ಉತ್ತರದ ಹಂಪಿ, ಪಟ್ಟದಕಲ್ಲು, ಬೇಲೂರು ಹಳೇಬೀಡು, ಅಜಂತ ಎಲ್ಲೋರ ಹರಪ್ಪ ಮೊಹಂಜದಾರೊ ಮುಂತಾದ ಸ್ಥಳಗಳು ಗತಕಾಲದ ಕಲೆಯ ಶಿಲಾಲಯಗಳು ನಿತ್ಯ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಹಾಗೆಯೇ ತುಳುನಾಡಿನ ಉಡುಪಿ ಜಿಲ್ಲೆಯ ತೌಳವ ರಾಜಧಾನಿ ಬಾರ್ಕೂರು, ನೀಲಾವರ, ಬಸ್ರೂರು, ಚೌಳಿಕೇರಿ, ಕತ್ತಲೆ ಬಸದಿ, ಸೂರಾಲು ಮಣ್ಣಿನ ಅರಮನೆ ಇತ್ಯಾದಿ ನೂರಾರು ಸ್ಥಳಗಳಲ್ಲಿ ಪುರಾತನ ಶಿಲಾಶಾಸನ ಕಲ್ಲುಗಳಿವೆ.
ಇಲ್ಲಿ ಪ್ರಸ್ತಾಪಿಸುತ್ತಿರುವ ದುಃಖದ ಸಂಗತಿ ಎಂದರೆ, ಕೆಲವು ದೇವಾಲಯದ ಸಮೀಪ ಇರಿಸಲಾದ ಶಾಸನ ಕಲ್ಲುಗಳನ್ನು ಸ್ವಲ್ಪ ಮಟ್ಟಿನಲ್ಲಿ ಅಚ್ಚುಕಟ್ಟುತನದಲ್ಲಿ ಇರಿಸಲಾಗಿದೆ. ಆದರೆ ಉಳಿದ ಹೆಚ್ಚಿನ ಪೌರಾಣಿಕ ಸ್ಥಳಗಳಲ್ಲಿ ಶಾಸನ ಕಲ್ಲುಗಳು ಅನಾಥವಾಗಿ ಬಿದ್ದುಕೊಂಡಿರುವುದನ್ನು ಕಾಣಬಹುದು. ಆದರೆ ಎಲ್ಲಿಯೂ ಆ ಶಾಸನ ಕಲ್ಲಿನ ವಿವರವನ್ನು ತಿಳಿಸುವ ಭಾಗ್ಯವಿಲ್ಲ. ಅದರಲ್ಲೂ ನೀಲಾವರ ಶ್ರೀ ಮಹಿಷಮರ್ದಿನಿ ಕ್ಷೇತ್ರದ ಹೊರಾವರಣ ಸೀತಾ ನದಿಯ ಪ್ರಶಾಂತ ತಾಣದ ದಡದಲ್ಲಿ ಸಾಲಾಗಿ 8 ಶಾಸನ ಕಲ್ಲುಗಳಿವೆ. ಕೆಲವು ಐದಾರು ಅಡಿ ಎತ್ತರ ಮೂರು ಅಡಿ ಅಗಲವಿದೆ. ಬಾರ್ಕೂರಿನ ಚೌಳಿಕೇರಿ ಶ್ರೀ ಮಹಾಗಣಪತಿ ದೇವಾಲಯ ಶಿಲೆಗಳ ಗುಹಾಲಯದಂತೆ ನಿರ್ಮಿಸಿದ ಅತಿ ಪುರಾತನ ಕ್ಷೇತ್ರ. ಅದರ ಗೋಡೆ, ಮಾಡು ಎಲ್ಲವೂ ಕೈಯಲ್ಲಿ ಕೆತ್ತಿದ ಶಿಲೆಯ ಹಲಗೆಗಳಿಂದಲೇ ನಿರ್ಮಿಸಲಾಗಿದೆ. ಇದರ ಹೊರಾವರಣದ ಗೋಡೆಗೆ ತಾಗಿಸಿ ಏಳು ಶಾಸನ ಕಲ್ಲುಗಳನ್ನು ಇಡಲಾಗಿದೆ ಇದರ ಮಾಹಿತಿಯು ಯಾರಿಂದಲೂ ಕೇಳಿ ತಿಳಿಯಲಾಗಲಿಲ್ಲ.
ತುಳುನಾಡಿನ ಪುರಾತನ ಮಣ್ಣಿನ ಗೋಡೆಯ ಅರಮನೆಗಳಲ್ಲಿ ಉಳಿಕೆಯಾದ ಒಂದೇ ಒಂದು ಸೂರಾಲು ಮಣ್ಣಿನ ಅರಮನೆ ಅದರ ಮುಂಭಾಗದಲ್ಲಿ ಶಿವನ ಅತಿ ಪುರಾತನ ಶಿಲೆಯ ಶಿವ ಕ್ಷೇತ್ರವಿದೆ. ಅದರ ಮುಂಭಾಗದ ಅಂಗಣದಲ್ಲಿ 9 ಕ್ಕಿಂತಲೂ ಹೆಚ್ಚು ದೊಡ್ಡದಾದ ಶಾಸನ ಕಲ್ಲುಗಳಿವೆ. ಅವುಗಳನ್ನು ಇರಿಸಿದ್ದ ಸ್ಥಳದಲ್ಲಿ ಹುಲ್ಲು, ಬಳ್ಳಿ ಹಬ್ಬಿ ಸರಿಯಾಗಿ ಎಣಿಸಲಾಗಲಿಲ್ಲ. ಬಾರ್ಕೂರಿನ ಜೈನರ ಕತ್ತಲೆ ಬಸದಿ, ಕಲ್ಲು ಚಪ್ಪರ ಅದರೊಳಗಿರುವ ಶಿವ ಕ್ಷೇತ್ರ, ಶಿವನ ಎದುರು ಸ್ವಾಮಿ ಗುಡಿಯಿಂದ ಹೊರಗೆ ಬರುವನೆಂದು ಕಾದು ಕುಳಿತ ನಂದಿಯ ಭಂಗಿಯೇ ನಿತ್ಯ ನೂತನವಾಗಿದೆ. ಇಲ್ಲಿ ಎಲ್ಲಿ ನೋಡಿದರಲ್ಲಿ ಅಸ್ತವ್ಯಸ್ತವಾಗಿ ಬಿದ್ದ ಮಹಾಶಿಲಾ ಅವಶೇಷಗಳೇ ದೃಶ್ಯವಾಗುತ್ತದೆ. ಇದರ ಬಲಭಾಗದಲ್ಲಿ ವಿಶಾಲ ಕಲ್ಲು ಚಪ್ಪರದಲ್ಲಿ ಜೈನರ 24 ತೀರ್ಥಂಕರರು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸಾಧಾರಣ 80 ಅಡಿ ಉದ್ದದ ಏಕ ಕಂದು ಶಿಲೆಯ ಪೀಠ ಆ ಪೀಠದಲ್ಲಿ 24 ಗುಳಿಗಳನ್ನು ಮಾತ್ರ ಈಗ ಕಾಣಬಹುದಾಗಿದೆ. ಆ 24 ತೀರ್ಥಂಕರರ ಮೂರ್ತಿಗಳು ಮತ್ತು ಅದರ ಅಡಿಯಲ್ಲಿ ಹಾಕಲಾದ ಮುತ್ತು ರತ್ನಗಳೆಲ್ಲಾ ವಂಚಕರ ಪಾಲಾಗಿ ಬಿಕೋ ಎನ್ನುವಂತಿದೆ.
ಈಗಿನ ಮನೆಯಂಗಳದ ಬದಿಯಲ್ಲಿ ಬಟ್ಟೆ ಒಗೆಯುವ ಕಲ್ಲುಗಳಿವೆ ಎನ್ನುತ್ತಾರೆ. ಸ್ಥಳೀಯರು, ಪ್ರಸ್ತುತ ನೀಲಾವರದ ಶಾಸನ ಕಲ್ಲುಗಳಲ್ಲಿ ಕೆಲವು ವಿವರಗಳನ್ನು ತಿಳಿಸಲಾಗಿದೆ. ಈಗಿನ ಮದ್ರಾಸು ಸಂಸ್ಥಾನ (ತಮಿಳುನಾಡು)ದ ದ್ರಾವಿಡ ಮೂಲದ ಅಲುಪ ವಂಶದ ವೀರ ಪಾಂಡ್ಯನೂ ಕ್ರಿಸ್ತ ಶಕ 1258 ರಲ್ಲಿ ಆಳ್ವಿಕೆ ನಂತರ ಹೊಯ್ಸಳ, ವಿಜಯನಗರ, ಕೆಳದಿಯ ಆಳ್ವಿಕೆಯ ವಿವರಗಳಿವೆ. ಆಳುಪರೂ, ಹೊಯ್ಸಳರು ವಿವಾಹ ಮಾಡಿಕೊಂಡಿದ್ದರು. ಅವರು ನೀಲಾವರ ದೇವಸ್ಥಾನಕ್ಕೆ ದತ್ತಿ ಬಿಟ್ಟ ವಿವರವೂ ಇದೆ. ಕ್ರಿಸ್ತ ಶಕ 1387 ರಲ್ಲಿ ಇಮ್ಮಡಿ ಹರಿಹರನ ಕಾಲದಲ್ಲಿ ನೀಲಾವರ ಕ್ಷೇತ್ರವನ್ನು ಪುನರುತ್ಥಾನಗೊಳಿಸಿದ್ದು ಶಾಸನದಲ್ಲಿದೆ. ಕ್ರಿಸ್ತಶಕ 1528 ವಿಜಯನಗರದ ಕೃಷ್ಣದೇವರಾಯನ ಶಾಸನ ತುಂಬಾ ವಿಸ್ತಾರವಿದೆ.
ಇಲ್ಲಿ ತೌವಳವರೆಲ್ಲಾ ಚಿಂತಿಸಬೇಕಾದ ಸಂಗತಿ ಎಂದರೆ ಪುರಾತನ ವಸ್ತು ಸಂಶೋಧಕರಾದ ಡಾ. ಗುರುರಾಜ ಭಟ್ಟರು ಹಾಗೂ ಅವರಿಂದ ಮೊದಲು ಹಲವಾರು ವಿದೇಶಿಗಳು ಬಂದು ಅವರ ಭಗೀರಥ ಪ್ರಯತ್ನದಿಂದ ಈ ಎಲ್ಲಾ ಶಿಲಾಶಾಸನಗಳನ್ನು ಚಿತ್ರೀಕರಿಸಿ ದಾಖಲೆ ವಿವರಗಳನ್ನು ವಿದೇಶಗಳಲ್ಲಿ ಪ್ರಕಟಿಸಿರಬಹುದು. ಆದರೆ ಡಾ. ಗುರುರಾಜ ಭಟ್ಟರು ಸಂಶೋಧನ ಗ್ರಂಥದಲ್ಲಿ ಬರೆದಿರಬಹುದು. ಆದರೆ ನಮ್ಮ ತುಳುನಾಡಿನ ಎಷ್ಟು ಜನರು ಇದನ್ನು ಓದಿರಬಹುದು? ಇನ್ನೂ ಹೊರಗಿನಿಂದ ಬಂದವರಿಗೆ ಹೇಗೆ ಮಾಹಿತಿ ನೀಡಬಹುದು. ಅದಕ್ಕಾಗಿ ನನ್ನ ಸಲಹೆ ಏನೆಂದರೆ ಶಿಲಾ ಶಾಸನಗಳಿರುವ ಕ್ಷೇತ್ರಗಳ ಮತ್ತು ಇತರ ಸ್ಥಳ ಶಾಸನಗಳು ಇರುವ ಸ್ಥಳೀಯ ನಾಗರಿಕರು ಇದರ ರಕ್ಷಣೆಯ ಹೊಣೆಯನ್ನು ವಹಿಸಿಕೊಳ್ಳಬೇಕು. ಅದಕ್ಕೆ ಸರಕಾರದ ಪುರಾತನ ವಸ್ತು ವಿಭಾಗ ಸ್ಥಳೀಯ ಆಡಳಿತ ಮಂಡಳಿಗಳ ಆರ್ಥಿಕ ಸಹಾಯ ಅಗತ್ಯವಿದೆ. ಮೊದಲಾಗಿ ಶಾಸನ ಕಲ್ಲುಗಳಿರುವ ಸ್ಥಳಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಅಚ್ಚುಕಟ್ಟಾಗಿ ನಿಲ್ಲಿಸುವುದು. ಇನ್ನೂ ಅತಿ ಮುಖ್ಯ ಅಂಶ ಎಂದರೆ, ಪ್ರತಿ ಶಾಸನದಲ್ಲಿನ ಹತ್ತಿರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅದರಲ್ಲಿರುವ ವಿವರಗಳನ್ನು ಕಾಲ ಅಂಕಿ ಅಂಶ ಸಮೇತ ಬರೆದು ತೂಗು ಹಾಕಬೇಕು. ಅದರ ಹತ್ತಿರವೇ ದೇವಸ್ಥಾನದ ಹುಂಡಿಯಂತೆ ಒಂದು ಹುಂಡಿಯನ್ನು ಸ್ಥಾಪನೆ ಮಾಡಿದರೆ ಭವಿಷ್ಯದಲ್ಲಿ ಇಲ್ಲಿಗೆ ಬರುವ ಯಾತ್ರಿಕರ ಹಣದಿಂದಲೇ ಶಾಸನಕ್ಕೆ ಬೇಕಾದ ಸಂರಕ್ಷಣಾ ವ್ಯವಸ್ಥೆ ಮಾಡಲು ಸಾಧ್ಯವಿದೆ. ಹಾಗಾದರೆ ಮಾತ್ರ ತೌಳವರ ಪುರಾತನ ಸಂಸ್ಕಾರ ಸಂಸ್ಕೃತಿ ದೇಶ ವಿದೇಶಕ್ಕೆ ಮಾದರಿಯಾಗಬಲ್ಲದು.
ಕಡಾರು ವಿಶ್ವನಾಥ ರೈ.