ಮೂಡುಬಿದಿರೆ: ಎನ್ಸಿಸಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾರತೀಯ ಸೇನೆಯನ್ನು ಸೇರಬೇಕು. ಭಾರತೀಯ ಸೇನೆ ಒಂದು ಕುಟುಂಬ, ಸವಾಲನ್ನು ಎದುರಿಸುವ ಸ್ಥಳ. ಅಗ್ನಿವೀರ್ ಯೋಜನೆಯು ಯುವಜನತೆಗೆ ದೇಶ ಸೇವೆ ಮಾಡಲು ಉತ್ತಮ ಅವಕಾಶ ಕಲ್ಪಿಸಿದೆ ಎಂದು ಭಾರತೀಯ ಸೇನೆಯ ನಿವೃತ್ತ ಲೆಫ್ಟಿನಂಟ್ ಜನರಲ್ ಬಿಎಸ್ ರಾಜು ಹೇಳಿದರು. ಅವರು ಆಳ್ವಾಸ್ನ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ತ್ರಂ ಸ್ಪೀಕರ್ಸ್ ಕ್ಲಬ್ವತಿಯಿಂದ ಎನ್ಸಿಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಪ್ರತಿಬಾರಿ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಅದಕ್ಕಾಗಿ ನಾವು ಪರ್ಯಾಯ ಯೋಜನೆಗಳನ್ನು ಇಟ್ಟುಕೊಳ್ಳಬೇಕು. ಶಿಸ್ತು ಮತ್ತು ಘನತೆ ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಶಿಸ್ತು ನಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುವ ಶಕ್ತಿ ನೀಡುತ್ತದೆ. ಎನ್ಸಿಸಿ ಸಮವಸ್ತ್ರ ವನ್ನು ಧರಿಸುವ ಆಸೆ ನಮ್ಮಲ್ಲಿ ಮೂಡಬೇಕು. ಆಳ್ವಾಸ್ ಸಂಸ್ಥೆಯ ಎನ್ಸಿಸಿಯಲ್ಲಿ ಮೂರು ವಿಭಾಗಳಿದ್ದು, ಕ್ರೀಯಾಶೀಲತೆಯಿಂದ ಕರ್ಯನಿರ್ವಹಿಸುತ್ತಿದೆ ಎಂಬುದನ್ನು ಅರಿತಿದ್ದೇನೆ ಎಂದರು. ಜಗತ್ತು ಕ್ಷಿಪ್ರ ಬದಲಾವಣೆಯಾಗುತ್ತಾ ಸಾಗುತ್ತಿದೆ.
ನಮ್ಮಲ್ಲಿ ಹೊಸ ತಂತ್ರಜ್ಞಾನ, ಅನ್ವೇಷಣೆಗಳಿಗೆ ಒಗ್ಗಿಕೊಳ್ಳುವ ಸಾಮರ್ಥ್ಯ ಇರಬೇಕು. ಯಾವುದು ಸಮಾಜದಲ್ಲಿ ಅಸ್ತಿತ್ವದಲ್ಲಿಲ್ಲವೋ ಅಂತಹದನ್ನು ಅನ್ವೇಷಿಸುವ ಹಲವು ಕೌಶಲ್ಯಗಳನ್ನು ನಾವು ಪಡೆಯುವತ್ತಾ ಕರ್ಯಪ್ರವೃತ್ತರಾಗಬೇಕು. ಶಿಕ್ಷಣ ವ್ಯವಸ್ಥೆ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಶಿಕ್ಷಣದ ಜೊತೆಗೆ ಬಹು ಕೌಶಲ್ಯಗಳನ್ನು ಹೊಂದಿದರೆ ಮಾತ್ರ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯ ಎಂದರು. ನಾವು ಸವಾಲನ್ನು ಎದುರುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಧನಾತ್ಮಕ ಯೋಚನೆಗಳನ್ನು ಇಟ್ಟುಕೊಳ್ಳಬೇಕು. ನಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸವಾಲನ್ನು ಎದುರಿಸುವ ಹಸಿವು ನಮ್ಮಲ್ಲಿ ಮೂಡಬೇಕು. ಸಂವಹನ ಕೌಶಲ್ಯ, ಅನ್ವೇಷಣಾತ್ಮಕ ಯೋಚನೆಗಳು ಅಗತ್ಯ . ವಿದ್ಯಾರ್ಥಿಗಳ ಪ್ರಾಯೋಗಿಕ ಅನುಭವ ಉದ್ಯೋಗದ ಮೂಲ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ಎನ್ಸಿಸಿ ಕಾರಣ. ಅಂದು ಕಲಿತ ಶಿಸ್ತು ನನ್ನ ಜೀವನದಲ್ಲಿ ಇಂದಿಗೂ ರೂಢಿಯಲ್ಲಿದೆ ಎಂದರು. ನಾವು ಜವಾಬ್ದಾರಿಗಳನ್ನು ಸ್ವೀಕರಿಸಿದಾಗ ನಮ್ಮ ವ್ಯಕ್ತಿತ್ವ ಬದಲಾಗುತ್ತದೆ. ಜೀವನದ ನಿಜವಾದ ಬದಲಾವಣೆ ಆಗ ಆಗುತ್ತದೆ. ನಮ್ಮಲ್ಲಿ ಅನ್ವೇಷಣಾತ್ಮಕ ಯೋಜನೆಗಳು ನಾವು ಹಾಕಿಕೊಂಡ ಚೌಕಟ್ಟಿನಿಂದ ಹೊರ ಬಂದಾಗ ಸಾಧಿಸಲು ಸಾಧ್ಯ. ನಾವು ಮಾಡುವ ಕೆಲಸದಲ್ಲಿ ಉತ್ಸಾಹಿತರಾಗಿರಬೇಕು. ಭಾರತದಲ್ಲಿರುವಷ್ಟು ವೈವಿಧ್ಯತೆ ಯಾವ ದೇಶದಲ್ಲೂ ಇಲ್ಲ. ಪ್ರತಿ ನೂರು ಕಿ.ಮೀ.ಗೂ ಭಾಷೆಯಲ್ಲಿ, ವೇಷಭೂಷಣದಲ್ಲಿ, ಬದಲಾವಣೆ ಕಾಣುತ್ತೇವೆ. ನಾವು ಭಾರತಲ್ಲಿ ಹುಟ್ಟಿರಲು ಅದೃಷ್ಟಮಾಡಿರಬೇಕು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಲೆಫ್ಟಿನಂಟ್ ಜನರಲ್ ಬಿಎಸ್ ರಾಜು ಅವರ ಧರ್ಮಪತ್ನಿ ಶಕುಂತಲಾ ಸೋಮಶೇಖರ್ ಇದ್ದರು. ವಿದ್ಯಾರ್ಥಿನಿ ಶಾರ್ವರಿ ನಿರೂಪಿಸಿ ವಂದಿಸಿದರು.