾವಳಿಯೊಂದಿಗೆ ಅಕ್ಷರಶಃ ಶ್ರದ್ಧಾ ಭಕ್ತಿಯಿಂದ ನಡೆಯುವ ಪಾಣರ ಆಟಕ್ಕೆ ಊರ ಪರ ಊರ ಭಕ್ತಾದಿಗಳು ಭಕ್ತಿ ಪೂರ್ವಕವಾಗಿ ಭಾಗವಹಿಸುತ್ತಾರೆ.ಸ್ಥಳ ಪುರಾಣ : ನಂಬಿದವರನ್ನು ಸಲಹಿ, ಸಮೃದ್ಧಿ, ಅಭಯ ಕರುಣಿಸುವ ಮುದ್ದುಸ್ವಾಮಿ ನೆಲೆ ನಿಂತ ಬೀಡು ಶ್ರೀ ಕ್ಷೇತ್ರ ಮುದ್ದುಮನೆ. ಎಲ್ಲವನ್ನು ವಿವರಿಸಲಾಗದಷ್ಟು ನಿಗೂಢ ರಹಸ್ಯದ ಕ್ಷೇತ್ರವಿದು. ಶ್ರೀ ಮುದ್ದುಸ್ವಾಮಿ ದೇವಸ್ಥಾನ ಮೂಡಿ ಬಂದ ಕಥೆಯು ಕುತೂಹಲಕಾರಿಯಾಗಿದ್ದು ಮುದ್ದುಸ್ವಾಮಿ ಎಂಬ ಮಹಾಜ್ಞಾನಿ ದೇವರ ಧ್ಯಾನದಲ್ಲಿ ಐಹಿಕ ಸುಖ ಭೋಗಗಳನ್ನು ತ್ಯಜಿಸಿ ತಪಸ್ಸಿಗೆ ಕುಳಿತು ವರ್ಷಗಳು ಉರುಳಿ ಹೋಗುತ್ತದೆ. ಸ್ವಾಮಿಯ ತಪಸ್ಸಿಗೆ ಮೆಚ್ಚಿ ಸಕಲ ಇಷ್ಟಾರ್ಥಗಳನ್ನು ಪೂರೈಸುವ ಮಹಾನ್ ಶಕ್ತಿ ರೂಪಿಣಿ ದೇವಿಯು ಮುದ್ದಾದ ಮಗುವಿನ ರೂಪದಲ್ಲಿ ಸೂರಗಿಯ ಬನದಲ್ಲಿ ಆಟವಾಡುತ್ತಿದ್ದ ಬೈಲುಮನೆ ಹೆಣ್ಣು ಮಕ್ಕಳ ಕಣ್ಣಿಗೆ ಗೋಚರಿಸುತ್ತದೆ. ಆಟವಾಡುತ್ತಿದ್ದ ಮಕ್ಕಳೆಲ್ಲಾ ನೋಡಿ ಮುದ್ದಾದ ಮಗು ಮುದ್ದಮ್ಮ ಎಂದು ಒಬ್ಬರನೊಬ್ಬರು ಕೂಗಿ ಕರೆಯುತ್ತಾರೆ. ಅಷ್ಟು ಹೊತ್ತಿಗೆ ತಪಸ್ಸಿಗೆ ಕುಳಿತು ವರ್ಷಗಳು ಉರುಳಿ ಹೋಗಿದ್ದ ಮುನಿಯನ್ನು ಮುದ್ದಮ್ಮ ಹುತ್ತದ ರೂಪದಲ್ಲಿ ಆವರಿಸಿ ಸ್ವಾಮಿ ಕುಳಿತ್ತಲ್ಲೇ ಹುತ್ತ ಬೆಳೆಯತ್ತ ಮುನಿಯುನ್ನು ಆವರಿಸಿಕೊಳ್ಳುತ್ತಾ ವಲ್ಮೀಕ (ಹುತ್ತ) ಮಾತ್ರ ಜನರಿಗೆ ಕಾಣಿಸುತ್ತದೆ. ಹುತ್ತದ ರೂಪದಲ್ಲಿ ದೇವಿ ದರ್ಶನ ನೀಡುತ್ತಾಳೆ. ಇಂದಿಗೂ ಹಲವರು ಈ ದೇವರನ್ನು ಮುದ್ದುಸ್ವಾಮಿ ಎಂದು, ಇನ್ನೂ ಕೆಲವರು ಮುದ್ದಮ್ಮ ಎಂದು ಭಕ್ತಿಯಿಂದ ಭಜಿಸುತ್ತಾರೆ. ಏಕ ಕಾಲಕ್ಕೆ ದೇವಿ ಹಾಗೂ ದೇವನಾಗಿ ಕರೆಸಿಕೊಳ್ಳುವ ಏಕೈಕ ದೇವರು ಮುದ್ದುಸ್ವಾಮಿ.
ಭಕ್ತಿಯಿಂದ ಬಂದವರಿಗೆ ಅಮೃತ ಸಿಂಚನಗೈಯುವ, ಮನದ ಕಾಮನೆಗಳನ್ನು ಪೂರೈಸುವ ಮಹಾನ್ ಶಕ್ತಿ ಹುತ್ತಕ್ಕೆ ಬಂದಿರುವುದು ಬೈಲುಮನೆಯವರ ಅರಿವಿಗೆ ಬಂದು ನಂಬಿ ಬಂದಿರುವ ಭಕ್ತರಿಗೆ ಅನುಗ್ರಹ ನೀಡುವ ಈ ಹುತ್ತಕ್ಕೆ ಗ್ರಾಮದೇವತೆಯ ರೂಪದಲ್ಲಿ ಶಿರೂರಿನಲ್ಲಿ ದೇವಳದ ಸ್ಥಳ ಮನೆಯವರು ಗುಡಿ ಕಟ್ಟಿ ಪೂಜೆಗೆ ಪ್ರಾರಂಭಿಸುತ್ತಾರೆ. ಮುದ್ದುಸ್ವಾಮಿ ತಪಸ್ಸಿಗೆ ಕುಳಿತ ಈ ತಪೋಭೂಮಿ ಸುರಗಿಯ ವನವಾಗಿತ್ತು. ಅದಕ್ಕಾಗಿ ದೇವಸ್ಥಾನದ ವಠಾರದಲ್ಲಿ ಇಂದಿಗೂ ಸುರಗಿ ಹೂವಿನ ಘಮ ಘಮ ಭಕ್ತರನ್ನು ಸ್ವಾಗತಿಸುತ್ತದೆ. ಇಲ್ಲಿನ ಪುರಾತನ ಅಶ್ವತ್ಥ ವೃಕ್ಷಗಳು ದೇವರ ನೆಲೆಬೀಡು ಎನ್ನುವುದನ್ನು ಪರಿಚಯಿ ಸುತ್ತದೆ.
ಹೋಗುವ ದಾರಿ : ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕಿನ ಶ್ರೀ ಕ್ಷೇತ್ರ ಮಂದಾರ್ತಿಯಿಂದ 6 ಕಿ.ಮಿ ಪೂರ್ವಕ್ಕೆ ಸಾಗಿದರೆ ಸಿಗುವುದು ಪ್ರಕೃತಿ ಮಡಿಲಿನ ಸುಂದರತಾಣ ಶ್ರೀಕ್ಷೇತ್ರ ಮುದ್ದುಮನೆ.
ಬರಹ : ಲತಾ ಸಂತೋಷ್ ಶೆಟ್ಟಿ ಮುದ್ದುಮನೆ