ಸ್ವರ್ಗ… (ಅಸಹಾಯಕರ ಅರಮನೆ) ಇಂತಹದೊಂದು ಚಿಂತನೆ ಮಾಡಿದ್ದೆವು. ಇಂದು ಬಂದ ಕರೆಯೊಂದು ನಿಜಕ್ಕೂ ಆಶ್ಚರ್ಯಕರವಾಗಿತ್ತು. ಇದೆಂತಹ ಅರಮನೆ ಮಾರ್ರೆ ಒಂದು ಮುಚ್ಚಿದ ಶಾಲೆಗೆ ಸುಣ್ಣಬಣ್ಣ ಹಾಕಿದ್ರಿ ಅರಮನೆ ಅನ್ನೋಕೆ ಅದ್ರಲ್ಲೆಂತ ಸ್ಪೆಷಲ್ ಇದೆ? ಅಂದ್ರು. ನಾನು ಬ್ಯುಸಿ ಇದ್ದೆ ಹಾಗಾಗಿ “ನಿಮ್ಮಲ್ಲಿ ಮತ್ತೆ ಮಾತಾಡುತ್ತೇನೆ” ಎಂದು ಹೇಳಿ ಫೋನಿಟ್ಟೆ. ಆ ಮನುಷ್ಯನ ಕಲ್ಪನೆಯಲ್ಲಿ ಬಹುಷಃ ಮೈಸೂರು ಅರಮನೆ ಇದ್ದಿರಬೇಕು. ಆದರೆ ದಿನವಿಡೀ ಅವರು ಹೇಳಿದ ಮಾತು “ಅದೆಂತ ಅರಮನೆ?” ಎಂಬುದು ಕಿವಿಯೊಳಗೆ ಪದೇ ಪದೇ ಝೇಂಕರಿಸುತಿತ್ತು. ಸಂಜೆಯ ಹೊತ್ತಿಗೆ ಈ ಪ್ರಶ್ನೆಗೆ ಉತ್ತರವೂ ಸಿಕ್ಕಿದ್ದು ಮಾತ್ರ ಕಾಕತಾಳೀಯ.
ಸಂಜೆ ನಮ್ಮ ಆತ್ಮೀಯರಿಂದ ಕರೆಯೊಂದು ಬಂತು. ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಅಸಹಾಯಕ ಪರಿಸ್ಥಿತಿಯಲ್ಲಿದ್ದಾನೆ. ಅನೇಕ ದಿನದಿಂದ ಕರೆ ಮಾಡುತ್ತಿದ್ದಾನೆ ಎಂದು ನನಗೆ ಕಾನ್ಫರೆನ್ಸ್ ಕಾಲ್ ಹಾಕಿದರು. ಆತ ಅಲೆಯುತ್ತಾ ಧರ್ಮಸ್ಥಳದ ನೇತ್ರಾವತಿ ಬಳಿ ಇದ್ದೀನಿ ಎಂದು ತನ್ನ ಕಷ್ಟವನ್ನು ತೋಡಿಕೊಂಡ. ಮಕ್ಕಳು ನೋಡಿಕೊಳ್ಳುತ್ತಿಲ್ಲ. ಹೃದಯದಲ್ಲಿ ಸಮಸ್ಯೆಯಿದೆ ಎಂದು ಹೇಳುವಾಗ ನಾನಂದೆ “ಏನೂ ಟೆನ್ಶನ್ ಮಾಡಬೇಡಿ ಉಡುಪಿಗೆ ಬನ್ನಿ. ನಿಮಗೆ ಅರಮನೆಯೊಂದು ಕಾಯುತ್ತಿದೆ” ಎಂದು ಹೇಳಿದೆ. ತಕ್ಷಣ ಅವರೆಂದದ್ದು ಹೀಗೆ “ಅಯ್ಯೋ ನನಗೆ ಅರಮನೆ ಬೇಡ. ಇರಲು ನೆಲೆ ಸಾಕು. ಮನಸ್ಸಿಗೆ ನೆಮ್ಮದಿ, ಶಾಂತಿ ಜೊತೆಗೆ ಉಣ್ಣಲು ಅನ್ನ ಇಷ್ಟಿದ್ದರೆ ಸಾಕು!”. ಇವೆಲ್ಲ ಇಲ್ಲಿ ಸಿಗುತ್ತದೆ ಇದು ನನ್ನ ಗ್ಯಾರಂಟಿ ಎಂದೆ.
ನನ್ನ ಒಳ ಮನಸ್ಸು ಹೇಳಿತು ಇರಲು ನೆಲೆ, ಮನಸ್ಸಿಗೆ ನೆಮ್ಮದಿ, ಶಾಂತಿ, ಜೊತೆಗೆ ಉಣ್ಣಲು ಅನ್ನ ಇವಿಷ್ಟಿದ್ದರೆ ಅಸಹಾಯಕರ ಪಾಲಿಗೆ ಅದೇ ಅಲ್ಲವೇ ಅರಮನೆ. ನಮ್ಮ ಕನಸೂ ಅದೇ ಅಲ್ಲವೇ? ಅದೇ ಇಲ್ಲದ ಅರಮನೆ ಸ್ಮಶಾನಕ್ಕೆ ಸಮವಲ್ಲವೇ? ಮುಸ್ಸಂಜೆ ಕಾಲದಲ್ಲಿ ಸುಖ, ಶಾಂತಿ ನೆಮ್ಮದಿ ಕೊಡುವ ನಮ್ಮ ಸ್ವರ್ಗಕ್ಕಿಂತ ದೊಡ್ಡ ಅರಮನೆ ಇದೆಯೇ? ವ್ಹಾವ್ ನನ್ನ ಮನಸ್ಸಿನ ಪ್ರಶ್ನೆಗೆ ಉತ್ತರ ಕೊಡಿಸಿದ ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಬೆಳಿಗ್ಗೆ ಬಂದ ನಂಬರನ್ನು ಹುಡುಕಿ ಕರೆ ಮಾಡಿದೆ. ನನಗೆ ನಮ್ಮ ಅರಮನೆಯ ಪರಿಭಾಷೆ ಅವನಿಗೆ ಹೇಳುವ ಅವಸರವಿತ್ತು.
ಶಶಿಕಿರಣ್ ಶೆಟ್ಟಿ, 9945130630