ರಾಷ್ಟ್ರೀಯ ಸ್ವಯಂಸೇವಕ ಸಂಘ, ಧಾರ್ಮಿಕ ಕ್ಷೇತ್ರ, ಭಾರತೀಯ ಜನತಾಪಕ್ಷ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾರ್ವಜನಿಕ ಬದುಕಿಗೆ ಕಾಲಿಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಸದಾ ಕ್ರಿಯಾಶೀಲ, ಸಂಘಟನಾ ಚತುರ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಹೆಸರು ಬಿಜೆಪಿ ವಲಯದಲ್ಲಿ ಸದಾ ಚಾಲ್ತಿಯಲ್ಲಿದೆ. ಧರ್ಮ ಜಾಗರಣಾ, ಆರ್.ಎಸ್.ಎಸ್, ಭಾಜಾಪದ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತ ಸಂದರ್ಭದಲ್ಲೇ ನಳಿನ್ ಕುಮಾರ್ ಕಟೀಲ್ ಹೆಸರು ಜಿಲ್ಲೆಯ ಮೂಲೆ ಮೂಲೆಯ ತಳಮಟ್ಟದ ಕಾರ್ಯಕರ್ತರಿಗೆ ಬಹಳ ಹತ್ತಿರದ ನಂಟು ಹೊಂದಿತ್ತು.
ಜಿಲ್ಲೆಯಲ್ಲಿ ಸುಮಾರು ಎರಡುವರೆ ದಶಕಗಳ ಹಿಂದೆ ತಲೆಯೆತ್ತಿದ ಪರಿಸರದ ಮಾರಕ ಅವೈಜ್ಞಾನಿಕ ಯೋಜನೆಗಳ ವಿರುದ್ಧ ಸಂಘಟಿತ ಹೋರಾಟ, ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ನೂರಾರು ಬ್ರಹ್ಮಕಲಶೋತ್ಸವದ ಅಧ್ಯಕ್ಷ ಗೌರವಾಧ್ಯಕ್ಷರಾಗಿ ಮಾದರಿ ಬ್ರಹ್ಮಕಲಶೋತ್ಸವನ್ನು ಹಾಗೂ ಸಂಘಟನಾ ಚಾತುರ್ಯತೆಯನ್ನು ಜಿಲ್ಲೆಗೆ ಪಸರಿಸಿ ಮಾದರಿ ಬ್ರಹ್ಮಕಲಶೋತ್ಸವದ ರೂವಾರಿಯಾಗಿ, ಎತ್ತಿನಹೊಳೆ ಯೋಜನೆಯ ವಿರುದ್ಧದ ಹೋರಾಟ ಸಂಘಟನೆಯ ಪ್ರಚಾರಕರಾಗಿ ಸಂಘಟನಾತ್ಮಕ ಹಿನ್ನೆಲೆಯಲ್ಲಿ ಪಕ್ಷದ ಹಾಗೂ ಸಂಘಟನೆಯ ಹಿರಿಯರ ಸೂಚನೆಯ ಮೇರೆಗೆ ರಾಜಕಾರಣಕ್ಕೆ ಪ್ರವೇಶಿಸಿದವರು ನಳಿನ್ ಕುಮಾರ್ ಕಟೀಲ್.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಜಿಲ್ಲೆಗೆ ಈ ಹಿಂದಿನ ಅವಧಿಯಲ್ಲಿ ಯಾವುದೇ ಸಂಸದರು ಒದಗಿಸದ ಸಾವಿರಾರು ಕೋಟಿ ರೂಪಾಯಿಗಳ ಅನುದಾನ, ದೂರದೃಷ್ಟಿಯ ಯೋಜನೆಗಳು ಇಂದಿಗೂ ಜಿಲ್ಲೆಯಲ್ಲಿ ಕಾಮಗಾರಿಗಳು ನಡೆಯುವ ಮೂಲಕ ಸಾರಿ ಹೇಳುತ್ತಿವೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ದಾಖಲೆಯ ಮಟ್ಟದಲ್ಲಿ ಸಂಘಟನಾತ್ಮಕ ನೆಲೆಯಲ್ಲಿ ರಾಜ್ಯ ಸುತ್ತಿದ ಕೀರ್ತಿ ಹಾಗೂ ಪಕ್ಷದಲ್ಲಿ ಸಂಘಟನೆಯ ಅನುಶಾಸನಗಳನ್ನು ಜಾರಿಗೆ ತಂದ ಹೆಗ್ಗಳಿಕೆ ನಳಿನ್ ಗಿದೆ. ತನ್ನ ಅಧ್ಯಕ್ಷ ಅವಧಿಯಲ್ಲಿ ಯಾವುದೇ ಪಕ್ಷದಲ್ಲಿ ಗುಂಪುಗಾರಿಕೆ, ಭಿನ್ನಮತಕ್ಕೆ ಅವಕಾಶ ಕಲ್ಪಿಸದೆ ಪಕ್ಷದಲ್ಲಿ ಶಿಸ್ತನ್ನು ಕಲ್ಪಿಸಿದ ಕೀರ್ತಿ ನಳಿನ್ ಕುಮಾರ್ ಕಟೀಲಿಗೆ ಸಲ್ಲುತ್ತದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರಾಗಿ ನೆರೆಯ ಕೇರಳ ಹಾಗೂ ತಮಿಳುನಾಡಿನ ಸಂಘಟನೆಯ ಪ್ರಭಾರಿಯಾಗಿ ನಳಿನ್ ಕುಮಾರ್ ಕಟೀಲ್ ಕಾರ್ಯವನ್ನು ಪಕ್ಷದ ಹೈಕಮಾಂಡ್ ಗುರುತಿಸಿ ಈಗಾಗಲೇ ಸಂಘಟನಾ ವ್ಯವಸ್ಥೆಗೆ ಬಳಸಿಕೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಳಮಟ್ಟದ ಕಾರ್ಯಕರ್ತರ ಸ್ವಂತ ತಂಡ ನಳಿನ್ ಕುಮಾರ್ ಕಟೀಲ್ ಬೆನ್ನಿಗೆ ಇಂದಿಗೂ ನಿಂತಿದೆ. ಪಕ್ಷದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡು ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಒಂದೆಡೆಯಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಥ ಹೋರಾಟ ಸಂಘಟಿಸಲು ಹಾಗೂ ನೇತೃತ್ವವನ್ನು ಹಿರಿಯಣ್ಣನ ಸ್ಥಾನದಲ್ಲಿ ಈ ಹಿಂದಿನಿಂದಲೂ ನಳಿನ್ ಕುಮಾರ್ ಕಟೀಲ್ ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನಳಿನ್ ಕುಮಾರ್ ಅವಶ್ಯಕತೆ ಖಂಡಿತವಾಗಿಯೂ ಇದೆ.ತನಗೆ ಲೋಕಸಭಾ ಸ್ಥಾನ ಕೈತಪ್ಪಿದಾಗಲೂ, ಅಧಿಕಾರ ಕೈ ತಪ್ಪಿದಾಗಲೂ ನಳಿನ್ ಉಚ್ಛರಿಸಿದ ಮಾತು ಒಂದೇ ಅದು ನಾನೊಬ್ಬ ಕಾರ್ಯಕರ್ತ, ಅಧಿಕಾರಕ್ಕಾಗಿ ಅಂಟಿ ಕೂತವ ನಾನಲ್ಲ. ಪಕ್ಷ ಕಸ ಗುಡಿಸು ಅಂದರೆ ಅದಕ್ಕೂ ಸಿದ್ಧ, ಯಾವುದೇ ಸ್ಥಾನವನ್ನು ಅರ್ಜಿ ಹಾಕಿ ಲಾಬಿ ಮಾಡಿ ಪಡೆಯುವ ಜಾಯಮಾನ ನಮ್ಮದಲ್ಲ. ಸಂಘಟನೆ, ಪಕ್ಷ ಹಾಗೂ ಹಿರಿಯರು ಹೇಳಿದನ್ನು ಮಾಡುವುದಷ್ಟೇ ನಮ್ಮ ಕೆಲಸ ಎಂದಿದ್ದರು. ತನ್ನಲ್ಲಿ ಅಧಿಕಾರ ಇಲ್ಲದಿದ್ದರೂ ಓರ್ವ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಳಿನ್ ಕುಮಾರ್ ಮನೆಯಲ್ಲಿ ಕೂತಿಲ್ಲ. ಕಾರ್ಯಕರ್ತರ ಸಮಸ್ಯೆಗಳಿಗೆ ಇಂದಿಗೂ ಕಣ್ಣಾಗಿ, ಕಿವಿಯಾಗಿ ತನು ಮನ ಧನಗಳ ಮೂಲಕ ಸಹಾಯ ಹಸ್ತ ಚಾಚುತ್ತಲೇ ಇದ್ದಾರೆ. ಬಡವರಿಗೆ ವೈದ್ಯಕೀಯ, ಶಿಕ್ಷಣ, ವಾಸಕ್ಕೆ ಸೂರು, ಮದುವೆಗೆ ಧನಸಹಾಯವನ್ನು ಇಂದಿಗೂ ಬಡ ಕಾರ್ಯಕರ್ತರಿಗೆ ನೀಡುತ್ತಲೇ ಇದ್ದಾರೆ. ನೋವಿನಲ್ಲಿ, ಸಂಕಟದಲ್ಲಿರುವ ಮಂದಿಗೆ ತಾವು ಸಹಾಯ ಮಾಡಿ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಸಣ್ಣ ಸಹಾಯಕ್ಕೂ ಲಕ್ಷಗಟ್ಟಲೆಯ ಪ್ರಚಾರ ಪಡೆಯುವ ಕಾಲಘಟ್ಟದಲ್ಲಿ ಬಡ ಕುಟುಂಬದ, ನೋವಿನಲ್ಲಿರುವ ಮಂದಿಗೂ ಒಂದು ಸ್ವಾಭಿಮಾನ, ಸ್ವಂತ ಬದುಕಿದೆ ಎಂಬ ಕಾರಣಕ್ಕೆ ನಳಿನ್ ಕುಮಾರ್ ಇಂದಿಗೂ ತಾನು ಮಾಡಿದ ಸಹಾಯ ಕಾರ್ಯದ ಪ್ರಚಾರದಲ್ಲಿ ಬಹಳಷ್ಟು ಹಿಂದಿನ ಸಾರಿನಲ್ಲಿ ನಿಂತಿದ್ದಾರೆ.
ನಳಿನ್ ಕುಮಾರ್ ಕಟೀಲ್ ಶ್ರಮ, ಸಂಘಟನೆ, ತ್ಯಾಗ, ಪರಿಶ್ರಮ ಇಂದಿಗೂ ಹಿರಿಯ ಕಿರಿಯ ಕಾರ್ಯಕರ್ತರಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದು, ಆರ್ ಎಸ್ ಎಸ್ ಹಾಗೂ ಪಕ್ಷದ ಹೈಕಮಾಂಡ್ ನಳಿನ್ ಕುಮಾರ್ ಕಟೀಲ್ ಜೊತೆ ಇಂದಿಗೂ ನೇರ ಸಂಪರ್ಕವನ್ನು ಹೊಂದಿದೆ. ಒಂದು ಮೂಲದ ಪ್ರಕಾರ ರಾಜ್ಯ ರಾಜಕಾರಣಕ್ಕೆ ನಳಿನ್ ಕುಮಾರ್ ಪ್ರವೇಶ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಿಶ್ಚಿತಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರಾಗಿ ಪಕ್ಷದ ಹಾಗೂ ಸಂಘಟನಾ ವಲಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವಾಗ ಕಾರಣಕ್ಕೆ ಜಿಲ್ಲೆಯ ಪುತ್ತೂರು, ಬಂಟ್ವಾಳ ಇಲ್ಲವೇ ಮೂಡಬಿದ್ರೆ ಹೀಗೆ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕೆ ಅಖಾಡಕ್ಕಿಳಿಯುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ಅಧಿಕಾರಯುತ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಟೀಕೆ, ಟಿಪ್ಪಣಿಗಳು ಸಹಜ. ಅದನ್ನು ತಾಳ್ಮೆಯಿಂದ ಸ್ವೀಕರಿಸುವ ಬದ್ಧತೆ ನಳಿನ್ ಕುಮಾರ್ ಕಟೀಲ್ ರವರಲ್ಲಿ ಕರಗತವಾಗಿರುವ ಕಾರಣಕ್ಕೆ ಟೀಕೆಗಳು ಸಾಯುತ್ತವೆ ಕಾರ್ಯಗಳು ಜೀವಂತವಾಗಿರುತ್ತವೆ ಎಂಬುದು ಅಷ್ಟೇ ಸತ್ಯ.